Text copied!
Bibles in Kannada

ಯೋಹಾ 6:23-40 in Kannada

Help us?

ಯೋಹಾ 6:23-40 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಅಷ್ಟರೊಳಗೆ ತಿಬೇರಿಯಾದಿಂದ ಬೇರೆ ದೋಣಿಗಳು ಹೊರಟು, ಕರ್ತನು ದೇವರಿಗೆ ಕೃತಜ್ಞತೆ ಸಲ್ಲಿಸಿ, ಜನರಿಗೆ ರೊಟ್ಟಿಯನ್ನು ಊಟಮಾಡಿಸಿದ ಸ್ಥಳದ ಸಮೀಪಕ್ಕೆ ಬಂದವು.
24 ಹೀಗಿರಲಾಗಿ ಯೇಸು ಮತ್ತು ಆತನ ಶಿಷ್ಯರು ಅಲ್ಲಿ ಇಲ್ಲದಿರುವುದನ್ನು ಜನರು ಅರಿತು ತಾವೇ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಬಂದರು.
25 ಮತ್ತು ಸಮುದ್ರದ ಆಚೆಕಡೆಯಲ್ಲಿ ಆತನನ್ನು ಕಂಡು “ಗುರುವೇ, ಯಾವಾಗ ಇಲ್ಲಿಗೆ ಬಂದಿ?” ಎಂದು ಕೇಳಿದರು.
26 ಯೇಸು ಅವರಿಗೆ “ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀವು ನನ್ನನ್ನು ಹುಡುಕುವುದು ಸೂಚಕಕಾರ್ಯಗಳನ್ನು ನೋಡಿದ್ದರಿಂದಲ್ಲ, ಆ ರೊಟ್ಟಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದರಿಂದಲೇ.
27 ನಾಶವಾಗುವ ಆಹಾರಕ್ಕಾಗಿ ದುಡಿಯಬೇಡಿರಿ. ನಿತ್ಯಜೀವಕ್ಕಾಗಿ ಉಳಿಯುವ ಆಹಾರಕ್ಕಾಗಿ ದುಡಿಯಿರಿ, ಇಂಥಾ ಆಹಾರವನ್ನು ಮನುಷ್ಯಕುಮಾರನು ನಿಮಗೆ ಕೊಡುವನು. ಇದಕ್ಕಾಗಿ ತಂದೆಯಾದ ದೇವರು ಆತನ ಮೇಲೆ ಮುದ್ರೆ ಹಾಕಿ ನೇಮಿಸಿದ್ದಾನೆ” ಎಂದನು.
28 ಅವರು ಆತನಿಗೆ “ದೇವರ ಕ್ರಿಯೆಗಳನ್ನು ನಾವು ಮಾಡಬೇಕಾದರೆ ಏನು ಮಾಡಬೇಕೆಂದು” ಕೇಳಿದ್ದಕ್ಕೆ,
29 ಯೇಸುವು, “ದೇವರ ಕ್ರಿಯೆ ಯಾವುದೆಂದರೆ, ಆತನು ಕಳುಹಿಸಿಕೊಟ್ಟಾತನನ್ನು ನೀವು ನಂಬುವುದೇ” ಎಂದನು.
30 ಅವರು ಆತನನ್ನು “ಹಾಗಾದರೆ ನಾವು ನೋಡಿ ನಿನ್ನನ್ನು ನಂಬುವಂತೆ ಯಾವ ಸೂಚಕಕಾರ್ಯ ಮಾಡುತ್ತೀ? ನೀನು ಏನುಮಾಡುತ್ತಿ?
31 ನಮ್ಮ ಪೂರ್ವಿಕರು ಅರಣ್ಯದಲ್ಲಿ ಮನ್ನಾ ತಿಂದರು. ‘ಪರಲೋಕದಿಂದ ರೊಟ್ಟಿಯನ್ನು ಅವರಿಗೆ ತಿನ್ನುವುದಕ್ಕೆ ಕೊಟ್ಟನು’ ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲಾ” ಎಂದು ಕೇಳಿದಾಗ,
32 ಯೇಸು ಅವರಿಗೆ “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಟ್ಟವನಲ್ಲ, ನನ್ನ ತಂದೆಯು ಪರಲೋಕದಿಂದ ಬರುವ ನಿಜವಾದ ರೊಟ್ಟಿಯನ್ನು ನಿಮಗೆ ಕೊಡುತ್ತಾನೆ.
33 ದೇವರು ಕೊಡುವ ಆ ರೊಟ್ಟಿ ಯಾವುದೆಂದರೆ, ಪರಲೋಕದಿಂದ ಇಳಿದು ಬಂದು ಲೋಕಕ್ಕೆ ಜೀವವನ್ನು ಉಂಟುಮಾಡುವಂಥದ್ದೇ” ಎಂದು ಹೇಳಿದನು.
34 ಆಗ ಅವರು “ಆಯ್ಯಾ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು” ಎಂದರು.
35 ಯೇಸು ಅವರಿಗೆ “ನಾನೇ ಜೀವದ ರೊಟ್ಟಿ ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವನಿಗೆ ಎಂದಿಗೂಬಾಯಾರಿಕೆಯಾಗುವುದಿಲ್ಲ.
36 ಆದರೆ ನೀವು ನನ್ನನ್ನು ನೋಡಿದ್ದರೂ ನಂಬಲಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ.
37 ತಂದೆಯು ನನಗೆ ಕೊಡುವಂಥವರೆಲ್ಲರೂ ನನ್ನ ಬಳಿಗೆ ಬರುವರು. ನನ್ನ ಬಳಿಗೆ ಬರುವವನನ್ನು ನಾನು ಎಂದಿಗೂ ತಳ್ಳಿಬಿಡುವುದೇ ಇಲ್ಲ.
38 ನಾನು ನನ್ನ ಸ್ವಂತ ಚಿತ್ತದಂತೆ ಮಾಡುವುದಕ್ಕಾಗಿ ಬಂದಿಲ್ಲ, ಆದರೆ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವುದಕ್ಕೆ ಪರಲೋಕದಿಂದ ಇಳಿದು ಬಂದಿರುವೆ.
39 ನನ್ನನ್ನು ಕಳುಹಿಸಿದಾತನ ಚಿತ್ತವು ಏನೆಂದರೆ, ಆತನು ನನಗೆ ಕೊಟ್ಟವರಲ್ಲಿ ನಾನು ಯಾರನ್ನೂ ಕಳೆದುಕೊಳ್ಳದೆಅವರನ್ನು ಕಡೆ ದಿನದಲ್ಲಿ ಎಬ್ಬಿಸಬೇಕೆಂಬುದೇ.
40 ಮಗನನ್ನು ನೋಡಿ ತಂದೆಯಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ನನ್ನ ತಂದೆಯ ಚಿತ್ತವಾಗಿದೆ, ಮತ್ತು ನಾನು ಕಡೆ ದಿನದಲ್ಲಿ ಅವನನ್ನು ಎಬ್ಬಿಸುವೆನು” ಎಂದು ಹೇಳಿದನು.
ಯೋಹಾ 6 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019