Text copied!
Bibles in Kannada

ಯಾಜ 13:45-58 in Kannada

Help us?

ಯಾಜ 13:45-58 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

45 “ಯಾರಲ್ಲಿ ಕುಷ್ಠದ ಗುರುತು ಕಾಣಿಸಿತೋ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡು, ತಲೆಯನ್ನು ಕೆದರಿಕೊಂಡು, ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡು ‘ನಾನು ಅಶುದ್ಧನು, ಅಶುದ್ಧನು’ ಎಂದು ಕೂಗಿಕೊಳ್ಳಬೇಕು.
46 ಆ ರೋಗದ ಗುರುತುಗಳು ಅವನಲ್ಲಿ ಇರುವ ದಿನಗಳೆಲ್ಲಾ ಅವನು ಅಶುದ್ಧನಾಗಿರುವನು. ಅವನು ಅಶುದ್ಧನಾದುದರಿಂದ ಪ್ರತ್ಯೇಕವಾಗಿಯೇ ವಾಸವಾಗಿರಬೇಕು; ಅವನ ನಿವಾಸವು ಪಾಳೆಯದ ಹೊರಗೆ ಇರಬೇಕು.
47 “ಕುಷ್ಠರೋಗದ ಗುರುತು ಬಟ್ಟೆಯಲ್ಲಿ ಕಂಡು ಬಂದಾಗ ಅದು ಉಣ್ಣೆಯ ಬಟ್ಟೆಯಾಗಲಿ ಅಥವಾ ನಾರಿನ ಬಟ್ಟೆಯಾಗಲಿ,
48 ನಾರಿನ ಅಥವಾ ಉಣ್ಣೆಯ ಹಾಸಿನಲ್ಲಾಗಲಿ, ಹೆಣಿಗೆಯಲ್ಲಾಗಲಿ ಇಲ್ಲವೆ ತೊಗಲಿನಲ್ಲಾಗಲಿ, ತೊಗಲಿನಿಂದ ಮಾಡಲ್ಪಟ್ಟ ವಸ್ತುವಿನಲ್ಲಾಗಲಿ,
49 ಆ ಬಟ್ಟೆ, ತೊಗಲು, ಹಾಸು, ಹೆಣಿಗೆ, ತೊಗಲಿನ ಸಾಮಾನುಗಳಲ್ಲಿ ಹಸುರಾಗಿ ಇಲ್ಲವೆ ಕೆಂಪಾಗಿ ಮಚ್ಚೆಕಾಣಿಸಿದರೆ ಅದು ಕುಷ್ಠದ ಗುರುತು; ಅದನ್ನು ಯಾಜಕನಿಗೆ ತೋರಿಸಬೇಕು.
50 ಯಾಜಕನು ಅದನ್ನು ಪರೀಕ್ಷಿಸಿ ನೋಡಿ ಏಳು ದಿನಗಳ ವರೆಗೆ ಪ್ರತ್ಯೇಕವಾಗಿ ಇಡಿಸಬೇಕು.
51 ಏಳನೆಯ ದಿನದಲ್ಲಿ ಅವನು ಅದನ್ನು ಪರೀಕ್ಷಿಸುವಾಗ ಆ ಬಟ್ಟೆಯ ಹಾಸಿನಲ್ಲಾಗಲಿ ಅಥವಾ ಹೆಣಿಗೆಯಲ್ಲಾಗಲಿ ಇಲ್ಲವೆ ಯಾವುದಾದರೂ ಒಂದು ಕೆಲಸಕ್ಕೆ ಉಪಯೋಗವಾಗಿರುವ ಆ ತೊಗಲಿನಲ್ಲಿ ಆ ಮಚ್ಚೆ ಹರಡಿಕೊಂಡಿದ್ದರೆ ಅದು ಪ್ರಾಣಕ್ಕೆ ಅಪಾಯಕರವಾದ ಕುಷ್ಠವೇ, ಆ ವಸ್ತುವು ಅಶುದ್ಧ.
52 ಆ ವಸ್ತುವು ಬಟ್ಟೆಯಾದರೂ, ಹಾಸಾದರೂ, ಹೊಕ್ಕಾದರೂ, ಉಣ್ಣೆಯದಾದರೂ, ನಾರಿನದಾದರೂ ಅಥವಾ ತೊಗಲಿನದಾದರೂ ಅದರಲ್ಲಿ ಪ್ರಾಣಕ್ಕೆ ಅಪಾಯಕರವಾದ ಕುಷ್ಠವಿರುವುದರಿಂದ ಅದನ್ನು ಬೆಂಕಿಯಿಂದ ಸುಡಿಸಿಬಿಡಬೇಕು.
53 ಆದರೆ ಯಾಜಕನು ಪರೀಕ್ಷಿಸುವಾಗ ಆ ವಸ್ತುವಿನಲ್ಲಿ ಅಂದರೆ ಆ ಬಟ್ಟೆ, ಹಾಸು, ಹೆಣಿಗೆ, ತೊಗಲಿನ ಸಾಮಾನು ಇವುಗಳಲ್ಲಿ ಆ ಮಚ್ಚೆ ಹರಡಿಕೊಳ್ಳದಿದ್ದರೆ,
54 ಅದನ್ನು ನೀರಿನಿಂದ ತೊಳೆಯಬೇಕೆಂದು ಯಾಜಕನು ಅಪ್ಪಣೆಕೊಟ್ಟು ಇನ್ನು ಏಳು ದಿನಗಳ ತನಕ ಅದನ್ನು ಪ್ರತ್ಯೇಕವಾಗಿ ಇಡಿಸಬೇಕು.
55 ಆ ಮಚ್ಚೆ ಇದ್ದ ವಸ್ತುಗಳನ್ನು ತೊಳೆಸಿದ ಮೇಲೆ ಯಾಜಕನು ಪರೀಕ್ಷಿಸುವಾಗ ಆ ಮಚ್ಚೆಯು ಹರಡಿಕೊಳ್ಳದೆ ಇದ್ದಾಗ್ಯೂ ಅದರ ಬಣ್ಣ ಮೊದಲಿದ್ದಂತೆಯೇ ಇದ್ದರೆ ಆ ವಸ್ತು ಅಶುದ್ಧ. ಕುಷ್ಠರೋಗದ ಗುರುತು ಅದರ ಮೇಲ್ಭಾಗದಿಂದಾಗಲಿ ಅಥವಾ ಕೆಳಭಾಗದಿಂದಾಗಲಿ ಆ ವಸ್ತುವಿನೊಳಗೆ ವ್ಯಾಪಿಸಿದ್ದರಿಂದ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
56 ಆದರೆ ತೊಳೆದ ಬಟ್ಟೆಯನ್ನು ಯಾಜಕನು ಪರೀಕ್ಷಿಸುವಾಗ ಅದರಲ್ಲಿದ್ದ ಮಚ್ಚೆ ಮೊಬ್ಬಾಗಿಹೋಗಿದ್ದರೆ ಅವನು ಆ ಮಚ್ಚೆ ಇರುವ ಭಾಗವನ್ನು ಆ ಬಟ್ಟೆಯಿಂದಾಗಲಿ, ತೊಗಲಿನಿಂದಾಗಲಿ, ಹಾಸಿನಿಂದಾಗಲಿ, ಹೆಣಿಗೆಯಿಂದಾಗಲಿ ಕತ್ತರಿಸಬೇಕು.
57 ಆ ಮೇಲೆಯೂ ಕುಷ್ಠದ ಮಚ್ಚೆ ಆ ಬಟ್ಟೆಯಲ್ಲಾಗಲಿ, ಹಾಸಿನಲ್ಲಾಗಲಿ, ಹೆಣಿಗೆಯಲ್ಲಾಗಲಿ ಅಥವಾ ತೊಗಲಿನ ಸಾಮಾನಿನಲ್ಲಾಗಲಿ ಕಂಡು ಬಂದರೆ ಕುಷ್ಠರೋಗವು ಇನ್ನು ಅದರಲ್ಲಿ ಉಂಟೆಂದು ತಿಳಿದುಕೊಳ್ಳಬೇಕು. ಆ ಮಚ್ಚೆ ಇರುವ ವಸ್ತುವನ್ನೇ ಬೆಂಕಿಯಿಂದ ಸುಟ್ಟುಬಿಡಬೇಕು.
58 ಆ ಬಟ್ಟೆಯನ್ನಾಗಲಿ, ಹಾಸನ್ನಾಗಲಿ, ಹೆಣಿಗೆಯನ್ನಾಗಲಿ ಅಥವಾ ತೊಗಲಿನ ಸಾಮಾನನ್ನಾಗಲಿ ತೊಳೆದನಂತರ ಆ ಮಚ್ಚೆ ಕಾಣದೆಹೋದರೆ ಅದನ್ನು ಎರಡನೆಯ ಸಾರಿ ತೊಳೆಯಬೇಕು; ಆಗ ಅದು ಶುದ್ಧವಾಗುವುದು.
ಯಾಜ 13 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019