Text copied!
Bibles in Kannada

1 ಅರಸು 20:31-39 in Kannada

Help us?

1 ಅರಸು 20:31-39 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಆಗ ಅವನ ಸೇವಕರು ಅವನಿಗೆ, “ಇಸ್ರಾಯೇಲರ ಅರಸರು ದಯೆಯುಳ್ಳವರೆಂದು ನಾವು ಕೇಳಿದ್ದೇವೆ. ಆದುದರಿಂದ ಸೊಂಟಕ್ಕೆ ಗೋಣಿತಟ್ಟು ಕಟ್ಟಿಕೊಂಡು ತಲೆಯ ಮೇಲೆ ಹಗ್ಗವನ್ನಿಟ್ಟುಕೊಂಡು ಆ ಅರಸನ ಬಳಿ ಹೋಗುವುದಕ್ಕೆ ನಮಗೆ ಅಪ್ಪಣೆಯಾಗಲಿ. ಹೀಗೆ ಮಾಡುವುದಾದರೆ ಅವನು ನಿನ್ನ ಜೀವವನ್ನು ಉಳಿಸಾನು” ಎಂದು ಹೇಳಿದರು.
32 ಅವರು ಸೊಂಟಕ್ಕೆ ಗೋಣಿತಟ್ಟು ಕಟ್ಟಿಕೊಂಡು ತಲೆಯ ಮೇಲೆ ಹಗ್ಗವನ್ನಿಟ್ಟುಕೊಂಡು ಇಸ್ರಾಯೇಲರ ಅರಸನ ಬಳಿಗೆ ಬಂದು ಅವನಿಗೆ, “ನನಗೆ ಜೀವದಾನಮಾಡಬೇಕು ಎಂದು ನಿನ್ನ ಸೇವಕನಾದ ಬೆನ್ಹದದನು ವಿಜ್ಞಾಪಿಸುತ್ತಾನೆ” ಅಂದರು. ಆಗ ಅವನು, “ಬೆನ್ಹದದನು ಇನ್ನೂ ಜೀವದಿಂದಿರುತ್ತಾನೋ? ಅವನು ನನ್ನ ಸಹೋದರನು” ಎಂದು ಉತ್ತರಕೊಟ್ಟನು.
33 ಅವರು ಈ ಮಾತು ಶುಭವಚನವೆಂದು ನೆನಸಿ ಕೂಡಲೆ ಅವನ ಮಾತನ್ನೇ ಹಿಡಿದು, “ಬೆನ್ಹದದನು ನಿನ್ನ ಸಹೋದರನೇ ಹೌದು” ಅಂದರು. ಅವನು ಅವರಿಗೆ, “ಹೋಗಿ ಬೆನ್ಹದದನನ್ನು ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸಲು ಅವನು ಬಂದಾಗ ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡನು.
34 ಬೆನ್ಹದದನು ಅವನಿಗೆ, “ನನ್ನ ತಂದೆಯು ನಿನ್ನ ತಂದೆಯಿಂದ ಕಿತ್ತುಕೊಂಡ ಪಟ್ಟಣಗಳನ್ನು ನಾನು ಹಿಂದಕ್ಕೆ ಕೊಡುತ್ತೇನೆ, ಅವನು ಸಮಾರ್ಯದಲ್ಲಿ ಮಾಡಿದಂತೆ ನೀನು ನಿನಗೋಸ್ಕರ ದಮಸ್ಕದಲ್ಲಿ ಕೆಲವು ಕೇರಿಗಳನ್ನು ನಿನ್ನದಾಗಿಸಿಕೊಳ್ಳಬಹುದು” ಎಂದು ಹೇಳಿದನು. ಆಗ ಅಹಾಬನು, “ನಾನು ಈ ಒಪ್ಪಂದದ ಮೇಲೆ ನಿನ್ನನ್ನು ಬಿಟ್ಟುಬಿಡುತ್ತೇನೆ” ಎಂದು ಹೇಳಿ ಅವನಿಂದ ಪ್ರಮಾಣ ಮಾಡಿಸಿ ಕಳುಹಿಸಿಬಿಟ್ಟನು.
35 ಪ್ರವಾದಿಮಂಡಳಿಯಲ್ಲಿ ಒಬ್ಬನು ಯೆಹೋವನ ಆತ್ಮ ಪ್ರೇರಿತನಾಗಿ ತನ್ನ ಜೊತೆಗಾರನಿಗೆ “ನನ್ನನ್ನು ಹೊಡಿ” ಎಂದು ಹೇಳಿದನು. ಅದಕ್ಕೆ ಅವನು ಒಪ್ಪಲಿಲ್ಲ.
36 ಆಗ ಪ್ರವಾದಿಯು ಅವನಿಗೆ, “ನೀನು ಯೆಹೋವನ ಮಾತನ್ನು ಕೇಳದೆ ಹೋದುದರಿಂದ ನನ್ನನ್ನು ಬಿಟ್ಟು ಹೊರಟ ಕೂಡಲೇ ಒಂದು ಸಿಂಹವು ಬಂದು ನಿನ್ನನ್ನು ಕೊಲ್ಲುವುದು” ಎಂದನು. ಅವನು ಅವನನ್ನು ಬಿಟ್ಟು ಹೋದ ಕೂಡಲೆ ಒಂದು ಸಿಂಹವು ಬಂದು ಅವನನ್ನು ಕೊಂದು ಹಾಕಿತು.
37 ಅನಂತರ ಆ ಪ್ರವಾದಿಯು ಇನ್ನೊಬ್ಬನನ್ನು ನೋಡಿ, “ನನ್ನನ್ನು ಹೊಡಿ” ಎಂದು ಅವನನ್ನು ಬೇಡಿಕೊಂಡನು. ಅವನು ಇವನನ್ನು ಗಾಯವಾಗುವಷ್ಟು ಹೊಡೆದನು.
38 ಆಗ ಅವನು ತನ್ನ ಗುರುತು ತಿಳಿಯಬಾರದೆಂದು ಮುಂಡಾಸದಿಂದ ಕಣ್ಣುಗಳನ್ನು ಮುಚ್ಚಿಕೊಂಡು ಅರಸನು ಬರುವ ದಾರಿಯಲ್ಲಿ ನಿಂತನು.
39 ಅವನು ಹಾದು ಹೋಗುವಾಗ ಅವನಿಗೆ, “ನಿನ್ನ ಸೇವಕನಾದ ನಾನು ಯುದ್ಧಕ್ಕೆ ಹೋದಾಗ ರಣರಂಗದಲ್ಲಿ ಒಬ್ಬ ಸೈನಿಕನು ಶತ್ರುವನ್ನು ಹಿಡಿದುಕೊಂಡು ನನ್ನ ಬಳಿಗೆ ಬಂದು, ‘ನೀನು ಇವನನ್ನು ಕಾಯಬೇಕು, ಇವನು ತಪ್ಪಿಸಿಕೊಂಡರೆ ಇವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವು ನನ್ನದಾಗಿರುವುದು ಅಥವಾ ನೀನು ನನಗೆ ಒಂದು ತಲಾಂತು ಬೆಳ್ಳಿಯನ್ನು ಕೊಡಬೇಕು’ ಎಂದು ಆಜ್ಞಾಪಿಸಿದನು.
1 ಅರಸು 20 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019