Text copied!
Bibles in Kannada

ಯೆಹೋ 8:12-28 in Kannada

Help us?

ಯೆಹೋ 8:12-28 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಯೆಹೋಶುವನು ಹೆಚ್ಚುಕಡಿಮೆ ಐದು ಸಾವಿರ ಜನರನ್ನು ಆರಿಸಿಕೊಂಡು ಬೇತೇಲಿಗೂ ಆಯಿಗೂ ನಡುವೆ ಇರುವ ಪಟ್ಟಣದ ಪಶ್ಚಿಮದಲ್ಲಿ ಹೊಂಚಿನೋಡುವುದಕ್ಕೋಸ್ಕರ ಇರಿಸಿದನು.
13 ಪಟ್ಟಣದ ಉತ್ತರದಲ್ಲಿದ್ದ ಎಲ್ಲಾ ಸೈನ್ಯವನ್ನೂ ಪಟ್ಟಣದ ಪಶ್ಚಿಮದಲ್ಲಿ ಹೊಂಚಿನೋಡುತ್ತಿದ್ದ ಸೈನ್ಯವನ್ನೂ ಕ್ರಮಪಡಿಸಿಕೊಂಡು ಯೆಹೋಶುವನು ಆ ರಾತ್ರಿಯಲ್ಲಿ ಕಣಿವೆಗೆ ಹೋದನು.
14 ಆಯಿ ಎಂಬ ಊರಿನ ಅರಸನು ಬೆಳಿಗ್ಗೆ ಇದನ್ನು ತಿಳಿದು ತ್ವರೆಯಾಗಿ ಜನರೆಲ್ಲರ ಸಹಿತವಾಗಿ ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡುವುದಕ್ಕೆ ಹೊರಟನು. ಅವನೂ ಅವನ ಜನರೂ ಅರಾಬಾ ಎಂಬ ಕಣಿವೆಯ ಪ್ರದೇಶವು ಕಾಣುವ ಸ್ಥಳಕ್ಕೆ ಬಂದರು. ಪಟ್ಟಣದ ಹಿಂಭಾಗದಲ್ಲಿ ಹೊಂಚಿನೋಡುತ್ತಿರುವುದು ಅವನಿಗೆ ಗೊತ್ತಿರಲಿಲ್ಲ.
15 ಯೆಹೋಶುವನೂ ಅವನ ಸಂಗಡ ಇದ್ದ ಇಸ್ರಾಯೇಲ್ಯರೆಲ್ಲರೂ ತಾವು ಸೋತವರೋ ಎಂಬಂತೆ ಅರಣ್ಯಮಾರ್ಗವಾಗಿ ಓಡತೊಡಗಿದರು.
16 ಆಯಿ ಎಂಬ ಪಟ್ಟಣದವರು ಊರಿನಲ್ಲಿದ್ದ ತಮ್ಮ ಎಲ್ಲಾ ಜನರನ್ನೂ ಕರೆದುಕೊಂಡು ಯೆಹೋಶುವನನ್ನು ಹಿಂದಟ್ಟುತ್ತಾ ಪಟ್ಟಣವನ್ನು ದೂರವಾಗಿ ಓಡತೊಡಗಿದರು.
17 ಆಯಿ ಎಂಬ ಊರಿನಲ್ಲಿಯೂ ಬೇತೇಲಿನಲ್ಲಿಯೂ ಒಬ್ಬ ಗಂಡಸಾದರೂ ಉಳಿಯಲಿಲ್ಲ. ಊರಬಾಗಿಲುಗಳನ್ನು ತೆರೆದು ಬಿಟ್ಟು ಎಲ್ಲರೂ ಇಸ್ರಾಯೇಲ್ಯರನ್ನು ಹಿಂದಟ್ಟುವುದಕ್ಕೋಸ್ಕರ ಹೊರಟರು.
18 ಯೆಹೋವನು ಯೆಹೋಶುವನಿಗೆ “ನಿನ್ನ ಕೈಯಲ್ಲಿರುವ ಈಟಿಯನ್ನು ಆಯಿ ಎಂಬ ಊರಿನ ಕಡೆಗೆ ಚಾಚು; ಆ ಪಟ್ಟಣವನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ” ಎನ್ನಲು ಅವನು ಅದನ್ನು ಚಾಚಿದನು.
19 ಅವನು ಈಟಿಯನ್ನು ಚಾಚಿದ ಕೂಡಲೆ ಹೊಂಚಿನೋಡುತ್ತಿದ್ದವರು ತಾವಿದ್ದ ಸ್ಥಳದಿಂದ ಎದ್ದು ಓಡಿಬಂದು ಪಟ್ಟಣದೊಳಕ್ಕೆ ನುಗ್ಗಿ ಕೂಡಲೆ ಅದಕ್ಕೆ ಬೆಂಕಿ ಹಚ್ಚಿದರು.
20 ಆಯಿ ಎಂಬ ಊರಿನ ಜನರು ಹಿಂದಿರುಗಿ ನೋಡಿದಾಗ ಪಟ್ಟಣದ ಹೊಗೆಯು ಆಕಾಶದೆತ್ತರಕ್ಕೆ ಏರಿಹೋಗುವುದನ್ನು ಕಂಡು ಯಾವ ಮಾರ್ಗದಿಂದಲೂ ತಪ್ಪಿಸಿಕೊಳ್ಳಲಾರದೆ ಇದ್ದರು. ಅರಣ್ಯದ ಕಡೆಗೆ ಓಡಿಹೋಗಿದ್ದ ಇಸ್ರಾಯೇಲ್ಯರು ಹಿಂದಟ್ಟುವವರ ಕಡೆಗೆ ತಿರುಗಿದರು.
21 ಯೆಹೋಶುವನೂ ಇಸ್ರಾಯೇಲ್ಯರೂ ಪಟ್ಟಣವು ಹೊಂಚಿ ನೋಡುತ್ತಿದ್ದವರಿಗೆ ಸ್ವಾಧೀನವಾದದ್ದನ್ನೂ, ಹೊಗೆಯು ಆಕಾಶಕ್ಕೆ ಏರಿಹೋಗುತ್ತಿದ್ದದ್ದನ್ನೂ ಕಂಡು ಹಿಂದಿರುಗಿ ಬಂದು ಆಯಿ ಊರಿನ ಜನರನ್ನು ಸಂಹರಿಸಿದರು.
22 ಪಟ್ಟಣದೊಳಗೆ ನುಗ್ಗಿದವರೂ ಒಟ್ಟಿಗೆ ಸೇರಿದ್ದರಿಂದ ಆಯಿ ಎಂಬ ಊರಿನವರು ಆ ಕಡೆಯಿಂದಲೂ ಈ ಕಡೆಯಿಂದಲೂ ಇದ್ದ ಇಸ್ರಾಯೇಲ್ಯರ ಮಧ್ಯದಲ್ಲಿ ಸಿಕ್ಕಿಬಿದ್ದರು. ಅವರು ಎಲ್ಲರನ್ನೂ ಕೊಂದು ಹಾಕಿದರು. ಒಬ್ಬನಾದರೂ ಉಳಿಯಲಿಲ್ಲ, ಯಾವನೂ ತಪ್ಪಿಸಿಕೊಳ್ಳಲಿಲ್ಲ.
23 ಆಯಿ ಎಂಬ ಪಟ್ಟಣದ ಅರಸನನ್ನು ಮಾತ್ರ ಜೀವಸಹಿತ ಹಿಡಿದು ಯೆಹೋಶುವನ ಬಳಿಗೆ ಕರೆದುಕೊಂಡು ಬಂದರು.
24 ಇಸ್ರಾಯೇಲ್ಯರು ತಮ್ಮನ್ನು ಅರಣ್ಯದವರೆಗೂ ಹಿಂದಟ್ಟಿ ಬಂದ ಆಯಿ ಎಂಬ ಊರಿನವರನ್ನು ಅಲ್ಲೇ ಕತ್ತಿಯಿಂದ ಸಂಹರಿಸಿದ ನಂತರ ಅವರೆಲ್ಲರೂ ಪಟ್ಟಣಕ್ಕೆ ಹೋಗಿ ಅಲ್ಲಿದ್ದವರನ್ನು ಕೊಂದರು.
25 ಆ ದಿನ ಆಯಿ ಎಂಬ ಊರಿನಲ್ಲಿ ಸತ್ತ ಗಂಡಸರ ಮತ್ತು ಹೆಂಗಸರ ಸಂಖ್ಯೆ ಹನ್ನೆರಡು ಸಾವಿರ ಮಂದಿ.
26 ಪಟ್ಟಣದವರೆಲ್ಲರೂ ಹತರಾಗುವವರೆಗೆ ಯೆಹೋಶುವನು ಈಟಿ ಹಿಡಿದು ಚಾಚಿದ ಕೈಯನ್ನು ಹಿಂದೆಗೆಯಲಿಲ್ಲ.
27 ಯೆಹೋವನು ಯೆಹೋಶುವನಿಗೆ ಆಜ್ಞಾಪಿಸಿದಂತೆ ಇಸ್ರಾಯೇಲ್ಯರು ಆ ಪಟ್ಟಣದೊಳಗಿಂದ ಪಶು ಪ್ರಾಣಿ ಮೊದಲಾದವುಗಳನ್ನು ಮಾತ್ರ ಕೊಳ್ಳೆಯಾಗಿ ತೆಗೆದುಕೊಂಡರು.
28 ಯೆಹೋಶುವನು ಆಯಿ ಎಂಬ ಪಟ್ಟಣವನ್ನು ಸುಟ್ಟು ಅದು ಎಂದಿಗೂ ತಿರುಗಿ ಕಟ್ಟಲು ಸಾಧ್ಯವಾಗದಂತೆ ಹಾಳುದಿಬ್ಬವನ್ನಾಗಿ ಮಾಡಿದನು. ಅದು ಇಂದಿನ ವರೆಗೂ ಹಾಗೆಯೇ ಉಳಿದಿದೆ.
ಯೆಹೋ 8 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019