Text copied!
Bibles in Kannada

ಲೂಕ 17:1-17 in Kannada

Help us?

ಲೂಕ 17:1-17 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೇಸು ತನ್ನ ಶಿಷ್ಯರಿಗೆ, “ಶೋಧನೆಗಳು ಬರುವುದು ಸಹಜ, ಆದರೂ ಅವು ಯಾವನಿಂದ ಬರುತ್ತವೆಯೋ ಅವನ ಗತಿಯನ್ನು ಏನು ಹೇಳಲಿ?
2 ಅಂಥವನು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಮಾಡುವುದಕ್ಕೆ ಕಾರಣನಾಗುವುದಕ್ಕಿಂತ ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಸಿಕೊಂಡು ಸಮುದ್ರದಲ್ಲಿ ಹಾಕಿಸಿಕೊಳ್ಳುವುದೇ ಲೇಸು.
3 ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಗದರಿಸು. ಅವನು ಪಶ್ಚಾತ್ತಾಪಪಟ್ಟರೆ ಅವನ ತಪ್ಪನ್ನು ಕ್ಷಮಿಸಿಬಿಡು.
4 ಅವನು ದಿನಕ್ಕೆ ಏಳು ಸಾರಿ ನಿನಗೆ ತಪ್ಪುಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು, ‘ನಾನು ಪಶ್ಚಾತ್ತಾಪಪಡುತ್ತೇನೆ ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ ಅವನನ್ನು ಕ್ಷಮಿಸು” ಎಂದು ಹೇಳಿದನು.
5 ಅಪೊಸ್ತಲರು ಕರ್ತನಿಗೆ, “ನಮ್ಮ ನಂಬಿಕೆಯನ್ನು ಹೆಚ್ಚಿಸು” ಎಂದು ಹೇಳಲು,
6 ಕರ್ತನು, “ಸಾಸಿವೇ ಕಾಳಷ್ಟು ನಂಬಿಕೆ ನಿಮಗಿರುವುದಾದರೆ ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡುಹೋಗಿ ಸಮುದ್ರದಲ್ಲಿ ನಾಟಿಕೊ’ ಎಂದು ಹೇಳಿದರೂ ಅದು ನಿಮ್ಮ ಮಾತನ್ನು ಕೇಳುವುದು” ಅಂದನು.
7 “ನಿಮ್ಮಲ್ಲಿ ಯಾವನಿಗಾದರೂ ವ್ಯವಸಾಯ ಮಾಡುವ ಅಥವಾ ಕುರಿಮೇಯಿಸುವ ಆಳಿರಲಾಗಿ, ಅವನು ಹೊಲದಿಂದ ಮನೆಗೆ ಬಂದ ಆ ಆಳಿಗೆ, ‘ನೀನು ತಟ್ಟನೆ ಬಂದು ಊಟಕ್ಕೆ ಕುಳಿತುಕೋ’ ಎಂದು ಹೇಳುವನೇ?
8 ಹಾಗೆ ಹೇಳದೆ, ‘ನೀನು ನನ್ನ ಊಟಕ್ಕೇನಾದರೂ ಸಿದ್ಧಮಾಡು, ನಾನು ಊಟಮಾಡುವ ತನಕ ನಡುಕಟ್ಟಿಕೊಂಡು ನನಗೆ ಸೇವೆಮಾಡು. ಆ ಮೇಲೆ ನೀನು ಊಟಮಾಡು, ಕುಡಿ’ ಎಂದು ಹೇಳುವನಲ್ಲವೇ.
9 ತನ್ನ ಅಪ್ಪಣೆಯಂತೆ ನಡೆದ ಆ ಆಳಿಗೆ, ನಿನ್ನಿಂದ ಉಪಕಾರವಾಯಿತೆಂದು ಅವನಿಗೆ ಹೇಳುವನೇ? ಇದರಂತೆಯೇ ನಿಮ್ಮ ಸಂಗತಿ.
10 ನೀವು ನಿಮಗೆ ಅಪ್ಪಣೆಯಾಗಿರುವುದನ್ನೆಲ್ಲಾ ಮಾಡಿದ ಮೇಲೆ ‘ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ’ ಅನ್ನಿರಿ” ಎಂದು ಹೇಳಿದನು.
11 ಯೇಸು ಯೆರೂಸಲೇಮಿಗೆ ಪ್ರಯಾಣಮಾಡುವಾಗ ಸಮಾರ್ಯ, ಗಲಿಲಾಯ ಸೀಮೆಗಳ ನಡುವೆ ಹಾದುಹೋದನು.
12 ಒಂದು ಹಳ್ಳಿಗೆ ಬಂದಾಗ ಹತ್ತುಮಂದಿ ಕುಷ್ಠರೋಗಿಗಳು ಆತನ ಎದುರಿಗೆ ಬಂದು ದೂರದಲ್ಲಿ ನಿಂತು,
13 “ಯೇಸುವೇ, ಗುರುವೇ, ನಮ್ಮ ಮೇಲೆ ದಯವಿಡು” ಎಂದು ಕೂಗಿ ಹೇಳಿದರು.
14 ಆತನು ಅವರನ್ನು ನೋಡಿ, “ನೀವು ಹೋಗಿ ಯಾಜಕರಿಗೆ ನಿಮ್ಮ ಮೈ ತೋರಿಸಿಕೊಳ್ಳಿರಿ” ಎಂದು ಹೇಳಿದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು.
15 ಅವರಲ್ಲಿ ಒಬ್ಬನು ತನಗೆ ಗುಣವಾದದ್ದನ್ನು ನೋಡಿ, ಮಹಾಶಬ್ದದಿಂದ ದೇವರನ್ನು ಕೊಂಡಾಡುತ್ತಾ ಹಿಂತಿರುಗಿ ಬಂದು,
16 ಯೇಸುವಿನ ಪಾದಗಳಿಗೆ ಅಡ್ಡಬಿದ್ದು, ಆತನಿಗೆ ಕೃತಜ್ಞತಾಸುತ್ತಿಯನ್ನು ಸಲ್ಲಿಸಿದನು. ಅವನು ಸಮಾರ್ಯದವನು.
17 ಯೇಸು ಇದನ್ನು ನೋಡಿ, “ಹತ್ತು ಮಂದಿ ಶುದ್ಧರಾದರಲ್ಲವೇ. ಮಿಕ್ಕ ಒಂಭತ್ತು ಮಂದಿ ಎಲ್ಲಿ?
ಲೂಕ 17 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019