70 ಅವರ ಹೃದಯದಲ್ಲಿ ಸತ್ಯವಿಲ್ಲ, ನಾನಾದರೋ ನಿನ್ನ ಧರ್ಮಶಾಸ್ತ್ರದಲ್ಲಿ ಉಲ್ಲಾಸಪಡುತ್ತೇನೆ.
71 ಕಷ್ಟಾನುಭವವು ಹಿತಕರವಾಯಿತು, ಅದುದರಿಂದಲೇ ನಿನ್ನ ನಿಬಂಧನೆಗಳನ್ನು ಕಲಿತೆನು.
72 ನೀನು ಕೊಟ್ಟ ಧರ್ಮಶಾಸ್ತ್ರವು, ಸಾವಿರಾರು ಚಿನ್ನ, ಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯವಾಗಿದೆ.
73 ಯೋದ್. ನಿನ್ನ ಕೈಗಳು ನನ್ನನ್ನು ರೂಪಿಸಿ ನಿಲ್ಲಿಸಿದವು, ನಿನ್ನ ಆಜ್ಞೆಗಳನ್ನು ಕಲಿಯುವುದಕ್ಕೆ ನನಗೆ ಬುದ್ಧಿಯನ್ನು ಕೊಡು.
74 ನಿನ್ನಲ್ಲಿ ಭಯಭಕ್ತಿಯುಳ್ಳವರು ನನ್ನನ್ನು ನೋಡಿ ಸಂತೋಷಿಸಲಿ, ನಾನು ನಿನ್ನ ವಾಕ್ಯವನ್ನೇ ನಿರೀಕ್ಷಿಸಿಕೊಂಡಿದ್ದೇನಲ್ಲಾ.
75 ಯೆಹೋವನೇ, ನಿನ್ನ ವಿಧಿಗಳು ನೀತಿಯುಳ್ಳವುಗಳಾಗಿವೆ ಎಂದೂ, ನೀನು ನಂಬಿಗಸ್ತಿಕೆಯಿಂದಲೇ ನನ್ನನ್ನು ಕುಗ್ಗಿಸಿದ್ದೀ ಎಂದೂ ತಿಳಿದುಕೊಂಡಿದ್ದೇನೆ.
76 ನಿನ್ನ ಸೇವಕನಿಗೆ ನುಡಿದ ಪ್ರಕಾರ, ನನ್ನ ಸಮಾಧಾನಕ್ಕೋಸ್ಕರ ಕೃಪೆಯನ್ನು ದಯಪಾಲಿಸು.
77 ನಾನು ಬದುಕುವಂತೆ ನಿನ್ನ ಕರುಣೆಯು ನನಗೆ ದೊರೆಯಲಿ, ನಿನ್ನ ಧರ್ಮಶಾಸ್ತ್ರವೇ ನನ್ನ ಆನಂದವಾಗಿದೆ.
78 ಗರ್ವಿಷ್ಠರು ಮಾನಭಂಗ ಹೊಂದಲಿ, ಅವರು ಮೋಸದಿಂದ ನನಗೆ ಕೇಡು ಮಾಡಿದ್ದಾರೆ. ನಾನಾದರೋ ನಿನ್ನ ನಿಯಮಗಳನ್ನು ಧ್ಯಾನಿಸುತ್ತಿರುವೆನು.
79 ನಿನ್ನಲ್ಲಿ ಭಯಭಕ್ತಿಯುಳ್ಳವರು ನನ್ನ ಕಡೆಗೆ ತಿರುಗಿಕೊಂಡು, ನಿನ್ನ ಕಟ್ಟಳೆಗಳನ್ನು ಗ್ರಹಿಸಿಕೊಳ್ಳಲಿ.
80 ನನ್ನ ಮನಸ್ಸು ನಿನ್ನ ಕಟ್ಟಳೆಗಳಲ್ಲಿ ಆಸಕ್ತವಾಗಲಿ, ಆಗ ನನ್ನ ಆಶಾಭಂಗಕ್ಕೆ ಕಾರಣವಿರುವುದಿಲ್ಲ.
81 ಕಾಫ್. ನಿನ್ನ ರಕ್ಷಣೆಯ ಬಯಕೆಯಿಂದಲೇ ನನ್ನ ಮನವು ಬಲಗುಂದಿತು, ನಾನು ನಿನ್ನ ವಾಕ್ಯದಲ್ಲೇ ನಿರೀಕ್ಷೆಯುಳ್ಳವನಾಗಿದ್ದೇನೆ.
82 ನಿನ್ನ ನುಡಿಯನ್ನು ನೆರವೇರಿಸಿ ಯಾವಾಗ ನನ್ನನ್ನು ಸಂತೈಸುವಿ? ಎಂಬುವುದಕ್ಕೋಸ್ಕರವೇ ನನ್ನ ದೃಷ್ಟಿಯು ಮಂದವಾಯಿತು.
83 ಹೊಗೆಯಲ್ಲಿ ನೇತು ಹಾಕಿರುವ ಬುದ್ದಲಿಯಂತಿದ್ದೇನೆ, ಆದರೂ ನಿನ್ನ ನಿಬಂಧನೆಗಳನ್ನು ಮರೆಯಲಿಲ್ಲ.
84 ನಿನ್ನ ಸೇವಕನ ದಿನಗಳು ಬಹುಸ್ವಲ್ಪವಲ್ಲಾ! ನನ್ನನ್ನು ಬಾಧಿಸುವವರಿಗೆ ಶಿಕ್ಷೆ ವಿಧಿಸುವುದು ಯಾವಾಗ?
85 ನಿನ್ನ ಧರ್ಮಶಾಸ್ತ್ರವನ್ನು ಅನುಸರಿಸದ ಗರ್ವಿಷ್ಠರು ನನಗಾಗಿ ಗುಂಡಿಗಳನ್ನು ತೋಡಿದ್ದಾರೆ.
86 ನಿನ್ನ ಆಜ್ಞೆಗಳೆಲ್ಲಾ ಸ್ಥಿರವಾಗಿವೆ, ಅವರು ಮೋಸದಿಂದ ಹಿಂಸಿಸುತ್ತಾರೆ, ನನಗೆ ಸಹಾಯಮಾಡು.
87 ನನ್ನನ್ನು ಭೂಮಿಯಿಂದ ತೆಗೆದೇಬಿಟ್ಟಿದ್ದರು, ಆದರೆ ನಾನು ನಿನ್ನ ನಿಯಮಗಳನ್ನು ಬಿಡಲೇ ಇಲ್ಲ.
88 ನಿನ್ನ ಕೃಪೆಗೆ ಅನುಸಾರವಾಗಿ ನನ್ನನ್ನು ಕಾಪಾಡು, ಆಗ ನೀನು ಆಜ್ಞಾಪಿಸಿದ ಕಟ್ಟಳೆಯನ್ನು ಕೈಕೊಳ್ಳುವೆನು.
89 ಲಾಮೆದ್. ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ.
90 ನಿನ್ನ ಸತ್ಯವು ತಲತಲಾಂತರಕ್ಕೂ ಇರುವುದು. ನೀನು ಭೂಮಿಯನ್ನು ಸ್ಥಾಪಿಸಿರುತ್ತಿ, ಅದು ಕದಲುವುದಿಲ್ಲ.
91 ನಿನ್ನ ವಿಧಿಗಳಿಗನುಸಾರವಾಗಿ ಅವು ಇಂದಿನವರೆಗೂ, ಸ್ಥಿರವಾಗಿ ನಿಂತಿರುತ್ತವೆ. ಏಕೆಂದರೆ ಸರ್ವವಸ್ತುಗಳೂ ನಿನ್ನ ಸೇವೆ ಮಾಡುತ್ತವೆ.
92 ನಿನ್ನ ಧರ್ಮಶಾಸ್ತ್ರವು ನನಗೆ ಆನಂದಕರವಾಗದಿದ್ದರೆ, ನನಗೊದಗಿದ ಆಪತ್ತಿನಲ್ಲಿ ಹಾಳಾಗಿ ಹೋಗುತ್ತಿದ್ದೆನು.
93 ನಾನು ನಿನ್ನ ನಿಯಮಗಳನ್ನು ಎಂದಿಗೂ ಮರೆಯುವುದಿಲ್ಲ, ಅವುಗಳಿಂದಲೇ ನನ್ನನ್ನು ಬದುಕಿಸಿದ್ದಿ.
94 ನಾನು ನಿನ್ನವನು, ರಕ್ಷಿಸು, ನಿನ್ನ ನಿಯಮಗಳಲ್ಲಿ ಆಸಕ್ತನಾಗಿದ್ದೇನಲ್ಲಾ.
95 ದುಷ್ಟರು ನನ್ನನ್ನು ಸಂಹರಿಸಬೇಕೆಂದು ಹೊಂಚಿ ನೋಡುತ್ತಾರೆ, ನಾನು ನಿನ್ನ ಕಟ್ಟಳೆಗಳನ್ನೇ ಲಕ್ಷಿಸಿಕೊಂಡಿರುವೆನು.
96 ಎಲ್ಲಾ ಸಂಪೂರ್ಣತೆಗೂ ಮೇರೆಯುಂಟೆಂದು ಬಲ್ಲೆನು, ಆದರೆ ನಿನ್ನ ಆಜ್ಞಾಶಾಸನವು ಅಪರಿಮಿತವಾದದ್ದು.
97 ಮೆಮ್. ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ, ದಿನವೆಲ್ಲಾ ಅದೇ ನನ್ನ ಧ್ಯಾನ.
98 ನಿನ್ನ ಆಜ್ಞೆಗಳ ಮೂಲಕ ನನ್ನ ವೈರಿಗಳಿಗಿಂತ ಬುದ್ಧಿವಂತನಾಗಿದ್ದೇನೆ, ಸದಾಕಾಲವೂ ಅವೇ ನನಗಿವೆ.
99 ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವುದರಿಂದ, ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100 ನಿನ್ನ ನಿಯಮಗಳನ್ನು ಕೈಗೊಂಡಿರುವುದರಿಂದ, ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101 ನಿನ್ನ ವಾಕ್ಯವನ್ನೇ ಅನುಸರಿಸಬೇಕೆಂದು, ನನ್ನ ಕಾಲುಗಳನ್ನು ಯಾವ ಕೆಟ್ಟ ದಾರಿಗೂ ಹೋಗದಂತೆ ಕಾದಿದ್ದೇನೆ.
102 ನಾನು ನಿನ್ನ ವಿಧಿಗಳಿಂದ ಸ್ವಲ್ಪವೂ ತಪ್ಪಿಹೋಗಲಿಲ್ಲ, ಏಕೆಂದರೆ ನೀನು ನನಗೆ ಬೋಧಿಸಿದ್ದೀ.
103 ನಿನ್ನ ನುಡಿಗಳು ನನ್ನ ನಾಲಿಗೆಗೆ ಎಷ್ಟೋ ರುಚಿಯಾಗಿವೆ, ಅವು ನನ್ನ ಬಾಯಿಗೆ ಜೇನು ತುಪ್ಪಕ್ಕಿಂತಲೂ ಸಿಹಿಯಾಗಿವೆ.
104 ನಿನ್ನ ನಿಯಮಗಳ ಮೂಲಕ ವಿವೇಕಿಯಾದೆನು, ಸುಳ್ಳು ಮಾರ್ಗವನ್ನೆಲ್ಲಾ ನಾನು ದ್ವೇಷಿಸುತ್ತೇನೆ.
105 ನೂನ್. ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ, ನನ್ನ ದಾರಿಗೆ ಬೆಳಕೂ ಆಗಿದೆ.
106 ನಿನ್ನ ನೀತಿವಿಧಿಗಳನ್ನು ಅನುಸರಿಸುವೆನೆಂದು ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು.
107 ನಾನು ಬಹಳವಾಗಿ ಕುಗ್ಗಿಹೋಗಿದ್ದೇನೆ, ಯೆಹೋವನೇ, ನಿನ್ನ ವಾಕ್ಯಾನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
108 ಯೆಹೋವನೇ, ನನ್ನ ಮನಃಪೂರ್ವಕವಾದ ಸ್ತುತಿ ಸಮರ್ಪಣೆಗಳನ್ನು, ದಯವಿಟ್ಟು ಅಂಗೀಕರಿಸು, ನಿನ್ನ ವಿಧಿಗಳನ್ನು ನನಗೆ ಕಲಿಸು.
109 ನನ್ನ ಜೀವವು ಅಪಾಯದಲ್ಲಿದ್ದೆ, ಆದರೂ ನಿನ್ನ ಧರ್ಮಶಾಸ್ತ್ರವನ್ನು ಮರೆಯುವುದಿಲ್ಲ.
110 ದುಷ್ಟರು ಬಲೆಯೊಡ್ಡಿದ್ದಾರೆ, ನಾನು ನಿನ್ನ ನಿಯಮಗಳಿಂದ ತಪ್ಪಿಹೋಗುವುದಿಲ್ಲ.
111 ನಿನ್ನ ಕಟ್ಟಳೆಗಳನ್ನು ನನ್ನ ನಿತ್ಯಸ್ವತ್ತಾಗಿ ಆರಿಸಿಕೊಂಡಿದ್ದೇನೆ, ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿವೆ.
112 ಕಡೆಯವರೆಗು ಯಾವಾಗಲೂ ನಿನ್ನ ನಿಬಂಧನೆಗಳನ್ನು ಕೈಗೊಳ್ಳುವುದಕ್ಕೆ ಮನಸ್ಸುಮಾಡಿದ್ದೇನೆ.
113 ಸಾಮೆಕ್. ಚಂಚಲ ಮನಸ್ಸುಳ್ಳವರನ್ನು ದ್ವೇಷಿಸುತ್ತೇನೆ, ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುತ್ತೇನೆ.
114 ನನ್ನ ಆಶ್ರಯವೂ, ಗುರಾಣಿಯೂ ನೀನೇ, ನಿನ್ನ ವಾಕ್ಯವನ್ನೇ ನಿರೀಕ್ಷಿಸಿಕೊಂಡಿದ್ದೇನೆ.
115 ದುಷ್ಟರೇ, ತೊಲಗಿರಿ, ನನ್ನ ದೇವರ ಆಜ್ಞೆಗಳನ್ನು ಕೈಗೊಳ್ಳುವೆನು.
116 ನಿನ್ನ ನುಡಿಯ ಪ್ರಕಾರ ನನ್ನನ್ನು ಉದ್ಧಾರಮಾಡು, ಆಗ ಬದುಕುವೆನು. ನಾನು ನಿರೀಕ್ಷೆಯುಳ್ಳವನಾಗಿದ್ದೇನೆ, ನನ್ನನ್ನು ನಿರಾಶೆಪಡಿಸಬೇಡ.
117 ನೀನು ನನಗೆ ಆಧಾರವಾಗಿರು, ಆಗ ನಾನು ಸುರಕ್ಷಿತನಾಗಿ ಸದಾ ನಿನ್ನ ನಿಬಂಧನೆಗಳನ್ನು ಲಕ್ಷಿಸುವೆನು.
118 ನಿನ್ನ ನಿಬಂಧನೆಗಳಿಗೆ ತಪ್ಪಿದವರೆಲ್ಲರನ್ನು ನೀನು ತಳ್ಳಿಬಿಡುತ್ತೀ, ಅವರ ಕುಯುಕ್ತಿಯು ವ್ಯರ್ಥವಾದದ್ದೇ.
119 ಭೂಲೋಕದ ದುಷ್ಟರೆಲ್ಲರನ್ನು ಕಸದಂತೆ ತೆಗೆದುಬಿಡುತ್ತೀ, ಆದುದರಿಂದ ನಾನು ನಿನ್ನ ಕಟ್ಟಳೆಗಳನ್ನು ಪ್ರೀತಿಸುತ್ತೇನೆ.
120 ನಿನ್ನ ಭಯದಿಂದ ನನ್ನ ದೇಹದ ಮಾಂಸವು ಕಂಪಿಸುತ್ತದೆ, ನಿನ್ನ ನ್ಯಾಯವಿಧಿಗಳಿಗೆ ಹೆದರುತ್ತೇನೆ.
121 ಆಯಿನ್. ನಾನು ನಿನ್ನ ನೀತಿವಿಧಿಗಳನ್ನು ಅನುಸರಿಸಿದ್ದೇನೆ, ಬಲಾತ್ಕಾರಿಗಳಿಗೆ ನನ್ನನ್ನು ಒಪ್ಪಿಸಬೇಡ.
122 ನಿನ್ನ ಸೇವಕನ ಮೇಲಿಗಾಗಿ ನೀನು ಹೊಣೆಗಾರನಾಗು, ಗರ್ವಿಷ್ಠರು ನನ್ನನ್ನು ಬಾಧಿಸದಿರಲಿ.
123 ನಿನ್ನ ರಕ್ಷಣೆಯನ್ನೂ, ನಿನ್ನ ನೀತಿಯುಳ್ಳ ನುಡಿಯು ನೆರವೇರುವುದನ್ನೂ ನಿರೀಕ್ಷಿಸುತ್ತಾ, ನನ್ನ ದೃಷ್ಟಿ ಮೊಬ್ಬಾಯಿತು.
124 ನಿನ್ನ ಸೇವಕನನ್ನು ಕೃಪೆಯಿಂದ ನಡೆಸು, ನಿನ್ನ ನಿಬಂಧನೆಗಳನ್ನು ನನಗೆ ಕಲಿಸು.
125 ನಾನು ನಿನ್ನ ಸೇವಕನು, ನಿನ್ನ ಕಟ್ಟಳೆಗಳನ್ನು ತಿಳಿದುಕೊಳ್ಳುವಂತೆ ವಿವೇಕವನ್ನು ದಯಪಾಲಿಸು.
126 ಯೆಹೋವನೇ, ನೀನು ಕಾರ್ಯ ನಡೆಸುವುದಕ್ಕೆ ಸಮಯ ಬಂದಿದೆ, ನಿನ್ನ ಧರ್ಮಶಾಸ್ತ್ರವನ್ನು ಉಲ್ಲಂಘಿಸಿದ್ದಾರೆ.
127 ನಿಜವಾಗಿ ನಿನ್ನ ಆಜ್ಞೆಗಳು ಬಂಗಾರಕ್ಕಿಂತಲೂ, ಅಪರಂಜಿಗಿಂತಲೂ ನನಗೆ ಬಹುಪ್ರಿಯವಾಗಿವೆ.
128 ನಿಜವಾಗಿ ನಿನ್ನ ಎಲ್ಲಾ ನಿಯಮಗಳು ನ್ಯಾಯವಾಗಿವೆ ಎಂದು ಒಪ್ಪಿಕೊಂಡಿದ್ದೇನೆ, ಎಲ್ಲಾ ಸುಳ್ಳು ಮಾರ್ಗಗಳನ್ನು ದ್ವೇಷಿಸುತ್ತೇನೆ.
129 ಪೆ. ನಿನ್ನ ಕಟ್ಟಳೆಗಳು ಮಹತ್ವವುಳ್ಳವುಗಳೇ, ಪೂರ್ಣಹೃದಯದಿಂದ ಅವುಗಳನ್ನು ಕೈಗೊಳ್ಳುತ್ತೇನೆ.
130 ನಿನ್ನ ವಾಕ್ಯವಿವರಣೆ ಬೆಳಕನ್ನು ಕೊಡುತ್ತದೆ, ಸರಳ ಹೃದಯರಿಗೆ ವಿವೇಚನೆಯನ್ನು ನೀಡುತ್ತದೆ.
131 ನಾನು ಬಾಯಾರಿ ನಿನ್ನನ್ನೇ ಎದುರುನೋಡುತ್ತಿದ್ದೇನೆ, ನಿನ್ನ ಆಜ್ಞೆಗಳನ್ನು ಲವಲವಿಕೆಯಿಂದ ಬಯಸಿದ್ದೇನೆ.
132 ನನಗೆ ಅಭಿಮುಖನಾಗಿ ಕರುಣಿಸು, ನಿನ್ನ ಹೆಸರನ್ನು ಪ್ರೀತಿಸುವವರಿಗೆ ಹೀಗೆ ಮಾಡುವುದು ನಿನ್ನ ನಿಯಮವಲ್ಲವೇ?
133 ನಿನ್ನ ನುಡಿಗನುಸಾರವಾಗಿ ನನ್ನ ಹೆಜ್ಜೆಯನ್ನು ದೃಢಪಡಿಸು, ಯಾವ ಅನ್ಯಾಯವಾದರೂ ನನ್ನನ್ನು ಆಳದಂತೆ ಮಾಡು.
134 ನರ ಮನುಷ್ಯರ ಬಲಾತ್ಕಾರದಿಂದ ನನ್ನನ್ನು ಬಿಡಿಸು, ಆಗ ನಿನ್ನ ನಿಯಮಗಳನ್ನು ಕೈಗೊಳ್ಳುವೆನು.
135 ನಿನ್ನ ದಾಸನ ಮೇಲೆ ನಿನ್ನ ಮುಖಪ್ರಸನ್ನತೆಯಿರಲಿ, ನಿನ್ನ ನಿಬಂಧನೆಗಳನ್ನು ನನಗೆ ಕಲಿಸು.
136 ನಿನ್ನ ಧರ್ಮಶಾಸ್ತ್ರವನ್ನು ಅನುಸರಿಸದವರ ನಿಮಿತ್ತ, ನನ್ನ ಕಣ್ಣೀರು ಪ್ರವಾಹವಾಗಿ ಹರಿಯುತ್ತದೆ.
137 ಸಾದ್ದಿ. ಯೆಹೋವನೇ, ನೀನು ನೀತಿಸ್ವರೂಪನು, ನಿನ್ನ ವಿಧಿಗಳು ನ್ಯಾಯವಾಗಿವೆ.
138 ನೀತಿ, ಸತ್ಯತೆಗಳಿಂದಲೇ ನಿನ್ನ ಕಟ್ಟಳೆಗಳನ್ನು ಸ್ಥಾಪಿಸಿದ್ದಿ,
139 ವೈರಿಗಳು ನಿನ್ನ ವಾಕ್ಯಗಳನ್ನು ಮರೆತುಬಿಟ್ಟಿದ್ದರಿಂದ ನಿನ್ನ ಮೇಲಿನ ಅಭಿಮಾನ ನನ್ನನ್ನು ದಹಿಸಿಬಿಟ್ಟಿತು,
140 ನಿನ್ನ ನುಡಿಯು ಪರಿಶುದ್ಧವಾದದ್ದು, ನಿನ್ನ ಸೇವಕನು ಅದನ್ನೇ ಪ್ರೀತಿಸುತ್ತಾನೆ.
141 ನಾನು ಅಲ್ಪನೂ, ತಿರಸ್ಕಾರ ಹೊಂದಿದವನೂ ಆಗಿದ್ದೇನೆ, ಆದರೂ ನಿನ್ನ ನಿಯಮಗಳನ್ನು ಮರೆಯುವುದಿಲ್ಲ.
142 ನಿನ್ನ ನೀತಿಯು ನಿತ್ಯವಾಗಿದೆ, ನಿನ್ನ ಧರ್ಮಶಾಸ್ತ್ರವು ಸತ್ಯವಾಗಿದೆ.