Text copied!
Bibles in Kannada

ಲೂಕ 24:27-51 in Kannada

Help us?

ಲೂಕ 24:27-51 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಮೋಶೆಯ ಮತ್ತು ಎಲ್ಲಾ ಪ್ರವಾದಿಗಳ ಗ್ರಂಥಗಳು ಮೊದಲುಗೊಂಡು ಸಮಸ್ತ ಗ್ರಂಥಗಳಲ್ಲಿ ತನ್ನ ವಿಷಯವಾಗಿರುವ ಸೂಚನೆಗಳನ್ನು ಅವರಿಗೆ ವಿವರಿಸಿದನು.
28 ಅವರು ಹೋಗುತ್ತಿರುವ ಹಳ್ಳಿಯ ಸಮೀಪಕ್ಕೆ ಬಂದಾಗ ಆತನು ಅವರನ್ನು ದಾಟಿ ಇನ್ನೂ ಮುಂದಕ್ಕೆ ಹೋಗುವವನಂತೆ ತೋರ್ಪಡಿಸಿಕೊಂಡನು.
29 ಆದರೆ ಅವರು, “ನಮ್ಮ ಸಂಗಡ ಇರು. ಸಂಜೆಯಾಯಿತು, ಹೊತ್ತು ಇಳಿಯುತ್ತಾ ಬಂದಿತು” ಎಂದು ಆತನಿಗೆ ಹೇಳಿ ಬಲವಂತ ಮಾಡಲು, ಆತನು ಅವರ ಕೂಡ ಇರುವುದಕ್ಕೆ ಹೋದನು.
30 ಆತನು ಅವರ ಸಂಗಡ ಊಟಕ್ಕೆ ಕುಳಿತುಕೊಂಡಾಗ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ, ಮುರಿದು ಅವರಿಗೆ ಕೊಡುತ್ತಿರಲಾಗಿ,
31 ಅವರ ಕಣ್ಣುಗಳು ತೆರೆದವು. ಆಗ ಅವರು ಆತನ ಗುರುತು ಹಿಡಿದರು. ಆತನು ಅವರ ಕಣ್ಣಿಗೆ ಕಾಣದಂತೆ ಮಾಯವಾದನು.
32 ಆಗ ಅವರು ಒಬ್ಬರಿಗೊಬ್ಬರು, “ಆತನು ದಾರಿಯಲ್ಲಿ ನಮ್ಮ ಸಂಗಡ ಮಾತನಾಡಿದಾಗಲೂ, ಗ್ರಂಥಗಳ ಅರ್ಥವನ್ನು ನಮಗೆ ಬಿಡಿಸಿ ಹೇಳಿದಾಗಲೂ, ನಮ್ಮ ಹೃದಯವು ನಮ್ಮೊಳಗೆ ಕುದಿಯಿತಲ್ಲವೇ?” ಎಂದು ಹೇಳಿಕೊಂಡು,
33 ಅದೇ ಗಳಿಗೆಯಲ್ಲಿ ಎದ್ದು ಯೆರೂಸಲೇಮಿಗೆ ಹಿಂತಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡ ಇದ್ದವರೂ ಒಟ್ಟಾಗಿ ಕೂಡಿಕೊಂಡಿದ್ದರು.
34 “ಕರ್ತನು ಎದ್ದದ್ದು ನಿಜ. ಆತನು ಸೀಮೋನನಿಗೆ ಕಾಣಿಸಿಕೊಂಡನು” ಎಂದು ಹೇಳುತ್ತಿದ್ದರು.
35 ಆಗ ಅವರಿಬ್ಬರು ದಾರಿಯಲ್ಲಿ ನಡೆದ ಸಂಗತಿಯನ್ನೂ ರೊಟ್ಟಿ ಮುರಿಯುವುದರಲ್ಲಿ ತಾವು ಆತನ ಗುರುತು ಹಿಡಿದೆವೆಂಬುದನ್ನೂ ವಿವರಿಸಿದರು.
36 ಅವರು ಈ ಸಂಗತಿಗಳನ್ನು ಕುರಿತು ಮಾತನಾಡುತ್ತಿರುವಾಗ ಯೇಸುವೇ ಅವರ ನಡುವೆ ನಿಂತು, “ನಿಮಗೆ ಸಮಾಧಾನವಾಗಲಿ” ಎಂದು ಅವರಿಗೆ ಹೇಳಿದನು.
37 ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದನ್ನು ಭೂತವೆಂದು ಭಾವಿಸಿದರು.
38 ಆತನು ಅವರಿಗೆ, “ಯಾಕೆ ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಅನುಮಾನಗಳು ಹುಟ್ಟುವುದೇಕೆ?
39 ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿರಿ. ನಾನೇ ಅಲ್ಲವೇ, ನನ್ನನ್ನು ಮುಟ್ಟಿ ನೋಡಿರಿ. ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು. ಅವು ಭೂತಕ್ಕಿಲ್ಲ” ಎಂದು ಹೇಳಿದನು.
40 ಇದನ್ನು ಹೇಳಿದ ಮೇಲೆ ಆತನು ತನ್ನ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದನು.
41 ಆದರೆ ಅವರು ಸಂತೋಷಭರಿತರಾಗಿ ಇನ್ನೂ ನಂಬದೇ ಆಶ್ಚರ್ಯಪಡುತ್ತಿರಲಾಗಿ ಆತನು, “ತಿನ್ನತಕ್ಕ ಪದಾರ್ಥವೇನಾದರೂ ನಿಮ್ಮಲ್ಲುಂಟೋ?” ಎಂದು ಅವರನ್ನು ಕೇಳಲು,
42 ಅವರು ಸುಟ್ಟ ಮೀನಿನ ಒಂದು ತುಂಡನ್ನು ಆತನಿಗೆ ಕೊಟ್ಟರು.
43 ಆತನು ಅದನ್ನು ತೆಗೆದುಕೊಂಡು ಅವರ ಮುಂದೆ ತಿಂದನು.
44 ತರುವಾಯ ಯೇಸು, “ನಾನು ನಿಮ್ಮ ಸಂಗಡ ಇದ್ದಾಗ ಇದೆಲ್ಲಾ ನಿಮಗೆ ತಿಳಿಸಲಿಲ್ಲವೇ? ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ, ಪ್ರವಾದಿಗಳ ಗ್ರಂಥಗಳಲ್ಲಿಯೂ, ಕೀರ್ತನೆಗಳಲ್ಲಿಯೂ ಬರೆದಿರುವುದೆಲ್ಲಾ ನೆರವೇರುವುದು ಅಗತ್ಯವೆಂದು ನಿಮಗೆ ಹೇಳಲಿಲ್ಲವೇ?” ಅಂದನು.
45 ಆ ಮೇಲೆ ಅವರು ಶಾಸ್ತ್ರ ವಚನಗಳನ್ನು ತಿಳಿದುಕೊಳ್ಳುವಂತೆ ಆತನು ಅವರ ಮನಸ್ಸುಗಳನ್ನು ತೆರೆದನು.
46 ಅನಂತರ, “ಮೊದಲೇ ಪ್ರಕಟವಾದ ಪ್ರಕಾರ ‘ಕ್ರಿಸ್ತನು ಕಷ್ಟ ಪಟ್ಟು, ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂತಲೂ,
47 ಅದಲ್ಲದೆ ಜನರು ಪಾಪಕ್ಷಮಾಪಣೆಗೋಸ್ಕರ ಪಶ್ಚಾತ್ತಾಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಈ ಸುವಾರ್ತೆಯು ಯೆರೂಸಲೇಮ್ ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡಬೇಕು’ ಎಂದು ಬರೆದದೆ.
48 ಇವುಗಳ ವಿಷಯದಲ್ಲಿ ನೀವೇ ಸಾಕ್ಷಿ ಹೇಳುವವರಾಗಿದ್ದೀರಿ.
49 ಇಗೋ ನನ್ನ ತಂದೆಯು ವಾಗ್ದಾನ ಮಾಡಿದ ಶಕ್ತಿಯನ್ನುನಿಮಗೆ ಕಳುಹಿಸಿಕೊಡುತ್ತೇನೆ. ದೇವರು ಮೇಲಣ ಲೋಕದಿಂದ ನಿಮಗೆ ಶಕ್ತಿಯನ್ನು ಕೊಡುವ ತನಕ ಈ ಪಟ್ಟಣದಲ್ಲೇ ಕಾದುಕೊಂಡಿರಿ” ಎಂದು ಹೇಳಿದನು.
50 ಮತ್ತು ಯೇಸು ಅವರನ್ನು ಬೇಥಾನ್ಯದ ತನಕ ಕರೆದುಕೊಂಡು ಹೋಗಿ, ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸಿದನು.
51 ಆಶೀರ್ವದಿಸುತ್ತಿರುವಾಗ ಆತನು ಅವರನ್ನು ಬಿಟ್ಟು ಪರಲೋಕಕ್ಕೆ ಒಯ್ಯಲ್ಪಟ್ಟನು.
ಲೂಕ 24 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019