Text copied!
Bibles in Kannada

ಯೆಹೋ 13:21-33 in Kannada

Help us?

ಯೆಹೋ 13:21-33 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಒಟ್ಟಾರೆ ಮೀಶೋರೆಂಬ ಎತ್ತರವಾದ ಬಯಲಿನಲ್ಲಿದ್ದ ಎಲ್ಲಾ ಪಟ್ಟಣಗಳೂ ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ಅರಸನಾದ ಸೀಹೋನಿನ ಸಮಸ್ತ ರಾಜ್ಯಗಳು. ಮೋಶೆಯು ಆ ದೇಶದಲ್ಲಿ ವಾಸವಾಗಿದ್ದ ಸೀಹೋನನ್ನೂ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬ ಮಿದ್ಯಾನ್ ಪ್ರಭುಗಳಾಗಿರುವ ಅವನ ಸರದಾರರನ್ನೂ ಕೊಂದುಹಾಕಿದನು.
22 ಇಸ್ರಾಯೇಲ್ಯರು ಕತ್ತಿಯಿಂದ ಸಂಹರಿಸಿದವರಲ್ಲಿ ಬೆಯೋರನ ಮಗನೂ ಶಕುನ ನೋಡುವವನಾಗಿದ್ದ ಬಿಳಾಮನೂ ಇದ್ದನು.
23 ಯೊರ್ದನ್ ನದಿಯು, ರೂಬೇನ್ಯರ ಪಡುವಣ ಮೇರೆಯಾಗಿತ್ತು. ರೂಬೇನ್ಯರ ಗೋತ್ರಗಳಿಗೆ ಸ್ವತ್ತಾಗಿ ಸಿಕ್ಕಿದ ಗ್ರಾಮನಗರಗಳು ಇವುಗಳೇ.
24 ಮೋಶೆಯು ಗಾದ್ ಕುಲದ ಗೋತ್ರಗಳಿಗೆ ಸ್ವತ್ತಾಗಿ ಕೊಟ್ಟ ಪ್ರದೇಶಗಳು ಯಾವುವೆಂದರೆ:
25 ಹೆಷ್ಬೋನಿನ ಅರಸನಾದ ಸೀಹೋನಿನ ರಾಜ್ಯದ ಉಳಿದ ಭಾಗವಾಗಿರುವ ಯಗ್ಜೇರ್, ಮೊದಲಾದ ಗಿಲ್ಯಾದಿನ ಎಲ್ಲಾ ಪಟ್ಟಣಗಳು, ರಬ್ಬಾ ಊರಿನ ಪೂರ್ವದಲ್ಲಿರುವ ಅರೋಯೇರ್ ಪಟ್ಟಣದ ವರೆಗೆ ವಿಸ್ತರಿಸಿಕೊಂಡಿರುವ ಅಮ್ಮೋನಿಯರ ಅರ್ಧ ರಾಜ್ಯ,
26 ಹೆಷ್ಬೋನಿನಿಂದ ರಾಮತ್ ಮಿಚ್ಪೆ, ಬೆಟೋನೀಮ್ ಎಂಬ ಊರುಗಳ ವರೆಗೆ ಇರುವ ಪ್ರದೇಶ, ಮಹನಯಿಮಿನಿಂದ ದೆಬೀರ್ ಪ್ರಾಂತ್ಯದವರೆಗೂ ಇರುವ ಸೀಮೆ,
27 ಯೊರ್ದನ್ ಕಣಿವೆಯಲ್ಲಿರುವ ಬೇತ್‌ಹಾರಾಮ್; ಬೇತ್‌ನಿಮ್ರಾ, ಸುಕ್ಕೋತ್, ಚಾಫೋನ ಎಂಬ ಪಟ್ಟಣಗಳು. ಕಿನ್ನೆರೆತ್ ಸಮುದ್ರದ ದಕ್ಷಿಣದಿಕ್ಕಿನ ಮೂಲೆಯ ವರೆಗೆ ವಿಸ್ತರಿಸಿಕೊಂಡಿರುವ ಯೊರ್ದನಿನ ಪೂರ್ವ ಪ್ರದೇಶಗಳು.
28 ಈ ಎಲ್ಲಾ ಗ್ರಾಮನಗರಗಳು ಗಾದ್ ಕುಲದ ಸ್ವತ್ತಾದವು.
29 ಮಹನಯಿಮಿನ ಉತ್ತರದಲ್ಲಿದ್ದ ಹಾಗೂ ಮೊದಲು ಬಾಷಾನಿನ ಅರಸನಾಗಿದ್ದ ಓಗನ ರಾಜ್ಯವಾಗಿದ್ದ ಎಲ್ಲಾ ಬಾಷಾನ್ ಸೀಮೆಯನ್ನು,
30 ಮೋಶೆಯು ಮನಸ್ಸೆ ಕುಲದ ಅರ್ಧ ಗೋತ್ರಗಳಿಗೆ ಕೊಟ್ಟನು. ಯಾಯೀರನ ಗ್ರಾಮಗಳೆನ್ನಿಸಿಕೊಳ್ಳುವ ಅರವತ್ತು ಊರುಗಳು ಇದರೊಂದಿಗೆ ಇರುತ್ತವೆ.
31 ಗಿಲ್ಯಾದಿನಲ್ಲಿ ಅರ್ಧ ಭಾಗವು ಓಗನ ರಾಜಧಾನಿಯಾಗಿದ್ದ, ಬಾಷಾನಿನ ಅಷ್ಟರೋತ್ ಹಾಗೂ ಎದ್ರೈ ಎಂಬ ಪಟ್ಟಣಗಳೂ ಮನಸ್ಸೆಯ ಮಗನಾದ ಮಾಕೀರನ ಗೋತ್ರದ ಅರ್ಧ ಜನರಿಗೆ ಸಿಕ್ಕಿದವು.
32 ಮೋಶೆಯು ಯೊರ್ದನಿನ ಆಚೆ ಯೆರಿಕೋವಿನ ಎದುರಿನಲ್ಲಿರುವ ಮೋವಾಬ್ಯರ ಬಯಲಿನಲ್ಲಿದ್ದಾಗ ಇವುಗಳನ್ನು ಅವರಿಗೆ ಸ್ವತ್ತಾಗಿ ಕೊಟ್ಟನು.
33 ಆದರೆ ಲೇವಿಯ ಕುಲಕ್ಕೆ ಮೋಶೆಯು ಯಾವ ಸ್ವತ್ತನ್ನು ಕೊಡಲಿಲ್ಲ. ಯಾಕೆಂದರೆ ಇಸ್ರಾಯೇಲ್ಯರ ದೇವರಾದ ಯೆಹೋವನು ವಾಗ್ದಾನಮಾಡಿದಂತೆ ಆತನೇ ಅವರ ಸ್ವತ್ತಾಗಿದ್ದನು.
ಯೆಹೋ 13 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019