Text copied!
Bibles in Kannada

ಯಾಜ 8:6-20 in Kannada

Help us?

ಯಾಜ 8:6-20 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆಗ ಮೋಶೆ ಆರೋನನನ್ನು ಮತ್ತು ಅವನ ಮಕ್ಕಳನ್ನು ಹತ್ತಿರಕ್ಕೆ ಬರಮಾಡಿಕೊಂಡು ಸ್ನಾನಮಾಡಿಸಿದನು.
7 ಆ ಮೇಲೆ ಯೆಹೋವನು ಆಜ್ಞಾಪಿಸಿದಂತೆ ಆರೋನನಿಗೆ ನಿಲುವಂಗಿಯನ್ನು ತೊಡಿಸಿ, ನಡುಕಟ್ಟನ್ನು ಸುತ್ತಿ, ಮೇಲಂಗಿಯನ್ನು ತೊಡಿಸಿ, ಏಫೋದ್ ಕವಚವನ್ನು ಹಾಕಿಸಿ, ಕವಚದ ಮೇಲೆ ಸೊಗಸಾಗಿ ನೇಯ್ದ ನಡುಕಟ್ಟನ್ನು ಕಟ್ಟಿದನು, ಅದರಿಂದ ಕವಚವನ್ನು ಅವನಿಗೆ ಹೊದಿಸಿದನು.
8 ಅವನು ಎದೆಯ ಮೇಲೆ ಪದಕವನ್ನು ಬಿಗಿದು ಆರೋನನಿಗೆ ಹಾಕಿ ಅದರೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಇಟ್ಟನು.
9 ಅವನ ತಲೆಗೆ ಪೇಟವನ್ನು ಇಟ್ಟು, ಅದರ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನು ಕಟ್ಟಿದನು; ಅದೇ ಅವನಿಗೆ ಪರಿಶುದ್ಧವಾದ ಕಿರೀಟದಂತೆ ಇತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು.
10 ಅನಂತರ ಮೋಶೆ ಅಭಿಷೇಕತೈಲವನ್ನು ತೆಗೆದುಕೊಂಡು, ದೇವದರ್ಶನದ ಗುಡಾರವನ್ನು ಮತ್ತು ಅದರಲ್ಲಿದ್ದ ಎಲ್ಲವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
11 ಯಜ್ಞವೇದಿಯ ಮೇಲೆ ಏಳು ಸಾರಿ ಆ ತೈಲವನ್ನು ಚಿಮುಕಿಸಿ, ಯಜ್ಞವೇದಿಯನ್ನು ಅದರ ಎಲ್ಲಾ ಉಪಕರಣಗಳನ್ನು, ಬೋಗುಣಿಯನ್ನು ಅದರ ಪೀಠವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
12 ಆರೋನನನ್ನು ಪ್ರತಿಷ್ಠಿಸುವುದಕ್ಕಾಗಿ ಆ ತೈಲದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ತಲೆಯ ಮೇಲೆ ಹೊಯ್ದು ಅವನನ್ನು ಅಭಿಷೇಕಿಸಿದನು.
13 ಆ ಮೇಲೆ ಯೆಹೋವನು ಆಜ್ಞಾಪಿಸಿದಂತೆ ಮೋಶೆ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು, ಅವರಿಗೆ ನಿಲುವಂಗಿಗಳನ್ನು ತೊಡಿಸಿ, ನಡುಕಟ್ಟುಗಳನ್ನು ಸುತ್ತಿ, ತಲೆಗೆ ಪೇಟಗಳನ್ನು ಇಟ್ಟನು.
14 ಅನಂತರ ಅವನು ದೋಷಪರಿಹಾರಕ್ಕಾಗಿ ಹೋರಿಯನ್ನು ತರಿಸಿದನು. ಆಗ ಆರೋನನೂ ಮತ್ತು ಅವನ ಮಕ್ಕಳೂ ತಮ್ಮ ಕೈಗಳನ್ನು ಅದರ ತಲೆಯ ಮೇಲೆ ಇಟ್ಟರು.
15 ಆ ಹೋರಿಯನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ತನ್ನ ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಿ, ಯಜ್ಞವೇದಿಯನ್ನು ಶುದ್ಧಪಡಿಸಿ, ಉಳಿದ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಸುರಿದುಬಿಟ್ಟನು. ಇದರ ನಿಮಿತ್ತ ದೋಷಪರಿಹಾರಕ ಆಚಾರವನ್ನು ನಡೆಸಿ, ಅದನ್ನು ಪ್ರತಿಷ್ಠಿಸಿದನು.
16 ಆ ಹೋರಿಯ ಕರುಳುಗಳ ಮೇಲಣ ಕೊಬ್ಬನ್ನು, ಕಳಿಜದ ಹತ್ತಿರವಿರುವ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು ಅವುಗಳ ಮೇಲಿರುವ ಕೊಬ್ಬನ್ನು ಮೋಶೆ ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮ ಮಾಡಿದನು.
17 ಯೆಹೋವನು ಆಜ್ಞಾಪಿಸಿದಂತೆ ಅದರಲ್ಲಿ ಉಳಿದದ್ದನ್ನೆಲ್ಲಾ ಅಂದರೆ ಅದರ ಚರ್ಮವನ್ನು, ಮಾಂಸವನ್ನು ಮತ್ತು ಕಲ್ಮಷವನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಬೆಂಕಿಯಿಂದ ಸುಡಿಸಿಬಿಟ್ಟನು.
18 ತರುವಾಯ ಅವನು ಸರ್ವಾಂಗಹೋಮಕ್ಕಾಗಿ ಟಗರನ್ನು ತರಿಸಿದನು. ಆರೋನನೂ ಮತ್ತು ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
19 ಅದನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಿದನು.
20 ಆ ಟಗರನ್ನು ತುಂಡುತುಂಡಾಗಿ ಕಡಿದ ಮೇಲೆ ಮೋಶೆ ಅದರ ತಲೆಯನ್ನು, ಮಾಂಸಭಾಗಗಳನ್ನು ಮತ್ತು ಕೊಬ್ಬನ್ನು ಹೋಮಮಾಡಿದನು.
ಯಾಜ 8 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019