Text copied!
Bibles in Kannada

ಯೋಹಾ 9:17-30 in Kannada

Help us?

ಯೋಹಾ 9:17-30 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಹೀಗಿರಲಾಗಿ ಅವರು ಪುನಃ ಆ ಕುರುಡನನ್ನು, “ಆತನು ನಿನಗೆ ದೃಷ್ಟಿ ಕೊಟ್ಟದ್ದರಿಂದ ನೀನು ಆತನ ವಿಷಯವಾಗಿ ಏನು ಹೇಳುತ್ತೀ?” ಎಂದು ಕೇಳಿದಾಗ, ಅವನು “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು.
18 ಆದರೆ ದೃಷ್ಟಿ ಹೊಂದಿದವನ ವಿಷಯವಾಗಿ ಆ ಯೆಹೂದ್ಯರು; ಅವನ ತಂದೆತಾಯಿಗಳನ್ನು ಕರೆದು ವಿಚಾರಿಸುವವರೆಗೂ, ಅವನು ಹುಟ್ಟು ಕುರುಡನಾಗಿದ್ದು, ಈಗ ದೃಷ್ಟಿ ಹೊಂದಿದ್ದಾನೆಂಬುದನ್ನು ನಂಬಲಿಲ್ಲ.
19 ಅವರು “ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವ ನಿಮ್ಮ ಮಗನು ಇವನೋ? ಹಾಗಾದರೆ ಈಗ ಇವನಿಗೆ ಹೇಗೆ ದೃಷ್ಟಿ ಬಂದಿತು?” ಎಂದು ಅವರನ್ನು ಕೇಳಿದರು.
20 ಅವನ ತಂದೆ ತಾಯಿಗಳು, “ಇವನು ನಮ್ಮ ಮಗನೆಂದೂ ಕುರುಡನಾಗಿ ಹುಟ್ಟಿದನೆಂದೂ ಬಲ್ಲೆವು.
21 ಈಗ ಇವನು ನೋಡುವುದು ಹೇಗೆಂದು ನಮಗೆ ಗೊತ್ತಿಲ್ಲ. ಯಾರು ಇವನ ಕಣ್ಣುಗಳನ್ನು ತೆರೆದರೋ ನಮಗೆ ಗೊತ್ತಿಲ್ಲ, ಇವನನ್ನೇ ಕೇಳಿರಿ. ಇವನು ಪ್ರಾಯದವನಾಗಿದ್ದಾನಲ್ಲಾ, ಇವನೇ ತನ್ನ ವಿಷಯವಾಗಿ ಹೇಳುವನು” ಎಂದು ಉತ್ತರಕೊಟ್ಟರು.
22 ಅವನ ತಂದೆ ತಾಯಿಗಳು ಯೆಹೂದ್ಯರಿಗೆ ಭಯಪಟ್ಟದ್ದರಿಂದ ಹೀಗೆ ಹೇಳಿದರು. ಏಕೆಂದರೆ ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡರೆ ಅವನನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯರು ಆಗಲೇ ತೀರ್ಮಾನಿಸಿಕೊಂಡಿದ್ದರು.
23 “ಇವನು ಪ್ರಾಯದವನು ಇವನನ್ನೇ ಕೇಳಿರಿ” ಎಂದು ಅವನ ತಂದೆತಾಯಿಗಳು ಹೇಳಿದ್ದಕ್ಕೆ ಇದೇ ಕಾರಣ.
24 ಆದಕಾರಣ ಅವರು ಕುರುಡನಾಗಿದ್ದ ಆ ಮನುಷ್ಯನನ್ನು ಎರಡನೆಯ ಸಾರಿ ಕರೆದು, “ನೀನು ದೇವರಿಗೆ ಗೌರವವನ್ನು ಸಲ್ಲಿಸು; ಈ ಮನುಷ್ಯನು ಪಾಪಿಷ್ಠನೆಂದು ನಾವು ಬಲ್ಲೆವು” ಎಂದರು.
25 ಅದಕ್ಕೆ ಅವನು, “ಆತನು ಪಾಪಿಷ್ಠನೋ ಏನೋ ನನಗೆ ಗೊತ್ತಿಲ್ಲ, ಒಂದು ಮಾತ್ರ ಬಲ್ಲೆನು ನಾನು ಕುರುಡನಾಗಿದ್ದೆನು; ಈಗ ನಾನು ನೋಡುತ್ತಿದ್ದೇನೆ” ಎಂದನು.
26 ಅವರು ಅವನನ್ನು, “ಆತನು ನಿನಗೆ ಏನು ಮಾಡಿದನು? ನಿನ್ನ ಕಣ್ಣುಗಳನ್ನು ಹೇಗೆ ತೆರೆದನು?” ಎಂದು ಕೇಳಿದ್ದಕ್ಕೆ,
27 ಅವನು, “ನಿಮಗೆ ಆಗಲೇ ಹೇಳಿದೆನಲ್ಲಾ, ನೀವು ಕೇಳಲಿಲ್ಲ! ನೀವು ಯಾಕೆ ಪುನಃ ಪುನಃ ಕೇಳುತ್ತಿದ್ದೀರಿ? ನೀವು ಸಹ ಆತನ ಶಿಷ್ಯರಾಗುವುದಕ್ಕೆ ಬಯಸುತ್ತಿದ್ದೀರೋ?” ಎಂದನು.
28 ಅದಕ್ಕೆ ಅವರು ಅವನನ್ನು ನಿಂದಿಸಿ, “ನೀನು ಆತನ ಶಿಷ್ಯನು. ಆದರೆ ನಾವು ಮೋಶೆಯ ಶಿಷ್ಯರು.
29 ಮೋಶೆಯ ಸಂಗಡ ದೇವರು ಮಾತನಾಡಿದನೆಂದು ನಾವು ಬಲ್ಲೆವು, ಆದರೆ ಈತನು ಎಲ್ಲಿಯವನೋ ನಮಗೆ ತಿಳಿಯದು” ಎಂದರು.
30 ಅದಕ್ಕೆ ಆ ಮನುಷ್ಯನು, “ಆತನು ನನ್ನ ಕಣ್ಣುಗಳನ್ನು ತೆರೆದರೂ ಆತನು ಎಲ್ಲಿಯವನೆಂದು ನಿಮಗೆ ತಿಳಿಯದೆ ಇರುವುದು ಆಶ್ಚರ್ಯವಲ್ಲವೇ!
ಯೋಹಾ 9 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019