Text copied!
Bibles in Kannada

ಯೆಹೋ 10:8-24 in Kannada

Help us?

ಯೆಹೋ 10:8-24 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಯೆಹೋವನು ಯೆಹೋಶುವನಿಗೆ, ಅವರಿಗೆ “ಹೆದರಬೇಡ, ಅವರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ. ಅವರಲ್ಲಿ ಒಬ್ಬನೂ ನಿನ್ನ ಮುಂದೆ ನಿಲ್ಲುವುದಿಲ್ಲ” ಎಂದನು
9 ಯೆಹೋಶುವನು ಗಿಲ್ಗಾಲ್ ಬಿಟ್ಟು ರಾತ್ರಿಯೆಲ್ಲಾ ಪ್ರಯಾಣಮಾಡಿ ತಟ್ಟನೆ ಅವರ ಮೇಲೆ ಬಿದ್ದನು.
10 ಆ ಅಮೋರಿಯರಲ್ಲಿ ಯೆಹೋವನು ಇಸ್ರಾಯೇಲರ ಕುರಿತಾಗಿ ಅವರನ್ನು ಕಳವಳಗೊಳಿಸಿದ್ದರಿಂದ ಯೆಹೋಶುವನು ಅವರನ್ನು ಗಿಬ್ಯೋನಿನ ಹತ್ತಿರ ಸಂಪೂರ್ಣವಾಗಿ ಸೋಲಿಸಿ ಬೇತ್‌ಹೋರೋನ್ ಎಂಬ ಬೆಟ್ಟದ ದಾರಿಯಲ್ಲಿ ಅಜೇಕ, ಮಕ್ಕೇದ ಎಂಬ ಊರುಗಳವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದನು.
11 ಅವರು ಇಸ್ರಾಯೇಲ್ಯರಿಗೆ ಬೆಂಗೊಟ್ಟು ಬೇತ್‍ಹೋರೋನಿನ ಇಳಿಜಾರಿನಲ್ಲಿ ಓಡುತ್ತಾ ಅಜೇಕವನ್ನು ತಲುಪುವವರೆಗೂ ಯೆಹೋವನು ಅವರ ಮೇಲೆ ಆಕಾಶದಿಂದ ದೊಡ್ಡ ಆಲಿಕಲ್ಲಿನ ಮಳೆಯನ್ನು ಸುರಿಸಿದನು. ಈ ಕಾರಣದಿಂದ ಅನೇಕರು ಸತ್ತರು ಇಸ್ರಾಯೇಲ್ಯರ ಕತ್ತಿಯಿಂದ ಸಂಹಾರವಾದವರಿಗಿಂತ ಆಲಿಕಲ್ಲಿನ ಮಳೆಯಿಂದ ನಾಶವಾದವರೇ ಹೆಚ್ಚು ಮಂದಿಯಾಗಿದ್ದರು.
12 ಯೆಹೋವನು ಅಮೋರಿಯರನ್ನು ಇಸ್ರಾಯೇಲ್ಯರಿಗೆ ಒಪ್ಪಿಸಿದ ದಿನದಲ್ಲಿ ಯೆಹೋಶುವನು ಯೆಹೋವನಲ್ಲಿ ಒಂದು ವಿಜ್ಞಾಪನೆ ಮಾಡಿಕೊಂಡನು. “ಸೂರ್ಯನೇ, ನೀನು ಗಿಬ್ಯೋನಿನಲ್ಲೇ ನಿಲ್ಲು; ಚಂದ್ರನೇ, ನೀನು ಅಯ್ಯಾಲೋನ್ ಕಣಿವೆಯಲ್ಲೇ ನಿಲ್ಲು” ಎಂದು ಇಸ್ರಾಯೇಲ್ಯರ ಸಮಕ್ಷಮದಲ್ಲಿ ಆಜ್ಞಾಪಿಸಿದನು.
13 ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವ ತನಕ ಸೂರ್ಯಚಂದ್ರರು ಹಾಗೆಯೇ ನಿಂತರು. ಈ ಮಾತು ಯಾಷಾರ್‌ ಗ್ರಂಥದಲ್ಲಿ ಬರೆದಿದೆಯಲ್ಲವೆ? ಹೀಗೆ ಸೂರ್ಯನು ಮುಳುಗಲು ಆತುರ ಪಡದೆ ಹೆಚ್ಚು ಕಡಿಮೆ ಒಂದು ದಿನ ಪೂರ್ತಿ ಆಕಾಶದ ಮಧ್ಯದಲ್ಲಿಯೇ ನಿಂತನು.
14 ಯೆಹೋವನು ಈ ಪ್ರಕಾರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟ ದಿನವು ಅದಕ್ಕಿಂತ ಹಿಂದೆಯೂ ಮುಂದೆಯೂ ಇಲ್ಲವೇ ಇಲ್ಲ. ಯೆಹೋವನು ತಾನೇ ಇಸ್ರಾಯೇಲ್ಯರಿಗೋಸ್ಕರ ಯುದ್ಧಮಾಡುತ್ತಾ ಇದ್ದನು.
15 ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಗಿಲ್ಗಾಲಿನ ಪಾಳೆಯಕ್ಕೆ ಹಿಂದಿರುಗಿದನು.
16 ಆ ಐದು ಮಂದಿ ಅರಸರು ಓಡಿಹೋಗಿ ಮಕ್ಕೇದದ ಗುಹೆಯಲ್ಲಿ ಅಡಗಿಕೊಂಡರು.
17 ಜನರು ಯೆಹೋಶುವನಿಗೆ “ಆ ಐದು ಮಂದಿ ನಮಗೆ ಸಿಕ್ಕಿದ್ದಾರೆ. ಅವರು ಮಕ್ಕೇದದ ಗವಿಯಲ್ಲಿ ಅಡಗಿಕೊಂಡಿದ್ದಾರೆ” ಎಂದು ತಿಳಿಸಿದರು.
18 ಆಗ ಯೆಹೋಶುವನು ಅವರಿಗೆ “ಆ ಗವಿಯ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿ ಕಾಯುವುದಕ್ಕೆ ಕಾವಲುಗಾರರನ್ನು ಇಡಿರಿ. ನೀವಾದರೂ ಅಲ್ಲೇ ನಿಂತುಕೊಳ್ಳಬೇಡಿ. ಬೇಗನೆ ಹಿಂದಟ್ಟಿ ಹಿಂದೆ ಬರುವ ಶತ್ರುಗಳನ್ನು ಹತಮಾಡುತ್ತಾ ಹೋಗಿರಿ.
19 ಅವರನ್ನು ಅವರ ಪಟ್ಟಣಗಳಲ್ಲಿ ಸೇರುವುದಕ್ಕೆ ಬಿಡಬೇಡಿರಿ. ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನಲ್ಲಾ?” ಎಂದನು.
20 ಈ ರೀತಿಯಾಗಿ ಯೆಹೋಶುವನೂ ಹಾಗೂ ಇಸ್ರಾಯೇಲ್ಯರೂ ಅವರನ್ನು ಸಂಪೂರ್ಣವಾಗಿ ಸೋಲಿಸಿ ಸಂಹರಿಸಿಬಿಟ್ಟರು. ಸ್ವಲ್ಪ ಜನರು ಮಾತ್ರ ತಪ್ಪಿಸಿಕೊಂಡು ಕೋಟೆ ಕೊತ್ತಲುಗಳಿದ್ದ ಪಟ್ಟಣಗಳನ್ನು ಸೇರಿಕೊಂಡರು.
21 ಇಸ್ರಾಯೇಲ್ಯರಾದರೋ ಮಕ್ಕೇದದಲ್ಲಿ ಇಳುಕೊಂಡಿದ್ದ ಯೆಹೋಶುವನ ಬಳಿಗೆ ಸುರಕ್ಷಿತರಾಗಿ ಬಂದರು. ಇಸ್ರಾಯೇಲ್ಯರಿಗೆ ವಿರೋಧವಾಗಿ ಒಬ್ಬನೂ ಮಾತನಾಡಲಿಲ್ಲ.
22 ಅನಂತರ ಯೆಹೋಶುವನು ಜನರಿಗೆ “ಗವಿಯ ಬಾಯನ್ನು ತೆರೆದು ಆ ಐದು ಮಂದಿ ಅರಸರನ್ನು ನನ್ನ ಬಳಿಗೆ ತನ್ನಿರಿ” ಎಂದನು.
23 ಅವರು ಹೋಗಿ ಯೆರೂಸಲೇಮ್, ಹೆಬ್ರೋನ್, ಯರ್ಮೂತ್, ಲಾಕೀಷ್, ಎಗ್ಲೋನ್ ಎಂಬ ಪಟ್ಟಣಗಳ ಐದು ಮಂದಿ ಅರಸರನ್ನು ಗವಿಯಿಂದ ಎಳೆದು ಕೊಂಡು ಅವನ ಬಳಿಗೆ ತಂದರು.
24 ಅವರನ್ನು ತನ್ನ ಬಳಿಗೆ ತಂದನಂತರ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರನ್ನು ಕರೆಸಿ ತನ್ನ ಜೊತೆಯಲ್ಲಿ ಬಂದಿದ್ದ ಸೈನ್ಯಾಧಿಪತಿಗಳಿಗೆ “ಹತ್ತಿರ ಬಂದು ಈ ಅರಸರ ಕೊರಳಿನ ಮೇಲೆ ಪಾದಗಳನ್ನಿಡಿರಿ” ಎಂದು ಹೇಳಿದನು. ಅವರು ಹತ್ತಿರ ಬಂದು ಅವರ ಕುತ್ತಿಗೆಯ ಮೇಲೆ ಕಾಲಿಟ್ಟರು.
ಯೆಹೋ 10 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019