1 ಕಂದಾ, ನನ್ನ ಜ್ಞಾನೋಪದೇಶವನ್ನು ಆಲಿಸು, ವಿವೇಕದಿಂದ ಕೂಡಿದ ನನ್ನ ಬೋಧನೆಗೆ ಕಿವಿಗೊಡು.
2 ಹೀಗಾದರೆ ನೀನು ವಿವೇಚನೆಯನ್ನು ಹೊಂದಿಕೊಳ್ಳುವಿ, ನಿನ್ನ ತುಟಿಗಳು ತಿಳಿವಳಿಕೆಯನ್ನು ಕಾಪಾಡುವವು.
3 ವೇಶ್ಯಸ್ತ್ರೀಯ ತುಟಿಗಳಲ್ಲಾದರೋ ಜೇನುಗರೆಯುವುದು, ಅವಳ ಮಾತು ಎಣ್ಣೆಗಿಂತಲೂ ನಯವಾಗಿದೆ.
4 ಅವಳು ಕಡೆಯಲ್ಲಿ ವಿಷದಂತೆ ಕಹಿಯೂ, ಇಬ್ಬಾಯಿಕತ್ತಿಯಂತೆ ತೀಕ್ಷ್ಣವೂ ಆಗುವಳು.
5 ಅವಳು ಮರಣದ ಕಡೆಗೆ ನಡೆಯುತ್ತಾ ಇಳಿದು ಹೋಗುವಳು, ಅವಳ ಹೆಜ್ಜೆಗಳು ಪಾತಾಳದ ದಾರಿಯನ್ನು ಹಿಡಿಯುವವು.
6 ಅವಳ ನಡತೆಯು ಚಂಚಲವಾಗಿರುವುದರಿಂದ ಅವಳು ಜೀವದ ಮಾರ್ಗವನ್ನು ವಿವೇಚಿಸಲಾರಳು, ಅದು ಅವಳಿಗೆ ತಿಳಿದೇ ಇಲ್ಲ.
7 ಹೀಗಿರಲು ಮಗನೇ, ನನ್ನ ಕಡೆಗೆ ಕಿವಿಗೊಡು, ನನ್ನ ಮಾತುಗಳಿಂದ ದೂರವಾಗಿರಬೇಡ.
8 ನಿನ್ನ ಮಾರ್ಗವು ಅವಳಿಗೆ ದೂರವಾಗಿರಲಿ ಅವಳ ಮನೆಬಾಗಿಲ ಹತ್ತಿರ ಹೋದೆಯಾ, ಎಚ್ಚರಿಕೆ!
9 ಎಚ್ಚರವಹಿಸಿಕೋ, ನಿನ್ನ ಪುರುಷತ್ವವು ಪರಾಧೀನವಾಗುವುದು, ನಿನ್ನ ಆಯುಷ್ಯವು ಕ್ರೂರರ ವಶವಾಗುವುದು.
10 ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳುವರು, ನೀನು ಅನ್ಯನ ಮನೆಯಲ್ಲಿ ದುಡಿಯುವಿ.
11 ಕಟ್ಟಕಡೆಗೆ ನಿನ್ನ ದೇಹವೆಲ್ಲಾ ಕ್ಷೀಣವಾಗಿ ನೀನು ಅಂಗಲಾಚಿಕೊಂಡು,
12 “ಅಯ್ಯೋ, ನಾನು ಸದುಪದೇಶವನ್ನು ಎಷ್ಟು ದ್ವೇಷಿಸಿದೆ, ನನ್ನ ಹೃದಯವು ಬುದ್ಧಿವಾದವನ್ನು ಎಷ್ಟು ತಾತ್ಸಾರ ಮಾಡಿತು,
13 ನನ್ನ ಬೋಧಕರ ಮಾತನ್ನು ಕೇಳದೆ ಹೋದೆನಲ್ಲಾ, ನನ್ನ ಉಪದೇಶಕರ ಕಡೆಗೆ ಕಿವಿಗೊಡಲಿಲ್ಲವಲ್ಲಾ!
14 ನಾನು ದೇವಜನರ ಸಭೆಯ ನಡುವೆ ಎಲ್ಲಾ ಕೇಡಿಗೂ ಸಿಕ್ಕಿಕೊಳ್ಳುವ ಹಾಗೆ ಆದೆನು” ಎಂದು ಅಂದುಕೊಳ್ಳುವಿ.