Text copied!
Bibles in Kannada

1 ಅರಸು 20:13-24 in Kannada

Help us?

1 ಅರಸು 20:13-24 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆಗ ಒಬ್ಬ ಪ್ರವಾದಿಯು ಇಸ್ರಾಯೇಲರ ಅರಸನಾದ ಅಹಾಬನ ಬಳಿಗೆ ಬಂದು ಅವನಿಗೆ, “ಈ ಮಹಾ ಸಮೂಹವನ್ನು ನೋಡಿದೆಯಾ, ನಾನು ಯೆಹೋವನೇ ಎಂಬುದು ನಿನಗೆ ಗೊತ್ತಾಗುವಂತೆ ಈ ದಿನವೇ ಇವರನ್ನೆಲ್ಲಾ ನಿನ್ನ ಕೈಗೆ ಒಪ್ಪಿಸುವೆನು ಎಂದು ಯೆಹೋವನು ಅನ್ನುತ್ತಾನೆ” ಎಂಬುದಾಗಿ ಹೇಳಿದನು.
14 ಅಹಾಬನು ಅವನನ್ನು, “ಇದು ಯಾರ ಮುಖಾಂತರವಾಗಿ ಆಗುವುದು?” ಎಂದು ಕೇಳಿದ್ದಕ್ಕೆ ಅವನು, “ಪ್ರದೇಶಾಧಿಪತಿಗಳ ಸೇವಕರಾಗಿ ಕೆಲಸ ಮಾಡುವ ಯುವ ಅಧಿಕಾರಿಗಳ ಮುಖಾಂತರವಾಗಿ ಆಗುವುದು ಎಂದು ಯೆಹೋವನು ಅನ್ನುತ್ತಾನೆ” ಎಂದು ಉತ್ತರಕೊಟ್ಟನು. ಅಹಾಬನು ಪುನಃ ಅವನನ್ನು, “ಯುದ್ಧ ಪ್ರಾರಂಭಮಾಡತಕ್ಕವರು ಯಾರು?” ಎಂದು ಕೇಳಲು ಅವನು, “ನೀನೇ” ಎಂದು ಹೇಳಿದನು.
15 ಅಹಾಬನು ಪ್ರದೇಶಾಧಿಪತಿಗಳ ಸೇವಕರಾಗಿ ಕೆಲಸ ಮಾಡುವ ಯುವ ಅಧಿಕಾರಿಗಳನ್ನು ಲೆಕ್ಕಿಸಿದಾಗ ಇನ್ನೂರ ಮೂವತ್ತೆರಡು ಜನರಿದ್ದರು. ಇಸ್ರಾಯೇಲರ ಸೈನ್ಯವನ್ನು ಲೆಕ್ಕಿಸಿದಾಗ ಏಳು ಸಾವಿರ ಜನರಿದ್ದರು.
16 ಮಧ್ಯಾಹ್ನದಲ್ಲಿ ಬೆನ್ಹದದನು ತನ್ನ ಸಹಾಯಕ್ಕಾಗಿ ಬಂದ ಮೂವತ್ತೆರಡು ಜನರು ಅರಸರ ಸಂಗಡ ಮದ್ಯಪಾನ ಮಾಡಿ ಮತ್ತರಾಗಿ ಡೇರೆಯಲ್ಲಿ ಕುಳಿತುಕೊಂಡಿದ್ದಾಗ ಇವರು ಪಟ್ಟಣದಿಂದ ಹೊರಗೆ ಬಂದರು.
17 ಪ್ರದೇಶಾಧಿಪತಿಗಳ ಆಳುಗಳು ಮೊದಲು ಬಂದರು. ಸಮಾರ್ಯದ ಜನರು ಹೊರಗೆ ಬಂದಿರುತ್ತಾರೆಂದು ಬೆನ್ಹದದನ ಕಾವಲುಗಾರರು ಅವನಿಗೆ ತಿಳಿಸಿದರು.
18 ಅವನು ಅವರಿಗೆ, “ಅವರು ಯುದ್ಧಕ್ಕಾಗಿ ಬಂದಿದ್ದರೂ ಸಮಾಧಾನಕ್ಕಾಗಿ ಬಂದಿದ್ದರೂ ಅವರನ್ನು ಸಜೀವಿಗಳನ್ನಾಗಿ ಹಿಡಿದು ತನ್ನಿರಿ” ಎಂದು ಆಜ್ಞಾಪಿಸಿದನು.
19 ಮೊದಲು ಹೊರಟುಬಂದಿದ್ದ ದೇಶಾಧಿಪತಿಗಳ ಆಳುಗಳ ಹಿಂದೆ ಇಸ್ರಾಯೇಲ್ ಸೈನ್ಯದವರೂ ಬಂದರು.
20 ಅವರಲ್ಲಿ ಪ್ರತಿಯೊಬ್ಬನೂ ತನ್ನ ಎದುರಿಗೆ ಬಂದ ವಿರೋಧಿಯನ್ನು ಕೊಲ್ಲುತ್ತಾ ಮುಂದುವರಿದರು. ಅರಾಮ್ಯರು ಓಡಿಹೋಗಲು ಇಸ್ರಾಯೇಲರು ಅವರನ್ನು ಹಿಂದಟ್ಟಿದರು. ಅವರ ಅರಸನಾದ ಬೆನ್ಹದದನೂ ಹಾಗು ಕೆಲವು ಸವಾರರೂ ಕುದುರೆಗಳನ್ನೇರಿ ಓಡಿಹೋಗಿ ತಪ್ಪಿಸಿಕೊಂಡರು.
21 ಇಸ್ರಾಯೇಲರ ಅರಸನು ಹೊರಟು ಬಂದು ಅರಾಮ್ಯರ ರಥಾಶ್ವಬಲಗಳನ್ನು ಸೋಲಿಸಿ ಮಹಾಸಮೂಹವನ್ನು ಸಂಹರಿಸಿದನು.
22 ಆಗ ಪ್ರವಾದಿಯು ಪುನಃ ಇಸ್ರಾಯೇಲರ ಅರಸನ ಬಳಿಗೆ ಬಂದು ಅವನಿಗೆ, “ಅರಾಮ್ಯರ ಅರಸನು ಮುಂದಿನ ವರ್ಷದಲ್ಲಿ ಇನ್ನೊಮ್ಮೆ ನಿನಗೆ ವಿರುದ್ಧವಾಗಿ ಬರುತ್ತಾನೆ. ಆದುದರಿಂದ ನೀನು ಹೋಗಿ ನಿನ್ನನ್ನು ಬಲಪಡಿಸಿಕೋ, ಜಾಗರೂಕನಾಗಿದ್ದು ನೀನು ಮಾಡತಕ್ಕದ್ದೇನೆಂಬುದನ್ನು ಆಲೋಚಿಸು” ಎಂದನು.
23 ಅರಾಮ್ಯರ ಅರಸನ ಮಂತ್ರಿಗಳು ತಮ್ಮ ಒಡೆಯನಿಗೆ, “ಇಸ್ರಾಯೇಲ್ ದೇವರು ಬೆಟ್ಟಗಳ ದೇವರಾಗಿರುವುದರಿಂದ ಅವರು ನಮ್ಮನ್ನು ಸೋಲಿಸಿದರು. ನಾವು ಅವರೊಡನೆ ಬಯಲಿನಲ್ಲಿ ಯುದ್ಧಮಾಡುವುದಾದರೆ ಹೇಗೂ ಜಯಹೊಂದುವೆವು.
24 ನೀನು ಆಯಾ ಸ್ಥಳಗಳಲ್ಲಿರುವ ಅರಸರನ್ನು ತೆಗೆದುಹಾಕಿ ಅವರಿಗೆ ಬದಲಾಗಿ ಪ್ರದೇಶಾಧಿಪತಿಗಳನ್ನು ನೇಮಿಸು.
1 ಅರಸು 20 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019