Text copied!
Bibles in Kannada

ನ್ಯಾಯ 3:10-26 in Kannada

Help us?

ನ್ಯಾಯ 3:10-26 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಯೆಹೋವನ ಆತ್ಮವು ಅವನ ಮೇಲೆ ಬಂದುದರಿಂದ ಅವನು ಇಸ್ರಾಯೇಲರ ನ್ಯಾಯಸ್ಥಾಪನೆಗೋಸ್ಕರ ಯುದ್ಧಕ್ಕೆ ಹೊರಟನು. ಯೆಹೋವನು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮನನ್ನು ಅವನ ಕೈಗೆ ಒಪ್ಪಿಸಿಕೊಟ್ಟದ್ದರಿಂದ ಅವನು ಅವನನ್ನು ಸಂಪೂರ್ಣವಾಗಿ ಸೋಲಿಸಿಬಿಟ್ಟನು.
11 ದೇಶದಲ್ಲಿ ನಲ್ವತ್ತು ವರ್ಷಗಳ ಕಾಲ ಸಮಾಧಾನವಿತ್ತು. ತರುವಾಯ ಕೆನಜನ ಮಗನಾದ ಒತ್ನೀಯೇಲನು ಮರಣಹೊಂದಿದನು.
12 ಇಸ್ರಾಯೇಲ್ಯರು ಪುನಃ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು; ಆತನು ಅವರ ದ್ರೋಹದ ನಿಮಿತ್ತ ಮೋವಾಬ್ಯರ ಅರಸನಾದ ಎಗ್ಲೋನನನ್ನು ಅವರಿಗೆ ವಿರೋಧವಾಗಿ ಬಲಪಡಿಸಿದನು.
13 ಇವನು ಅಮ್ಮೋನಿಯರನ್ನೂ, ಅಮಾಲೇಕ್ಯರನ್ನೂ ಕೂಡಿಸಿಕೊಂಡು ಹೊರಟು ಬಂದು ಇಸ್ರಾಯೇಲರನ್ನು ಸೋಲಿಸಿ ಖರ್ಜೂರನಗರವನ್ನು ಹಿಡಿದನು.
14 ಇಸ್ರಾಯೇಲರು ಅವನಿಗೆ ಹದಿನೆಂಟು ವರ್ಷ ದಾಸರಾಗಿದ್ದರು.
15 ಅವರು ಯೆಹೋವನಿಗೆ ಮೊರೆಯಿಡಲು ಆತನು ಅವರನ್ನು ರಕ್ಷಿಸುವುದಕ್ಕೋಸ್ಕರ ಬೆನ್ಯಾಮೀನ್ ಕುಲದ ಗೇರನ ಮಗನಾದ ಏಹೂದನನ್ನು ಎಬ್ಬಿಸಿದನು. ಅವನು ಎಡಚನಾಗಿದ್ದನು. ಇಸ್ರಾಯೇಲರು ಅವನ ಮೂಲಕವಾಗಿ ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪ ಕಾಣಿಕೆಯನ್ನು ಕಳುಹಿಸಿದರು.
16 ಅವನು ತನಗೋಸ್ಕರ ಒಂದು ಗುದ್ದುಮೊಳ ಉದ್ದವಾದ ಇಬ್ಬಾಯಿಕತ್ತಿಯನ್ನು ಮಾಡಿ ಅದನ್ನು ಬಟ್ಟೆಗಳ ಒಳಗೆ ಬಲಗಡೆಯ ಸೊಂಟಕ್ಕೆ ಕಟ್ಟಿಕೊಂಡು ಹೋಗಿ
17 ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪ ಕಾಣಿಕೆಯನ್ನು ಒಪ್ಪಿಸಿದನು. ಎಗ್ಲೋನನು ಬಹಳ ದಪ್ಪನಾದ ವ್ಯಕ್ತಿ.
18 ಏಹೂದನು ಕಪ್ಪಕಾಣಿಕೆಯನ್ನು ಒಪ್ಪಿಸಿದ ಮೇಲೆ ಅದನ್ನು ಹೊತ್ತುಕೊಂಡು ಬಂದಿದ್ದ ಆಳುಗಳನ್ನು ಕಳುಹಿಸಿಬಿಟ್ಟು,
19 ತಾನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಿರುಗಿ ಎಗ್ಲೋನನ ಬಳಿಗೆ ಬಂದು, “ಅರಸನೇ, ನಿನಗೆ ತಿಳಿಸತಕ್ಕದ್ದೊಂದು ರಹಸ್ಯವಿದೆ” ಅಂದನು. ಆಗ ಅರಸನು, “ನಿಶ್ಯಬ್ದ” ಅನ್ನಲು ಅವನ ಸೇವಕರೆಲ್ಲರೂ ಹೊರಗೆ ಹೋದರು.
20 ಅರಸನು ತನ್ನ ತಂಪಾದ ಮೇಲಂತಸ್ತಿನ ಕೋಣೆಯಲ್ಲಿ ಒಬ್ಬನೇ ಕುಳಿತುಕೊಂಡಿದ್ದಾಗ ಏಹೂದನು ಅವನ ಬಳಿಗೆ ಹೋಗಿ, “ನಿನಗೆ ಹೇಳಬೇಕಾದದ್ದೊಂದು ದೈವೋಕ್ತಿಯಿದೆ” ಅನ್ನಲು ಅವನು ತನ್ನ ಸಿಂಹಾಸನದಿಂದ ಎದ್ದನು.
21 ಆಗ ಏಹೂದನು ಎಡಗೈ ಚಾಚಿ ಬಲಗಡೆಯ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನು ಹಿರಿದು ಅವನ ಹೊಟ್ಟೆಯಲ್ಲಿ ತಿವಿದನು.
22 ಆ ಕತ್ತಿ ಹಿಡಿಯ ಸಮೇತ ಹೊಟ್ಟೆಯೊಳಗೆ ಹೊಕ್ಕಿತು. ಅವನು ಕತ್ತಿಯನ್ನು ಹೊರಗೆ ತೆಗೆಯದಿದ್ದುದರಿಂದ ಕೊಬ್ಬು ಕತ್ತಿಯನ್ನು ಸುತ್ತಿಕೊಂಡಿತು; ಕೊಬ್ಬು ಬೆನ್ನಿನಿಂದ ಹೊರಗೆ ಬಂದಿತು.
23 ಏಹೂದನು ಪಡಸಾಲೆಗೆ ಬಂದು, ಆ ಮೇಲುಪ್ಪರಿಗೆಯ ಕದವನ್ನು ಮುಚ್ಚಿ ಬೀಗಹಾಕಿ ಹೊರಟು ಹೋದನು.
24 ತರುವಾಯ ಸೇವಕರು ಅಲ್ಲಿ ಬಂದು ಬಾಗಿಲಿಗೆ ಬೀಗಹಾಕಿರುವುದನ್ನು ಕಂಡು, ಅರಸನು ತಂಪಾದ ಕೋಣೆಗೆ ಸೇರಿದ ಪಾಯಖಾನೆಗೆ ಹೋಗಿರಬೇಕು ಅಂದುಕೊಂಡು
25 ತಮಗೆ ಬೇಸರವಾಗುವ ತನಕ ಕಾಯುತ್ತಾ ಇದ್ದರು. ಆದರೂ ಕದಗಳು ತೆರೆಯಲ್ಪಡದೆ ಇರುವುದನ್ನು ನೋಡಿ ಬೀಗದ ಕೈಯನ್ನು ತೆಗೆದುಕೊಂಡು ಬಾಗಿಲನ್ನು ತೆರೆಯಲು, ಇಗೋ, ಅವರ ಒಡೆಯನು ಸತ್ತುಬಿದ್ದಿದ್ದನು.
26 ಅವರು ಅರಸನಿಗಾಗಿ ಕಾಯುತ್ತಿದ್ದ ಸಮಯದಲ್ಲೇ ಏಹೂದನು ತಪ್ಪಿಸಿಕೊಂಡು ವಿಗ್ರಹಗಳಿದ್ದ ಸ್ಥಳದಲ್ಲಿ ಹೊಳೆದಾಟಿ ಸೆಯೀರಾ ಎಂಬಲ್ಲಿಗೆ ಬಂದು,
ನ್ಯಾಯ 3 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019