Text copied!
Bibles in Kannada

ಯೋಹಾ 1:15-45 in Kannada

Help us?

ಯೋಹಾ 1:15-45 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆತನ ವಿಷಯವಾಗಿ ಯೋಹಾನನು ಸಾಕ್ಷಿಕೊಡುತ್ತಾನೆ, ಹೇಗೆಂದರೆ “‘ನನ್ನ ನಂತರ ಬರುವಾತನು ನನಗಿಂತ ಮೊದಲೇ ಇದ್ದುದರಿಂದ ಆತನು ನನಗಿಂತಲೂ ಉನ್ನತನು’ ಎಂದು ನಾನು ಹೇಳಿದಾತನು ಈತನೇ” ಎಂದು ಘೋಷಿಸಿದನು.
16 ಯೇಸು ಕ್ರಿಸ್ತನ ಪರಿಪೂರ್ಣತೆಯಿಂದ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು.
17 ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು. ಆದರೆ ಕೃಪೆಯೂ, ಸತ್ಯವೂ ಯೇಸು ಕ್ರಿಸ್ತನ ಮುಖಾಂತರ ಬಂದವು.
18 ದೇವರನ್ನು ಯಾರೂ ಎಂದೂ ನೋಡಿಲ್ಲ. ತಂದೆಯ ಹೃದಯದಲ್ಲಿರುವ ಏಕಪುತ್ರನೂ ಸ್ವತಃ ದೇವರೂ ಆಗಿರುವಾತನೇ, ತಂದೆಯನ್ನು ತಿಳಿಯಪಡಿಸಿದ್ದಾನೆ.
19 ಯೆಹೂದ್ಯರು ಯೆರೂಸಲೇಮಿನಿಂದ ಯಾಜಕರನ್ನೂ, ಲೇವಿಯರನ್ನೂ ಯೋಹಾನನ ಬಳಿಗೆ ಕಳುಹಿಸಿ, “ನೀನು ಯಾರು?” ಎಂದು ಕೇಳಿದ್ದಕ್ಕೆ,
20 ಅವನು ಮರೆಮಾಡದೆ ಎಲ್ಲರ ಮುಂದೆ, “ನಾನು ಕ್ರಿಸ್ತನಲ್ಲ,” ಎಂದು ಹೇಳಿದನು.
21 ಅದಕ್ಕೆ ಅವರು, “ಹಾಗಾದರೆ ನೀನು ಯಾರು? ಎಲೀಯನೋ?” ಎಂದು ಕೇಳಿದರು. ಅದಕ್ಕೆ ಅವನು, “ನಾನು ಎಲೀಯನಲ್ಲ” ಅಂದನು. “ನೀನು ಬರಬೇಕಾದ ಆ ಪ್ರವಾದಿಯೋ?” ಎಂದು ಕೇಳಿದ್ದಕ್ಕೆ “ಅಲ್ಲ,” ಅಂದನು.
22 ಆಗ ಅವರು, “ಹಾಗಾದರೆ ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಕೊಡಬೇಕಲ್ಲಾ. ನಿನ್ನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದು ಕೇಳಿದರು.
23 ಅದಕ್ಕೆ ಯೋಹಾನನು, “ಪ್ರವಾದಿಯಾದ ಯೆಶಾಯನು ಹೇಳಿದಂತೆ, ‘ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಧ್ವನಿಯೇ ನಾನು’” ಎಂದು ಉತ್ತರ ಕೊಟ್ಟನು.
24 ಅಲ್ಲಿ ಬಂದವರು ಫರಿಸಾಯರ ಕಡೆಯವರಾಗಿದ್ದರು.
25 ಅವರು ಅವನಿಗೆ, “ನೀನು ಕ್ರಿಸ್ತನಾಗಲಿ, ಎಲೀಯನಾಗಲಿ ಆ ಪ್ರವಾದಿಯಾಗಲಿ ಆಗಿರದಿದ್ದರೆ, ನೀನು ದೀಕ್ಷಾಸ್ನಾನ ಕೊಡುವುದೇಕೆ?” ಎಂದು ಪ್ರಶ್ನಿಸಿದರು.
26 ಅದಕ್ಕೆ ಯೋಹಾನನು, “ನಾನು ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನೀವು ಅರಿಯದೆ ಇರುವ ಒಬ್ಬಾತನು ನಿಮ್ಮ ಮಧ್ಯದಲ್ಲಿದ್ದಾನೆ.
27 ಆತನೇ ನನ್ನ ನಂತರ ಬರತಕ್ಕವನು. ಆತನ ಚಪ್ಪಲಿಗಳ ಪಟ್ಟಿ ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ” ಅಂದನು.
28 ಇದೆಲ್ಲಾ ಯೋಹಾನನು ದೀಕ್ಷಾಸ್ನಾನ ಮಾಡಿಸುತ್ತಿದ್ದ ಯೊರ್ದನ್ ನದಿಯ ಆಚೆಯಲ್ಲಿರುವ ಬೇಥಾನ್ಯ ಎಂಬ ಊರಿನಲ್ಲಿ ನಡೆಯಿತು.
29 ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ, “ಅಗೋ, ಲೋಕದ ಪಾಪವನ್ನು ನಿವಾರಣೆ ಮಾಡಲು ದೇವರು ನೇಮಿಸಿದ ಯಜ್ಞದಕುರಿಮರಿ.
30 ‘ನನ್ನ ನಂತರ ಬರುವಾತನು ನನಗಿಂತ ಮೊದಲೇ ಇದ್ದುದರಿಂದ ಆತನು ನನಗಿಂತಲೂ ಉನ್ನತನು’ ಎಂದು ನಾನು ಹೇಳಿದ ಮಾತು ಈತನ ವಿಷಯವಾಗಿಯೇ.
31 ನನಗೂ ಆತನ ಗುರುತಿರಲಿಲ್ಲ. ಆದರೆ ಆತನನ್ನು ಇಸ್ರಾಯೇಲ್ಯರಿಗೆ ಪ್ರಕಟಪಡಿಸುವುದಕ್ಕೊಸ್ಕರ ನಾನು ನೀರಿನಲ್ಲಿ ದೀಕ್ಷಾಸ್ನಾನವನ್ನು ಮಾಡಿಸುವವನಾಗಿ ಬಂದೆನು.”
32 ಇದಲ್ಲದೆ ಯೋಹಾನನು ಸಾಕ್ಷಿ ಕೊಟ್ಟು ಹೇಳಿದ್ದೇನೆಂದರೆ, “ದೇವರಾತ್ಮನು ಪರಲೋಕದಿಂದ ಪಾರಿವಾಳದಂತೆ ಇಳಿಯುವುದನ್ನು ಮತ್ತು ಆತನ ಮೇಲೆ ನೆಲೆಗೊಂಡಿರುವುದನ್ನು ನಾನು ಕಂಡೆನು.
33 ನನಗೂ ಆತನು ಯಾರೆಂಬುದು ತಿಳಿದಿರಲಿಲ್ಲ. ಆದರೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುವುದಕ್ಕೆ ನನ್ನನ್ನು ಕಳುಹಿಸಿದಾತನು ‘ಯಾರ ಮೇಲೆ ಆತ್ಮನು ಇಳಿದುಬಂದು ನೆಲೆಯಾಗಿರುವುದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವಾತನು’ ಎಂದು ತಾನೇ ನನಗೆ ಹೇಳಿದನು.
34 ನಾನು ಅದನ್ನು ನೋಡಿದ್ದೇನೆ ಮತ್ತು ಈತನೇ ದೇವಕುಮಾರನೆಂದು ಸಾಕ್ಷಿ ಕೊಟ್ಟಿದ್ದೇನೆ” ಎಂದು ಹೇಳಿದನು.
35 ಮರುದಿನ ಪುನಃ ಯೋಹಾನನೂ ತನ್ನ ಇಬ್ಬರು ಶಿಷ್ಯರೊಂದಿಗೆ ನಿಂತುಕೊಂಡಿದ್ದನು,
36 ಆಗ ಅಲ್ಲಿ ಯೇಸು ಹೋಗುತ್ತಿರುವುದನ್ನು ನೋಡಿ, ಯೋಹಾನನೂ ಅಗೋ, “ಯಜ್ಞಕ್ಕೆ ದೇವರು ನೇಮಿಸಿರುವ ಕುರಿಮರಿ” ಎಂದು ಹೇಳಿದನು.
37 ಆ ಇಬ್ಬರು ಶಿಷ್ಯರು ಯೋಹಾನನು ಹೇಳಿದ್ದನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು.
38 ಯೇಸು ಹಿಂತಿರುಗಿ ತನ್ನನ್ನು ಹಿಂಬಾಲಿಸುತ್ತಿದ್ದ ಅವರನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಲು ಅವರು, “ರಬ್ಬಿಯೇ, (ಅಂದರೆ ಗುರುವೇ) ನೀನು ವಾಸಿಸುವುದು ಎಲ್ಲಿ?” ಎಂದು ಕೇಳಿದರು.
39 ಆತನು ಅವರಿಗೆ, “ನೀವೇ ಬಂದು ನೋಡಿರಿ” ಎಂದು ಹೇಳಲು, ಅವರು ಹೋಗಿ ಆತನು ವಾಸಿಸುತ್ತಿದ್ದ ಸ್ಥಳವನ್ನು ನೋಡಿ ಆ ದಿನ ಆತನ ಸಂಗಡ ಇದ್ದರು. ಆಗ ಹೆಚ್ಚುಕಡಿಮೆ ಸಂಜೆ ನಾಲ್ಕು ಗಂಟೆಯಾಗಿತ್ತು.
40 ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ ಆ ಇಬ್ಬರಲ್ಲಿ ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಒಬ್ಬನು.
41 ಇವನು ಮೊದಲು ತನ್ನ ಅಣ್ಣನಾದ ಸೀಮೋನನನ್ನು ಕಂಡು ಅವನಿಗೆ “ನಾವು ಮೆಸ್ಸೀಯನನ್ನು ಕಂಡುಕೊಂಡೆವು” (ಮೆಸ್ಸೀಯನು ಎಂದರೆ ಕ್ರಿಸ್ತನು) ಎಂದು ಹೇಳಿ,
42 ಅವನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಅವನನ್ನು ನೋಡಿ “ನೀನು ಯೋಹಾನನ ಮಗನಾದ ಸೀಮೋನನು. ಇನ್ನು ಮೇಲೆ ನೀನು ‘ಕೇಫ’ ಎಂದು ಕರೆಯಲ್ಪಡುವಿ” ಎಂದು ಹೇಳಿದನು. (ಕೇಫ ಎಂದರೆ ಪೇತ್ರ ಇಲ್ಲವೆ ಬಂಡೆ ಎಂದು ಅರ್ಥ)
43 ಮರುದಿನ ಯೇಸು ಗಲಿಲಾಯಕ್ಕೆ ಹೋಗಬೇಕೆಂದಿರುವಾಗ ಫಿಲಿಪ್ಪನನ್ನು ಕಂಡು, “ನನ್ನನ್ನು ಹಿಂಬಾಲಿಸು” ಎಂದನು.
44 ಈ ಫಿಲಿಪ್ಪನು, ಅಂದ್ರೆಯ ಮತ್ತು ಪೇತ್ರರ ಪಟ್ಟಣವಾದ ಬೆತ್ಸಾಯಿದದವನಾಗಿದ್ದನು.
45 ಫಿಲಿಪ್ಪನು ನತಾನಯೇಲನನ್ನು ಕಂಡು ಅವನಿಗೆ “ಮೋಶೆಯು ಧರ್ಮಶಾಸ್ತ್ರದಲ್ಲಿ ಯಾರ ವಿಷಯವಾಗಿ ಬರೆದನೋ ಮತ್ತು ಪ್ರವಾದಿಗಳು ಯಾರ ವಿಚಾರವಾಗಿ ಬರೆದರೋ ಆತನು ನಮಗೆ ಸಿಕ್ಕಿದನು, ಆತನು ಯಾರೆಂದರೆ ಯೋಸೇಫನ ಮಗನಾದ ನಜರೇತಿನ ಯೇಸುವೇ” ಎಂದು ಹೇಳಿದನು.
ಯೋಹಾ 1 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019