Text copied!
Bibles in Kannada

ಮಾರ್ಕ 9:21-33 in Kannada

Help us?

ಮಾರ್ಕ 9:21-33 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಯೇಸು ಅವನ ತಂದೆಯನ್ನು, “ಇವನಿಗೆ ಹೀಗಾಗಿ ಎಷ್ಟು ಕಾಲವಾಯಿತು?” ಎಂದು ಕೇಳಿದಾಗ ಅವನು, “ಚಿಕ್ಕಂದಿನಲ್ಲಿಯೇ ಬಂದಿದೆ;
22 ಮತ್ತು ಇವನನ್ನು ಕೊಲ್ಲಬೇಕೆಂದು ಪದೇಪದೇ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಕೆಡವಿತು; ನಿನ್ನ ಕೈಯಲ್ಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕನಿಕರವಿಟ್ಟು ನಮಗೆ ಸಹಾಯಮಾಡು” ಅಂದನು.
23 ಯೇಸು ಅವನಿಗೆ, “‘ನಿನ್ನ ಕೈಯಲ್ಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ’? ನಂಬುವವನಿಗೆ ಎಲ್ಲವೂ ಸಾಧ್ಯ!” ಎಂದು ಹೇಳಿದನು.
24 ಕೂಡಲೆ ಆ ಹುಡುಗನ ತಂದೆಯು, “ನಂಬುತ್ತೇನೆ, ನನಗೆ ಅಪನಂಬಿಕೆ ಇಲ್ಲದಂತೆ ಸಹಾಯಮಾಡು” ಎಂದು ಕೂಗಿ ಹೇಳಿದನು.
25 ಆಗ ಯೇಸು ಜನರ ಗುಂಪು ಓಡಿಬರುವುದನ್ನು ಕಂಡು ಆ ದೆವ್ವವನ್ನು ಗದರಿಸಿ, “ಎಲೈ, ಕಿವುಡಾದ ಮೂಗದೆವ್ವವೇ, ಇವನನ್ನು ಬಿಟ್ಟು ಹೋಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಾನು ನಿನಗೆ ಅಪ್ಪಣೆಕೊಡುತ್ತೇನೆ” ಅಂದನು.
26 ಆಗ ಅದು ಅಬ್ಬರಿಸಿ ಹುಡುಗನನ್ನು ಒದ್ದಾಡಿಸಿ ಬಿಟ್ಟುಹೋಯಿತು. ಆ ಹುಡುಗನು ಸತ್ತಹಾಗೆ ಬಿದ್ದಿದ್ದರಿಂದ ಬಹುಜನರು, “ಸತ್ತುಹೋದನು” ಎಂದು ಅಂದುಕೊಂಡರು.
27 ಆದರೆ ಯೇಸು ಅವನನ್ನು ಕೈಹಿಡಿದು ಎಬ್ಬಿಸಲು ಹುಡುಗನು ಎದ್ದು ನಿಂತನು.
28 ಯೇಸು ಮನೆಗೆ ಬಂದಾಗ ಆತನ ಶಿಷ್ಯರು, “ಅದನ್ನು ಬಿಡಿಸಲಿಕ್ಕೆ ನಮ್ಮಿಂದ ಏಕೆ ಆಗಲಿಲ್ಲವೆಂದು” ಆತನನ್ನು ಏಕಾಂತದಲ್ಲಿ ಕೇಳಿದರು.
29 ಅದಕ್ಕೆ ಆತನು, “ಈ ಬಗೆಯ ದೆವ್ವಗಳು ದೇವರಪ್ರಾರ್ಥನೆಯಿಂದಲೇ ಹೊರತು ಬೇರೆ ಯಾವ ರೀತಿಯಿಂದಲೂ ಬಿಟ್ಟು ಹೋಗುವುದಿಲ್ಲವೆಂದು” ಅವರಿಗೆ ಹೇಳಿದನು.
30 ಅಲ್ಲಿಂದ ಅವರು ಹೊರಟು ಗಲಿಲಾಯವನ್ನು ಹಾದು ಹೋಗುತ್ತಿದ್ದರು. ಆದರೆ ತಾವು ಎಲ್ಲಿಗೆ ಹೋಗುತ್ತಿರುವುದೆಂದು ಯಾರಿಗೂ ಗೊತ್ತಾಗಬಾರದೆಂದು ಆತನು ಬಯಸಿದನು.
31 ಏಕೆಂದರೆ ಆತನು ತನ್ನ ಶಿಷ್ಯರಿಗೆ ಉಪದೇಶಮಾಡುತ್ತಾ, “ಮನುಷ್ಯಕುಮಾರನು ಜನರ ಕೈಗಳಿಗೆ ಒಪ್ಪಿಸಲ್ಪಡುತ್ತಾನೆ; ಅವರು ಆತನನ್ನು ಕೊಲ್ಲುವರು; ಕೊಲ್ಲಲ್ಪಟ್ಟ ತರುವಾಯ ಮೂರು ದಿನದ ಮೇಲೆ ಆತನು ಜೀವಿತನಾಗಿ ಎದ್ದು ಬರುವನೆಂದು” ಹೇಳಿದನು.
32 ಆದರೆ ಅವರು ಆ ಮಾತನ್ನು ಗ್ರಹಿಸಲಿಲ್ಲ ಮತ್ತು ಆತನನ್ನು ಕೇಳುವುದಕ್ಕೆ ಭಯಪಟ್ಟರು.
33 ಅವರು ಕಪೆರ್ನೌಮಿಗೆ ಬಂದರು. ಅಲ್ಲಿ ಆತನು ಮನೆಯಲ್ಲಿದ್ದಾಗ, “ನೀವು ದಾರಿಯಲ್ಲಿ ಏನು ಚರ್ಚೆಮಾಡಿಕೊಳ್ಳುತ್ತಿದ್ದಿರಿ?” ಎಂದು ಶಿಷ್ಯರನ್ನು ಕೇಳಿದನು.
ಮಾರ್ಕ 9 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019