Text copied!
Bibles in Kannada

2 ಅರಸು 14:10-26 in Kannada

Help us?

2 ಅರಸು 14:10-26 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನೀನು ಎದೋಮ್ಯರನ್ನು ಸೋಲಿಸಿದರಿಂದ ಬಹಳವಾಗಿ ಉಬ್ಬಿಕೊಂಡಿದ್ದೀ; ಆ ಕೀರ್ತಿಯು ಸಾಕೆಂದು ನೆನದು ಸುಮ್ಮನೆ ಮನೆಯಲ್ಲಿ ಕುಳಿತುಕೋ. ನನ್ನನ್ನು ಕೆಣಕಿ ನಿನ್ನ ಮೇಲೆಯೂ, ನಿನ್ನ ರಾಜ್ಯವಾದ ಯೆಹೂದದ ಮೇಲೆಯೂ ಯಾಕೆ ಕೇಡನ್ನು ಬರಮಾಡಿಕೊಳ್ಳುತ್ತೀ?” ಎಂದು ಉತ್ತರ ಕೊಟ್ಟುಕಳುಹಿಸಿದನು.
11 ಅಮಚ್ಯನು ಇದನ್ನು ಗಮನಕ್ಕೆ ತೆಗೆದುಕೊಳ್ಳದೆ ಇದ್ದುದರಿಂದ ಇಸ್ರಾಯೇಲರ ಅರಸನಾದ ಯೆಹೋವಾಷನು ಯುದ್ಧಕ್ಕೆ ಹೊರಟನು. ಅವರು ಯೆಹೂದ ಪ್ರಾಂತ್ಯದ ಬೇತ್ಷೆಮೆಷಿನಲ್ಲಿ ಒಬ್ಬರನ್ನೊಬ್ಬರು ಎದುರುಗೊಂಡರು.
12 ಯೆಹೂದ್ಯರು ಇಸ್ರಾಯೇಲರಿಂದ ಸೋಲಿಸಲ್ಪಟ್ಟು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು.
13 ಇಸ್ರಾಯೇಲರ ಅರಸನಾದ ಯೋವಾಷನೂ, ಅಹಜ್ಯನ ಮೊಮ್ಮಗನೂ, ಯೆಹೋವಾಷನ ಮಗನೂ ಯೆಹೂದದ ಅರಸನೂ ಆದ ಅಮಚ್ಯನನ್ನು ಇಸ್ರಾಯೇಲರ ಅರಸನಾದ ಯೆಹೋವಾಷನು ಬೇತ್ಷೆಮೆಷಿನಲ್ಲಿ ಹಿಡಿದು ಅವನನ್ನು ಯೆರೂಸಲೇಮಿಗೆ ಕರೆದುಕೊಂಡು ಬಂದು, ಎಫ್ರಾಯೀಮ್ ಬಾಗಿಲಿನಿಂದ ಮೂಲೆಯ ಬಾಗಿಲಿನವರೆಗೂ ಇದ್ದ ಯೆರೂಸಲೇಮಿನ ನಾನೂರು ಮೊಳ ಗೋಡೆಯನ್ನು ಕೆಡವಿ ಬಿಟ್ಟನು.
14 ಇದಲ್ಲದೆ ಅವನು ಯೆಹೋವನ ಆಲಯದ ಮತ್ತು ರಾಜನ ಅರಮನೆಯ ಭಂಡಾರಗಳಲ್ಲಿ ಸಿಕ್ಕಿದ ಎಲ್ಲಾ ಬೆಳ್ಳಿ ಬಂಗಾರವನ್ನೂ, ಪಾತ್ರೆಗಳನ್ನೂ ತೆಗೆದುಕೊಂಡು ಒತ್ತೆಯಾಳಾಗಿ ಕೆಲವರನ್ನು ಸೆರೆಹಿಡಿದು ಸಮಾರ್ಯಕ್ಕೆ ಹಿಂದಿರುಗಿದನು.
15 ಯೆಹೋವಾಷನ ಉಳಿದ ಚರಿತ್ರೆಯೂ, ಅವನ ಶೂರ ಕೃತ್ಯಗಳೂ ಮತ್ತು ಯೆಹೂದ ರಾಜನಾದ ಅಮಚ್ಯನೊಡನೆ ನಡಿಸಿದ ಯುದ್ಧದ ವಿವರವೂ ಇಸ್ರಾಯೇಲರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.
16 ಯೆಹೋವಾಷನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಸಮಾರ್ಯದೊಳಗೆ ಇಸ್ರಾಯೇಲರ ರಾಜಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯಾರೊಬ್ಬಾಮನು ಅರಸನಾದನು.
17 ಇಸ್ರಾಯೇಲರ ಅರಸನೂ, ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತನಂತರ ಯೆಹೂದದ ಅರಸನೂ ಯೆಹೋವಾಷನ ಮಗನೂ ಆದ ಅಮಚ್ಯನು ಇನ್ನೂ ಹದಿನೈದು ವರ್ಷ ಬದುಕಿದ್ದನು.
18 ಅಮಚ್ಯನ ಉಳಿದ ಚರಿತ್ರೆಯು ಯೆಹೂದ್ಯರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.
19 ಯೆರೂಸಲೇಮಿನವರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿದ್ದರಿಂದ ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅಲ್ಲಿಗೆ ಆಳುಗಳನ್ನು ಕಳುಹಿಸಿ ಅವನನ್ನು ಕೊಲ್ಲಿಸಿದರು.
20 ಅವನ ಜನರು ಅವನ ಶವವನ್ನು ಕುದುರೆಗಳ ಮೇಲೆ ಯೆರೂಸಲೇಮಿಗೆ ತಂದು ದಾವೀದನಗರದೊಳಗೆ ಅವನ ಪೂರ್ವಿಕರ ಸ್ಮಶಾನಭೂಮಿಯಲ್ಲಿ ಸಮಾಧಿ ಮಾಡಿದರು.
21 ಅಮಚ್ಯನ ಮರಣದ ನಂತರ ಎಲ್ಲಾ ಯೆಹೂದ್ಯರು ಸೇರಿ ಹದಿನಾರು ವರ್ಷದವನಾದ ಅಜರ್ಯನನ್ನು ಅರಸನನ್ನಾಗಿ ಮಾಡಿದರು.
22 ಅರಸನಾದ ಅಮಚ್ಯನು ಪೂರ್ವಿಕರ ಬಳಿಗೆ ಸೇರಿದ ಮೇಲೆ ಉಜ್ಜೀಯನು ಏಲತ್ ಎಂಬ ಪಟ್ಟಣವನ್ನು ಪುನಃ ಯೆಹೂದರಾಜ್ಯಕ್ಕೆ ಸೇರಿಸಿ ಭದ್ರಪಡಿಸಿದನು.
23 ಯೆಹೂದದ ಅರಸನೂ, ಯೆಹೋವಾಷನ ಮಗನೂ ಆದ ಅಮಚ್ಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ ಇಸ್ರಾಯೇಲರ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನು ಅರಸನಾಗಿ ಸಮಾರ್ಯದಲ್ಲಿ ನಲ್ವತ್ತೊಂದು ವರ್ಷ ಆಳಿದನು.
24 ಇವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
25 ಇಸ್ರಾಯೇಲರ ದೇವರಾದ ಯೆಹೋವನ ವಾಕ್ಯದ ಮೂಲಕ ತನ್ನ ಸೇವಕನೂ ಗತ್ ಹೇಫೆರಿನವನಾದ ಅಮಿತ್ತೈಯನ ಮಗನೂ ಆದ ಯೋನಾ ಎಂಬ ಪ್ರವಾದಿಯ ಮುಖಾಂತರವಾಗಿ ಮುಂತಿಳಿಸಿದಂತೆ ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ಸಮುದ್ರದವರೆಗಿದ್ದ ಇಸ್ರಾಯೇಲರ ಮೇರೆಯನ್ನು ಪುನಃ ವಶಪಡಿಸಿಕೊಂಡವನು ಇವನೇ ಆಗಿದ್ದನು.
26 ಇಸ್ರಾಯೇಲರು ಯೆಹೋವನಿಗೆ ಅವಿಧೇಯರಾಗಿ ಘೋರಕಷ್ಟವನ್ನು ಅನುಭವಿಸುತ್ತಿದ್ದರು. ಅವರಲ್ಲಿ ಸ್ವತಂತ್ರರೂ, ಪರತಂತ್ರರೂ ನಾಶವಾಗುತ್ತಿದ್ದರೆ, ಅವರನ್ನು ರಕ್ಷಿಸುವವನು ಒಬ್ಬನೂ ಇರಲಿಲ್ಲ.
2 ಅರಸು 14 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019