Text copied!
Bibles in Kannada

1 ಅರಸು 18:13-29 in Kannada

Help us?

1 ಅರಸು 18:13-29 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಈಜೆಬೆಲಳು ಯೆಹೋವನ ಪ್ರವಾದಿಗಳನ್ನು ಸಂಹರಿಸುತ್ತಿರುವಾಗ ನಾನು ಮಾಡಿದ್ದು ನನ್ನ ಸ್ವಾಮಿಯಾದ ನಿನಗೆ ಗೊತ್ತಾಗಲಿಲ್ಲವೋ? ಅವರಲ್ಲಿ ನೂರು ಜನರನ್ನು ತೆಗೆದುಕೊಂಡು ಐವತ್ತೈವತ್ತು ಜನರನ್ನಾಗಿ ಗವಿಗಳಲ್ಲಿ ಅಡಗಿಸಿಟ್ಟು, ಅನ್ನ ಪಾನಗಳನ್ನು ಕೊಟ್ಟು ಸಾಕಿದೆನಲ್ಲವೇ.
14 ಹೀಗಿದ್ದರೂ ನೀನು ನನಗೆ ಎಲೀಯನು ಬಂದಿದ್ದಾನೆ ಎಂಬುದಾಗಿ ನಿನ್ನ ಒಡೆಯನಿಗೆ ತಿಳಿಸು ಎಂದು ಆಜ್ಞಾಪಿಸುತ್ತಿರುವೆಯಲ್ಲಾ. ಅವನು ನನ್ನನ್ನು ಕೊಲ್ಲುವನಲ್ಲವೋ?” ಎಂದು ಉತ್ತರಕೊಟ್ಟನು.
15 ಆಗ ಎಲೀಯನು ಅವನಿಗೆ, “ನಾನು ಸನ್ನಿಧಿ ಸೇವೆಮಾಡುತ್ತಿರುವ ಸೇನಾಧೀಶ್ವರನಾದ ಯೆಹೋವನಾಣೆ, ನಾನು ಈ ಹೊತ್ತು ಅಹಾಬನಿಗೆ ಹೇಗೂ ಕಾಣಿಸಿಕೊಳ್ಳುವೆನು” ಅಂದನು.
16 ಓಬದ್ಯನು ಅಹಾಬನ ಬಳಿಗೆ ಹೋಗಿ ಅವನಿಗೆ ಈ ಮಾತನ್ನು ತಿಳಿಸಿದನು. ಅಹಾಬನು ಎಲೀಯನನ್ನು ಎದುರುಗೊಳ್ಳುವುದಕ್ಕಾಗಿ ಹೊರಟುಹೋಗಿ
17 ಅವನನ್ನು ಕಂಡಕೂಡಲೆ, “ಇಸ್ರಾಯೇಲರಿಗೆ ಆಪತ್ತನ್ನು ಬರಮಾಡಿದವನೇ, ನೀನು ಬಂದಿಯಾ?” ಅಂದನು.
18 ಅದಕ್ಕೆ ಅವನು, “ಇಸ್ರಾಯೇಲರಿಗೆ ಆಪತ್ತನ್ನು ಬರಮಾಡಿದವನು ನಾನಲ್ಲ. ಯೆಹೋವನ ಆಜ್ಞೆಗಳನ್ನು ಉಲ್ಲಂಘಿಸಿ ಬಾಳನ ವಿಗ್ರಹಗಳನ್ನು ಪೂಜಿಸಿದ ನೀನೂ ಮತ್ತು ನಿನ್ನ ಮನೆಯವರೂ ಅದಕ್ಕೆ ಕಾರಣರು.
19 ನೀನು ಈಗ ಎಲ್ಲಾ ಇಸ್ರಾಯೇಲರನ್ನೂ, ಈಜೆಬೆಲಳಿಂದ ಪೋಷಣೆ ಹೊಂದುವ ಬಾಳನ ನಾನೂರೈವತ್ತು ಪ್ರವಾದಿಗಳನ್ನು ಮತ್ತು ಅಶೇರ ದೇವತೆಯ ನಾನೂರು ಪ್ರವಾದಿಗಳನ್ನು ಕರ್ಮೆಲ್ ಬೆಟ್ಟಕ್ಕೆ ಕರೆಯಿಸು” ಎಂದು ಹೇಳಿದನು.
20 ಅಹಾಬನು ಇಸ್ರಾಯೇಲರನ್ನೂ ಎಲ್ಲಾ ಪ್ರವಾದಿಗಳನ್ನೂ ಅಲ್ಲಿಗೆ ಕರೆಯಿಸಿದನು.
21 ಎಲೀಯನು ಎಲ್ಲಾ ಜನರ ಹತ್ತಿರ ಹೋಗಿ ಅವರಿಗೆ, “ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ. ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ” ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿರುವುದನ್ನು ಕಂಡನು.
22 ಮತ್ತು ಎಲೀಯನು ಅವರಿಗೆ, “ಯೆಹೋವನ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ, ಬಾಳನ ಪ್ರವಾದಿಗಳಲ್ಲಿ ನಾನೂರೈವತ್ತು ಜನರಿದ್ದಾರೆ.
23 ಅವರು ಎರಡು ಹೋರಿಗಳನ್ನು ನಮ್ಮ ಬಳಿಗೆ ತರಲಿ ಅವುಗಳಲ್ಲಿ ಒಂದನ್ನು ಆರಿಸಿಕೊಂಡು ಕಡಿದು, ತುಂಡು ಮಾಡಿ, ಕಟ್ಟಿಗೆಯ ಮೇಲಿಡಲಿ. ಆದರೆ ಬೆಂಕಿಹೊತ್ತಿಸಬಾರದು. ನಾನೂ ಇನ್ನೊಂದನ್ನು ಹಾಗೆಯೇ ಮಾಡಿ ಬೆಂಕಿಹೊತ್ತಿಸದೆ ಕಟ್ಟಿಗೆಯ ಮೇಲಿಡುವೆನು
24 ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ, ಅನಂತರ ನಾನು ಯೆಹೋವನ ಹೆಸರು ಹೇಳಿ ಪ್ರಾರ್ಥಿಸುವೆನು. ಆ ಇಬ್ಬರಲ್ಲಿ ಯಾವನು ಲಾಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ ದೇವರೆಂದೂ ನಿರ್ಣಯಿಸೋಣ” ಅಂದನು. ಎಲ್ಲಾ ಜನರು, “ಸರಿ ನೀನು ಹೇಳಿದಂತೆಯೇ ಆಗಲಿ” ಎಂದು ಉತ್ತರಕೊಟ್ಟರು.
25 ಆಗ ಅವನು ಬಾಳನ ಪ್ರವಾದಿಗಳಿಗೆ, “ನೀವು ಹೆಚ್ಚು ಜನ ಇರುವುದರಿಂದ ಮೊದಲು ನೀವೇ ಒಂದು ಹೋರಿಯನ್ನು ಆರಿಸಿಕೊಂಡು ಅದನ್ನು ಸಿದ್ಧಪಡಿಸಿ, ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ. ಆದರೆ ಬೆಂಕಿಯನ್ನು ಹೊತ್ತಿಸಬಾರದು” ಅಂದನು.
26 ಅವರು ತರಲ್ಪಟ್ಟ ಹೋರಿಗಳಲ್ಲಿ ಒಂದನ್ನು ತೆಗೆದುಕೊಂಡು ಸಿದ್ಧಪಡಿಸಿ, ತಮ್ಮ ದೇವರಾದ ಬಾಳನ ಹೆಸರು ಹೇಳಿ, “ಬಾಳನೇ ನಮಗೆ ಕಿವಿಗೊಡು” ಎಂದು ಹೊತ್ತಾರೆಯಿಂದ ಮಧ್ಯಾಹ್ನದವರೆಗೆ ಕೂಗಿದರೂ ಆಕಾಶವಾಣಿಯಾಗಲಿಲ್ಲ. ಅವರು ಯಜ್ಞವೇದಿಯ ಸುತ್ತಲೂ ಕುಣಿದಾಡಿದರೂ ಯಾರೂ ಉತ್ತರ ದಯಪಾಲಿಸಲಿಲ್ಲ.
27 ಮಧ್ಯಾಹ್ನವಾದನಂತರ ಎಲೀಯನು ಅವರನ್ನು ಪರಿಹಾಸ್ಯ ಮಾಡಿ, “ಗಟ್ಟಿಯಾಗಿ ಕೂಗಿರಿ, ಅವನು ದೇವರಾಗಿರುತ್ತಾನಲ್ಲಾ. ಈಗ ಒಂದು ವೇಳೆ ಅವನು ಧ್ಯಾನದಲ್ಲಿರಬಹುದು, ಇಲ್ಲವೇ ಯಾವುದೋ ಕೆಲಸದಲ್ಲಿ ಅಥವಾ ಪ್ರಯಾಣದಲ್ಲಿ ಇರಬೇಕು. ಅದೂ ಇಲ್ಲದಿದ್ದರೆ ನಿದ್ರೆಮಾಡುತ್ತಿದ್ದಾನು, ಎಚ್ಚರವಾಗಬೇಕು” ಎಂದು ಹೇಳಿದನು.
28 ಅವರು ಗಟ್ಟಿಯಾಗಿ ಕೂಗಿ ತಮ್ಮ ಪದ್ದತಿಯ ಪ್ರಕಾರ ಈಟಿ ಕತ್ತಿಗಳಿಂದ ರಕ್ತಸೋರುವಷ್ಟು ಗಾಯಮಾಡಿಕೊಂಡರು.
29 ಮಧ್ಯಾಹ್ನದಿಂದ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಪರವಶರಾಗಿ ಕೂಗುತ್ತಾ ಇದ್ದರು. ಆದರೂ ಆಕಾಶವಾಣಿಯಾಗಲಿಲ್ಲ. ಯಾರೂ ಅವರಿಗೆ ಉತ್ತರಕೊಡಲಿಲ್ಲ ಅವರನ್ನು ಲಕ್ಷಿಸಲಿಲ್ಲ.
1 ಅರಸು 18 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019