7 ಆತನು ಪರಾಕ್ರಮದಿಂದ ಸದಾಕಾಲವೂ ಆಳುತ್ತಾನೆ; ಜನಾಂಗಗಳನ್ನು ನೋಡಿಕೊಳ್ಳುತ್ತಾನೆ. ದಂಗೆಕೋರರು ಏಳದಿರಲಿ. ಸೆಲಾ
8 ಜನಾಂಗಗಳೇ, ನಮ್ಮ ದೇವರನ್ನು ವಂದಿಸಿರಿ; ಆತನನ್ನು ಸ್ತುತಿಸುವ ಧ್ವನಿ ಕೇಳಿಸಲಿ.
9 ಆತನು ನಮ್ಮನ್ನು ಜೀವದಿಂದುಳಿಸಿ, ನಮ್ಮ ಕಾಲುಗಳನ್ನು ಜಾರದಂತೆ ಕಾಪಾಡಿದನು.
10 ದೇವರೇ, ನಮ್ಮನ್ನು ಶೋಧಿಸಿದಿ; ಬೆಳ್ಳಿಯನ್ನು ಪುಟಕ್ಕೆ ಹಾಕುವ ಮೇರೆಗೆ ಶುದ್ಧಿಮಾಡಿದಿ.
11 ನಮ್ಮನ್ನು ಬಲೆಯಲ್ಲಿ ಸಿಕ್ಕಿಸಿದಿ; ನಮ್ಮ ಸೊಂಟಕ್ಕೆ ಭಾರವಾದ ಹೊರೆಯನ್ನು ಕಟ್ಟಿದಿ;
12 ಮನುಷ್ಯರು ನಮ್ಮ ತಲೆಗಳ ಮೇಲೆಯೇ, ತಮ್ಮ ರಥಗಳನ್ನು ಹಾಯಿಸುವಂತೆ ಮಾಡಿದಿ. ನಾವು ಬೆಂಕಿಯನ್ನೂ, ನೀರನ್ನೂ ದಾಟಬೇಕಾಯಿತು; ಆದರೂ ಸುಸ್ಥಿತಿಗೆ ನಮ್ಮನ್ನು ನಡೆಸಿದಿ.
13 ನಾನು ನಿನ್ನ ಆಲಯಕ್ಕೆ ಬಂದು ಸರ್ವಾಂಗಹೋಮಗಳನ್ನು ಸಮರ್ಪಿಸುವೆನು.
14 ಇಕ್ಕಟ್ಟಿನ ವೇಳೆಯಲ್ಲಿ ನನ್ನ ತುಟಿಗಳು ಉಚ್ಚರಿಸಿದ ಬಾಯಿಂದ ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆನು.
15 ನಿನಗೆ ಟಗರು ಮುಂತಾದ ಪುಷ್ಟಪಶುಗಳನ್ನು ಯಜ್ಞರೂಪವಾಗಿ ಸಮರ್ಪಿಸಿ, ಸುವಾಸನೆಯನ್ನು ಉಂಟುಮಾಡುವೆನು; ಯಜ್ಞಕ್ಕಾಗಿ ಹೋತ ಮತ್ತು ಹೋರಿಗಳನ್ನು ಅರ್ಪಿಸುವೆನು. ಸೆಲಾ
16 ಎಲ್ಲಾ ದೇವಭಕ್ತರೇ, ಬಂದು ಕೇಳಿರಿ; ಆತನು ನನಗಾಗಿ ಮಾಡಿದ್ದೆಲ್ಲವನ್ನು ನಿಮಗೆ ತಿಳಿಸುವೆನು.
17 ನನ್ನ ಮೊರೆಯೊಡನೆ ಕೃತಜ್ಞತಾಸ್ತುತಿಯೂ ನನ್ನ ನಾಲಿಗೆಯ ಮೇಲಿತ್ತು.