Text copied!
Bibles in Kannada

ಯಾಜ 14:25-37 in Kannada

Help us?

ಯಾಜ 14:25-37 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಪ್ರಾಯಶ್ಚಿತ್ತಯಜ್ಞದ ಕುರಿಯನ್ನು ವಧಿಸಿದನಂತರ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಬೇಕು.
26 ಅನಂತರ ಯಾಜಕನು ಆ ಎಣ್ಣೆಯಲ್ಲಿ ಸ್ವಲ್ಪವನ್ನು ತನ್ನ ಎಡಗೈಯಲ್ಲಿ ಹೊಯ್ದುಕೊಂಡು,
27 ಅದರಲ್ಲಿ ಸ್ವಲ್ಪವನ್ನು ಬಲಗೈಯ ಬೆರಳಿನಿಂದ ಏಳು ಸಾರಿ ಯೆಹೋವನ ಸನ್ನಿಧಿಯಲ್ಲಿ ಚಿಮುಕಿಸಬೇಕು.
28 ಆಮೇಲೆ ಯಾಜಕನು ತನ್ನ ಕೈಯಲ್ಲಿರುವ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧ ಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ, ಬಲಗಾಲಿನ ಹೆಬ್ಬೆಟ್ಟಿಗೂ ಪ್ರಾಯಶ್ಚಿತ್ತಯಜ್ಞ ಪಶುವಿನ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಬೇಕು.
29 ಶುದ್ಧ ಮಾಡಿಸಿಕೊಳ್ಳುವವನಿಗಾಗಿ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವುದಕ್ಕಾಗಿ ಯಾಜಕನು ತನ್ನ ಕೈಯಲ್ಲಿರುವ ಉಳಿದ ಎಣ್ಣೆಯನ್ನೆಲ್ಲಾ ಅವನ ತಲೆಯ ಮೇಲೆ ಹೊಯ್ಯಬೇಕು.
30 ತರುವಾಯ ಅವನು ತನ್ನ ಸ್ಥಿತಿಗೆ ತಕ್ಕಂತೆ ತಂದ ಎರಡು ಬೆಳವಕ್ಕಿಗಳನ್ನಾಗಲಿ
31 ಪಾರಿವಾಳದ ಮರಿಗಳನ್ನಾಗಲಿ ದೋಷಪರಿಹಾರಕ ಯಜ್ಞವಾಗಿ ಒಂದನ್ನು ಮತ್ತು ಸರ್ವಾಂಗಹೋಮಕ್ಕಾಗಿ ಮತ್ತೊಂದನ್ನು ಧಾನ್ಯನೈವೇದ್ಯದೊಂದಿಗೆ ಸಮರ್ಪಿಸಬೇಕು. ಹೀಗೆ ಯಾಜಕನು ಶುದ್ಧ ಮಾಡಿಸಿಕೊಳ್ಳುವವನಿಗಾಗಿ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವನು.
32 “ಶುದ್ಧೀಕರಣ ಯಜ್ಞಗಳನ್ನು ಮಾಡುವುದಕ್ಕೆ ಗತಿಯಿಲ್ಲದ ಕುಷ್ಠರೋಗಿಯ ವಿಷಯದಲ್ಲಿ ಇದೇ ನಿಯಮ” ಎಂದು ಹೇಳಿದನು.
33 ಯೆಹೋವನು ಮೋಶೆ ಮತ್ತು ಆರೋನರಿಗೆ,
34 “ನಾನು ನಿಮಗೆ ಸ್ವದೇಶವಾಗಿ ಕೊಡುವ ಕಾನಾನ್ ದೇಶಕ್ಕೆ ನೀವು ಬಂದ ನಂತರ ಆ ದೇಶದ ಯಾವ ಮನೆಯ ಗೋಡೆಗಳಲ್ಲಿ ನಾನು ಕುಷ್ಠದ ಗುರುತನ್ನು ಉಂಟುಮಾಡುವೆನೋ,
35 ಆ ಮನೆಯ ಒಡೆಯನು ಯಾಜಕನ ಬಳಿಗೆ ಬಂದು, ‘ನನ್ನ ಮನೆಯಲ್ಲಿ ಕುಷ್ಠರೋಗದ ಗುರುತು ಉಂಟಾದಂತೆ ತೋರುತ್ತದೆ’ ಎಂದು ಅವನಿಗೆ ತಿಳಿಸಬೇಕು.
36 ಯಾಜಕನು ತಾನು ಆ ರೋಗದ ಗುರುತನ್ನು ನೋಡಲು ಬರುವುದಕ್ಕೆ ಮೊದಲು ಆ ಮನೆಯನ್ನು ಬರಿದುಮಾಡಲು ಆಜ್ಞಾಪಿಸಬೇಕು. ಹಾಗೆ ಬರಿದುಮಾಡದಿದ್ದರೆ ಆ ಮನೆಯಲ್ಲಿರುವ ಎಲ್ಲಾ ವಸ್ತುಗಳೂ ಅಶುದ್ಧವಾಗುತ್ತದೆ. ಬರಿದುಮಾಡಿದ ಮೇಲೆ ಯಾಜಕನು ಆ ಮನೆಯನ್ನು ನೋಡುವುದಕ್ಕೆ ಒಳಗೆ ಹೋಗಬೇಕು.
37 ಅವನು ಮನೆಯ ಗೋಡೆಗಳಲ್ಲಿರುವ ರೋಗದ ಗುರುತುಗಳನ್ನು ಪರೀಕ್ಷಿಸಿ ನೋಡುವಾಗ ಆ ಗುರುತುಗಳು ಹಸುರಾಗಿ ಅಥವಾ ಕೆಂಪಾಗಿ ಇದ್ದು, ಗೋಡೆಯ ಮಟ್ಟಕ್ಕಿಂತ ಆಳವಾಗಿ ತೋರಿದರೆ,
ಯಾಜ 14 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019