Text copied!
Bibles in Kannada

1 ಅರಸು 22:3-15 in Kannada

Help us?

1 ಅರಸು 22:3-15 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆಗ ಇಸ್ರಾಯೇಲರ ಅರಸನು ತನ್ನ ಸೇವಕರಿಗೆ, “ಗಿಲ್ಯಾದಿನ ರಾಮೋತ್ ಪಟ್ಟಣವು ನಮ್ಮದೆಂದು ನಿಮಗೆ ಗೊತ್ತಿದೆಯಲ್ಲಾ. ಅದನ್ನು ಇಷ್ಟರವರೆಗೂ ಅರಾಮ್ಯರ ಅರಸನಿಂದ ಹಿಂತಿರುಗಿ ತೆಗೆದುಕೊಳ್ಳದೆ ಸುಮ್ಮನೆ ಕುಳಿತುಕೊಂಡಿರುತ್ತೇವೆ” ಎಂದು ಹೇಳಿದನು.
4 ಅವನು ಯೆಹೋಷಾಫಾಟನಿಗೆ, “ಯುದ್ಧಮಾಡುವುದಕ್ಕಾಗಿ ನೀನು ನಮ್ಮ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಬರುತ್ತೀಯೋ?” ಎಂದು ಕೇಳಲು ಅವನು, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ ಅಲ್ಲವೇ?” ಎಂದು ಉತ್ತರಕೊಟ್ಟನು.
5 ಯೆಹೋಷಾಫಾಟನು, “ಯೆಹೋವನ ಸನ್ನಿಧಿಯಲ್ಲಿ ಈಗ ವಿಚಾರಿಸು” ಎಂದು ಇಸ್ರಾಯೇಲರ ಅರಸನನ್ನು ಬೇಡಿಕೊಂಡನು.
6 ಆಗ ಇಸ್ರಾಯೇಲರ ಅರಸನು ತನ್ನ ರಾಜ್ಯದಲ್ಲಿದ್ದ ಸುಮಾರು ನಾನೂರು ಪ್ರವಾದಿಗಳನ್ನು ಕೂಡಿಸಿ ಅವರನ್ನು, “ನಾನು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕಾಗಿ ಹೋಗಬಹುದೋ ಹೋಗಬಾರದೋ?” ಎಂದು ಕೇಳಲು ಅವರು, “ಹೋಗಬಹುದು, ಕರ್ತನು ಅದನ್ನು ಅರಸನ ಕೈಗೆ ಒಪ್ಪಿಸುವನು” ಅಂದರು.
7 ಆದರೆ ಯೆಹೋಷಾಫಾಟನು ಇಸ್ರಾಯೇಲ್ಯರ ಅರಸನನ್ನು, “ಯೆಹೋವನ ಪ್ರವಾದಿಗಳಲ್ಲಿ ಇವರ ಹೊರತಾಗಿ ನಾವು ವಿಚಾರಿಸಬಹುದಾದ ಬೇರೆ ಪ್ರವಾದಿಗಳು ಇರುವುದಿಲ್ಲವೋ?” ಎಂದು ಕೇಳಿದನು.
8 ಅದಕ್ಕೆ ಅವನು “ನಮಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಬಲ್ಲವನಾದ ಇನ್ನೊಬ್ಬ ಪ್ರವಾದಿಯಿರುತ್ತಾನೆ, ಅವನು ಇಮ್ಲನ ಮಗನಾದ ಮೀಕಾಯೆಹು ಎಂಬುವನು. ಆದರೆ ನಾನು ಅವನನ್ನು ಹಗೆಮಾಡುತ್ತೇನೆ, ಅವನು ನನ್ನ ಕುರಿತು ಯಾವಾಗಲೂ ಶುಭವನ್ನಲ್ಲ ಅಶುಭವನ್ನೇ ಮುಂತಿಳಿಸುತ್ತಾನೆ” ಎಂದು ಉತ್ತರಕೊಟ್ಟನು. ಅದಕ್ಕೆ ಯೆಹೋಷಾಫಾಟನು “ಅರಸನು ಹಾಗನ್ನದಿರಲಿ” ಅಂದನು.
9 ಆಗ ಇಸ್ರಾಯೇಲ್ಯರ ಅರಸನು ಒಬ್ಬ ಕಂಚುಕಿಯನ್ನು ಕರೆದು ಅವನಿಗೆ, “ಹೋಗಿ ಇಮ್ಲನ ಮಗನಾದ ಮೀಕಾಯೆಹುವನ್ನು ಬೇಗನೆ ಕರೆದುಕೊಂಡು ಬಾ” ಎಂದು ಆಜ್ಞಾಪಿಸಿದನು.
10 ಇಸ್ರಾಯೇಲರ ಅರಸನೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ರಾಜವಸ್ತ್ರಗಳನ್ನು ಧರಿಸಿಕೊಂಡು ಸಮಾರ್ಯ ಪಟ್ಟಣದ ಹೆಬ್ಬಾಗಿಲಿನ ಹತ್ತಿರವಿರುವ ಬಯಲಿನಲ್ಲಿ ತಮ್ಮ ತಮ್ಮ ಆಸನಗಳ ಮೇಲೆ ಕುಳಿತುಕೊಂಡಿರಲು ಎಲ್ಲಾ ಪ್ರವಾದಿಗಳು ಅವರ ಮುಂದೆ ಪರವಶರಾಗಿ ಮಾತನಾಡುತ್ತಾ ಇದ್ದರು.
11 ಅವರಲ್ಲಿ ಕೆನಾನನ ಮಗನಾದ ಚಿದ್ಕೀಯ ಎಂಬುವನು ಕಬ್ಬಿಣದ ಕೊಂಬುಗಳನ್ನು ಮಾಡಿಸಿ, ತಲೆಗೆ ಕಟ್ಟಿಕೊಂಡು ಬಂದು, “ಯೆಹೋವನು ಹೀಗೆನ್ನುತ್ತಾನೆ, ಅರಾಮ್ಯರು ನಿರ್ಮೂಲರಾಗುವವರೆಗೂ ಇವುಗಳಿಂದ ನೀನು ಅವರನ್ನು ಇರಿದು ಕೊಂದುಹಾಕುವಿ” ಎಂದನು.
12 ಉಳಿದ ಪ್ರವಾದಿಗಳೂ ಇದೇ ತರದ ಮಾತುಗಳನ್ನು ಹೇಳಿ, “ರಾಮೋತ್ ಗಿಲ್ಯಾದಿಗೆ ಹೋಗು ನೀನು ಸಫಲನಾಗಿ ಬರುವಿ. ಯೆಹೋವನು ಅದನ್ನು ಅರಸನ ಕೈಗೆ ಒಪ್ಪಿಸುವನು” ಅಂದರು.
13 ಮೀಕಾಯೆಹುವನ್ನು ಕರೆಯುವುದಕ್ಕೆ ಹೋದ ದೂತನು ಅವನಿಗೆ, “ಎಲ್ಲಾ ಪ್ರವಾದಿಗಳೂ ಏಕ ಮನಸ್ಸಿನಿಂದ ಅರಸನಿಗೆ ಶುಭವನ್ನೇ ಮುಂತಿಳಿಸುತ್ತಾರೆ, ದಯವಿಟ್ಟು ನೀನೂ ಅವರಂತೆ ಶುಭವನ್ನೇ ಮುಂತಿಳಿಸು” ಎಂದು ಹೇಳಿದನು.
14 ಅದಕ್ಕೆ ಮೀಕಾಯೆಹುವು, “ಯೆಹೋವನಾಣೆ, ಯೆಹೋವನು ಹೇಳುವುದನ್ನೇ ನುಡಿಯುತ್ತೇನೆ” ಎಂದು ಉತ್ತರಕೊಟ್ಟನು.
15 ಅವನು ಅರಸನ ಬಳಿಗೆ ಬಂದಾಗ ಅರಸನು, “ನಾವು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕ್ಕಾಗಿ ಹೋಗಬಹುದೋ, ಹೋಗಬಾರದೋ?” ಎಂದು ಕೇಳಲು ಅವನು, “ಹೋಗಬಹುದು, ಸಫಲನಾಗುವಿ, ಯೆಹೋವನು ಪಟ್ಟಣವನ್ನು ಅರಸನ ಕೈಗೆ ಒಪ್ಪಿಸುವನು” ಎಂದು ಹೇಳಿದನು.
1 ಅರಸು 22 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019