Text copied!
Bibles in Kannada

ಯಾಜ 14:15-50 in Kannada

Help us?

ಯಾಜ 14:15-50 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆಗ ಯಾಜಕನು ಆ ಒಂದು ಸೇರು ಎಣ್ಣೆಯಲ್ಲಿ ಸ್ವಲ್ಪವನ್ನು ತನ್ನ ಎಡಗೈಯಲ್ಲಿ ಹೊಯ್ದುಕೊಂಡು,
16 ತನ್ನ ಬಲಗೈಯ ಬೆರಳನ್ನು ಅದರಲ್ಲಿ ಅದ್ದಿ, ಯೆಹೋವನ ಸನ್ನಿಧಿಯಲ್ಲಿ ಏಳು ಸಾರಿ ಬೆರಳಿನಿಂದ ಚಿಮುಕಿಸಬೇಕು.
17 ಯಾಜಕನು ತನ್ನ ಕೈಯಲ್ಲಿರುವ ಉಳಿದ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧ ಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆಟ್ಟಿಗೂ ಪ್ರಾಯಶ್ಚಿತ್ತಯಜ್ಞ ಪಶುವಿನ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಬೇಕು.
18 ಅವನು ತನ್ನ ಕೈಯಲ್ಲಿರುವ ಉಳಿದ ಎಣ್ಣೆಯನ್ನು ಶುದ್ಧಮಾಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದುಬಿಡಬೇಕು. ಹೀಗೆ ಯಾಜಕನು ಯೆಹೋವನ ಸನ್ನಿಧಿಯಲ್ಲಿ ಅವನ ದೋಷವನ್ನು ಪರಿಹರಿಸುವನು.
19 “ಅದಲ್ಲದೆ ಯಾಜಕನು ಶುದ್ಧಮಾಡಿಸಿಕೊಳ್ಳುವವನ ಅಪವಿತ್ರತೆಯನ್ನು ಹೋಗಲಾಡಿಸುವುದಕ್ಕೆ ಆ ಕುರಿಯನ್ನು ದೋಷಪರಿಹಾರಕ ಯಜ್ಞವಾಗಿ ಸಮರ್ಪಿಸಿ ಅವನ ದೋಷವನ್ನು ಪರಿಹರಿಸುವನು. ಆ ಮೇಲೆ ಯಾಜಕನು ಆ ಎರಡನೆಯ ಟಗರುಮರಿಯನ್ನು ಸರ್ವಾಂಗಹೋಮಕ್ಕಾಗಿ ವಧಿಸಬೇಕು.
20 ಅವನು ಆ ಸರ್ವಾಂಗಹೋಮವನ್ನು ಮತ್ತು ಧಾನ್ಯನೈವೇದ್ಯವನ್ನು ಯಜ್ಞವೇದಿಯ ಮೇಲೆ ಸಮರ್ಪಿಸಬೇಕು. ಯಾಜಕನು ಅವನಿಗೋಸ್ಕರ ಹೀಗೆ ದೋಷಪರಿಹಾರ ಮಾಡಿದಾಗ ಅವನು ಶುದ್ಧನಾಗುವನು.
21 “ಅವನು ಬಡವನಾಗಿದ್ದು ಅಷ್ಟನ್ನು ಸಮರ್ಪಿಸುವುದಕ್ಕೆ ಆಗದಿದ್ದರೆ ಪ್ರಾಯಶ್ಚಿತ್ತಯಜ್ಞಕ್ಕಾಗಿ ಒಂದು ಟಗರುಮರಿಯನ್ನು ತಂದು ದೋಷಪರಿಹಾರ ಮಾಡಿಸಿಕೊಳ್ಳುವುದಕ್ಕಾಗಿ ಯಾಜಕನ ಕೈಯಿಂದ ನೈವೇದ್ಯವಾಗಿ ನಿವಾಳಿಸಬೇಕು; ಮತ್ತು ಧಾನ್ಯನೈವೇದ್ಯಕ್ಕಾಗಿ ಹತ್ತರಲ್ಲಿ ಒಂದು ಭಾಗ ಎಣ್ಣೆ ಕಲಸಿದ ಗೋದಿಹಿಟ್ಟನ್ನು ಮತ್ತು ಒಂದು ಸೇರು ಎಣ್ಣೆಯನ್ನು ತರಬೇಕು.
22 ಅದಲ್ಲದೆ ಅವನು ತನ್ನ ಸ್ಥಿತಿಗೆ ತಕ್ಕಂತೆ ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ದೋಷಪರಿಹಾರಕ ಯಜ್ಞವಾಗಿ ಒಂದನ್ನು, ಸರ್ವಾಂಗಹೋಮಕ್ಕಾಗಿ ಮತ್ತೊಂದನ್ನು ಸಮರ್ಪಿಸಬೇಕು.
23 ಅವನು ತನ್ನ ಶುದ್ಧೀಕರಣಕ್ಕಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಯೆಹೋವನ ಸನ್ನಿಧಿಗೆ ತಂದು ಯಾಜಕನಿಗೆ ಒಪ್ಪಿಸಬೇಕು.
24 ಯಾಜಕನು ಪ್ರಾಯಶ್ಚಿತ್ತಯಜ್ಞದ ಕುರಿಯನ್ನು, ಒಂದು ಸೇರು ಎಣ್ಣೆಯನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.
25 ಪ್ರಾಯಶ್ಚಿತ್ತಯಜ್ಞದ ಕುರಿಯನ್ನು ವಧಿಸಿದನಂತರ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಬೇಕು.
26 ಅನಂತರ ಯಾಜಕನು ಆ ಎಣ್ಣೆಯಲ್ಲಿ ಸ್ವಲ್ಪವನ್ನು ತನ್ನ ಎಡಗೈಯಲ್ಲಿ ಹೊಯ್ದುಕೊಂಡು,
27 ಅದರಲ್ಲಿ ಸ್ವಲ್ಪವನ್ನು ಬಲಗೈಯ ಬೆರಳಿನಿಂದ ಏಳು ಸಾರಿ ಯೆಹೋವನ ಸನ್ನಿಧಿಯಲ್ಲಿ ಚಿಮುಕಿಸಬೇಕು.
28 ಆಮೇಲೆ ಯಾಜಕನು ತನ್ನ ಕೈಯಲ್ಲಿರುವ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧ ಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ, ಬಲಗಾಲಿನ ಹೆಬ್ಬೆಟ್ಟಿಗೂ ಪ್ರಾಯಶ್ಚಿತ್ತಯಜ್ಞ ಪಶುವಿನ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಬೇಕು.
29 ಶುದ್ಧ ಮಾಡಿಸಿಕೊಳ್ಳುವವನಿಗಾಗಿ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವುದಕ್ಕಾಗಿ ಯಾಜಕನು ತನ್ನ ಕೈಯಲ್ಲಿರುವ ಉಳಿದ ಎಣ್ಣೆಯನ್ನೆಲ್ಲಾ ಅವನ ತಲೆಯ ಮೇಲೆ ಹೊಯ್ಯಬೇಕು.
30 ತರುವಾಯ ಅವನು ತನ್ನ ಸ್ಥಿತಿಗೆ ತಕ್ಕಂತೆ ತಂದ ಎರಡು ಬೆಳವಕ್ಕಿಗಳನ್ನಾಗಲಿ
31 ಪಾರಿವಾಳದ ಮರಿಗಳನ್ನಾಗಲಿ ದೋಷಪರಿಹಾರಕ ಯಜ್ಞವಾಗಿ ಒಂದನ್ನು ಮತ್ತು ಸರ್ವಾಂಗಹೋಮಕ್ಕಾಗಿ ಮತ್ತೊಂದನ್ನು ಧಾನ್ಯನೈವೇದ್ಯದೊಂದಿಗೆ ಸಮರ್ಪಿಸಬೇಕು. ಹೀಗೆ ಯಾಜಕನು ಶುದ್ಧ ಮಾಡಿಸಿಕೊಳ್ಳುವವನಿಗಾಗಿ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವನು.
32 “ಶುದ್ಧೀಕರಣ ಯಜ್ಞಗಳನ್ನು ಮಾಡುವುದಕ್ಕೆ ಗತಿಯಿಲ್ಲದ ಕುಷ್ಠರೋಗಿಯ ವಿಷಯದಲ್ಲಿ ಇದೇ ನಿಯಮ” ಎಂದು ಹೇಳಿದನು.
33 ಯೆಹೋವನು ಮೋಶೆ ಮತ್ತು ಆರೋನರಿಗೆ,
34 “ನಾನು ನಿಮಗೆ ಸ್ವದೇಶವಾಗಿ ಕೊಡುವ ಕಾನಾನ್ ದೇಶಕ್ಕೆ ನೀವು ಬಂದ ನಂತರ ಆ ದೇಶದ ಯಾವ ಮನೆಯ ಗೋಡೆಗಳಲ್ಲಿ ನಾನು ಕುಷ್ಠದ ಗುರುತನ್ನು ಉಂಟುಮಾಡುವೆನೋ,
35 ಆ ಮನೆಯ ಒಡೆಯನು ಯಾಜಕನ ಬಳಿಗೆ ಬಂದು, ‘ನನ್ನ ಮನೆಯಲ್ಲಿ ಕುಷ್ಠರೋಗದ ಗುರುತು ಉಂಟಾದಂತೆ ತೋರುತ್ತದೆ’ ಎಂದು ಅವನಿಗೆ ತಿಳಿಸಬೇಕು.
36 ಯಾಜಕನು ತಾನು ಆ ರೋಗದ ಗುರುತನ್ನು ನೋಡಲು ಬರುವುದಕ್ಕೆ ಮೊದಲು ಆ ಮನೆಯನ್ನು ಬರಿದುಮಾಡಲು ಆಜ್ಞಾಪಿಸಬೇಕು. ಹಾಗೆ ಬರಿದುಮಾಡದಿದ್ದರೆ ಆ ಮನೆಯಲ್ಲಿರುವ ಎಲ್ಲಾ ವಸ್ತುಗಳೂ ಅಶುದ್ಧವಾಗುತ್ತದೆ. ಬರಿದುಮಾಡಿದ ಮೇಲೆ ಯಾಜಕನು ಆ ಮನೆಯನ್ನು ನೋಡುವುದಕ್ಕೆ ಒಳಗೆ ಹೋಗಬೇಕು.
37 ಅವನು ಮನೆಯ ಗೋಡೆಗಳಲ್ಲಿರುವ ರೋಗದ ಗುರುತುಗಳನ್ನು ಪರೀಕ್ಷಿಸಿ ನೋಡುವಾಗ ಆ ಗುರುತುಗಳು ಹಸುರಾಗಿ ಅಥವಾ ಕೆಂಪಾಗಿ ಇದ್ದು, ಗೋಡೆಯ ಮಟ್ಟಕ್ಕಿಂತ ಆಳವಾಗಿ ತೋರಿದರೆ,
38 ಯಾಜಕನು ಹೊರಗೆ ಬಂದು ಆ ಮನೆಯನ್ನು ಏಳು ದಿನಗಳವರೆಗೂ ಮುಚ್ಚಿಸಿಬಿಡಬೇಕು.
39 ಏಳನೆಯ ದಿನದಲ್ಲಿ ಯಾಜಕನು ಬಂದು ಪರೀಕ್ಷಿಸಿ ನೋಡುವಾಗ ಆ ಗುರುತು ಮನೆಯ ಗೋಡೆಗಳಲ್ಲಿ ಹಬ್ಬಿಕೊಂಡಿದ್ದರೆ,
40 ಆ ಗುರುತುಗಳು ಇರುವ ಕಲ್ಲುಗಳನ್ನು ತೆಗೆದುಬಿಟ್ಟು, ಊರಿನ ಹೊರಗೆ ಅಪವಿತ್ರವಾದ ಸ್ಥಳದಲ್ಲಿ ಹಾಕಿಸಬೇಕು.
41 ಅದಲ್ಲದೆ ಅವನು ಆ ಮನೆಯ ಗೋಡೆಗಳ ಒಳಗೋಡೆಯನ್ನೆಲ್ಲಾ ಕೆರೆದು, ಅದರ ಮಣ್ಣನ್ನು ಊರಿನ ಹೊರಗೆ ಅಪವಿತ್ರ ಸ್ಥಳದಲ್ಲಿ ಹಾಕಿಸಬೇಕು.
42 ಆಗ ಅವರು ಬೇರೆ ಕಲ್ಲುಗಳನ್ನು ತರಿಸಿ ಮೊದಲಿದ್ದ ಕಲ್ಲುಗಳ ಸ್ಥಳದಲ್ಲಿ ಹಾಕಿಸಿ, ಹೊಸ ಮಣ್ಣನ್ನು ತರಿಸಿ ಆ ಗೋಡೆಗಳಿಗೆ ಗಿಲಾವು ಮಾಡಿಸಬೇಕು.
43 “ಅವನು ಆ ಕಲ್ಲುಗಳನ್ನು ತೆಗಿಸಿ, ಮನೆಯ ಗೋಡೆಗಳನ್ನು ಕೆರೆದು ಗಿಲಾವು ಮಾಡಿಸಿದ ಮೇಲೆ ಆ ರೋಗದ ಗುರುತು ಪುನಃ ಕಂಡುಬಂದರೆ ಯಾಜಕನು ಬಂದು ಅದನ್ನು ನೋಡಬೇಕು.
44 ಆ ಗುರುತು ಮನೆಯ ಗೋಡೆಗಳಲ್ಲಿ ಹಬ್ಬಿಕೊಂಡಿದ್ದರೆ ಅದು ಪ್ರಾಣಹಾನಿಕರವಾದ ಕುಷ್ಠವೇ; ಆ ಮನೆ ಅಶುದ್ಧವಾಗಿರುವುದು.
45 ಅವನು ಆ ಮನೆಯನ್ನು ಕೆಡವಿ, ಅದರ ಎಲ್ಲಾ ಕಲ್ಲುಗಳನ್ನು, ತೊಲೆಗಳನ್ನು ಮತ್ತು ಮಣ್ಣನ್ನು ಊರಿನ ಹೊರಗೆ ಅಪವಿತ್ರಸ್ಥಳದಲ್ಲಿ ಹಾಕಿಸಬೇಕು.
46 ಆ ಮನೆಯು ಮುಚ್ಚಿರುವ ದಿನಗಳಲ್ಲಿ ಯಾವನಾದರೂ ಒಳಕ್ಕೆ ಹೋದರೆ ಅವನು ಆ ದಿನದ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
47 ಆ ಮನೆಯಲ್ಲಿ ಮಲಗಿಕೊಂಡವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು; ಅಲ್ಲಿ ಊಟಮಾಡಿದವನೂ ಬಟ್ಟೆಗಳನ್ನು ಒಗೆದುಕೊಳ್ಳಬೇಕು.
48 “ಆದರೆ ತಾನು ಆ ಮನೆಗೆ ಹೊಸದಾಗಿ ಗಿಲಾವು ಮಾಡಿಸಿದ ಮೇಲೆ ಯಾಜಕನು ಬಂದು ಪರೀಕ್ಷಿಸುವಾಗ ಆ ರೋಗದ ಗುರುತು ಕಾಣಿಸದೆಹೋದರೆ, ರೋಗಪರಿಹಾರವಾಗಿ ಆ ಮನೆ ಶುದ್ಧವಾಯಿತೆಂದು ನಿರ್ಣಯಿಸಬೇಕು.
49 ಆ ಮನೆಯ ಶುದ್ಧೀಕರಣಕ್ಕಾಗಿ ಅವನು ಎರಡು ಪಕ್ಷಿಗಳನ್ನು, ದೇವದಾರಿನ ಕಟ್ಟಿಗೆಯನ್ನು, ರಕ್ತವರ್ಣವುಳ್ಳ ದಾರವನ್ನು ಮತ್ತು ಹಿಸ್ಸೋಪ್ ಗಿಡದ ಬರಲನ್ನು ತೆಗೆದುಕೊಳ್ಳಬೇಕು.
50 ಅವನು ಒಂದು ಪಕ್ಷಿಯನ್ನು ಒರತೆ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕು,
ಯಾಜ 14 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019