Text copied!
Bibles in Kannada

ಮಾರ್ಕ 9:2-32 in Kannada

Help us?

ಮಾರ್ಕ 9:2-32 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆರು ದಿನಗಳಾದ ಮೇಲೆ ಯೇಸು ಪೇತ್ರ, ಯಾಕೋಬ, ಯೋಹಾನ ಇವರನ್ನು ಮಾತ್ರ ತನ್ನೊಡನೆ ಕರೆದುಕೊಂಡು ಎತ್ತರವಾದ ಬೆಟ್ಟಕ್ಕೆ ಹೋದನು. ಅಲ್ಲಿ ಅವರ ಕಣ್ಣೆದುರಿಗೇ ಯೇಸುವು ರೂಪಾಂತರಗೊಂಡನು.
3 ಆತನ ವಸ್ತ್ರಗಳು ಅತ್ಯಂತ ಶುಭ್ರವಾಗಿ ಬೆಳ್ಳಗೆ ಹೊಳೆಯಿತು. ಭೂಲೋಕದಲ್ಲಿರುವ ಯಾವ ಅಗಸನಾದರೂ ಅಷ್ಟು ಬೆಳ್ಳಗೆ ಮಾಡಲಾಗದಷ್ಟು ಅದು ಬಿಳುಪಾಗಿತ್ತು.
4 ಇದಲ್ಲದೆ ಎಲೀಯನೂ, ಮೋಶೆಯೂ ಅವರಿಗೆ ಕಾಣಿಸಿಕೊಂಡು ಅವರು ಯೇಸುವಿನ ಸಂಗಡ ಮಾತನಾಡುತ್ತಿದ್ದರು.
5 ಆಗ ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು; ಮೂರು ಗುಡಾರಗಳನ್ನು ಕಟ್ಟುವೆವು; ನಿನಗೊಂದು, ಮೋಶೆಗೊಂದು, ಎಲೀಯನಿಗೊಂದು” ಎಂದು ಹೇಳಿದನು.
6 ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂಬುದೇ ತಿಳಿಯಲಿಲ್ಲ. ಅವರು ಬಹಳವಾಗಿ ಹೆದರಿಕೊಂಡಿದ್ದರು.
7 ಅಷ್ಟರಲ್ಲಿ ಒಂದು ಮೋಡವು ಬಂದು ಅವರ ಮೇಲೆ ಕವಿಯಿತು. ಆ ಮೋಡದೊಳಗಿನಿಂದ, “ಈತನು ನನ್ನ ಪ್ರಿಯ ಕುಮಾರನು; ಈತನ ಮಾತನ್ನು ಕೇಳಿರಿ” ಎಂದು ಧ್ವನಿ ಉಂಟಾಯಿತು.
8 ಕೂಡಲೇ ಅವರು ಸುತ್ತಲೂ ನೋಡಿದಾಗ ತಮ್ಮ ಸಂಗಡ ಯೇಸುವನ್ನೇ ಹೊರತು ಬೇರೆ ಯಾರನ್ನೂ ಕಾಣಲಿಲ್ಲ.
9 ಅವರು ಆ ಬೆಟ್ಟದಿಂದ ಇಳಿದು ಬರುತ್ತಿರುವಾಗ ಆತನು ಅವರಿಗೆ, “ಮನುಷ್ಯಕುಮಾರನು ಸತ್ತು ಪುನರುತ್ಥಾನಹೊಂದುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬೇಡಿರಿ” ಎಂದು ಆಜ್ಞಾಪಿಸಿದನು.
10 ಅವರು ಆ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡರು “ಸತ್ತು ಜೀವಿತನಾಗಿ ಏಳುವುದೆಂದರೇನು” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
11 ಇದಲ್ಲದೆ ಅವರು, “ಎಲೀಯನು ಮೊದಲು ಬರುವುದು ಅಗತ್ಯವೆಂಬುದಾಗಿ ಶಾಸ್ತ್ರಿಗಳು ಯಾಕೆ ಹೇಳುತ್ತಾರೆ?” ಎಂದು ಆತನನ್ನು ಕೇಳಿದರು.
12 ಅದಕ್ಕೆ ಯೇಸು ಅವರಿಗೆ, “ಎಲೀಯನು ಮೊದಲು ಬಂದು ಎಲ್ಲವನ್ನು ಪುನರ್ಸ್ಥಾಪಿಸುವುದು ನಿಜ. ಮತ್ತು ಮನುಷ್ಯಕುಮಾರನ ವಿಷಯವಾಗಿ; ಅವನು ಬಹು ಕಷ್ಟಗಳನ್ನನುಭವಿಸಿ ತಿರಸ್ಕರಿಸಲ್ಪಡಬೇಕೆಂಬುದಾಗಿ ಬರೆದಿದೆ, ಇದು ಹೇಗೆ?
13 ಆದರೆ ನಾನು ನಿಮಗೆ ಹೇಳುವುದೇನಂದರೆ; ಎಲೀಯನು ಬಂದನು ಮತ್ತು ಆತನ ವಿಷಯವಾಗಿ ಬರೆದಿರುವ ಪ್ರಕಾರ ಜನರು ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಮಾಡಿದರು” ಅಂದನು.
14 ತರುವಾಯ ಅವರು ಉಳಿದ ಶಿಷ್ಯರ ಬಳಿಗೆ ಬಂದು ಅವರ ಸುತ್ತಲು ಜನರ ದೊಡ್ಡ ಗುಂಪು ಇರುವುದನ್ನೂ ಅವರ ಸಂಗಡ ಶಾಸ್ತ್ರಿಗಳು ತರ್ಕಮಾಡುವುದನ್ನೂ ಕಂಡರು.
15 ಕೂಡಲೆ ಆ ಗುಂಪಿನವರೆಲ್ಲರು ಯೇಸುವನ್ನು ಕಂಡು ಬಹು ಆಶ್ಚರ್ಯಪಟ್ಟು ಆತನ ಬಳಿಗೆ ಓಡಿ ಬಂದು ಆತನನ್ನು ವಂದಿಸಿದರು.
16 ಆತನು ಅವರಿಗೆ, “ಇವರ ಸಂಗಡ ಏನು ವಾದಮಾಡುತ್ತೀರಿ?” ಎಂದು ಕೇಳಿದನು.
17 ಅದಕ್ಕೆ ಆ ಗುಂಪಿನಲ್ಲಿ ಒಬ್ಬನು, “ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆನು; ಅವನಿಗೊಂದು ದೆವ್ವ ಹಿಡಿದದೆ ಅದು ಅವನನ್ನು ಮೂಗನನ್ನಾಗಿಸಿದೆ.
18 ಅದು ಎಲ್ಲಿ ಅವನ ಮೇಲೆ ಬಂದರೂ ಅವನನ್ನು ನೆಲಕ್ಕೆ ಕೆಡವುತ್ತದೆ; ಆಗ ಅವನು ನೊರೆಸುರಿಸುತ್ತಾನೆ, ಕರಕರನೆ ಹಲ್ಲು ಕಡಿಯುತ್ತಾನೆ ಮತ್ತು ಮರಗಟ್ಟಿದವನಂತೆ ಆಗುತ್ತಾನೆ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರಿಗೆ ಕೇಳಿಕೊಂಡೆನು, ಆದರೆ ಅವರ ಕೈಯಿಂದ ಆಗದೆಹೋಯಿತು” ಎಂದು ಉತ್ತರ ಕೊಟ್ಟನು.
19 ಅದಕ್ಕಾತನು, “ಎಲಾ, ಅಪನಂಬಿಕೆಯುಳ್ಳಂಥ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ! ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ” ಅಂದನು.
20 ಆಗ ಅವರು ಆ ಹುಡುಗನನ್ನು ಯೇಸುವಿನ ಬಳಿಗೆ ತೆಗೆದುಕೊಂಡು ಬಂದರು. ಆತನನ್ನು ಕಂಡಕೂಡಲೆ ಆ ದೆವ್ವವು ಹುಡುಗನನ್ನು ಬಹಳವಾಗಿ ಒದ್ದಾಡಿಸಲು ಅವನು ನೆಲಕ್ಕೆ ಬಿದ್ದು ನೊರೆಸುರಿಸುತ್ತಾ ಹೊರಳಾಡಿದನು.
21 ಯೇಸು ಅವನ ತಂದೆಯನ್ನು, “ಇವನಿಗೆ ಹೀಗಾಗಿ ಎಷ್ಟು ಕಾಲವಾಯಿತು?” ಎಂದು ಕೇಳಿದಾಗ ಅವನು, “ಚಿಕ್ಕಂದಿನಲ್ಲಿಯೇ ಬಂದಿದೆ;
22 ಮತ್ತು ಇವನನ್ನು ಕೊಲ್ಲಬೇಕೆಂದು ಪದೇಪದೇ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಕೆಡವಿತು; ನಿನ್ನ ಕೈಯಲ್ಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕನಿಕರವಿಟ್ಟು ನಮಗೆ ಸಹಾಯಮಾಡು” ಅಂದನು.
23 ಯೇಸು ಅವನಿಗೆ, “‘ನಿನ್ನ ಕೈಯಲ್ಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ’? ನಂಬುವವನಿಗೆ ಎಲ್ಲವೂ ಸಾಧ್ಯ!” ಎಂದು ಹೇಳಿದನು.
24 ಕೂಡಲೆ ಆ ಹುಡುಗನ ತಂದೆಯು, “ನಂಬುತ್ತೇನೆ, ನನಗೆ ಅಪನಂಬಿಕೆ ಇಲ್ಲದಂತೆ ಸಹಾಯಮಾಡು” ಎಂದು ಕೂಗಿ ಹೇಳಿದನು.
25 ಆಗ ಯೇಸು ಜನರ ಗುಂಪು ಓಡಿಬರುವುದನ್ನು ಕಂಡು ಆ ದೆವ್ವವನ್ನು ಗದರಿಸಿ, “ಎಲೈ, ಕಿವುಡಾದ ಮೂಗದೆವ್ವವೇ, ಇವನನ್ನು ಬಿಟ್ಟು ಹೋಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಾನು ನಿನಗೆ ಅಪ್ಪಣೆಕೊಡುತ್ತೇನೆ” ಅಂದನು.
26 ಆಗ ಅದು ಅಬ್ಬರಿಸಿ ಹುಡುಗನನ್ನು ಒದ್ದಾಡಿಸಿ ಬಿಟ್ಟುಹೋಯಿತು. ಆ ಹುಡುಗನು ಸತ್ತಹಾಗೆ ಬಿದ್ದಿದ್ದರಿಂದ ಬಹುಜನರು, “ಸತ್ತುಹೋದನು” ಎಂದು ಅಂದುಕೊಂಡರು.
27 ಆದರೆ ಯೇಸು ಅವನನ್ನು ಕೈಹಿಡಿದು ಎಬ್ಬಿಸಲು ಹುಡುಗನು ಎದ್ದು ನಿಂತನು.
28 ಯೇಸು ಮನೆಗೆ ಬಂದಾಗ ಆತನ ಶಿಷ್ಯರು, “ಅದನ್ನು ಬಿಡಿಸಲಿಕ್ಕೆ ನಮ್ಮಿಂದ ಏಕೆ ಆಗಲಿಲ್ಲವೆಂದು” ಆತನನ್ನು ಏಕಾಂತದಲ್ಲಿ ಕೇಳಿದರು.
29 ಅದಕ್ಕೆ ಆತನು, “ಈ ಬಗೆಯ ದೆವ್ವಗಳು ದೇವರಪ್ರಾರ್ಥನೆಯಿಂದಲೇ ಹೊರತು ಬೇರೆ ಯಾವ ರೀತಿಯಿಂದಲೂ ಬಿಟ್ಟು ಹೋಗುವುದಿಲ್ಲವೆಂದು” ಅವರಿಗೆ ಹೇಳಿದನು.
30 ಅಲ್ಲಿಂದ ಅವರು ಹೊರಟು ಗಲಿಲಾಯವನ್ನು ಹಾದು ಹೋಗುತ್ತಿದ್ದರು. ಆದರೆ ತಾವು ಎಲ್ಲಿಗೆ ಹೋಗುತ್ತಿರುವುದೆಂದು ಯಾರಿಗೂ ಗೊತ್ತಾಗಬಾರದೆಂದು ಆತನು ಬಯಸಿದನು.
31 ಏಕೆಂದರೆ ಆತನು ತನ್ನ ಶಿಷ್ಯರಿಗೆ ಉಪದೇಶಮಾಡುತ್ತಾ, “ಮನುಷ್ಯಕುಮಾರನು ಜನರ ಕೈಗಳಿಗೆ ಒಪ್ಪಿಸಲ್ಪಡುತ್ತಾನೆ; ಅವರು ಆತನನ್ನು ಕೊಲ್ಲುವರು; ಕೊಲ್ಲಲ್ಪಟ್ಟ ತರುವಾಯ ಮೂರು ದಿನದ ಮೇಲೆ ಆತನು ಜೀವಿತನಾಗಿ ಎದ್ದು ಬರುವನೆಂದು” ಹೇಳಿದನು.
32 ಆದರೆ ಅವರು ಆ ಮಾತನ್ನು ಗ್ರಹಿಸಲಿಲ್ಲ ಮತ್ತು ಆತನನ್ನು ಕೇಳುವುದಕ್ಕೆ ಭಯಪಟ್ಟರು.
ಮಾರ್ಕ 9 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019