Text copied!
Bibles in Kannada

ಕೀರ್ತ 119:38-113 in Kannada

Help us?

ಕೀರ್ತ 119:38-113 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ನಿನ್ನಲ್ಲಿ ಭಯಭಕ್ತಿಯುಳ್ಳವರಿಗಾಗಿ ನೀನು ಮಾಡಿದ ವಾಗ್ದಾನಗಳನ್ನು, ನಿನ್ನ ಸೇವಕನ ವಿಷಯದಲ್ಲಿ ನೆರವೇರಿಸು.
39 ನನ್ನ ಅವಮಾನವನ್ನು ತೊಲಗಿಸು, ಅದಕ್ಕೋಸ್ಕರ ಅಂಜುತ್ತಿದ್ದೇನೆ. ನಿನ್ನ ಕಟ್ಟಳೆಗಳು ಹಿತಕರವಾಗಿವೆ.
40 ಇಗೋ, ನಿನ್ನ ನಿಯಮಗಳನ್ನು ಪ್ರೀತಿಸುತ್ತೇನೆ, ನಿನ್ನ ನೀತಿಗನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
41 ವಾವ್. ಯೆಹೋವನೇ, ನಿನ್ನ ಕೃಪೆಯು ನನಗೆ ದೊರಕಲಿ, ನಿನ್ನ ನುಡಿಗನುಸಾರವಾಗಿ ನನಗೆ ರಕ್ಷಣೆಯುಂಟಾಗಲಿ.
42 ಆಗ ನನ್ನನ್ನು ನಿಂದಿಸುವವನಿಗೆ ಉತ್ತರಕೊಡುವೆನು, ನಾನು ನಿನ್ನ ವಾಕ್ಯದಲ್ಲಿ ಭರವಸವಿಟ್ಟಿದ್ದೇನಲ್ಲಾ.
43 ಸತ್ಯ ವಾಕ್ಯವನ್ನು ನನ್ನ ಬಾಯಿಂದ ತೆಗೆಯಬೇಡ. ನಿನ್ನ ನ್ಯಾಯವಿಧಿಗಳನ್ನು ನಿರೀಕ್ಷಿಸಿಕೊಂಡಿದ್ದೇನೆ.
44 ನಿನ್ನ ಧರ್ಮಶಾಸ್ತ್ರವನ್ನು ಸದಾ ತಪ್ಪದೆ ಕೈಗೊಳ್ಳುವೆನು.
45 ನಾನು ನಿನ್ನ ನಿಯಮಗಳನ್ನು ಅಭ್ಯಾಸಿಸುವವನಾದುದರಿಂದ, ಸರಾಗವಾಗಿ ನಡೆಯುವೆನು.
46 ನಿನ್ನ ಕಟ್ಟಳೆಗಳ ವಿಷಯವಾಗಿ, ಅರಸುಗಳ ಮುಂದೆಯೂ ಮಾತನಾಡುವೆನು, ನಾಚಿಕೆಪಡುವುದಿಲ್ಲ.
47 ನಿನ್ನ ಆಜ್ಞೆಗಳಲ್ಲಿ ಆನಂದಪಡುತ್ತೇನೆ, ಅವು ನನಗೆ ಇಷ್ಟವಾಗಿವೆ.
48 ನಿನ್ನ ಆಜ್ಞೆಗಳನ್ನು ಗೌರವಿಸುತ್ತೇನೆ, ಅವುಗಳನ್ನು ನಾನು ಪ್ರೀತಿಸುತ್ತೇನೆ, ನಿನ್ನ ನಿಬಂಧನೆಗಳನ್ನು ಧ್ಯಾನಿಸುತ್ತೇನೆ.
49 ಸಾಯಿನ್. ನಿನ್ನ ವಾಗ್ದಾನವನ್ನು ನಿನ್ನ ಸೇವಕನಿಗೋಸ್ಕರ ನೆನಪುಮಾಡಿಕೋ, ನನ್ನಲ್ಲಿ ನಿರೀಕ್ಷೆಯನ್ನು ಹುಟ್ಟಿಸಿದ್ದಿಯಲ್ಲಾ!
50 ನಿನ್ನ ನುಡಿಯು ನನ್ನನ್ನು ಚೈತನ್ಯಗೊಳಿಸುತ್ತದೆ, ಆಪತ್ಕಾಲದಲ್ಲಿ ಇದೇ ನನಗೆ ಆದರಣೆ.
51 ಗರ್ವಿಷ್ಠರು ನನ್ನನ್ನು ಬಹಳವಾಗಿ ಅಪಹಾಸ್ಯ ಮಾಡಿದರು, ಆದರೂ ನಾನು ನಿನ್ನ ಧರ್ಮಶಾಸ್ತ್ರವನ್ನು ಬಿಡಲಿಲ್ಲ.
52 ಯೆಹೋವನೇ, ನಿನ್ನ ಪುರಾತನ ಉಪದೇಶಾಜ್ಞೆಗಳನ್ನು ನೆನಪುಮಾಡಿಕೊಂಡು, ನನ್ನನ್ನು ಸಂತೈಸಿಕೊಂಡಿದ್ದೇನೆ.
53 ನಿನ್ನ ಧರ್ಮಶಾಸ್ತ್ರ ಭ್ರಷ್ಟರಾದ ದುಷ್ಟರಿಗಾಗಿ, ಕೋಪಗೊಂಡಿದ್ದೇನೆ.
54 ನನ್ನ ಪ್ರವಾಸದ ಮನೆಯಲ್ಲಿ ನಿನ್ನ ಕಟ್ಟಳೆಗಳು ನನಗೆ ಗಾಯನವಾದವು.
55 ಯೆಹೋವನೇ, ರಾತ್ರಿಯಲ್ಲಿ ನಿನ್ನ ನಾಮವನ್ನು ಸ್ಮರಿಸಿಕೊಳ್ಳುತ್ತೇನೆ, ನಿನ್ನ ಧರ್ಮಶಾಸ್ತ್ರವನ್ನು ಕೈಗೊಳ್ಳುತ್ತೇನೆ.
56 ನಿನ್ನ ನಿಯಮಗಳನ್ನು ಅನುಸರಿಸಿದ್ದರಿಂದ ಇದೆಲ್ಲಾ ನನಗೆ ಲಭಿಸಿತು.
57 ಹೇತ್. ಯೆಹೋವನೇ, ನನ್ನ ಪಾಲು ನೀನೇ, ನಿನ್ನ ವಾಕ್ಯಗಳನ್ನು ಕೈಗೊಳ್ಳುವೆನೆಂದು ನಿರ್ಣಯಿಸಿಕೊಂಡಿದ್ದೇನೆ.
58 ಪೂರ್ಣಮನಸ್ಸಿನಿಂದ ನಿನ್ನ ದಯೆಯನ್ನು ಅಪೇಕ್ಷಿಸಿದ್ದೇನೆ, ನಿನ್ನ ನುಡಿಗನುಸಾರವಾಗಿ ನನಗೆ ಪ್ರಸನ್ನನಾಗು.
59 ನನ್ನ ನಡತೆಯನ್ನು ಶೋಧಿಸಿದೆನು, ನಿನ್ನ ಕಟ್ಟಳೆಗಳ ಕಡೆಗೆ ತಿರುಗಿಕೊಂಡಿದ್ದೇನೆ.
60 ನಿನ್ನ ಆಜ್ಞೆಗಳನ್ನು ಅನುಸರಿಸುವುದರಲ್ಲಿ ಆಸಕ್ತನಾದೆನು, ಆಲಸ್ಯಮಾಡಲಿಲ್ಲ.
61 ದುಷ್ಟರ ಪಾಶಗಳು ನನ್ನನ್ನು ಸುತ್ತಿಕೊಂಡವು, ಆದರೂ ನಾನು ನಿನ್ನ ಧರ್ಮಶಾಸ್ತ್ರವನ್ನು ಮರೆಯಲಿಲ್ಲ.
62 ನಿನ್ನ ನೀತಿವಿಧಿಗಳಿಗೋಸ್ಕರ ನಿನ್ನನ್ನು ಕೊಂಡಾಡಲು, ಮಧ್ಯರಾತ್ರಿಯಲ್ಲಿ ಏಳುವೆನು.
63 ನಿನ್ನ ನಿಯಮಗಳನ್ನು ಕೈಕೊಂಡು ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸಂಗಡಿಗನು.
64 ಯೆಹೋವನೇ, ಭೂಲೋಕವು ನಿನ್ನ ಶಾಶ್ವತ ಪ್ರೀತಿಯಿಂದ ತುಂಬಿದೆ, ನಿನ್ನ ಕಟ್ಟಳೆಗಳನ್ನು ನನಗೆ ಬೋಧಿಸು.
65 ಟೇತ್. ಯೆಹೋವನೇ, ನೀನು ನಿನ್ನ ವಾಗ್ದಾನಕ್ಕೆ ತಕ್ಕಂತೆ, ನಿನ್ನ ಸೇವಕನಿಗೆ ಮಹೋಪಕಾರ ಮಾಡಿದ್ದಿ.
66 ಸುಜ್ಞಾನವನ್ನು, ವಿವೇಕಗಳನ್ನು ನನಗೆ ಕಲಿಸಿಕೊಡು, ನಿನ್ನ ಆಜ್ಞೆಗಳನ್ನು ನಂಬಿಕೊಂಡಿದ್ದೇನಲ್ಲಾ.
67 ಕಷ್ಟಾನುಭವಕ್ಕಿಂತ ಮೊದಲೇ ತಪ್ಪಿಹೋಗುತ್ತಿದ್ದೆನು, ಈಗಲಾದರೋ ನಿನ್ನ ನುಡಿಗಳನ್ನು ಕೈಗೊಳ್ಳುತ್ತೇನೆ.
68 ನೀನು ಒಳ್ಳೆಯವನು, ಒಳ್ಳೆಯದನ್ನು ಮಾಡುವವನೂ ಆಗಿದ್ದಿ, ನಿನ್ನ ನಿಬಂಧನೆಗಳನ್ನು ನನಗೆ ಬೋಧಿಸು.
69 ಗರ್ವಿಷ್ಠರು ನನ್ನ ವಿರುದ್ಧವಾಗಿ ಸುಳ್ಳುಕಲ್ಪಿಸಿದ್ದಾರೆ, ನಾನಾದರೋ ಪೂರ್ಣಮನಸ್ಸಿನಿಂದ ನಿನ್ನ ನಿಯಮಗಳನ್ನು ಕೈಕೊಳ್ಳುವೆನು.
70 ಅವರ ಹೃದಯದಲ್ಲಿ ಸತ್ಯವಿಲ್ಲ, ನಾನಾದರೋ ನಿನ್ನ ಧರ್ಮಶಾಸ್ತ್ರದಲ್ಲಿ ಉಲ್ಲಾಸಪಡುತ್ತೇನೆ.
71 ಕಷ್ಟಾನುಭವವು ಹಿತಕರವಾಯಿತು, ಅದುದರಿಂದಲೇ ನಿನ್ನ ನಿಬಂಧನೆಗಳನ್ನು ಕಲಿತೆನು.
72 ನೀನು ಕೊಟ್ಟ ಧರ್ಮಶಾಸ್ತ್ರವು, ಸಾವಿರಾರು ಚಿನ್ನ, ಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯವಾಗಿದೆ.
73 ಯೋದ್. ನಿನ್ನ ಕೈಗಳು ನನ್ನನ್ನು ರೂಪಿಸಿ ನಿಲ್ಲಿಸಿದವು, ನಿನ್ನ ಆಜ್ಞೆಗಳನ್ನು ಕಲಿಯುವುದಕ್ಕೆ ನನಗೆ ಬುದ್ಧಿಯನ್ನು ಕೊಡು.
74 ನಿನ್ನಲ್ಲಿ ಭಯಭಕ್ತಿಯುಳ್ಳವರು ನನ್ನನ್ನು ನೋಡಿ ಸಂತೋಷಿಸಲಿ, ನಾನು ನಿನ್ನ ವಾಕ್ಯವನ್ನೇ ನಿರೀಕ್ಷಿಸಿಕೊಂಡಿದ್ದೇನಲ್ಲಾ.
75 ಯೆಹೋವನೇ, ನಿನ್ನ ವಿಧಿಗಳು ನೀತಿಯುಳ್ಳವುಗಳಾಗಿವೆ ಎಂದೂ, ನೀನು ನಂಬಿಗಸ್ತಿಕೆಯಿಂದಲೇ ನನ್ನನ್ನು ಕುಗ್ಗಿಸಿದ್ದೀ ಎಂದೂ ತಿಳಿದುಕೊಂಡಿದ್ದೇನೆ.
76 ನಿನ್ನ ಸೇವಕನಿಗೆ ನುಡಿದ ಪ್ರಕಾರ, ನನ್ನ ಸಮಾಧಾನಕ್ಕೋಸ್ಕರ ಕೃಪೆಯನ್ನು ದಯಪಾಲಿಸು.
77 ನಾನು ಬದುಕುವಂತೆ ನಿನ್ನ ಕರುಣೆಯು ನನಗೆ ದೊರೆಯಲಿ, ನಿನ್ನ ಧರ್ಮಶಾಸ್ತ್ರವೇ ನನ್ನ ಆನಂದವಾಗಿದೆ.
78 ಗರ್ವಿಷ್ಠರು ಮಾನಭಂಗ ಹೊಂದಲಿ, ಅವರು ಮೋಸದಿಂದ ನನಗೆ ಕೇಡು ಮಾಡಿದ್ದಾರೆ. ನಾನಾದರೋ ನಿನ್ನ ನಿಯಮಗಳನ್ನು ಧ್ಯಾನಿಸುತ್ತಿರುವೆನು.
79 ನಿನ್ನಲ್ಲಿ ಭಯಭಕ್ತಿಯುಳ್ಳವರು ನನ್ನ ಕಡೆಗೆ ತಿರುಗಿಕೊಂಡು, ನಿನ್ನ ಕಟ್ಟಳೆಗಳನ್ನು ಗ್ರಹಿಸಿಕೊಳ್ಳಲಿ.
80 ನನ್ನ ಮನಸ್ಸು ನಿನ್ನ ಕಟ್ಟಳೆಗಳಲ್ಲಿ ಆಸಕ್ತವಾಗಲಿ, ಆಗ ನನ್ನ ಆಶಾಭಂಗಕ್ಕೆ ಕಾರಣವಿರುವುದಿಲ್ಲ.
81 ಕಾಫ್. ನಿನ್ನ ರಕ್ಷಣೆಯ ಬಯಕೆಯಿಂದಲೇ ನನ್ನ ಮನವು ಬಲಗುಂದಿತು, ನಾನು ನಿನ್ನ ವಾಕ್ಯದಲ್ಲೇ ನಿರೀಕ್ಷೆಯುಳ್ಳವನಾಗಿದ್ದೇನೆ.
82 ನಿನ್ನ ನುಡಿಯನ್ನು ನೆರವೇರಿಸಿ ಯಾವಾಗ ನನ್ನನ್ನು ಸಂತೈಸುವಿ? ಎಂಬುವುದಕ್ಕೋಸ್ಕರವೇ ನನ್ನ ದೃಷ್ಟಿಯು ಮಂದವಾಯಿತು.
83 ಹೊಗೆಯಲ್ಲಿ ನೇತು ಹಾಕಿರುವ ಬುದ್ದಲಿಯಂತಿದ್ದೇನೆ, ಆದರೂ ನಿನ್ನ ನಿಬಂಧನೆಗಳನ್ನು ಮರೆಯಲಿಲ್ಲ.
84 ನಿನ್ನ ಸೇವಕನ ದಿನಗಳು ಬಹುಸ್ವಲ್ಪವಲ್ಲಾ! ನನ್ನನ್ನು ಬಾಧಿಸುವವರಿಗೆ ಶಿಕ್ಷೆ ವಿಧಿಸುವುದು ಯಾವಾಗ?
85 ನಿನ್ನ ಧರ್ಮಶಾಸ್ತ್ರವನ್ನು ಅನುಸರಿಸದ ಗರ್ವಿಷ್ಠರು ನನಗಾಗಿ ಗುಂಡಿಗಳನ್ನು ತೋಡಿದ್ದಾರೆ.
86 ನಿನ್ನ ಆಜ್ಞೆಗಳೆಲ್ಲಾ ಸ್ಥಿರವಾಗಿವೆ, ಅವರು ಮೋಸದಿಂದ ಹಿಂಸಿಸುತ್ತಾರೆ, ನನಗೆ ಸಹಾಯಮಾಡು.
87 ನನ್ನನ್ನು ಭೂಮಿಯಿಂದ ತೆಗೆದೇಬಿಟ್ಟಿದ್ದರು, ಆದರೆ ನಾನು ನಿನ್ನ ನಿಯಮಗಳನ್ನು ಬಿಡಲೇ ಇಲ್ಲ.
88 ನಿನ್ನ ಕೃಪೆಗೆ ಅನುಸಾರವಾಗಿ ನನ್ನನ್ನು ಕಾಪಾಡು, ಆಗ ನೀನು ಆಜ್ಞಾಪಿಸಿದ ಕಟ್ಟಳೆಯನ್ನು ಕೈಕೊಳ್ಳುವೆನು.
89 ಲಾಮೆದ್. ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ.
90 ನಿನ್ನ ಸತ್ಯವು ತಲತಲಾಂತರಕ್ಕೂ ಇರುವುದು. ನೀನು ಭೂಮಿಯನ್ನು ಸ್ಥಾಪಿಸಿರುತ್ತಿ, ಅದು ಕದಲುವುದಿಲ್ಲ.
91 ನಿನ್ನ ವಿಧಿಗಳಿಗನುಸಾರವಾಗಿ ಅವು ಇಂದಿನವರೆಗೂ, ಸ್ಥಿರವಾಗಿ ನಿಂತಿರುತ್ತವೆ. ಏಕೆಂದರೆ ಸರ್ವವಸ್ತುಗಳೂ ನಿನ್ನ ಸೇವೆ ಮಾಡುತ್ತವೆ.
92 ನಿನ್ನ ಧರ್ಮಶಾಸ್ತ್ರವು ನನಗೆ ಆನಂದಕರವಾಗದಿದ್ದರೆ, ನನಗೊದಗಿದ ಆಪತ್ತಿನಲ್ಲಿ ಹಾಳಾಗಿ ಹೋಗುತ್ತಿದ್ದೆನು.
93 ನಾನು ನಿನ್ನ ನಿಯಮಗಳನ್ನು ಎಂದಿಗೂ ಮರೆಯುವುದಿಲ್ಲ, ಅವುಗಳಿಂದಲೇ ನನ್ನನ್ನು ಬದುಕಿಸಿದ್ದಿ.
94 ನಾನು ನಿನ್ನವನು, ರಕ್ಷಿಸು, ನಿನ್ನ ನಿಯಮಗಳಲ್ಲಿ ಆಸಕ್ತನಾಗಿದ್ದೇನಲ್ಲಾ.
95 ದುಷ್ಟರು ನನ್ನನ್ನು ಸಂಹರಿಸಬೇಕೆಂದು ಹೊಂಚಿ ನೋಡುತ್ತಾರೆ, ನಾನು ನಿನ್ನ ಕಟ್ಟಳೆಗಳನ್ನೇ ಲಕ್ಷಿಸಿಕೊಂಡಿರುವೆನು.
96 ಎಲ್ಲಾ ಸಂಪೂರ್ಣತೆಗೂ ಮೇರೆಯುಂಟೆಂದು ಬಲ್ಲೆನು, ಆದರೆ ನಿನ್ನ ಆಜ್ಞಾಶಾಸನವು ಅಪರಿಮಿತವಾದದ್ದು.
97 ಮೆಮ್. ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ, ದಿನವೆಲ್ಲಾ ಅದೇ ನನ್ನ ಧ್ಯಾನ.
98 ನಿನ್ನ ಆಜ್ಞೆಗಳ ಮೂಲಕ ನನ್ನ ವೈರಿಗಳಿಗಿಂತ ಬುದ್ಧಿವಂತನಾಗಿದ್ದೇನೆ, ಸದಾಕಾಲವೂ ಅವೇ ನನಗಿವೆ.
99 ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವುದರಿಂದ, ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100 ನಿನ್ನ ನಿಯಮಗಳನ್ನು ಕೈಗೊಂಡಿರುವುದರಿಂದ, ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101 ನಿನ್ನ ವಾಕ್ಯವನ್ನೇ ಅನುಸರಿಸಬೇಕೆಂದು, ನನ್ನ ಕಾಲುಗಳನ್ನು ಯಾವ ಕೆಟ್ಟ ದಾರಿಗೂ ಹೋಗದಂತೆ ಕಾದಿದ್ದೇನೆ.
102 ನಾನು ನಿನ್ನ ವಿಧಿಗಳಿಂದ ಸ್ವಲ್ಪವೂ ತಪ್ಪಿಹೋಗಲಿಲ್ಲ, ಏಕೆಂದರೆ ನೀನು ನನಗೆ ಬೋಧಿಸಿದ್ದೀ.
103 ನಿನ್ನ ನುಡಿಗಳು ನನ್ನ ನಾಲಿಗೆಗೆ ಎಷ್ಟೋ ರುಚಿಯಾಗಿವೆ, ಅವು ನನ್ನ ಬಾಯಿಗೆ ಜೇನು ತುಪ್ಪಕ್ಕಿಂತಲೂ ಸಿಹಿಯಾಗಿವೆ.
104 ನಿನ್ನ ನಿಯಮಗಳ ಮೂಲಕ ವಿವೇಕಿಯಾದೆನು, ಸುಳ್ಳು ಮಾರ್ಗವನ್ನೆಲ್ಲಾ ನಾನು ದ್ವೇಷಿಸುತ್ತೇನೆ.
105 ನೂನ್. ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ, ನನ್ನ ದಾರಿಗೆ ಬೆಳಕೂ ಆಗಿದೆ.
106 ನಿನ್ನ ನೀತಿವಿಧಿಗಳನ್ನು ಅನುಸರಿಸುವೆನೆಂದು ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು.
107 ನಾನು ಬಹಳವಾಗಿ ಕುಗ್ಗಿಹೋಗಿದ್ದೇನೆ, ಯೆಹೋವನೇ, ನಿನ್ನ ವಾಕ್ಯಾನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
108 ಯೆಹೋವನೇ, ನನ್ನ ಮನಃಪೂರ್ವಕವಾದ ಸ್ತುತಿ ಸಮರ್ಪಣೆಗಳನ್ನು, ದಯವಿಟ್ಟು ಅಂಗೀಕರಿಸು, ನಿನ್ನ ವಿಧಿಗಳನ್ನು ನನಗೆ ಕಲಿಸು.
109 ನನ್ನ ಜೀವವು ಅಪಾಯದಲ್ಲಿದ್ದೆ, ಆದರೂ ನಿನ್ನ ಧರ್ಮಶಾಸ್ತ್ರವನ್ನು ಮರೆಯುವುದಿಲ್ಲ.
110 ದುಷ್ಟರು ಬಲೆಯೊಡ್ಡಿದ್ದಾರೆ, ನಾನು ನಿನ್ನ ನಿಯಮಗಳಿಂದ ತಪ್ಪಿಹೋಗುವುದಿಲ್ಲ.
111 ನಿನ್ನ ಕಟ್ಟಳೆಗಳನ್ನು ನನ್ನ ನಿತ್ಯಸ್ವತ್ತಾಗಿ ಆರಿಸಿಕೊಂಡಿದ್ದೇನೆ, ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿವೆ.
112 ಕಡೆಯವರೆಗು ಯಾವಾಗಲೂ ನಿನ್ನ ನಿಬಂಧನೆಗಳನ್ನು ಕೈಗೊಳ್ಳುವುದಕ್ಕೆ ಮನಸ್ಸುಮಾಡಿದ್ದೇನೆ.
113 ಸಾಮೆಕ್. ಚಂಚಲ ಮನಸ್ಸುಳ್ಳವರನ್ನು ದ್ವೇಷಿಸುತ್ತೇನೆ, ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುತ್ತೇನೆ.
ಕೀರ್ತ 119 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019