25 ಪ್ರಾಯಶ್ಚಿತ್ತಯಜ್ಞದ ಕುರಿಯನ್ನು ವಧಿಸಿದನಂತರ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಬೇಕು.
26 ಅನಂತರ ಯಾಜಕನು ಆ ಎಣ್ಣೆಯಲ್ಲಿ ಸ್ವಲ್ಪವನ್ನು ತನ್ನ ಎಡಗೈಯಲ್ಲಿ ಹೊಯ್ದುಕೊಂಡು,
27 ಅದರಲ್ಲಿ ಸ್ವಲ್ಪವನ್ನು ಬಲಗೈಯ ಬೆರಳಿನಿಂದ ಏಳು ಸಾರಿ ಯೆಹೋವನ ಸನ್ನಿಧಿಯಲ್ಲಿ ಚಿಮುಕಿಸಬೇಕು.
28 ಆಮೇಲೆ ಯಾಜಕನು ತನ್ನ ಕೈಯಲ್ಲಿರುವ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧ ಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ, ಬಲಗಾಲಿನ ಹೆಬ್ಬೆಟ್ಟಿಗೂ ಪ್ರಾಯಶ್ಚಿತ್ತಯಜ್ಞ ಪಶುವಿನ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಬೇಕು.
29 ಶುದ್ಧ ಮಾಡಿಸಿಕೊಳ್ಳುವವನಿಗಾಗಿ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವುದಕ್ಕಾಗಿ ಯಾಜಕನು ತನ್ನ ಕೈಯಲ್ಲಿರುವ ಉಳಿದ ಎಣ್ಣೆಯನ್ನೆಲ್ಲಾ ಅವನ ತಲೆಯ ಮೇಲೆ ಹೊಯ್ಯಬೇಕು.
30 ತರುವಾಯ ಅವನು ತನ್ನ ಸ್ಥಿತಿಗೆ ತಕ್ಕಂತೆ ತಂದ ಎರಡು ಬೆಳವಕ್ಕಿಗಳನ್ನಾಗಲಿ
31 ಪಾರಿವಾಳದ ಮರಿಗಳನ್ನಾಗಲಿ ದೋಷಪರಿಹಾರಕ ಯಜ್ಞವಾಗಿ ಒಂದನ್ನು ಮತ್ತು ಸರ್ವಾಂಗಹೋಮಕ್ಕಾಗಿ ಮತ್ತೊಂದನ್ನು ಧಾನ್ಯನೈವೇದ್ಯದೊಂದಿಗೆ ಸಮರ್ಪಿಸಬೇಕು. ಹೀಗೆ ಯಾಜಕನು ಶುದ್ಧ ಮಾಡಿಸಿಕೊಳ್ಳುವವನಿಗಾಗಿ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವನು.
32 “ಶುದ್ಧೀಕರಣ ಯಜ್ಞಗಳನ್ನು ಮಾಡುವುದಕ್ಕೆ ಗತಿಯಿಲ್ಲದ ಕುಷ್ಠರೋಗಿಯ ವಿಷಯದಲ್ಲಿ ಇದೇ ನಿಯಮ” ಎಂದು ಹೇಳಿದನು.
33 ಯೆಹೋವನು ಮೋಶೆ ಮತ್ತು ಆರೋನರಿಗೆ,
34 “ನಾನು ನಿಮಗೆ ಸ್ವದೇಶವಾಗಿ ಕೊಡುವ ಕಾನಾನ್ ದೇಶಕ್ಕೆ ನೀವು ಬಂದ ನಂತರ ಆ ದೇಶದ ಯಾವ ಮನೆಯ ಗೋಡೆಗಳಲ್ಲಿ ನಾನು ಕುಷ್ಠದ ಗುರುತನ್ನು ಉಂಟುಮಾಡುವೆನೋ,
35 ಆ ಮನೆಯ ಒಡೆಯನು ಯಾಜಕನ ಬಳಿಗೆ ಬಂದು, ‘ನನ್ನ ಮನೆಯಲ್ಲಿ ಕುಷ್ಠರೋಗದ ಗುರುತು ಉಂಟಾದಂತೆ ತೋರುತ್ತದೆ’ ಎಂದು ಅವನಿಗೆ ತಿಳಿಸಬೇಕು.
36 ಯಾಜಕನು ತಾನು ಆ ರೋಗದ ಗುರುತನ್ನು ನೋಡಲು ಬರುವುದಕ್ಕೆ ಮೊದಲು ಆ ಮನೆಯನ್ನು ಬರಿದುಮಾಡಲು ಆಜ್ಞಾಪಿಸಬೇಕು. ಹಾಗೆ ಬರಿದುಮಾಡದಿದ್ದರೆ ಆ ಮನೆಯಲ್ಲಿರುವ ಎಲ್ಲಾ ವಸ್ತುಗಳೂ ಅಶುದ್ಧವಾಗುತ್ತದೆ. ಬರಿದುಮಾಡಿದ ಮೇಲೆ ಯಾಜಕನು ಆ ಮನೆಯನ್ನು ನೋಡುವುದಕ್ಕೆ ಒಳಗೆ ಹೋಗಬೇಕು.
37 ಅವನು ಮನೆಯ ಗೋಡೆಗಳಲ್ಲಿರುವ ರೋಗದ ಗುರುತುಗಳನ್ನು ಪರೀಕ್ಷಿಸಿ ನೋಡುವಾಗ ಆ ಗುರುತುಗಳು ಹಸುರಾಗಿ ಅಥವಾ ಕೆಂಪಾಗಿ ಇದ್ದು, ಗೋಡೆಯ ಮಟ್ಟಕ್ಕಿಂತ ಆಳವಾಗಿ ತೋರಿದರೆ,
38 ಯಾಜಕನು ಹೊರಗೆ ಬಂದು ಆ ಮನೆಯನ್ನು ಏಳು ದಿನಗಳವರೆಗೂ ಮುಚ್ಚಿಸಿಬಿಡಬೇಕು.
39 ಏಳನೆಯ ದಿನದಲ್ಲಿ ಯಾಜಕನು ಬಂದು ಪರೀಕ್ಷಿಸಿ ನೋಡುವಾಗ ಆ ಗುರುತು ಮನೆಯ ಗೋಡೆಗಳಲ್ಲಿ ಹಬ್ಬಿಕೊಂಡಿದ್ದರೆ,
40 ಆ ಗುರುತುಗಳು ಇರುವ ಕಲ್ಲುಗಳನ್ನು ತೆಗೆದುಬಿಟ್ಟು, ಊರಿನ ಹೊರಗೆ ಅಪವಿತ್ರವಾದ ಸ್ಥಳದಲ್ಲಿ ಹಾಕಿಸಬೇಕು.
41 ಅದಲ್ಲದೆ ಅವನು ಆ ಮನೆಯ ಗೋಡೆಗಳ ಒಳಗೋಡೆಯನ್ನೆಲ್ಲಾ ಕೆರೆದು, ಅದರ ಮಣ್ಣನ್ನು ಊರಿನ ಹೊರಗೆ ಅಪವಿತ್ರ ಸ್ಥಳದಲ್ಲಿ ಹಾಕಿಸಬೇಕು.
42 ಆಗ ಅವರು ಬೇರೆ ಕಲ್ಲುಗಳನ್ನು ತರಿಸಿ ಮೊದಲಿದ್ದ ಕಲ್ಲುಗಳ ಸ್ಥಳದಲ್ಲಿ ಹಾಕಿಸಿ, ಹೊಸ ಮಣ್ಣನ್ನು ತರಿಸಿ ಆ ಗೋಡೆಗಳಿಗೆ ಗಿಲಾವು ಮಾಡಿಸಬೇಕು.
43 “ಅವನು ಆ ಕಲ್ಲುಗಳನ್ನು ತೆಗಿಸಿ, ಮನೆಯ ಗೋಡೆಗಳನ್ನು ಕೆರೆದು ಗಿಲಾವು ಮಾಡಿಸಿದ ಮೇಲೆ ಆ ರೋಗದ ಗುರುತು ಪುನಃ ಕಂಡುಬಂದರೆ ಯಾಜಕನು ಬಂದು ಅದನ್ನು ನೋಡಬೇಕು.
44 ಆ ಗುರುತು ಮನೆಯ ಗೋಡೆಗಳಲ್ಲಿ ಹಬ್ಬಿಕೊಂಡಿದ್ದರೆ ಅದು ಪ್ರಾಣಹಾನಿಕರವಾದ ಕುಷ್ಠವೇ; ಆ ಮನೆ ಅಶುದ್ಧವಾಗಿರುವುದು.