Text copied!
Bibles in Kannada

ಲೂಕ 12:13-36 in Kannada

Help us?

ಲೂಕ 12:13-36 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆಗ ಜನರಲ್ಲಿ ಒಬ್ಬನು, “ಬೋಧಕನೇ, ತಂದೆಯ ಆಸ್ತಿಯನ್ನು ನನಗೆ ಪಾಲುಮಾಡುವಂತೆ ನನ್ನ ಅಣ್ಣನಿಗೆ ಹೇಳು” ಎಂದು ಯೇಸುವನ್ನು ಕೇಳಿಕೊಳ್ಳಲು,
14 ಅದಕ್ಕೆ ಯೇಸು, “ಮನುಷ್ಯನೇ, ನನ್ನನ್ನು ನಿಮಗೆ ನ್ಯಾಯಾಧಿಪತಿಯನ್ನಾಗಿ ಅಥವಾ ಪಾಲುಮಾಡುವವನನ್ನಾಗಿ ನೇಮಿಸಿದವರಾರು?” ಎಂದು ಅವನನ್ನು ಕೇಳಿ,
15 ಜನರಿಗೆ, “ಎಲ್ಲಾ ದುರಾಶೆಗಳಿಂದಲು ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವುದಿಲ್ಲ” ಎಂದು ಹೇಳಿ, ಒಂದು ಸಾಮ್ಯವನ್ನು ಹೇಳಿದನು.
16 ಅದೇನೆಂದರೆ “ಒಬ್ಬಾನೊಬ್ಬ ಐಶ್ವರ್ಯವಂತನ ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆ ಬೆಳೆಯಿತು.
17 ಆಗ ಅವನು ತನ್ನೊಳಗೆ, ‘ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವುದಕ್ಕೆ ನನಗೆ ಸ್ಥಳವಿಲ್ಲವಲ್ಲಾ?’ ಎಂದು ಆಲೋಚಿಸಿ,
18 ‘ಒಂದು ಕೆಲಸ ಮಾಡುತ್ತೇನೆ. ನನ್ನ ಕಣಜಗಳನ್ನು ಕೆಡವಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನು ತುಂಬಿಟ್ಟು,
19 ನನ್ನ ಜೀವಾತ್ಮಕ್ಕೆ, ಜೀವವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಂದಿದೆ, ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು’ ಅಂದುಕೊಂಡನು.
20 “ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವುದು ಯಾರಿಗಾಗುವುದು?’ ಎಂದು ಕೇಳಿದನು.
21 ತನಗೋಸ್ಕರ ಹಣವನ್ನು ಸಂಗ್ರಹಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ” ಅಂದನು.
22 ಇದಲ್ಲದೆ ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ, “ಈ ಕಾರಣದಿಂದ ಪ್ರಾಣಧಾರಣೆಗೆ ಏನು ಊಟ ಮಾಡಬೇಕು? ದೇಹ ರಕ್ಷಣೆಗೆ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬುದಾಗಿ ನಿಮಗೆ ಹೇಳುತ್ತೇನೆ.
23 ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ದೇಹವು ಮೇಲಾದದು.
24 ಕಾಗೆಗಳನ್ನು ಗಮನಿಸಿರಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಆದಾಗ್ಯೂ ದೇವರು ಅವುಗಳನ್ನು ಸಾಕಿಸಲಹುತ್ತಾನೆ. ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೇ.
25 ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಒಂದು ಮೊಳದಷ್ಟು ಹೆಚ್ಚಿಸಲುನಿಮ್ಮಲ್ಲಿ ಯಾರಿಂದಾದೀತು?
26 ಇಂಥ ಅಲ್ಪ ಕಾರ್ಯಗಳನ್ನು ಮಾಡಲು ನೀವು ಆಸಕ್ತರಾಗಿರಲಾಗಿ ಉಳಿದ ವಿಷಯದಲ್ಲಿ ಚಿಂತೆಮಾಡುವುದೇಕೆ?
27 ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಲಕ್ಷ್ಯವಿಟ್ಟು ಗಮನಿಸಿ ನೋಡಿರಿ; ಅವು ದುಡಿಯುವುದಿಲ್ಲ, ನೂಲುವುದಿಲ್ಲ, ಆದರೂ ಅರಸನಾದ ಸೊಲೊಮೋನನು ತನ್ನ ಸರ್ವ ವೈಭವದಲ್ಲಿ ಇದ್ದಾಗಲೂ, ಈ ಅಡವಿಯ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪುಗಳನ್ನು ಧರಿಸಲಿಲ್ಲವೆಂದು ನಿಮಗೆ ಹೇಳುತ್ತೇನೆ.
28 ಎಲೈ ಅಲ್ಪ ವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಈ ಪ್ರಕಾರ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನು.
29 ಏನು ಊಟ ಮಾಡಬೇಕು? ಏನು ಕುಡಿಯಬೇಕು? ಎಂದು ತವಕಪಟ್ಟು ಚಿಂತಿಸಬೇಡಿರಿ.
30 ಇವೆಲ್ಲವುಗಳ ಕುರಿತು ಇಹಲೋಕದ ಜನಗಳು ಅಲೆದಾಡುತ್ತಾರೆ. ಇವು ನಿಮಗೆ ಅವಶ್ಯವೆಂದು ನಿಮ್ಮ ತಂದೆಗೆ ತಿಳಿದಿದೆ.
31 ನೀವಾದರೋ ದೇವರ ರಾಜ್ಯಕ್ಕಾಗಿ ತವಕಪಡಿರಿ. ಇದರ ಕೂಡ ಅವೂ ನಿಮಗೆ ದೊರಕುವವು.
32 ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವುದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.
33 ನಿಮಗಿರುವುದನ್ನು ಮಾರಿಬಿಟ್ಟು ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ. ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ.
34 ನಿಮ್ಮ ಗಂಟು ಇದ್ದಲ್ಲಿಯೇ ನಿಮ್ಮ ಮನಸ್ಸು ಇರುತ್ತದಷ್ಟೆ.
35 “ನಿಮ್ಮ ನಡುಗಳು ಕಟ್ಟಿರಲಿ. ನಿಮ್ಮ ದೀಪಗಳು ಆರದಂತೆ ಉರಿಯುತ್ತಾ ಇರಲಿ.
36 ನೀವಂತೂ ತಮ್ಮ ಯಜಮಾನನು ಯಾವಾಗ ಮದುವೆ ಔತಣ ಮುಗಿಸಿಕೊಂಡು ಹಿಂತಿರುಗುವನೋ ಎಂದು ಕಾಯುವಂಥ ಮತ್ತು ಆತನು ತಟ್ಟಿದ ಕೂಡಲೆ ಬಾಗಿಲನ್ನು ತೆರೆಯಲು ಸಿದ್ಧರಾಗಿರುವಂಥ ಆಳುಗಳಂತೆ ಇರಿ.
ಲೂಕ 12 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019