Text copied!
Bibles in Kannada

ಯೆಶಾ 10:7-23 in Kannada

Help us?

ಯೆಶಾ 10:7-23 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅವನ ಅಭಿಪ್ರಾಯವೋ, ಹಾಗಲ್ಲ. ಅನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲ ಮಾಡುವೆನೆಂಬುದೇ ಹೊರತು ಈ ಯೋಚನೆಯು ಅವನ ಮನಸ್ಸಿನಲ್ಲಿ ಇಲ್ಲವೇ ಇಲ್ಲ.
8 ಅವನು ಹೇಳುವುದೇನೆಂದರೆ, “ನನ್ನ ಅಧಿಪತಿಗಳೆಲ್ಲಾ ಅರಸರಲ್ಲವೇ?
9 ಕರ್ಕೆಮೀಷಿನ ಗತಿಯು ಕಲ್ನೋವಿಗೆ ಆಯಿತಲ್ಲವೇ? ಅರ್ಪದಿಗೆ ಆದ ಪಾಡು ಹಮಾತಿಗೂ ಬಂತಲ್ಲವೇ? ದಮಸ್ಕದ ಗತಿಯು ಸಮಾರ್ಯಕ್ಕೂ ಸಂಭವಿಸಿತಲ್ಲವೇ?
10 ಯೆರೂಸಲೇಮಿನ ಮತ್ತು ಸಮಾರ್ಯದ ವಿಗ್ರಹಗಳಿಗಿಂತ ವಿಶೇಷ ವಿಗ್ರಹಗಳುಳ್ಳ ದೇವತೆಗಳ ವಶವಾಗಿರುವ ರಾಜ್ಯಗಳ ಮೇಲೆ ನಾನು ಕೈಮಾಡಿದಂತೆಯೇ,
11 ಸಮಾರ್ಯವನ್ನೂ, ಅದರ ವಿಗ್ರಹಗಳನ್ನೂ ನಾನು ಕೆಡವಿಬಿಟ್ಟ ಹಾಗೆ, ಯೆರೂಸಲೇಮನ್ನೂ ಅದರ ವಿಗ್ರಹಗಳನ್ನೂ ಕೆಡವಲಾರೆನೋ?” ಎಂಬುದೇ.
12 ಆದಕಾರಣ ಕರ್ತನಾದ ನಾನು ಚೀಯೋನ್ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ನನ್ನ ಉದ್ದೇಶವನ್ನೆಲ್ಲಾ ನೆರವೇರಿಸಿದ ಮೇಲೆ, “ಅಶ್ಶೂರದ ರಾಜನ ಹೃದಯದ ದೊಡ್ಡಸ್ತಿಕೆಯ ಫಲಕ್ಕೂ, ಅವನ ಗರ್ವದೃಷ್ಟಿಯ ಮೆರೆದಾಟಕ್ಕೂ ತಕ್ಕ ದಂಡನೆಯನ್ನು ಮಾಡುವೆನು.”
13 ಏಕೆಂದರೆ ಅವನು ತನ್ನೊಳಗೆ, “ನನ್ನ ಜ್ಞಾನ, ಭುಜಬಲಗಳಿಂದಲೇ ಇದನ್ನು ಮಾಡಿದ್ದೇನೆ. ನಾನೇ ವಿವೇಕವುಳ್ಳ ಜನಾಂಗಗಳ ಮೇರೆಗಳನ್ನು ಕಿತ್ತು, ಅವರ ನಿಧಿನಿಕ್ಷೇಪಗಳನ್ನು ಸೂರೆಮಾಡಿ, ಸಿಂಹಾಸನಾರೂಢರನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ.
14 ಜನಗಳ ಆಸ್ತಿಪಾಸ್ತಿಯು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ. ಪಕ್ಷಿಯು ಇಟ್ಟುಹೋದ ಮೊಟ್ಟೆಗಳನ್ನು ಸಂಗ್ರಹಿಸಿಕೊಳ್ಳುವವನಂತೆ ಭೂಮಿಯನ್ನೆಲ್ಲಾ ಸಂಗ್ರಹಿಸಿಕೊಂಡಿದ್ದೇನೆ. ರೆಕ್ಕೆಯಾಡಿಸಿ, ಬಾಯಿ ತೆರೆದು ಕಿಚುಗುಟ್ಟುವವರು ಯಾರೂ ಇಲ್ಲ” ಎಂದು ಅಂದುಕೊಂಡನು.
15 ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೇ? ಗರಗಸವು ಕತ್ತರಿಸುವವನಿಗೆ ಪ್ರತಿಯಾಗಿ ತನ್ನನ್ನು ಹೆಚ್ಚಿಸಿಕೊಂಡೀತೇ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತಾಯಿತು, ಮರಕ್ಕಿಂತ ಶ್ರೇಷ್ಠನಾಗಿರುವ ಮನುಷ್ಯನನ್ನು ದೊಣ್ಣೆಯು ಎತ್ತಿಕೊಂಡ ಹಾಗಾಯಿತು.
16 ಆದಕಾರಣ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕೊಬ್ಬಿದ ಪ್ರಜೆಗಳಿಗೆ ಕ್ಷಯವನ್ನು ಉಂಟುಮಾಡುವನು. ದಹಿಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭವದ ಅಸ್ತಿವಾರಕ್ಕೆ ಹತ್ತಿಕೊಳ್ಳುವುದು.
17 ಇಸ್ರಾಯೇಲರ ಪರಂಜ್ಯೋತಿಯು ದಹಿಸುವ ಅಗ್ನಿಯಾಗುವುದು. ಅವರ ಪರಿಶುದ್ಧನು ಜ್ವಾಲೆಯಂತಿರುವನು. ಅದು ಒಂದೇ ದಿನದಲ್ಲಿ ಅಶ್ಶೂರದ ಮುಳ್ಳುಗಿಳ್ಳನ್ನು ಸುಟ್ಟು ನುಂಗಿಬಿಡುವುದು.
18 ಅದು ದೇಹಾತ್ಮಗಳನ್ನು ಉಳಿಸದೇ ಅಲ್ಲಿನ ವನದ ಮತ್ತು ತೋಟದ ವೈಭವವನ್ನು ನಿರ್ಮೂಲ ಮಾಡುವುದು. ದೇಶವೋ ರೋಗಿಯಂತೆ ನಾಶವಾಗುವುದು.
19 ಅದರ ವನವೃಕ್ಷಗಳ ಸಂಖ್ಯೆಯು ಒಂದು ಚಿಕ್ಕಮಗುವೂ ಸಹ ಎಣಿಸಿ ಬರೆಯುವಷ್ಟು ಕಡಿಮೆಯಾಗುವುದು.
20 ಆ ದಿನದಲ್ಲಿ ಇಸ್ರಾಯೇಲರೊಳಗೆ ಉಳಿದವರು, ಯಾಕೋಬಿನ ಮನೆತನದವರಲ್ಲಿ ತಪ್ಪಿಸಿಕೊಂಡವರು ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು ಯೆಹೋವನೆಂಬ ಇಸ್ರಾಯೇಲರ ಸದಮಲಸ್ವಾಮಿಯನ್ನು ನಂಬಿಗಸ್ತರಾಗಿ ಆಧಾರಮಾಡಿಕೊಳ್ಳುವರು.
21 ಉಳಿದವರು ಅಂದರೆ ಯಾಕೋಬ್ಯರಲ್ಲಿ ಉಳಿದವರೂ ಸಹ ಪರಾಕ್ರಮಿಯಾದ ದೇವರ ಕಡೆಗೆ ತಿರುಗಿಕೊಳ್ಳುವರು.
22 ಇಸ್ರಾಯೇಲೇ, ನಿನ್ನ ಜನರು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿದ್ದರೂ ಅವರಲ್ಲಿ ಉಳಿದವರು ಮಾತ್ರ ತಿರುಗಿಕೊಳ್ಳುವರು. ನಾಶವಾಗುವುದಕ್ಕೆ ವಿಧಿಸಲ್ಪಟ್ಟದ್ದು, ನ್ಯಾಯನೀತಿಯಿಂದ ತುಂಬಿ ತುಳುಕುವುದು.
23 ಏಕೆಂದರೆ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಭೂಮಂಡಲದಲ್ಲೆಲ್ಲಾ ನಿಶ್ಚಯಿಸಲ್ಪಟ್ಟ ನಾಶನವನ್ನು ಉಂಟುಮಾಡುವನು.
ಯೆಶಾ 10 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019