Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 13

ಅ. ಕೃ. 13:2-15

Help us?
Click on verse(s) to share them!
2ಇವರು ಕರ್ತನನ್ನು ಆರಾಧಿಸುತ್ತಾ, ಉಪವಾಸಮಾಡುತ್ತಾ ಇದ್ದಾಗ ಪವಿತ್ರಾತ್ಮನು; “ನಾನು ಬಾರ್ನಬ ಮತ್ತು ಸೌಲರನ್ನು ಕರೆದ ಸೇವೆಗಾಗಿ ಅವರನ್ನು ಬೇರ್ಪಡಿಸಿರಿ” ಎಂದು ಹೇಳಿದನು.
3ಆಗ ಅವರು ಉಪವಾಸವಿದ್ದು ಪ್ರಾರ್ಥಿಸಿ ಆ ಇಬ್ಬರ ಮೇಲೆ ಹಸ್ತಗಳನ್ನಿಟ್ಟು ಅವರನ್ನು ಕಳುಹಿಸಿಕೊಟ್ಟರು.
4ಹೀಗೆ ಅವರು ಪವಿತ್ರಾತ್ಮನಿಂದ ಕಳುಹಿಸಲ್ಪಟ್ಟವರಾಗಿ ಸೆಲ್ಯೂಕ್ಯಕ್ಕೆ ಬಂದರು; ಅಲ್ಲಿಂದ ಸಮುದ್ರದಲ್ಲಿ ಪ್ರಯಾಣವಾಗಿ ಕುಪ್ರದ್ವೀಪಕ್ಕೆ ಹೋದರು.
5ಸಲಮೀಸ್ ಎಂಬ ಸ್ಥಳಕ್ಕೆ ಸೇರಿ ಅಲ್ಲಿ ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಬೋಧಿಸಿದರು. ಮಾರ್ಕನೆನಿಸಿಕೊಳ್ಳುವ ಯೋಹಾನನು ಸಹಾಯಕನಾಗಿ ಅವರ ಸಂಗಡ ಇದ್ದನು.
6ಅವರು ದ್ವೀಪದಲ್ಲೆಲ್ಲಾ ಸಂಚಾರಮಾಡಿ ಪಾಫೋಸ್ ಎಂಬ ಊರಿನ ತನಕ ಬಂದು ಅಲ್ಲಿ ಸುಳ್ಳುಪ್ರವಾದಿಯೂ, ಮಂತ್ರವಾದಿಯೂ ಆಗಿದ್ದ ‘ಬಾರ್‍ಯೇಸು’ ಎಂಬ ಒಬ್ಬ ಯೆಹೂದ್ಯ ಮನುಷ್ಯನನ್ನು ಕಂಡರು.
7ಅವನು ರಾಜ್ಯ ಪಾಲನಾಗಿದ್ದ ಸೆರ್ಗ್ಯ ಪೌಲನೆಂಬ ಅಧಿಪತಿಯ ಜೊತೆಯಲ್ಲಿದ್ದನು. ಆ ಅಧಿಪತಿಯು ಬುದ್ಧಿವಂತನಾಗಿದ್ದು, ಬಾರ್ನಬ ಮತ್ತು ಸೌಲನನ್ನು ತನ್ನ ಬಳಿಗೆ ಕರೆಸಿ ದೇವರ ವಾಕ್ಯವನ್ನು ಕೇಳುವುದಕ್ಕೆ ಅಪೇಕ್ಷೆ ಪಟ್ಟನು.
8ಆದರೆ ಆ ಮಂತ್ರವಾದಿಯಾದ ಎಲುಮನು (ಎಲುಮನೆಂಬ ಹೆಸರಿಗೆ ಮಂತ್ರವಾದಿಯೆಂದರ್ಥ) ಅವರನ್ನು ವಿರೋಧಿಸಿದನು; ಅಧಿಪತಿಯು ಕ್ರಿಸ್ತನಲ್ಲಿ ನಂಬಿಕೆಯಿಡದಂತೆ ಅಡ್ಡಿಮಾಡಲು ಪ್ರಯತ್ನಿಸಿದನು.
9ಆಗ ಪೌಲನೆನಿಸಿಕೊಳ್ಳುವ ಸೌಲನು ಪವಿತ್ರಾತ್ಮಭರಿತನಾಗಿ,
10ಅವನನ್ನು ದೃಷ್ಟಿಸಿನೋಡಿ; “ಸೈತಾನನ ಮಗನೇ, ಮೋಸದಿಂದಲೂ, ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೇರವಾದ ಮಾರ್ಗಗಳನ್ನು ಡೊಂಕು ಮಾಡುವುದನ್ನು ಬಿಡುವುದಿಲ್ಲವೋ?
11ಇಗೋ, ಕರ್ತನು ನಿನಗೆ ವಿರುದ್ಧವಾಗಿ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ನೋಡದೆ ಇರುವಿ” ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಕಣ್ಣು ಮೊಬ್ಬಾಗಿ ಕತ್ತಲೆ ಕವಿಯಿತು; ಅವನು ಕೈಹಿಡಿದು ಆಧಾರ ಕೊಡುವವರನ್ನು ಹುಡುಕುತ್ತಾ ತಿರುಗಾಡಿದನು.
12ಅಧಿಪತಿಯು ಆ ಸಂಗತಿಯನ್ನು ನೋಡಿ ಕರ್ತನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬುವವನಾದನು.
13ತರುವಾಯ ಪೌಲನೂ ಅವನ ಜೊತೆಯಲ್ಲಿದ್ದವರೂ ಪಾಫೋಸೂರನ್ನು ಬಿಟ್ಟು ಸಮುದ್ರಪ್ರಯಾಣಮಾಡಿ ಪಂಫುಲ್ಯ ಸೀಮೆಗೆ ಸೇರಿದ ಪೆರ್ಗೆ ಪಟ್ಟಣಕ್ಕೆ ಬಂದರು; ಮಾರ್ಕನೆಂಬ ಯೋಹಾನನು ಅವರನ್ನು ಬಿಟ್ಟು ಹಿಂತಿರುಗಿ ಯೆರೂಸಲೇಮಿಗೆ ಹೋದನು.
14ಆ ಮೇಲೆ ಅವರು ಪೆರ್ಗೆಯಿಂದ ಸಂಚಾರಮಾಡಿ ಪಿಸಿದ್ಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ ದಿನದಲ್ಲಿ ಅವರು ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು.
15ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥ ಇವುಗಳ ಪಾರಾಯಣವಾದ ಮೇಲೆ ಸಭಾಮಂದಿರದ ನಾಯಕರು; “ಸಹೋದರರೇ, ಜನರಿಗೆ ಹೇಳತಕ್ಕ ಬುದ್ಧಿಮಾತೇನಾದರೂ ನಿಮಗಿದ್ದರೆ ಹೇಳಿರಿ” ಎಂದು ಅವರಿಗೆ ಹೇಳಿ ಕಳುಹಿಸಿದರು.

Read ಅ. ಕೃ. 13ಅ. ಕೃ. 13
Compare ಅ. ಕೃ. 13:2-15ಅ. ಕೃ. 13:2-15