Text copied!
Bibles in Kannada

ಕೀರ್ತ 69:13-29 in Kannada

Help us?

ಕೀರ್ತ 69:13-29 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಯೆಹೋವನೇ, ನಾನಾದರೋ ನಿನಗೆ ಮೊರೆಯಿಟ್ಟಿದ್ದೇನೆ; ಇದು ನಿನ್ನ ಪ್ರಸನ್ನತೆಗೆ ಸಕಾಲ. ಪ್ರೇಮಪೂರ್ಣನಾದ ದೇವನೇ, ಸತ್ಯವಂತನಾದ ರಕ್ಷಕನೇ, ಸದುತ್ತರವನ್ನು ದಯಪಾಲಿಸು.
14 ನಾನು ಕೆಸರಿನಲ್ಲಿ ಮುಳುಗಿಹೋಗದಂತೆ ಮೇಲೆತ್ತು; ವೈರಿಗಳ ಕೈಯೊಳಗಿಂದ ಬಿಡಿಸು; ಮಹಾಜಲರಾಶಿಯಿಂದ ಎಳೆದುಕೋ.
15 ಪ್ರವಾಹವು ನನ್ನನ್ನು ಬಡಕೊಂಡು ಹೋಗದಿರಲಿ; ಅಗಾಧವು ನನ್ನನ್ನು ಒಳಗೆ ಎಳೆದುಕೊಳ್ಳದಿರಲಿ; ಪಾತಾಳವು ನನ್ನನ್ನು ನುಂಗದಿರಲಿ.
16 ಯೆಹೋವನೇ, ನನ್ನ ಮೊರೆಯನ್ನು ಲಾಲಿಸು; ನಿನ್ನ ಕೃಪೆಯು ಶುಭಕರವಾಗಿದೆಯಲ್ಲಾ. ಕರುಣಾನಿಧಿಯೇ, ನನ್ನನ್ನು ಕಟಾಕ್ಷಿಸು.
17 ನಿನ್ನ ದಾಸನಿಗೆ ವಿಮುಖನಾಗಬೇಡ, ಇಕ್ಕಟ್ಟಿನಲ್ಲಿದ್ದೇನೆ, ತಡಮಾಡದೆ ಸಹಾಯಮಾಡು.
18 ಸಮೀಪಿಸಿ ನನ್ನ ಪ್ರಾಣವನ್ನು ವಿಮೋಚಿಸು. ಶತ್ರು ನಿಮಿತ್ತವಾಗಿ ನನ್ನನ್ನು ರಕ್ಷಿಸು.
19 ನನಗುಂಟಾದ ನಿಂದೆ, ಲಜ್ಜೆ, ಅಪಮಾನ ಇವು ನಿನಗೇ ಗೊತ್ತು; ನನ್ನ ವಿರೋಧಿಗಳು ನಿನಗೆ ಮರೆಯಾಗಿಲ್ಲವಲ್ಲಾ.
20 ನಿಂದೆಯಿಂದ ನಿರಾಶೆಗೊಂಡು ಕುಂದಿಹೋಗಿದ್ದೇನೆ. ಕರುಣಾಳುಗಳನ್ನು ನಿರೀಕ್ಷಿಸಿದೆ; ದೊರೆಯಲಿಲ್ಲ. ಸಂತೈಸುವವರನ್ನು ಹಾರೈಸಿದೆ; ಸಿಕ್ಕಲಿಲ್ಲ.
21 ನನಗೆ ಉಣ್ಣುವುದಕ್ಕೆ ಕಹಿಯಾದ ವಸ್ತುವನ್ನೂ, ಬಾಯಾರಿದಾಗ, ಹುಳಿ ದ್ರಾಕ್ಷಾರಸವನ್ನೂ ಕೊಟ್ಟರು.
22 ಅವರ ಸಂಪತ್ತು ಅವರಿಗೆ ಉರುಲಾಗಲಿ; ನಿಶ್ಚಿಂತರಾಗಿರುವಾಗಲೇ ಅದು ಅವರಿಗೆ ಬೋನಾಗಲಿ.
23 ಅವರ ಕಣ್ಣು ಮೊಬ್ಬಾಗಿ ಕಾಣದೆ ಹೋಗಲಿ; ಅವರ ನಡುವು ಯಾವಾಗಲೂ ನಡಗುತ್ತಿರಲಿ.
24 ನಿನ್ನ ರೌದ್ರವನ್ನು ಅವರ ಮೇಲೆ ಸುರಿದುಬಿಡು; ನಿನ್ನ ಕೋಪಾಗ್ನಿಯು ಅವರನ್ನು ದಹಿಸಲಿ.
25 ಅವರ ಪಾಳೆಯವು ಹಾಳುಬೀಳಲಿ; ಅವರ ನಿವಾಸಗಳು ಜನಶೂನ್ಯವಾಗಲಿ.
26 ನೀನು ಹೊಡೆದವನನ್ನು ಅವರು ಹಿಂಸಿಸುತ್ತಾರೆ; ನೀನು ಗಾಯಮಾಡಿದವರ ನೋವು ಅವರ ಪರಿಹಾಸ್ಯಕ್ಕೆ ಕಾರಣವಾಗಿದೆ.
27 ಅವರ ಅಪರಾಧಗಳು ಒಂದೊಂದಾಗಿ ಹೆಚ್ಚುತ್ತಾ ಬರಲಿ. ನಿನ್ನ ನೀತಿಯಲ್ಲಿ ಅವರಿಗೆ ಪಾಲುಕೊಡಬೇಡ.
28 ಜೀವಿತರ ಪಟ್ಟಿಯಿಂದ ಅವರ ಹೆಸರು ತೆಗೆದು ಹಾಕು, ಸದ್ಭಕ್ತರ ಹೆಸರಿನ ಸಂಗಡ ಅವರ ಹೆಸರು ಬರೆಯಲ್ಪಡದಿರಲಿ.
29 ದೇವರೇ, ನೊಂದು ಕುಗ್ಗಿದವನಾದ ನನ್ನನ್ನಾದರೋ, ನಿನ್ನ ರಕ್ಷಣೆಯು ಭದ್ರಸ್ಥಳದಲ್ಲಿರಿಸುವುದು.
ಕೀರ್ತ 69 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019