11 ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.
12 ದುಷ್ಟನು ನೀತಿವಂತನಿಗೆ ವಿರುದ್ಧವಾಗಿ ಆಲೋಚಿಸುತ್ತಾನೆ; ಅವನನ್ನು ನೋಡಿ ಹಲ್ಲುಕಡಿಯುತ್ತಾನೆ.
13 ಆದರೆ ಕರ್ತನು ಅವನಿಗೆ ಶಿಕ್ಷಾಕಾಲ ಬರುತ್ತದೆಂದು ನಗುತ್ತಾನೆ.
14 ದುಷ್ಟರು ದೀನದರಿದ್ರರನ್ನು ಕಡಿದುಬಿಡಬೇಕೆಂದು ಕತ್ತಿಯನ್ನು ಹಿರಿದಿದ್ದಾರೆ; ಯಥಾರ್ಥರನ್ನು ಕೊಂದು ಹಾಕಬೇಕೆಂದು ಬಿಲ್ಲನ್ನು ಎತ್ತಿದ್ದಾರೆ.
15 ಆದರೆ ಅವರ ಕತ್ತಿ ಅವರ ಎದೆಯನ್ನೇ ಇರಿದುಬಿಡುವುದು; ಅವರ ಬಿಲ್ಲುಗಳು ಸಿಡಿದು ಮುರಿದುಹೋಗುವವು;
16 ದುಷ್ಟರ ಮಹಾಸಮೃದ್ಧಿಗಿಂತಲೂ ನೀತಿವಂತನ ಬಡತನವೇ ಲೇಸು.
17 ದುಷ್ಟರ ತೋಳುಗಳು ಮುರಿದುಹೋಗುವವು; ನೀತಿವಂತರನ್ನು ಯೆಹೋವನೇ ಉದ್ಧರಿಸುವನು.
18 ಯೆಹೋವನು ನಿರ್ದೋಷಿಗಳ ಜೀವಮಾನವನ್ನು ಲಕ್ಷಿಸುತ್ತಾನೆ; ಅವರ ಸ್ವತ್ತು ಶಾಶ್ವತವಾಗಿ ನಿಲ್ಲುವುದು.
19 ಅವರಿಗೆ ವಿಪತ್ಕಾಲದಲ್ಲಿಯೂ ಅಪಮಾನವಾಗುವುದಿಲ್ಲ; ಬರಗಾಲದಲ್ಲಿಯೂ ಅವರಿಗೆ ಕೊರತೆಯಿರುವುದಿಲ್ಲ.
20 ದುಷ್ಟರೋ ನಾಶವಾಗಿ ಹೋಗುವರು; ಯೆಹೋವನ ವೈರಿಗಳು ಹುಲ್ಲುಗಾವಲುಗಳ ಸೊಗಸಿನಂತಿದ್ದು ಮಾಯವಾಗುವರು. ಅವರು ಹಬೆಯಂತೆ ತೋರಿ ಅಡಗಿಹೋಗುವರು.
21 ದುಷ್ಟನು ಸಾಲಮಾಡಿಕೊಂಡು ತೀರಿಸಲಾರದೆ ಹೋಗುವನು; ನೀತಿವಂತನು ಪರೋಪಕಾರಿಯಾಗಿ ಧರ್ಮಕೊಡುವನು.
22 ಯೆಹೋವನ ಆಶೀರ್ವಾದವು ಯಾರಿಗಿರುವುದೋ ಅವರು ದೇಶವನ್ನು ಅನುಭವಿಸುವರು; ಆತನ ಶಾಪವು ಯಾರಿಗಿರುವುದೋ ಅವರು ತೆಗೆದುಹಾಕಲ್ಪಡುವರು.
23 ಸತ್ಪುರುಷನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ, ಆತನು ಅವನ ಪ್ರವರ್ತನೆಯನ್ನು ಮೆಚ್ಚುತ್ತಾನೆ.
24 ಅವನು ಕೆಳಗೆ ಬಿದ್ದರೂ ಏಳದೆ ಹೋಗುವುದಿಲ್ಲ; ಯೆಹೋವನು ಅವನನ್ನು ಕೈಹಿಡಿದು ಉದ್ಧಾರ ಮಾಡುವನು.
25 ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವುದನ್ನಾಗಲಿ, ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವುದನ್ನಾಗಲಿ ನೋಡಲಿಲ್ಲ.
26 ಅವನು ಯಾವಾಗಲೂ ಧರ್ಮಿಷ್ಠನಾಗಿ ಹಣ ಸಹಾಯವನ್ನು ಮಾಡುತ್ತಾನೆ; ಅವನ ಸಂತತಿಯವರು ಆಶೀರ್ವಾದ ಹೊಂದುವರು.
27 ಕೆಟ್ಟದ್ದಕ್ಕೆ ಹೋಗದೆ ಒಳ್ಳೆಯದನ್ನೇ ಮಾಡು; ಆಗ ನೀನು ಯಾವಾಗಲೂ ದೇಶದಲ್ಲಿ ವಾಸವಾಗಿರುವಿ.
28 ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು. ದುಷ್ಟರ ಸಂತತಿ ತೆಗೆದುಹಾಕಲ್ಪಡುವುದು.
29 ನೀತಿವಂತರೋ ದೇಶವನ್ನು ಅನುಭವಿಸುವವರಾಗಿ, ಅದರಲ್ಲಿ ಶಾಶ್ವತವಾಗಿ ವಾಸಿಸುವರು.
30 ನೀತಿವಂತನ ಬಾಯಿಯು ಸುಜ್ಞಾನವನ್ನು ನುಡಿಯುತ್ತದೆ, ಅವನ ನಾಲಿಗೆ ನ್ಯಾಯವನ್ನೇ ಹೇಳುತ್ತದೆ.
31 ದೇವರ ಧರ್ಮೋಪದೇಶವು ಅವನ ಹೃದಯದಲ್ಲಿರುವುದು; ಅವನು ಜಾರುವುದೇ ಇಲ್ಲ.
32 ದುಷ್ಟನು ಹೊಂಚುಹಾಕಿ ನೀತಿವಂತನನ್ನು ಕೊಲ್ಲಬೇಕೆಂದು ಸಮಯನೋಡುತ್ತಾನೆ.
33 ಆದರೆ ಯೆಹೋವನು ಅವನನ್ನು ಅವರ ಕೈಗೆ ಸಿಕ್ಕಗೊಡಿಸುವುದಿಲ್ಲ; ಅವನನ್ನು ನ್ಯಾಯವಿಚಾರಣೆಯಲ್ಲಿ ಅಪರಾಧಿಯೆಂದು ಎಣಿಸುವುದಿಲ್ಲ.
34 ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವುದನ್ನು ನೀನು ನೋಡುವಿ.
35 ದುಷ್ಟನು ಭೀಕರನಾಗಿ ಸ್ವಸ್ಥಳದಲ್ಲಿ ಹಸಿರಾಗಿ ಬೆಳೆದ ಮರದಂತೆ ವಿಸ್ತರಿಸಿಕೊಂಡಿರುವುದನ್ನು ನೋಡಿದ್ದೆನು.
36 ತರುವಾಯ ನಾನು ಆ ದಾರಿಯಲ್ಲಿ ಹೋಗಿ ನೋಡಲಾಗಿ, ಅವನು ಇಲ್ಲದೆ ಹೋಗಿದ್ದನು, ಅವನನ್ನು ಹುಡುಕಿದರೂ ಸಿಕ್ಕಲಿಲ್ಲ.
37 ಒಳ್ಳೇ ನಡತೆಯುಳ್ಳವನನ್ನು ನೋಡು, ಯಥಾರ್ಥನನ್ನು ಲಕ್ಷಿಸು; ಶಾಂತನಿಗೆ ಸಂತಾನವೃದ್ಧಿ ಆಗುವುದು.