Text copied!
Bibles in Kannada

2 ಅರಸು 13:2-10 in Kannada

Help us?

2 ಅರಸು 13:2-10 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
3 ಆದುದರಿಂದ ಯೆಹೋವನು ಇಸ್ರಾಯೇಲರ ಮೇಲೆ ಕೋಪಗೊಂಡು ಅವರನ್ನು ಅರಾಮ್ಯರ ಅರಸನಾದ ಹಜಾಯೇಲನ ಕೈಗೂ ಅವನ ಮಗನಾದ ಬೆನ್ಹದದನ ಕೈಗೂ ಒಪ್ಪಿಸಿದನು. ಅವರು ಯೆಹೋವಾಹಾಜನ ಜೀವಮಾನದಲ್ಲೆಲ್ಲಾ ಅವರ ಅಧೀನದಲ್ಲಿದ್ದರು.
4 ಯೆಹೋವಾಹಾಜನು ಯೆಹೋವನಿಗೆ ಮೊರೆಯಿಟ್ಟನು. ಯೆಹೋವನು ಅವನ ಮೊರೆಯನ್ನು ಲಾಲಿಸಿದನು.ಅಲ್ಲದೆ ಅವರು ಅರಾಮ್ಯರ ಅರಸನಿಂದ ಬಹಳವಾಗಿ ಬಾಧಿಸಲ್ಪಟ್ಟರುವುದನ್ನು ನೋಡಿ,
5 ಯೆಹೋವನು ಇಸ್ರಾಯೇಲರ ಮೇಲೆ ಕಟಾಕ್ಷವಿಟ್ಟು ಅವರಿಗೆ ಒಬ್ಬ ರಕ್ಷಕನನ್ನು ಅನುಗ್ರಹಿಸಿದನು. ಅವನ ಮುಖಾಂತರವಾಗಿ ಅವರು ಅರಾಮ್ಯರ ಕೈಯಿಂದ ಬಿಡುಗಡೆಯಾಗಿ ಮೊದಲಿನಂತೆ ತಮ್ಮ ತಮ್ಮ ಮನೆಗಳಲ್ಲಿ ಸುರಕ್ಷಿತರಾಗಿ ವಾಸಿಸುವವರಾದರು.
6 ಆದರೂ ಇಸ್ರಾಯೇಲರು ತಮ್ಮನ್ನು ಪಾಪಕ್ಕೆ ಪ್ರೇರೇಪಿಸಿದ ಯಾರೊಬ್ಬಾಮನ ಮನೆಯವರ ಮಾರ್ಗದಲ್ಲಿ ನಡೆದರು. ಅದನ್ನು ಬಿಡಲೇ ಇಲ್ಲ. ಸಮಾರ್ಯದಲ್ಲಿ ಅಶೇರ ವಿಗ್ರಹಸ್ತಂಭವು ಇದ್ದೇ ಇತ್ತು.
7 ಯೆಹೋವಾಹಾಜನಿಗೆ ಐವತ್ತು ಮಂದಿ ರಾಹುತರು, ಹತ್ತು ರಥಗಳು, ಹತ್ತು ಸಾವಿರ ಮಂದಿ ಕಾಲಾಳುಗಳು ಮಾತ್ರ ಉಳಿದರು. ಅರಾಮ್ಯರ ಅರಸನು ಬೇರೆ ಎಲ್ಲರನ್ನೂ ಸಂಹರಿಸಿ ಕಣದ ಧೂಳಿನಂತೆ ಮಾಡಿದನು.
8 ಯೆಹೋವಾಹಾಜನ ಉಳಿದ ಚರಿತ್ರೆಯೂ, ಅವನ ಶೂರಕೃತ್ಯಗಳ ವಿವರವೂ ಇಸ್ರಾಯೇಲರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
9 ಯೆಹೋವಾಹಾಜನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಸಮಾರ್ಯದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೋವಾಷನು ಅರಸನಾದನು.
10 ಯೆಹೂದದ ಅರಸನಾದ ಯೋವಾಷನ ಆಳ್ವಿಕೆಯ ಮೂವತ್ತೇಳನೆಯ ವರ್ಷದಲ್ಲಿ ಯೆಹೋವಾಹಾಜನ ಮಗನಾದ ಯೆಹೋವಾಷನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಹದಿನಾರು ವರ್ಷ ಆಳಿದನು.
2 ಅರಸು 13 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019