Text copied!
Bibles in Kannada

1 ಅರಸು 18:36-46 in Kannada

Help us?

1 ಅರಸು 18:36-46 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಸಂಧ್ಯಾನೈವೇದ್ಯದ ಹೊತ್ತಿಗೆ ಪ್ರವಾದಿಯಾದ ಎಲೀಯನು ಯಜ್ಞವೇದಿಯ ಹತ್ತಿರ ಬಂದು, “ಅಬ್ರಹಾಮ, ಇಸಾಕ ಇಸ್ರಾಯೇಲರ ದೇವರೇ, ಯೆಹೋವನೇ, ನೀನೊಬ್ಬನೇ ಇಸ್ರಾಯೇಲರ ದೇವರಾಗಿರುತ್ತೀ ಎಂಬುದನ್ನೂ, ನಾನು ನಿನ್ನ ಸೇವಕನಾಗಿರುತ್ತೇನೆ ಎಂಬುದನ್ನೂ ಮತ್ತು ಇದನ್ನೆಲ್ಲಾ ನಿನ್ನ ಅಪ್ಪಣೆಯ ಮೇರೆಗೆ ಮಾಡಿದೆನೆಂಬುದನ್ನೂ ಈ ಹೊತ್ತು ತೋರಿಸಿಕೊಡು.
37 ಕಿವಿಗೊಡು, ಯೆಹೋವನೇ ಕಿವಿಗೊಡು, ಯೆಹೋವನಾದ ನೀನೊಬ್ಬನೇ ದೇವರೂ! ಈ ಜನರ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಿಕೊಳ್ಳುವವನೂ ನೀನೇ ಆಗಿರುತ್ತೀ ಎಂಬುದನ್ನು ಇವರಿಗೆ ತಿಳಿಯಪಡಿಸು” ಎಂದು ಪ್ರಾರ್ಥಿಸಿದನು.
38 ಕೂಡಲೇ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಮಾಂಸವನ್ನೂ, ಕಟ್ಟಿಗೆ, ಕಲ್ಲು ಮಣ್ಣುಗಳನ್ನೂ ದಹಿಸಿಬಿಟ್ಟು ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು.
39 ಜನರೆಲ್ಲರೂ ಅದನ್ನು ಕಂಡು ಬೋರ್ಲಬಿದ್ದು, “ಯೆಹೋವನೇ ದೇವರು! ಯೆಹೋವನೇ ದೇವರು!” ಎಂದು ಕೂಗಿದರು.
40 ಆಗ ಎಲೀಯನು ಅವರಿಗೆ, “ಬಾಳನ ಪ್ರವಾದಿಗಳೆಲ್ಲರನ್ನು ಹಿಡಿಯಿರಿ. ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಬಾರದು” ಎಂದು ಆಜ್ಞಾಪಿಸಲು ಅವರು ಹಿಡಿದರು. ಅವನು ಅವರನ್ನು ಕೀಷೋನ್ ಹಳ್ಳಕ್ಕೆ ಒಯ್ದು ಅಲ್ಲಿ ಕೊಲ್ಲಿಸಿದನು.
41 ಅನಂತರ ಅವನು ಅಹಾಬನಿಗೆ, “ನೀನು ಮೇಲೆ ಹೋಗಿ ಅನ್ನಪಾನಗಳನ್ನು ತೆಗೆದುಕೋ, ದೊಡ್ಡ ಮಳೆಯ ಶಬ್ದವು ಕೇಳಿಸುತ್ತದೆ” ಅಂದನು.
42 ಅಹಾಬನು ಅನ್ನಪಾನಗಳನ್ನು ತೆಗೆದುಕೊಳ್ಳಲು ಹೋದಾಗ ಎಲೀಯನು ಕರ್ಮೆಲಿನ ಬೆಟ್ಟದ ತುದಿಗೆ ಹೋಗಿ ಅಲ್ಲಿ ನೆಲದ ಮೇಲೆ ಬಿದ್ದುಕೊಂಡು ಮೊಣಕಾಲಿನ ಮೇಲೆ ತಲೆಯನ್ನಿಟ್ಟನು.
43 ಅವನು ತನ್ನ ಸೇವಕನಿಗೆ, “ನೀನು ಮೇಲೆ ಹೋಗಿ ಸಮುದ್ರದ ಕಡೆಗೆ ನೋಡು” ಎಂದು ಆಜ್ಞಾಪಿಸಿದನು. ಸೇವಕನು ಹೋಗಿ ನೋಡಿ ಬಂದು, “ಏನೂ ಕಾಣುವುದಿಲ್ಲ” ಎಂದು ಹೇಳಿದನು. ಹೀಗೆ ಅವನನ್ನು ಏಳು ಸಾರಿ ಕಳುಹಿಸಿದನು.
44 ಏಳನೆಯ ಸಾರಿ ಸೇವಕನು, “ಅಂಗೈಯಷ್ಟು ಚಿಕ್ಕದಾದ ಮೋಡವು ಸಮುದ್ರದಿಂದ ಏರಿ ಬರುತ್ತಿದೆ” ಎಂದು ತಿಳಿಸಿದನು. ಆಗ ಎಲೀಯನು ಅವನಿಗೆ, “ನೀನು ಹೋಗಿ ಅಹಾಬನಿಗೆ, ‘ಬೇಗನೆ ರಥವನ್ನು ಹೂಡಿಸಿಕೊಂಡು ಮಳೆಯು ನಿನ್ನನ್ನು ತಡೆಯದಂತೆ ಬೆಟ್ಟವನ್ನಿಳಿದು ಹೋಗು’ ಎಂದು ಹೇಳು” ಅಂದನು.
45 ಸ್ವಲ್ಪ ಹೊತ್ತಿನಲ್ಲಿಯೇ ಆಕಾಶವು ಮೋಡಗಾಳಿಗಳಿಂದ ಕಪ್ಪಾಗಿ ದೊಡ್ಡ ಮಳೆಯು ಪ್ರಾರಂಭವಾಯಿತು. ಅಹಾಬನು ರಥದಲ್ಲಿ ಕುಳಿತುಕೊಂಡು ಇಜ್ರೇಲಿಗೆ ಹೋದನು.
46 ಯೆಹೋವನ ಹಸ್ತವು ಎಲೀಯನ ಸಂಗಡ ಇದ್ದುದರಿಂದ ಅವನು ನಡುಕಟ್ಟಿಕೊಂಡು ಅಹಾಬನ ಮುಂದೆ ಓಡುತ್ತಾ ಇಜ್ರೇಲನ್ನು ಸೇರಿದನು.
1 ಅರಸು 18 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019