Text copied!
Bibles in Kannada

ಅ. ಕೃ. 13:2-15 in Kannada

Help us?

ಅ. ಕೃ. 13:2-15 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಇವರು ಕರ್ತನನ್ನು ಆರಾಧಿಸುತ್ತಾ, ಉಪವಾಸಮಾಡುತ್ತಾ ಇದ್ದಾಗ ಪವಿತ್ರಾತ್ಮನು; “ನಾನು ಬಾರ್ನಬ ಮತ್ತು ಸೌಲರನ್ನು ಕರೆದ ಸೇವೆಗಾಗಿ ಅವರನ್ನು ಬೇರ್ಪಡಿಸಿರಿ” ಎಂದು ಹೇಳಿದನು.
3 ಆಗ ಅವರು ಉಪವಾಸವಿದ್ದು ಪ್ರಾರ್ಥಿಸಿ ಆ ಇಬ್ಬರ ಮೇಲೆ ಹಸ್ತಗಳನ್ನಿಟ್ಟು ಅವರನ್ನು ಕಳುಹಿಸಿಕೊಟ್ಟರು.
4 ಹೀಗೆ ಅವರು ಪವಿತ್ರಾತ್ಮನಿಂದ ಕಳುಹಿಸಲ್ಪಟ್ಟವರಾಗಿ ಸೆಲ್ಯೂಕ್ಯಕ್ಕೆ ಬಂದರು; ಅಲ್ಲಿಂದ ಸಮುದ್ರದಲ್ಲಿ ಪ್ರಯಾಣವಾಗಿ ಕುಪ್ರದ್ವೀಪಕ್ಕೆ ಹೋದರು.
5 ಸಲಮೀಸ್ ಎಂಬ ಸ್ಥಳಕ್ಕೆ ಸೇರಿ ಅಲ್ಲಿ ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಬೋಧಿಸಿದರು. ಮಾರ್ಕನೆನಿಸಿಕೊಳ್ಳುವ ಯೋಹಾನನು ಸಹಾಯಕನಾಗಿ ಅವರ ಸಂಗಡ ಇದ್ದನು.
6 ಅವರು ದ್ವೀಪದಲ್ಲೆಲ್ಲಾ ಸಂಚಾರಮಾಡಿ ಪಾಫೋಸ್ ಎಂಬ ಊರಿನ ತನಕ ಬಂದು ಅಲ್ಲಿ ಸುಳ್ಳುಪ್ರವಾದಿಯೂ, ಮಂತ್ರವಾದಿಯೂ ಆಗಿದ್ದ ‘ಬಾರ್‍ಯೇಸು’ ಎಂಬ ಒಬ್ಬ ಯೆಹೂದ್ಯ ಮನುಷ್ಯನನ್ನು ಕಂಡರು.
7 ಅವನು ರಾಜ್ಯ ಪಾಲನಾಗಿದ್ದ ಸೆರ್ಗ್ಯ ಪೌಲನೆಂಬ ಅಧಿಪತಿಯ ಜೊತೆಯಲ್ಲಿದ್ದನು. ಆ ಅಧಿಪತಿಯು ಬುದ್ಧಿವಂತನಾಗಿದ್ದು, ಬಾರ್ನಬ ಮತ್ತು ಸೌಲನನ್ನು ತನ್ನ ಬಳಿಗೆ ಕರೆಸಿ ದೇವರ ವಾಕ್ಯವನ್ನು ಕೇಳುವುದಕ್ಕೆ ಅಪೇಕ್ಷೆ ಪಟ್ಟನು.
8 ಆದರೆ ಆ ಮಂತ್ರವಾದಿಯಾದ ಎಲುಮನು (ಎಲುಮನೆಂಬ ಹೆಸರಿಗೆ ಮಂತ್ರವಾದಿಯೆಂದರ್ಥ) ಅವರನ್ನು ವಿರೋಧಿಸಿದನು; ಅಧಿಪತಿಯು ಕ್ರಿಸ್ತನಲ್ಲಿ ನಂಬಿಕೆಯಿಡದಂತೆ ಅಡ್ಡಿಮಾಡಲು ಪ್ರಯತ್ನಿಸಿದನು.
9 ಆಗ ಪೌಲನೆನಿಸಿಕೊಳ್ಳುವ ಸೌಲನು ಪವಿತ್ರಾತ್ಮಭರಿತನಾಗಿ,
10 ಅವನನ್ನು ದೃಷ್ಟಿಸಿನೋಡಿ; “ಸೈತಾನನ ಮಗನೇ, ಮೋಸದಿಂದಲೂ, ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೇರವಾದ ಮಾರ್ಗಗಳನ್ನು ಡೊಂಕು ಮಾಡುವುದನ್ನು ಬಿಡುವುದಿಲ್ಲವೋ?
11 ಇಗೋ, ಕರ್ತನು ನಿನಗೆ ವಿರುದ್ಧವಾಗಿ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ನೋಡದೆ ಇರುವಿ” ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಕಣ್ಣು ಮೊಬ್ಬಾಗಿ ಕತ್ತಲೆ ಕವಿಯಿತು; ಅವನು ಕೈಹಿಡಿದು ಆಧಾರ ಕೊಡುವವರನ್ನು ಹುಡುಕುತ್ತಾ ತಿರುಗಾಡಿದನು.
12 ಅಧಿಪತಿಯು ಆ ಸಂಗತಿಯನ್ನು ನೋಡಿ ಕರ್ತನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬುವವನಾದನು.
13 ತರುವಾಯ ಪೌಲನೂ ಅವನ ಜೊತೆಯಲ್ಲಿದ್ದವರೂ ಪಾಫೋಸೂರನ್ನು ಬಿಟ್ಟು ಸಮುದ್ರಪ್ರಯಾಣಮಾಡಿ ಪಂಫುಲ್ಯ ಸೀಮೆಗೆ ಸೇರಿದ ಪೆರ್ಗೆ ಪಟ್ಟಣಕ್ಕೆ ಬಂದರು; ಮಾರ್ಕನೆಂಬ ಯೋಹಾನನು ಅವರನ್ನು ಬಿಟ್ಟು ಹಿಂತಿರುಗಿ ಯೆರೂಸಲೇಮಿಗೆ ಹೋದನು.
14 ಆ ಮೇಲೆ ಅವರು ಪೆರ್ಗೆಯಿಂದ ಸಂಚಾರಮಾಡಿ ಪಿಸಿದ್ಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ ದಿನದಲ್ಲಿ ಅವರು ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು.
15 ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥ ಇವುಗಳ ಪಾರಾಯಣವಾದ ಮೇಲೆ ಸಭಾಮಂದಿರದ ನಾಯಕರು; “ಸಹೋದರರೇ, ಜನರಿಗೆ ಹೇಳತಕ್ಕ ಬುದ್ಧಿಮಾತೇನಾದರೂ ನಿಮಗಿದ್ದರೆ ಹೇಳಿರಿ” ಎಂದು ಅವರಿಗೆ ಹೇಳಿ ಕಳುಹಿಸಿದರು.
ಅ. ಕೃ. 13 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019