Text copied!
Bibles in Kannada

ಯೋಹಾ 19:19-40 in Kannada

Help us?

ಯೋಹಾ 19:19-40 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಇದಲ್ಲದೆ ಪಿಲಾತನು “ನಜರೇತಿನ ಯೇಸು, ಯೆಹೂದ್ಯರ ಅರಸನು” ಎಂದು ಒಂದು ಫಲಕವನ್ನು ಬರೆದು ಅದನ್ನು ಆತನ ಶಿಲುಬೆಯ ಮೇಲಿಡಿಸಿದ್ದನು.
20 ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದುದರಿಂದ ಯೆಹೂದ್ಯರಲ್ಲಿ ಅನೇಕರು ಆ ಫಲಕವನ್ನು ಓದಿದರು. ಅದು ಇಬ್ರಿಯ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆದಿತ್ತು.
21 ಹೀಗಿರಲಾಗಿ ಯೆಹೂದ್ಯರ ಮುಖ್ಯಯಾಜಕರು ಪಿಲಾತನಿಗೆ, “‘ಯೆಹೂದ್ಯರ ಅರಸನು’ ಎಂದು ಬರೆಯಬೇಡ, ‘ನಾನು ಯೆಹೂದ್ಯರ ಅರಸನೆಂದು ಹೇಳಿದ್ದಾನೆ’ ಎಂಬುದಾಗಿ ಬರೆಯಬೇಕು” ಎಂದು ಹೇಳಿದರು.
22 ಅದಕ್ಕೆ ಪಿಲಾತನು, “ನಾನು ಬರೆದದ್ದು ಬರೆದಾಯಿತು” ಎಂದು ಉತ್ತರ ಕೊಟ್ಟನು.
23 ಸಿಪಾಯಿಗಳು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರು ಆತನ ವಸ್ತ್ರಗಳನ್ನು ತೆಗೆದುಕೊಂಡು ನಾಲ್ಕು ಪಾಲು ಮಾಡಿ ಒಬ್ಬೊಬ್ಬ ಸಿಪಾಯಿಗೆ ಒಂದೊಂದು ಭಾಗದಂತೆ ಹಂಚಿಕೊಂಡರು. ಆತನ ಒಳಂಗಿಯನ್ನು ಸಹ ತೆಗೆದುಕೊಂಡರು. ಆದರೆ ಆ ಅಂಗಿಗೆ ಹೊಲಿಗೆ ಇರಲಿಲ್ಲ. ಅದು ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು.
24 ಆಮೇಲೆ ಅವರು, “ನಾವು ಇದನ್ನು ಹರಿಯಬಾರದು ಚೀಟು ಹಾಕಿ, ಇದು ಯಾರಿಗೆ ಬರುವುದೋ ನೋಡೋಣ” ಎಂದು ಮಾತನಾಡಿಕೊಂಡರು. ಇದರಿಂದ “ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು. ನನ್ನ ಅಂಗಿಗೋಸ್ಕರ ಚೀಟು ಹಾಕಿದರು” ಎಂಬ ಧರ್ಮಶಾಸ್ತ್ರದ ಮಾತು ನೆರವೇರಿತು. ಸಿಪಾಯಿಗಳು ಇದನ್ನೆಲ್ಲಾ ಮಾಡಿದರು.
25 ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ, ಆತನ ತಾಯಿಯ ತಂಗಿಯೂ, ಕ್ಲೋಪನ ಹೆಂಡತಿಯಾದ ಮರಿಯಳೂ, ಮಗ್ದಲದ ಮರಿಯಳೂ ನಿಂತಿದ್ದರು.
26 ಯೇಸು ತನ್ನ ತಾಯಿಯನ್ನೂ ಹತ್ತಿರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಸ್ತ್ರೀಯೇ, ಇಗೋ, ನಿನ್ನ ಮಗನು” ಎಂದು ಹೇಳಿದನು.
27 ತರುವಾಯ ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದು ಹೇಳಿದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲೇ ಇರಿಸಿಕೊಂಡನು.
28 ಇದಾದ ಮೇಲೆ ಯೇಸು ಈಗ ಎಲ್ಲ ಪೂರ್ತಿಯಾಗಿದೆಯೆಂದು ತಿಳಿದು, ಧರ್ಮಶಾಸ್ತ್ರದ ಮಾತು ನೆರವೇರುವಂತೆ, “ನನಗೆ ನೀರಡಿಕೆಯಾಗಿದೆ” ಎಂದನು.
29 ಆಗ ಅಲ್ಲಿ ಹುಳಿರಸ ತುಂಬಿದ ಪಾತ್ರೆಯಿತ್ತು. ಅವರು ಸ್ಪಂಜನ್ನು ಹುಳಿರಸದಲ್ಲಿ ಅದ್ದಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಆತನ ಬಾಯಿಗೆ ಮುಟ್ಟಿಸಿದರು.
30 ಯೇಸು ಆ ಹುಳಿರಸವನ್ನು ತೆಗೆದುಕೊಂಡ ಮೇಲೆ, “ತೀರಿತು” ಎಂದು ಹೇಳಿ ತಲೆ ಬಾಗಿಸಿ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು.
31 ಅದು ಸಿದ್ಧತೆಯ ದಿನವಾದುದರಿಂದ ಯೆಹೂದ್ಯರು, ಸಬ್ಬತ್ ದಿನದಲ್ಲಿ ಮೃತದೇಹಗಳು ಶಿಲುಬೆಯ ಮೇಲೆ ಇರಬಾರದೆಂದು, ಪಿಲಾತನನ್ನು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಕೇಳಿಕೊಂಡರು, ಏಕೆಂದರೆ ಆ ಸಬ್ಬತ್ ದಿನವು ಬಹು ವಿಶೇಷವಾದದ್ದು.
32 ಅದರಂತೆ ಸಿಪಾಯಿಗಳು ಬಂದು ಮೊದಲನೆಯವನ ಕಾಲುಗಳನ್ನು ಅವನ ಜೊತೆಯಲ್ಲಿ ಶಿಲುಬೆಗೆ ಹಾಕಿಸಿಕೊಂಡಿದ್ದ ಮತ್ತೊಬ್ಬನ ಕಾಲುಗಳನ್ನು ಮುರಿದರು.
33 ಆದರೆ ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವುದನ್ನು ಅವರು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ.
34 ಆದರೆ ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು. ಕೂಡಲೆ ರಕ್ತವೂ ನೀರೂ ಹೊರಗೆ ಬಂದವು.
35 ಅದನ್ನು ಕಂಡವನೇ ಸಾಕ್ಷಿ ಹೇಳಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ತಾನು ಹೇಳುವುದು ಸತ್ಯವೆಂದು ಅವನು ಬಲ್ಲನು. ನೀವು ಸಹ ನಂಬಬೇಕೆಂದು ಇದನ್ನು ಹೇಳಿದ್ದಾನೆ.
36 ಏಕೆಂದರೆ “ಆತನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು” ಎಂದು ಧರ್ಮಶಾಸ್ತ್ರದಲ್ಲಿ ಬರೆದ ಮಾತು ನೆರವೇರುವಂತೆ ಇದಾಯಿತು.
37 “ಅವರು ತಾವು ಇರಿದವನನ್ನು ದೃಷ್ಟಿಸಿನೋಡುವರು” ಎಂದು ಧರ್ಮಶಾಸ್ತ್ರದಲ್ಲಿ ಮತ್ತೊಂದು ಮಾತು ಹೇಳಿ ಅದೆ.
38 ಇದಾದ ಮೇಲೆ ಯೆಹೂದ್ಯರ ಭಯದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾಯದ ಯೋಸೇಫನು ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗುವುದಕ್ಕೆ ಅಪ್ಪಣೆಯಾಗಬೇಕೆಂದು ಪಿಲಾತನನ್ನು ಕೇಳಿಕೊಂಡನು. ಆಗ ಪಿಲಾತನು ಅಪ್ಪಣೆ ಕೊಡಲಾಗಿ, ಅವನು ಬಂದು ಆತನ ದೇಹವನ್ನು ತೆಗೆದುಕೊಂಡು ಹೋದನು.
39 ಇದಲ್ಲದೆ ಮೊದಲು ಒಂದು ಸಾರಿ ರಾತ್ರಿ ವೇಳೆಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ರಕ್ತಬೋಳ ಅಗರುಗಳನ್ನು ಕಲಸಿದ ಚೂರ್ಣವನ್ನು ನೂರು ಸೇರಿನಷ್ಟು ತೆಗೆದುಕೊಂಡು ಅಲ್ಲಿಗೆ ಬಂದನು.
40 ಆಗ ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧ ದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು.
ಯೋಹಾ 19 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019