Text copied!
Bibles in Kannada

1 ಅರಸು 16:4-17 in Kannada

Help us?

1 ಅರಸು 16:4-17 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಿನ್ನ ಕುಟುಂಬದವರಲ್ಲಿ ಪಟ್ಟಣದೊಳಗೆ ಸಾಯುವವರನ್ನು ನಾಯಿಗಳೂ ಮತ್ತು ಅಡವಿಯಲ್ಲಿ ಸಾಯುವವರನ್ನು ಪಕ್ಷಿಗಳು ತಿಂದುಬಿಡುವವು” ಎಂಬುದೇ.
5 ಬಾಷನ ಉಳಿದ ಚರಿತ್ರೆಯೂ ಅವನ ಪರಾಕ್ರಮಕೃತ್ಯಗಳೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
6 ಅವನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ತಿರ್ಚದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಏಲನು ಅರಸನಾದನು.
7 ಬಾಷನು ಯಾರೊಬ್ಬಾಮನ ಮನೆಯವರಂತೆ ತನ್ನ ದುಷ್ಕೃತ್ಯಗಳಿಂದ ಯೆಹೋವನಿಗೆ ಕೋಪಬರುವಂತೆ ಮಾಡಿ, ಆತನ ದೃಷ್ಟಿಯಲ್ಲಿ ದ್ರೋಹಿಯಾದುದರಿಂದಲೂ ಅವನು ಯಾರೊಬ್ಬಾಮನ ಮನೆಯವರನ್ನು ನಿರ್ನಾಮಗೊಳಿಸಿದ್ದರಿಂದಲೂ ಯೆಹೋವನು ಹನಾನೀಯನ ಮಗ ಪ್ರವಾದಿಯಾದ ಯೇಹುವಿನ ಮುಖಾಂತರ ಬಾಷನಿಗೂ, ಅವನ ಕುಟುಂಬಕ್ಕೂಆಗುವ ದುರ್ಗತಿಯನ್ನು ಮುಂತಿಳಿಸಿದನು.
8 ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಇಪ್ಪತ್ತಾರನೆಯ ವರ್ಷದಲ್ಲಿ ಬಾಷನ ಮಗನಾದ ಏಲನು ತಿರ್ಚದಲ್ಲಿ ಇಸ್ರಾಯೇಲರ ಅರಸನಾಗಿ ಎರಡು ವರ್ಷ ಆಳ್ವಿಕೆ ಮಾಡಿದನು.
9 ಅವನ ಸೇವಕನೂ ಅವನ ರಥಬಲದ ಅರ್ಧಭಾಗಕ್ಕೆ ಅಧಿಪತಿಯೂ ಆಗಿದ್ದ ಜಿಮ್ರಿ ಎಂಬುವವನು ಅವನಿಗೆ ವಿರುದ್ಧವಾಗಿ ಒಳಸಂಚು ಮಾಡಿದನು. ಅರಸನು ತಿರ್ಚದಲ್ಲಿ ತನ್ನ ಅರಮನೆಯ ಮೇಲ್ವಿಚಾರಕನಾದ ಅರ್ಚನೆಂಬುವವನ ಮನೆಯಲ್ಲಿ ಕುಡಿದು ಮತ್ತನಾಗಿರುವಾಗ ಜಿಮ್ರಿಯು ಅಲ್ಲಿಗೆ ಹೋದನು.
10 ಜಿಮ್ರಿಯು ಏಲನ ಮೇಲೆ ಬಿದ್ದು ಅವನನ್ನು ಕೊಂದು ಹಾಕಿ ಅವನಿಗೆ ಬದಲಾಗಿ ತಾನು ಅರಸನಾದನು. ಇದು ಯೆಹೂದದ ಅರಸನಾದ ಆಸನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ ನಡೆಯಿತು.
11 ಅವನು ಸಿಂಹಾಸನದ ಮೇಲೆ ಕುಳಿತು ಆಳತೊಡಗಿದ ಕೂಡಲೇ ಬಾಷನ ಮನೆಯವರನ್ನೂ ಅವನ ಬಂಧು ಮಿತ್ರರನ್ನೂ ಸಂಹರಿಸಿದನು. ಅವರಲ್ಲಿ ಒಬ್ಬ ಗಂಡಸನ್ನೂ ಉಳಿಸಲಿಲ್ಲ.
12 ಬಾಷನೂ ಹಾಗು ಅವನ ಮಗನಾದ ಏಲನೂ ತಾವು ಪಾಪಮಾಡಿದ್ದಲ್ಲದೆ ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿ, ತಮ್ಮ ವಿಗ್ರಹಗಳಿಂದ ಇಸ್ರಾಯೇಲ್ ದೇವರಾದ ಯೆಹೋವನಿಗೆ ಕೋಪಬರುವಂತೆ ಮಾಡಿದರು.
13 ಆದುದರಿಂದ ಆತನು ಪ್ರವಾದಿಯಾದ ಯೇಹುವಿನ ಮುಖಾಂತರವಾಗಿ ಬಾಷನ ಮನೆಗೆ ಆಗುವ ದುರ್ಗತಿಯನ್ನು ಮುಂತಿಳಿಸಿದ್ದನು. ಜಿಮ್ರಿಯು ಬಾಷನ ಮನೆಯವರೆಲ್ಲರನ್ನೂ ನಿರ್ನಾಮಗೊಳಿಸಿದಾಗ ಆ ಮಾತು ನೆರವೇರಿತು.
14 ಏಲನ ಉಳಿದ ಚರಿತ್ರೆಯೂ ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
15 ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ ಜಿಮ್ರಿಯು ತಿರ್ಚದಲ್ಲಿ ಇಸ್ರಾಯೇಲರ ಅರಸನಾಗಿ ಏಳು ವರ್ಷ ಆಳ್ವಿಕೆ ಮಾಡಿದನು. ಆ ಸಮಯದಲ್ಲಿ ಇಸ್ರಾಯೇಲರು ಫಿಲಿಷ್ಟಿಯರ ವಶದಲ್ಲಿದ್ದ ಗಿಬ್ಬೆತೋನ್ ಎಂಬ ಪಟ್ಟಣಕ್ಕೆ ಮುತ್ತಿಗೆ ಹಾಕಿದ್ದರು.
16 ಜಿಮ್ರಿಯು ಅರಸನಿಗೆ ವಿರುದ್ಧವಾಗಿ ಒಳಸಂಚು ಮಾಡಿ ಅವನನ್ನು ಕೊಂದುಹಾಕಿದನೆಂಬ ವರ್ತಮಾನವು ಪಾಳೆಯದಲ್ಲಿದ್ದ ಇಸ್ರಾಯೇಲರಿಗೆ ಮುಟ್ಟಿತು. ಅವರು ಅದೇ ದಿನ ಅಲ್ಲಿಯೇ ಸೈನ್ಯಾಧಿಪತಿಯಾದ ಒಮ್ರಿಯನ್ನು ತಮ್ಮ ಅರಸನನ್ನಾಗಿ ನೇಮಿಸಿಕೊಂಡರು.
17 ಒಮ್ರಿಯೂ ಅವನ ಜೊತೆಯಲ್ಲಿದ್ದ ಎಲ್ಲಾ ಇಸ್ರಾಯೇಲರೂ ಗಿಬ್ಬೆತೋನನ್ನು ಬಿಟ್ಟುಹೋಗಿ ತಿರ್ಚಕ್ಕೆ ಮುತ್ತಿಗೆ ಹಾಕಿದರು.
1 ಅರಸು 16 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019