25 ಆ ಹೆಂಗಸು ಆತನಿಗೆ “ಮೆಸ್ಸೀಯನು (ಎಂದರೆ ಕ್ರಿಸ್ತನು) ಬರುತ್ತಾನೆಂದು ನಾನು ಬಲ್ಲೆನು. ಆತನು ಬಂದಾಗ ನಮಗೆ ಎಲ್ಲವನ್ನು ತಿಳಿಸಿಕೊಡುವನು” ಎಂದು ಹೇಳಲು,
26 ಯೇಸು ಆಕೆಗೆ “ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು” ಎಂದು ಹೇಳಿದನು.
27 ಅಷ್ಟರೊಳಗೆ ಆತನ ಶಿಷ್ಯರು ಬಂದು ಆತನು ಆ ಸ್ತ್ರೀಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೂ, “ನಿನಗೆ ಏನು ಬೇಕು? ಆಕೆಯ ಸಂಗಡ ಯಾಕೆ ಮಾತನಾಡುತ್ತಿರುವೆ?” ಎಂದು ಒಬ್ಬರೂ ಆತನನ್ನು ಕೇಳಲಿಲ್ಲ.
28 ಆಗ ಆ ಸ್ತ್ರೀ ತನ್ನ ನೀರಿನ ಕೊಡವನ್ನು ಅಲ್ಲೇ ಬಿಟ್ಟು ಊರೊಳಕ್ಕೆ ಹೋಗಿ ಜನರಿಗೆ,
29 “ಅಲ್ಲಿ ಒಬ್ಬನಿದ್ದಾನೆ, ನಾನು ಇದುವರೆಗೆ ಮಾಡಿದ್ದನ್ನೆಲ್ಲಾ ನನಗೆ ತಿಳಿಸಿದನು. ಬಂದು ಅವನನ್ನು ನೋಡಿರಿ. ಬರತಕ್ಕ ಕ್ರಿಸ್ತನು ಅವನೇ ಇರಬಹುದೋ?” ಎಂದು ಹೇಳಿದಳು.
30 ಆಗ ಅವರೆಲ್ಲರು ಊರನ್ನು ಬಿಟ್ಟು ಆತನ ಬಳಿಗೆ ಬಂದರು.
31 ಅಷ್ಟರೊಳಗೆ ಶಿಷ್ಯರು “ಗುರುವೇ, ಊಟಮಾಡು” ಎಂದು ಆತನನ್ನು ಕೇಳಿಕೊಂಡರು.
32 ಆದರೆ ಆತನು ಅವರಿಗೆ “ನಿಮಗೆ ತಿಳಿಯದಿರುವ ಆಹಾರವು ನನ್ನ ಬಳಿಯಲ್ಲಿ ಉಂಟು” ಎಂದು ಹೇಳಲು
33 ಶಿಷ್ಯರು, “ಆತನಿಗೆ ಯಾರಾದರೂ ಊಟಕ್ಕೆ ತಂದು ಕೊಟ್ಟರೇನೊ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
34 ಯೇಸು ಅವರಿಗೆ “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರ.
35 ‘ಇನ್ನೂ ನಾಲ್ಕು ತಿಂಗಳುಗಳಾದ ಮೇಲೆ ಸುಗ್ಗಿಯು ಬರುವುದೆಂದು ನೀವು ಹೇಳುವುದುಂಟಷ್ಟೆ’? ಇಗೋ, ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಹೊಲಗಳನ್ನು ನೋಡಿರಿ. ಅವು ಬಲಿತು ಬೆಳ್ಳಗಾಗಿ ಕೊಯ್ಲಿಗೆ ಸಿದ್ಧವಾಗಿದೆಯೆಂದು ನಿಮಗೆ ಹೇಳುತ್ತೇನೆ.
36 ಕೊಯ್ಯುವವನಿಗೆ ಈಗಲೇ ಕೂಲಿ ದೊರೆಯುತ್ತದೆ. ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ. ಹೀಗೆ ಬಿತ್ತುವವನಿಗೂ ಮತ್ತು ಕೊಯ್ಯುವವನಿಗೂ ಒಟ್ಟಿಗೆ ಸಂತೋಷವಾಗುವುದು.
37 ‘ಬಿತ್ತುವವನೊಬ್ಬನು, ಕೊಯ್ಯುವವನು ಬೇರೊಬ್ಬನು’ ಎಂದು ಹೇಳುವ ಮಾತು ಇದರಲ್ಲಿ ಸತ್ಯವಾಗಿದೆ.
38 ನೀವು ಪ್ರಯಾಸ ಪಡದಂಥ ಬೆಳೆಯನ್ನು ಕೊಯ್ಯುವುದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು, ಬೇರೊಬ್ಬರು ಪ್ರಯಾಸಪಟ್ಟರು, ನೀವು ಅವರ ಕಷ್ಟದಲ್ಲಿ ಸೇರಿದ್ದೀರಿ” ಎಂದು ಹೇಳಿದನು.
39 “ನಾನು ಮಾಡಿದ್ದನ್ನೆಲ್ಲಾ ಆತನು ನನಗೆ ಹೇಳಿದನು” ಎಂಬುದಾಗಿ ಸಾಕ್ಷಿಕೊಡುತ್ತಿರುವ ಆ ಸ್ತ್ರೀಯ ಮಾತಿನಿಂದ, ಆ ಊರಿನ ಸಮಾರ್ಯರಲ್ಲಿ ಅನೇಕರು ಆತನನ್ನು ನಂಬುವವರಾದರು.
40 ಆದುದರಿಂದ ಆ ಸಮಾರ್ಯದವರು ಆತನ ಬಳಿಗೆ ಬಂದು; ನೀನು ನಮ್ಮಲ್ಲಿ ಇರಬೇಕೆಂದು ಆತನನ್ನು ಬೇಡಿಕೊಳ್ಳಲು, ಆತನು ಎರಡು ದಿನ ಅಲ್ಲಿಯೇ ತಂಗಿದನು.
41 ಇನ್ನೂ ಹೆಚ್ಚು ಜನರು ಆತನ ವಾಕ್ಯವನ್ನು ಕೇಳಿ ನಂಬಿದರು,
42 ಜನರು ಆ ಸ್ತ್ರೀಗೆ, “ನಾವು ಆತನನ್ನು ನಂಬಿರುವುದು ಇನ್ನು ನಿನ್ನ ಮಾತಿನ ಮೇಲೆ ಅಲ್ಲ. ನಾವು ಸ್ವತಃ ಕಿವಿಯಾರೆ ಕೇಳಿ ಈತನು ನಿಜವಾಗಿಯೂ ಲೋಕರಕ್ಷಕನೇ ಎಂದು ತಿಳಿದುಕೊಂಡಿದ್ದೇವೆ” ಎಂದರು.
43 ಎರಡು ದಿನಗಳಾದ ಮೇಲೆ ಆತನು ಅಲ್ಲಿಂದ ಹೊರಟು ಗಲಿಲಾಯಕ್ಕೆ ಹೋದನು.