Text copied!
Bibles in Kannada

ಯಾಜ 10:12-20 in Kannada

Help us?

ಯಾಜ 10:12-20 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಮೋಶೆ ಆರೋನನಿಗೂ ಅವನ ಉಳಿದ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರಿಗೆ, “ಯೆಹೋವನಿಗೆ ಅಗ್ನಿಯ ಮೂಲಕ ಸಮರ್ಪಿತವಾದ ದ್ರವ್ಯಗಳಲ್ಲಿ ಉಳಿದಿರುವ ಧಾನ್ಯನೈವೇದ್ಯ ದ್ರವ್ಯವನ್ನು ತೆಗೆದುಕೊಂಡು, ಅದರಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿ, ಯಜ್ಞವೇದಿಯ ಬಳಿಯಲ್ಲಿ ಊಟಮಾಡಬೇಕು. ಅದು ಮಹಾಪರಿಶುದ್ಧವಾಗಿದೆ.
13 ಪವಿತ್ರಸ್ಥಳದೊಳಗೇ ಅದನ್ನು ಊಟಮಾಡಬೇಕು. ಜನರು ಯೆಹೋವನಿಗೆ ಸಮರ್ಪಿಸಿದ ಹೋಮದ್ರವ್ಯಗಳಲ್ಲಿ ಅದು ನಿನಗೂ ಮತ್ತು ನಿನ್ನ ಮಕ್ಕಳಿಗೂ ಸಲ್ಲತಕ್ಕದ್ದೆಂದು ಅಪ್ಪಣೆಯಾಗಿದೆ.
14 ನೀವು ನೈವೇದ್ಯ ಮಾಡಿದ ಎದೆಯ ಭಾಗವನ್ನು, ಯಾಜಕರಿಗೋಸ್ಕರ ಪ್ರತ್ಯೇಕಿಸಿದ ತೊಡೆಯನ್ನು ಯಾವುದಾದರೂ ಒಂದು ಶುದ್ಧಸ್ಥಳದಲ್ಲಿ ಊಟಮಾಡಬಹುದು. ನೀನೂ, ನಿನ್ನ ಗಂಡುಮಕ್ಕಳೂ ಹಾಗು ಹೆಣ್ಣುಮಕ್ಕಳೂ ಅದನ್ನು ತಿನ್ನಬಹುದು. ಏಕೆಂದರೆ ಇಸ್ರಾಯೇಲರು ಸಮರ್ಪಿಸುವ ಸಮಾಧಾನಯಜ್ಞದ್ರವ್ಯಗಳಲ್ಲಿ ಇವೇ ನಿನಗೂ ಮತ್ತು ನಿನ್ನ ಮಕ್ಕಳಿಗೂ ಸಲ್ಲಬೇಕೆಂದು ನೇಮಕವಾಗಿದೆ.
15 ಜನರು ಹೋಮಕ್ಕಾಗಿ ಕೊಬ್ಬನ್ನು ತಂದು ಸಮರ್ಪಿಸುವಾಗೆಲ್ಲಾ ಯಾಜಕರಿಗೋಸ್ಕರ ಪ್ರತ್ಯೇಕಿಸಬೇಕಾದ ಆ ತೊಡೆಯನ್ನು ನೈವೇದ್ಯವಾಗಿ ನಿವಾಳಿಸಬೇಕಾದ ಆ ಎದೆಯ ಭಾಗವನ್ನು ಯೆಹೋವನ ಸನ್ನಿಧಿಯಲ್ಲಿ ತರಬೇಕು. ಯೆಹೋವನು ಆಜ್ಞಾಪಿಸಿದಂತೆ ಅವು ನಿನಗೂ ಮತ್ತು ನಿನ್ನ ವಂಶದವರಿಗೂ ಸಲ್ಲತಕ್ಕದ್ದು; ಇದು ಶಾಶ್ವತನಿಯಮ” ಎಂದು ಹೇಳಿದನು.
16 ಜನರೆಲ್ಲರಿಗೋಸ್ಕರ ದೋಷಪರಿಹಾರ ಮಾಡಲು ಸಮರ್ಪಿತವಾದ ಹೋತದ ವಿಷಯದಲ್ಲಿ ಅದು ಏನಾಯಿತೆಂದು ಮೋಶೆ ವಿಚಾರಿಸಲಾಗಿ ಅದನ್ನು ಸುಟ್ಟುಬಿಟ್ಟರೆಂದು ತಿಳಿಯಬಂತು. ಇದನ್ನು ಕೇಳಿದಾಗ ಅವನು ಆರೋನನ ಉಳಿದ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರ ಮೇಲೆ ಸಿಟ್ಟುಗೊಂಡು,
17 “ಆ ದೋಷಪರಿಹಾರಕ ಯಜ್ಞದ್ರವ್ಯವು ಮಹಾಪರಿಶುದ್ಧವಾದದ್ದಲ್ಲವೇ? ನೀವು ಜನಸಮೂಹದ ಪಾಪಗಳನ್ನು ಪರಿಹಾರಮಾಡುವಂತೆಯೂ, ಅವರಿಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವಂತೆಯೂ ಅದು ನಿಮ್ಮ ಭಾಗವಾಗಿ ನೇಮಕವಾಗಿದೆಯಲ್ಲಾ. ನೀವು ಯಾಕೆ ಅದನ್ನು ಪವಿತ್ರಸ್ಥಳದೊಳಗೆ ಊಟಮಾಡಲಿಲ್ಲ?
18 ಅದರ ರಕ್ತವು ಪವಿತ್ರಸ್ಥಾನದೊಳಗೆ ತರಬಾರದಾಗಿತ್ತು, ನಾನು ಆಜ್ಞಾಪಿಸಿದಂತೆ ನೀವು ದೇವಸ್ಥಾನದ ಪ್ರಾಕಾರದೊಳಗೆ ಅದನ್ನು ತಿನ್ನಬೇಕಾಗಿತ್ತು” ಅಂದನು.
19 ಅದಕ್ಕೆ ಆರೋನನು ಮೋಶೆಗೆ, “ಇವರು ಈ ಹೊತ್ತು ಯೆಹೋವನ ಸನ್ನಿಧಿಯಲ್ಲಿ ತಮಗೋಸ್ಕರ ದೋಷಪರಿಹಾರಕ ಯಜ್ಞವನ್ನು ಮತ್ತು ಸರ್ವಾಂಗಹೋಮವನ್ನು ಸಮರ್ಪಿಸಿದ್ದರೂ ಈ ಆಪತ್ತು ನನಗೆ ಸಂಭವಿಸಿತು; ಹೀಗಿರುವಾಗ ನಾನು ದೋಷಪರಿಹಾರಕ ಯಜ್ಞದ್ರವ್ಯವನ್ನು ಈ ಹೊತ್ತು ಊಟಮಾಡಿದ್ದರೆ ಅದು ಯೆಹೋವನ ದೃಷ್ಟಿಯಲ್ಲಿ ಒಳ್ಳೆಯದಾಗಿ ತೋರುತ್ತಿತ್ತೋ?”
20 ಎಂದು ಉತ್ತರಕೊಡಲಾಗಿ ಮೋಶೆ ಆ ಮಾತನ್ನು ಕೇಳಿ ತೃಪ್ತಿಗೊಂಡನು.
ಯಾಜ 10 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019