Text copied!
Bibles in Kannada

ಲೂಕ 23:3-26 in Kannada

Help us?

ಲೂಕ 23:3-26 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಪಿಲಾತನು ಯೇಸುವನ್ನು “ನೀನು ಯೆಹೂದ್ಯರ ಅರಸನೋ” ಎಂದು ಕೇಳಲು, ಆತನು, “ನೀನೇ ಹೇಳಿದ್ದೀ” ಎಂದು ಉತ್ತರ ಕೊಟ್ಟನು.
4 ಪಿಲಾತನು ಮುಖ್ಯಯಾಜಕರಿಗೂ, ಜನರ ಗುಂಪಿಗೂ, “ಈ ಮನುಷ್ಯನಲ್ಲಿ ನನಗೆ ಯಾವ ಅಪರಾಧವೂ ಕಾಣಿಸುತ್ತಿಲ್ಲವೆಂದು” ಹೇಳಿದನು.
5 ಅದಕ್ಕೆ ಅವರು, “ಗಲಿಲಾಯದಿಂದ ಮೊದಲುಗೊಂಡು ಇಲ್ಲಿಯವರೆಗೂ ಯೂದಾಯ ಸೀಮೆಯಲ್ಲೆಲ್ಲಾ ಇವನು ಬೋಧನೆ ಮಾಡುತ್ತಾ ಜನರ ಮನಸ್ಸನ್ನು ಕದಲಿಸುತ್ತಾನೆ” ಎಂದು ಇನ್ನೂ ಒತ್ತಿ ಹೇಳಿದರು.
6 ಇದನ್ನು ಪಿಲಾತನು ಕೇಳಿ, ಈ ಮನುಷ್ಯನು ಗಲಿಲಾಯದವನೋ ಎಂದು ವಿಚಾರಿಸಿ,
7 ಈತನು ಹೆರೋದನ ಅಧಿಕಾರಕ್ಕೆ ಒಳಪಟ್ಟವನು ಎಂದು ತಿಳಿದುಕೊಂಡು ಯೇಸುವನ್ನು ಹೆರೋದನ ಬಳಿಗೆ ಕಳುಹಿಸಿದನು. ಹೆರೋದನು ಆ ದಿನಗಳಲ್ಲಿ ಯೆರೂಸಲೇಮಿನಲ್ಲೇ ಇದ್ದನು.
8 ಹೆರೋದನು ಯೇಸುವನ್ನು ನೋಡಿದಾಗ ಬಹಳ ಸಂತೋಷಪಟ್ಟನು. ಏಕೆಂದರೆ ಆತನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ ಆತನನ್ನು ಕಾಣಬೇಕೆಂದು ಬಹು ಕಾಲದಿಂದ ಅಪೇಕ್ಷಿಸಿದ್ದನು. ಆತನಿಂದ ಯಾವುದಾದರೂ ಒಂದು ಸೂಚಕ ಕಾರ್ಯವಾಗುವುದನ್ನು ನೋಡಬೇಕೆಂದು ನಿರೀಕ್ಷಿಸಿದನು.
9 ಹೆರೋದನು ಅನೇಕ ಮಾತುಗಳಿಂದ ಯೇಸುವನ್ನು ಪ್ರಶ್ನೆ ಮಾಡಿದಾಗ್ಯೂ ಆತನು ಅವನಿಗೆ ಏನೂ ಉತ್ತರ ಕೊಡಲಿಲ್ಲ.
10 ಮುಖ್ಯಯಾಜಕರೂ ಶಾಸ್ತ್ರಿಗಳೂ ನಿಂತುಕೊಂಡು ಆತನ ಕುರಿತು ಬಹು ತೀವ್ರವಾಗಿ ಆರೋಪಿಸುತ್ತಿದ್ದರು.
11 ಕಡೆಗೆ ಹೆರೋದನು ತನ್ನ ಸಿಪಾಯಿಗಳನ್ನು ಕೂಡಿಕೊಂಡು ಯೇಸುವನ್ನು ಅವಮಾನಗೊಳಿಸಿ, ಅಪಹಾಸ್ಯ ಮಾಡಿ ಶೋಭಾಯಮಾನವಾದ ಉಡುಪನ್ನು ಹಾಕಿಸಿ ಪಿಲಾತನ ಬಳಿಗೆ ತಿರುಗಿ ಕಳುಹಿಸಿಕೊಟ್ಟನು.
12 ಅದೇ ದಿನ ಹೆರೋದನು ಪಿಲಾತನೂ ಒಬ್ಬರಿಗೊಬ್ಬರು ಸ್ನೇಹಿತರಾದರು. ಅದಕ್ಕಿಂತ ಮೊದಲು ಅವರಿಬ್ಬರೂ ವೈರಿಗಳಾಗಿದ್ದರು.
13 ತರುವಾಯ ಪಿಲಾತನು ಮುಖ್ಯಯಾಜಕರನ್ನೂ, ಅಧಿಕಾರಿಗಳನ್ನೂ, ಪ್ರಜೆಗಳನ್ನೂ ಒಟ್ಟಾಗಿ ಕರೆಯಿಸಿ,
14 ಅವರಿಗೆ, “ಈ ಮನುಷ್ಯನು ಪ್ರಜೆಗಳನ್ನು ತಿರಿಗಿ ಬೀಳುವಂತೆ ಮಾಡುವವನು ಎಂದು ಈತನನ್ನು ನನ್ನ ಬಳಿಗೆ ಕರೆತಂದಿರಲ್ಲಾ. ನೀವು ಈತನ ಮೇಲೆ ಮಾಡಿದ ದೂರುಗಳ ವಿಷಯವಾಗಿ ನಾನು ನಿಮ್ಮ ಮುಂದೆಯೇ ವಿಚಾರಣೆ ಮಾಡಿದರೂ ಈತನಲ್ಲಿ ಒಂದು ತಪ್ಪಾದರೂ ನನಗೆ ಕಾಣಲಿಲ್ಲ.
15 ಹೆರೋದನಿಗೂ ಸಹ ಕಾಣಲಿಲ್ಲ. ಅದಕಾರಣ ಈತನನ್ನು ಹಿಂತಿರುಗಿ ನಮ್ಮ ಬಳಿಗೆ ಕಳುಹಿಸಿದನಲ್ಲಾ. ಆದುದರಿಂದ ಈತನು ಮರಣದಂಡನೆಗೆ ಯೋಗ್ಯವಾದದ್ದೇನೂ ಮಾಡಿದವನಲ್ಲವೆಂದಾಯಿತು.
16 ಆದುದರಿಂದ ನಾನು ಈತನನ್ನು ಹೊಡಿಸಿ ಬಿಟ್ಟು ಬಿಡುತ್ತೇನೆ” ಎಂದು ಹೇಳಿದನು.
17 (ಪ್ರತಿ ಪಸ್ಕ ಹಬ್ಬದ ಸಂದರ್ಭದಲ್ಲಿ ಪಿಲಾತನು ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವ ರೂಢಿಯಿತ್ತು.)
18 ಆದರೆ ಅವರು, “ಅವನನ್ನು ಕೊಲ್ಲಿಸು, ನಮಗೆ ಬರಬ್ಬನನ್ನು ಬಿಟ್ಟುಕೊಡು” ಎಂದು ಒಟ್ಟಾಗಿ ಕೂಗಿಕೊಂಡರು.
19 ಈ ಬರಬ್ಬನನ್ನು ಆ ಪಟ್ಟಣದಲ್ಲಿ ನಡೆದ ಒಂದು ದಂಗೆಯ ನಿಮಿತ್ತವಾಗಿಯೂ ಕೊಲೆಯ ನಿಮಿತ್ತವಾಗಿಯೂ ಸೆರೆಮನೆಯಲ್ಲಿ ಹಾಕಿದ್ದರು.
20 ಪಿಲಾತನು ಯೇಸುವನ್ನು ಬಿಡಿಸಬೇಕೆಂದು ಮನಸ್ಸುಳ್ಳವನಾಗಿದ್ದು ಪುನಃ ಅವರ ಸಂಗಡ ಮಾತನಾಡಿದನು.
21 ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗುತ್ತಿದ್ದರು.
22 ಅವನು ಮೂರನೆಯ ಸಾರಿ, “ಯಾಕೆ? ಕೆಟ್ಟದ್ದೇನು ಮಾಡಿದನು? ನಾನು ಇವನಲ್ಲಿ ಮರಣದಂಡನೆಗೆ ತಕ್ಕ ಅಪರಾಧವೇನೂ ಕಾಣಲಿಲ್ಲ ಆದುದರಿಂದ ಇವನನ್ನು ಹೊಡಿಸಿ ಬಿಟ್ಟುಬಿಡುತ್ತೇನೆ” ಎಂದು ಅವರಿಗೆ ಹೇಳಿದನು.
23 ಆದರೆ ಅವರು ಜೋರಾಗಿ ಕೂಗುತ್ತಾ, ಅವನನ್ನು ಶಿಲುಬೆಗೆ ಹಾಕಿಸಬೇಕೆಂದು ಕೇಳಿಕೊಂಡು ಬಲವಂತ ಮಾಡಿದರು. ಅವರ ಕೂಗಾಟವು ಗೆದ್ದಿತು.
24 ಆಗ ಪಿಲಾತನು, ಅವರು ಕೇಳಿಕೊಂಡಂತೆ ಆಗಲಿ ಎಂದು ನಿರ್ಣಯಿಸಿ,
25 ದಂಗೆ ಕೊಲೆಗಳ ನಿಮಿತ್ತವಾಗಿ ಸೆರೆಮನೆಯಲ್ಲಿ ಬಿದ್ದ ಆ ಮನುಷ್ಯನನ್ನು ಅವರು ಕೇಳಿಕೊಳ್ಳುತ್ತಿದ್ದ ಪ್ರಕಾರ ಬಿಟ್ಟುಕೊಟ್ಟು, ಯೇಸುವನ್ನು ಅವರ ಚಿತ್ತಾನುಸಾರ ದಂಡಿಸಲು ಒಪ್ಪಿಸಿದನು.
26 ಅವರು ಯೇಸುವನ್ನು ಕರೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ, ಕುರೇನೆ ಪಟ್ಟಣದ ಸೀಮೋನನೆಂಬುವನನ್ನು ಕರೆದು, ಶಿಲುಬೆಯನ್ನು ಅವನ ಮೇಲೆ ಹೊರಿಸಿ ಯೇಸುವಿನ ಹಿಂದೆ ಹೊತ್ತುಕೊಂಡು ಬರುವ ಹಾಗೆ ಮಾಡಿದರು.
ಲೂಕ 23 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019