Text copied!
Bibles in Kannada

ಯೆಹೋ 10:18-31 in Kannada

Help us?

ಯೆಹೋ 10:18-31 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆಗ ಯೆಹೋಶುವನು ಅವರಿಗೆ “ಆ ಗವಿಯ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿ ಕಾಯುವುದಕ್ಕೆ ಕಾವಲುಗಾರರನ್ನು ಇಡಿರಿ. ನೀವಾದರೂ ಅಲ್ಲೇ ನಿಂತುಕೊಳ್ಳಬೇಡಿ. ಬೇಗನೆ ಹಿಂದಟ್ಟಿ ಹಿಂದೆ ಬರುವ ಶತ್ರುಗಳನ್ನು ಹತಮಾಡುತ್ತಾ ಹೋಗಿರಿ.
19 ಅವರನ್ನು ಅವರ ಪಟ್ಟಣಗಳಲ್ಲಿ ಸೇರುವುದಕ್ಕೆ ಬಿಡಬೇಡಿರಿ. ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನಲ್ಲಾ?” ಎಂದನು.
20 ಈ ರೀತಿಯಾಗಿ ಯೆಹೋಶುವನೂ ಹಾಗೂ ಇಸ್ರಾಯೇಲ್ಯರೂ ಅವರನ್ನು ಸಂಪೂರ್ಣವಾಗಿ ಸೋಲಿಸಿ ಸಂಹರಿಸಿಬಿಟ್ಟರು. ಸ್ವಲ್ಪ ಜನರು ಮಾತ್ರ ತಪ್ಪಿಸಿಕೊಂಡು ಕೋಟೆ ಕೊತ್ತಲುಗಳಿದ್ದ ಪಟ್ಟಣಗಳನ್ನು ಸೇರಿಕೊಂಡರು.
21 ಇಸ್ರಾಯೇಲ್ಯರಾದರೋ ಮಕ್ಕೇದದಲ್ಲಿ ಇಳುಕೊಂಡಿದ್ದ ಯೆಹೋಶುವನ ಬಳಿಗೆ ಸುರಕ್ಷಿತರಾಗಿ ಬಂದರು. ಇಸ್ರಾಯೇಲ್ಯರಿಗೆ ವಿರೋಧವಾಗಿ ಒಬ್ಬನೂ ಮಾತನಾಡಲಿಲ್ಲ.
22 ಅನಂತರ ಯೆಹೋಶುವನು ಜನರಿಗೆ “ಗವಿಯ ಬಾಯನ್ನು ತೆರೆದು ಆ ಐದು ಮಂದಿ ಅರಸರನ್ನು ನನ್ನ ಬಳಿಗೆ ತನ್ನಿರಿ” ಎಂದನು.
23 ಅವರು ಹೋಗಿ ಯೆರೂಸಲೇಮ್, ಹೆಬ್ರೋನ್, ಯರ್ಮೂತ್, ಲಾಕೀಷ್, ಎಗ್ಲೋನ್ ಎಂಬ ಪಟ್ಟಣಗಳ ಐದು ಮಂದಿ ಅರಸರನ್ನು ಗವಿಯಿಂದ ಎಳೆದು ಕೊಂಡು ಅವನ ಬಳಿಗೆ ತಂದರು.
24 ಅವರನ್ನು ತನ್ನ ಬಳಿಗೆ ತಂದನಂತರ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರನ್ನು ಕರೆಸಿ ತನ್ನ ಜೊತೆಯಲ್ಲಿ ಬಂದಿದ್ದ ಸೈನ್ಯಾಧಿಪತಿಗಳಿಗೆ “ಹತ್ತಿರ ಬಂದು ಈ ಅರಸರ ಕೊರಳಿನ ಮೇಲೆ ಪಾದಗಳನ್ನಿಡಿರಿ” ಎಂದು ಹೇಳಿದನು. ಅವರು ಹತ್ತಿರ ಬಂದು ಅವರ ಕುತ್ತಿಗೆಯ ಮೇಲೆ ಕಾಲಿಟ್ಟರು.
25 ಆಗ ಅವನು ಅವರಿಗೆ “ಅಂಜಬೇಡಿರಿ, ಕಳವಳಗೊಳ್ಳಬೇಡಿರಿ; ಸ್ಥಿರಚಿತ್ತರಾಗಿ, ಧೈರ್ಯದಿಂದಿರಿ. ನಿಮ್ಮೊಡನೆ ಯುದ್ಧಕ್ಕೆ ಬರುವ ಎಲ್ಲಾ ವೈರಿಗಳಿಗೂ ಯೆಹೋವನು ಹೀಗೆಯೇ ಮಾಡುವನು” ಎಂದು ಹೇಳಿದನು.
26 ಅನಂತರ ಆ ಅರಸರನ್ನು ಕೊಲ್ಲಿಸಿ ಐದು ಮರಗಳಿಗೆ ನೇತುಹಾಕಿಸಿದನು. ಅವರ ಶವಗಳು ಸಾಯಂಕಾಲದವರೆಗೂ ಅಲ್ಲೇ ತೂಗಾಡುತ್ತಿದ್ದವು.
27 ಸೂರ್ಯಾಸ್ತಮಾನದ ಹೊತ್ತಿಗೆ ಜನರು ಯೆಹೋಶುವನ ಅಪ್ಪಣೆಯಂತೆ ಅವುಗಳನ್ನು ಮರಗಳಿಂದ ಕೆಳಗಿಳಿಸಿ ಅವರು ಅಡಗಿಕೊಂಡಿದ್ದ ಗವಿಯಲ್ಲಿಯೇ ಹಾಕಿ ಅದರ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿದರು. ಆ ಕಲ್ಲುಗಳು ಇಂದಿನವರೆಗೂ ಅಲ್ಲೇ ಇರುತ್ತವೆ.
28 ಅದೇ ದಿನ ಯೆಹೋಶುವನು ಮಕ್ಕೇದವನ್ನು ಸ್ವಾಧೀನಪಡಿಸಿ ಕೊಂಡನು. ಅ ಊರಿನ ರಾಜ ಪ್ರಜೆಗಳೆಲ್ಲರನ್ನೂ ಕತ್ತಿಯಿಂದ ಸಂಹರಿಸಿದನು. ಒಬ್ಬನನ್ನೂ ಉಳಿಸಲಿಲ್ಲ. ಯೆರಿಕೋವಿನ ಅರಸನಿಗೆ ಮಾಡಿದಂತೆ ಈ ಅರಸನಿಗೂ ಮಾಡಿದನು.
29 ಯೆಹೋಶುವನು ಜನರೆಲ್ಲರ ಸಹಿತವಾಗಿ ಮಕ್ಕೇದದಿಂದ ಲಿಬ್ನಕ್ಕೆ ಹೋಗಿ ಅಲ್ಲಿಯವರೊಡನೆ ಯುದ್ಧಮಾಡಿದನು.
30 ಯೆಹೋವನು ಅದನ್ನೂ ಅದರ ಅರಸನನ್ನೂ ಇಸ್ರಾಯೇಲ್ಯರ ಕೈವಶಮಾಡಿದನು. ಅವರು ಅದರಲ್ಲಿದ್ದ ಜನರಲ್ಲಿ ಒಬ್ಬನನ್ನೂ ಉಳಿಸದೆ ಎಲ್ಲರನ್ನೂ ಕತ್ತಿಯಿಂದ ಸಂಹರಿಸಿದರು. ಯೆರಿಕೋವಿನ ಅರಸನಿಗಾದ ಗತಿಯೇ ಇವರ ಅರಸನಿಗೂ ಆಯಿತು.
31 ಅಲ್ಲಿಂದ ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಲಾಕೀಷಿಗೆ ಹೋಗಿ ಮುತ್ತಿಗೆಹಾಕಿ ಯುದ್ಧಮಾಡಿದನು.
ಯೆಹೋ 10 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019