Text copied!
Bibles in Kannada

ಯೋಹಾ 20:3-14 in Kannada

Help us?

ಯೋಹಾ 20:3-14 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆಗ ಪೇತ್ರನೂ ಮತ್ತು ಇನ್ನೊಬ್ಬ ಶಿಷ್ಯನೂ ಹೊರಟು ಸಮಾಧಿಯ ಕಡೆಗೆ ಹೋದರು.
4 ಅವರಿಬ್ಬರೂ ಜೊತೆಯಾಗಿ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ವೇಗವಾಗಿ ಓಡಿ ಮೊದಲೇ ಸಮಾಧಿಗೆ ಬಂದನು.
5 ಅವನು ಬಗ್ಗಿ ನೋಡಿದಾಗ ನಾರುಬಟ್ಟೆಗಳು ಬಿದ್ದಿರುವುದನ್ನು ಕಂಡನು. ಆದರೂ ಅವನು ಒಳಗೆ ಹೋಗಲಿಲ್ಲ.
6 ಸೀಮೋನ್ ಪೇತ್ರನು ಅವನ ಹಿಂದೆ ಬಂದು ಸಮಾಧಿಯೊಳಕ್ಕೆ ಹೋಗಿ, ಆ ನಾರುಬಟ್ಟೆಗಳು ಬಿದ್ದಿರುವುದನ್ನೂ
7 ಆತನ ತಲೆಯ ಮೇಲಿದ್ದ ಕೈವಸ್ತ್ರವು, ಆ ನಾರು ಬಟ್ಟೆಗಳೊಂದಿಗೆ ಇರದೇ, ಸುತ್ತಿ ಒಂದು ಕಡೆಯಲ್ಲಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ನೋಡಿದನು.
8 ಆಗ ಸಮಾಧಿಯ ಬಳಿಗೆ ಮೊದಲು ಬಂದಿದ್ದ ಆ ಮತ್ತೊಬ್ಬ ಶಿಷ್ಯನು ಸಹ ಒಳಗೆ ಹೋಗಿ ಬಗ್ಗಿ ನೋಡಿ ನಂಬಿದನು.
9 ಆತನು ಸತ್ತ ಮೇಲೆ ಜೀವದಿಂದೆದ್ದು ಬರಬೇಕೆಂಬುದಾಗಿ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ಅವರಿಗೆ ಇನ್ನೂ ತಿಳಿದಿರಲಿಲ್ಲ.
10 ತರುವಾಯ ಆ ಶಿಷ್ಯರು ಪುನಃ ತಮ್ಮ ಮನೆಗೆ ಹೋದರು.
11 ಆದರೆ ಮರಿಯಳು ಹೊರಗೆ ಸಮಾಧಿಯ ಬಳಿಯಲ್ಲಿ ಅಳುತ್ತಾ ನಿಂತಿದ್ದಳು. ಹೀಗೆ ಆಕೆ ಅಳುತ್ತಿರುವಾಗ ಸಮಾಧಿಯೊಳಗೆ ಬಗ್ಗಿ ನೋಡಲು,
12 ಯೇಸುವಿನ ದೇಹವು ಇಟ್ಟಿದ್ದ ಸ್ಥಳದಲ್ಲಿ ಬಿಳಿವಸ್ತ್ರಗಳನ್ನು ಧರಿಸಿದ್ದ ಇಬ್ಬರು ದೇವದೂತರನ್ನು ಕಂಡಳು, ಅವರಲ್ಲಿ ಒಬ್ಬನು ಯೇಸುವಿನ ತಲೆಯ ಕಡೆಯಲ್ಲಿ ಮತ್ತೊಬ್ಬನು ಆತನು ಪಾದಗಳಿದ್ದ ಕಡೆಯಲ್ಲಿ ಕುಳಿತಿದ್ದರು.
13 ಅವರು ಆಕೆಗೆ, “ಅಮ್ಮಾ, ನೀನು ಯಾಕೆ ಅಳುತ್ತಿರುವೆ?” ಎಂದು ಕೇಳಲು, ಆಕೆಯು, “ನನ್ನ ಕರ್ತನನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದಳು.
14 ಆಕೆಯು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಯೇಸು ನಿಂತಿರುವುದನ್ನು ಕಂಡಳು, ಆದರೆ ಆತನು ಯೇಸುವೇ ಎಂದು ಆಕೆಗೆ ತಿಳಿಯಲಿಲ್ಲ.
ಯೋಹಾ 20 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019