8 ನಾನು ಬೆಳ್ಳಿಬಂಗಾರಗಳನ್ನೂ ಅರಸರ ಮತ್ತು ಪ್ರಾಂತ್ಯಗಳ ಕಪ್ಪವನ್ನೂ ಸಂಗ್ರಹಿಸಿಕೊಂಡೆನು. ಗಾಯಕ, ಗಾಯಕಿಯರನ್ನು ಮತ್ತು ಮನುಷ್ಯರಿಗೆ ಭೋಗ್ಯರಾದ ಅನೇಕ ಸ್ತ್ರೀಯರನ್ನು ಸಂಪಾದಿಸಿಕೊಂಡೆನು.
9 ಹೀಗೆ ಯೆರೂಸಲೇಮಿನಲ್ಲಿ ಹಿಂದೆ ಇದ್ದವರೆಲ್ಲರಿಗಿಂತಲೂ ಹೆಚ್ಚು ಅಭಿವೃದ್ಧಿಹೊಂದಿ ದೊಡ್ಡವನಾದೆನು. ಇದಲ್ಲದೆ ನನ್ನ ಜ್ಞಾನವು ನನ್ನಲ್ಲಿ ನೆಲೆಯಾಗಿತ್ತು.
10 ನನ್ನ ಕಣ್ಣು ಬಯಸಿದ್ದೆಲ್ಲವನ್ನು, ಅದಕ್ಕೆ ನಾನು ಒಪ್ಪಿಸದೆ ಬಿಡಲಿಲ್ಲ. ಯಾವ ಸಂತೋಷವನ್ನು ಅನುಭವಿಸುವುದಕ್ಕೂ ನನ್ನ ಹೃದಯವನ್ನು ತಡೆಯಲಿಲ್ಲ. ಏಕೆಂದರೆ ನನ್ನ ಹೃದಯವು ನಾನು ನಡಿಸುವ ಕಾರ್ಯಗಳಲ್ಲಿ ಹರ್ಷಿಸುತ್ತಿತ್ತು. ನನ್ನ ಪ್ರಯಾಸದಿಂದ ನನಗೆ ದೊರೆತ ಫಲವು ಇದೆ.
11 ಆಗ ನನ್ನ ಕೈಯಿಂದ ನಡೆಸಿದ ಎಲ್ಲಾ ಕೆಲಸಗಳನ್ನೂ, ನಾನು ಪಟ್ಟ ಪ್ರಯಾಸಗಳನ್ನೂ ಗಮನವಿಟ್ಟು ಪರಿಶೀಲಿಸಿದೆ, ಆಹಾ ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥವಾಯಿತು. ಸೂರ್ಯನ ಕೆಳಗೆ ಯಾವ ಲಾಭವೂ ಕಾಣಲಿಲ್ಲ.
12 ಜ್ಞಾನವನ್ನೂ ನೋಡುವುದಕ್ಕೆ ತಿರುಗಿಕೊಂಡೆನು, ಮರುಳುತನವನ್ನೂ ಬುದ್ಧಿಹೀನತೆಯನ್ನೂ ನೋಡುವುದಕ್ಕೆ ತಿರುಗಿಕೊಂಡೆನು. ರಾಜನ ಪ್ರಯತ್ನವೇ ಹೀಗಾದ ಮೇಲೆ ಮತ್ತೊಬ್ಬನಿಂದ ಏನಾದೀತು? ಆದದ್ದೇ ಆಗುತ್ತದೆ ಎಂದುಕೊಂಡೆ.
13 ಜ್ಞಾನವು ಮೂಢತ್ವಕ್ಕಿಂತ ಶ್ರೇಷ್ಠವೆಂದು ಬೆಳಕು ಕತ್ತಲಿಗಿಂತ ಶ್ರೇಷ್ಠವಾಗಿರುವುದೆಂದು ಗೋಚರವಾಯಿತು.
14 ಜ್ಞಾನಿಯ ಕಣ್ಣು ಅವನ ತಲೆಯಲ್ಲಿರುವುದು ಮೂಢನು ಕತ್ತಲಲ್ಲಿ ನಡೆಯುವನು. ಇವರಿಬ್ಬರಿಗೂ ಒಂದೇ ಗತಿಯೆಂದು ನನಗೆ ಕಂಡು ಬಂದಿತು.
15 ಆಗ ನಾನು ನನ್ನ ಹೃದಯದಲ್ಲಿ, “ಮೂಢನಿಗೆ ಸಂಭವಿಸುವ ಗತಿಯು, ನನಗೂ ಸಂಭವಿಸುವುದು. ನನ್ನ ಹೆಚ್ಚು ಜ್ಞಾನದಿಂದ ಲಾಭವೇನು?” ಇದೂ ವ್ಯರ್ಥವೆಂದು ನನ್ನ ಹೃದಯದಲ್ಲಿ ಅಂದುಕೊಂಡೆನು.
16 ಏಕೆಂದರೆ ಮೂಢನು ಹೇಗೋ ಹಾಗೆಯೇ ಜ್ಞಾನಿಯೂ ಬಹಳ ದಿನಗಳವರೆಗೆ ಮರೆತುಹೋಗುವನು. ಈಗಿನ ಜನರು ಮುಂದಿನ ಕಾಲದೊಳಗಾಗಿಯೇ ಮರೆತುಹೋಗುವರು. ಆಹಾ! ಮೂಢನಂತೆ ಜ್ಞಾನಿಯೂ ಸಾಯುವನು.
17 ಲೋಕ ವ್ಯವಹಾರವು ಕೆಟ್ಟದ್ದೆಂದು ನನಗೆ ಕಂಡುಬಂದದ್ದರಿಂದ ಜೀವವೇ ಅಸಹ್ಯವಾಗಿ ತೋರಿತು. ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥ.
18 ನನ್ನ ಪ್ರಯಾಸದ ಫಲವನ್ನು ಮುಂದಿನವನಿಗೆ ಬಿಟ್ಟುಬಿಡಬೇಕೆಂದು ನಾನು ಲೋಕದಲ್ಲಿ ಪಟ್ಟ ಪ್ರಯಾಸಕ್ಕೆ ಬೇಸರಗೊಂಡೆನು.
19 ಅವನು ಜ್ಞಾನಿಯೋ ಅಥವಾ ಮೂಢನೋ ಯಾರಿಗೆ ಗೊತ್ತು? ಎಂಥವನಾದರೂ ನಾನು ಲೋಕದೊಳಗೆ ಯಾವುದರಲ್ಲಿ ಜ್ಞಾನವನ್ನೂ, ಪ್ರಯಾಸವನ್ನೂ ವೆಚ್ಚಮಾಡಿದ್ದೇನೋ ಅದರ ಮೇಲೆ ದೊರೆತನಮಾಡುವೆನು. ಇದೂ ವ್ಯರ್ಥವೇ.
20 ಹೀಗಿರಲು ನಾನು ಲೋಕದಲ್ಲಿ ಪ್ರಯಾಸಪಟ್ಟ ಕೆಲಸದ ವಿಷಯವಾಗಿ ನಿರಾಶೆಗೊಳಗಾದೆನು.
21 ಒಬ್ಬನು ಜ್ಞಾನದಿಂದಲೂ, ತಿಳಿವಳಿಕೆಯಿಂದಲೂ ತನ್ನ ಕೆಲಸವನ್ನು ನಡೆಸಿ ಸಿದ್ಧಿಗೆ ತಂದ ಮೇಲೆ ಆ ಕೆಲಸದಲ್ಲಿ ಪ್ರಯಾಸಪಡದವನಿಗೆ ಅದರ ಫಲವನ್ನು ಭಾಧ್ಯತೆಯಾಗಿ ಬಿಡಬೇಕಾಯಿತು. ಇದು ಸಹ ವ್ಯರ್ಥವೂ, ಕೇವಲ ಅನ್ಯಾಯವೂ ಆಗಿದೆ.
22 ಲೋಕದಲ್ಲಿ ಮನುಷ್ಯನು ಹೃದಯಪೂರ್ವಕವಾಗಿ ಪಡುವ ಪ್ರಯಾಸದಿಂದ ಅವನಿಗೆ ಸಿಗುವ ಲಾಭವಾದರೂ ಏನು?