Text copied!
Bibles in Kannada

ಕೀರ್ತ 119:118-175 in Kannada

Help us?

ಕೀರ್ತ 119:118-175 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

118 ನಿನ್ನ ನಿಬಂಧನೆಗಳಿಗೆ ತಪ್ಪಿದವರೆಲ್ಲರನ್ನು ನೀನು ತಳ್ಳಿಬಿಡುತ್ತೀ, ಅವರ ಕುಯುಕ್ತಿಯು ವ್ಯರ್ಥವಾದದ್ದೇ.
119 ಭೂಲೋಕದ ದುಷ್ಟರೆಲ್ಲರನ್ನು ಕಸದಂತೆ ತೆಗೆದುಬಿಡುತ್ತೀ, ಆದುದರಿಂದ ನಾನು ನಿನ್ನ ಕಟ್ಟಳೆಗಳನ್ನು ಪ್ರೀತಿಸುತ್ತೇನೆ.
120 ನಿನ್ನ ಭಯದಿಂದ ನನ್ನ ದೇಹದ ಮಾಂಸವು ಕಂಪಿಸುತ್ತದೆ, ನಿನ್ನ ನ್ಯಾಯವಿಧಿಗಳಿಗೆ ಹೆದರುತ್ತೇನೆ.
121 ಆಯಿನ್. ನಾನು ನಿನ್ನ ನೀತಿವಿಧಿಗಳನ್ನು ಅನುಸರಿಸಿದ್ದೇನೆ, ಬಲಾತ್ಕಾರಿಗಳಿಗೆ ನನ್ನನ್ನು ಒಪ್ಪಿಸಬೇಡ.
122 ನಿನ್ನ ಸೇವಕನ ಮೇಲಿಗಾಗಿ ನೀನು ಹೊಣೆಗಾರನಾಗು, ಗರ್ವಿಷ್ಠರು ನನ್ನನ್ನು ಬಾಧಿಸದಿರಲಿ.
123 ನಿನ್ನ ರಕ್ಷಣೆಯನ್ನೂ, ನಿನ್ನ ನೀತಿಯುಳ್ಳ ನುಡಿಯು ನೆರವೇರುವುದನ್ನೂ ನಿರೀಕ್ಷಿಸುತ್ತಾ, ನನ್ನ ದೃಷ್ಟಿ ಮೊಬ್ಬಾಯಿತು.
124 ನಿನ್ನ ಸೇವಕನನ್ನು ಕೃಪೆಯಿಂದ ನಡೆಸು, ನಿನ್ನ ನಿಬಂಧನೆಗಳನ್ನು ನನಗೆ ಕಲಿಸು.
125 ನಾನು ನಿನ್ನ ಸೇವಕನು, ನಿನ್ನ ಕಟ್ಟಳೆಗಳನ್ನು ತಿಳಿದುಕೊಳ್ಳುವಂತೆ ವಿವೇಕವನ್ನು ದಯಪಾಲಿಸು.
126 ಯೆಹೋವನೇ, ನೀನು ಕಾರ್ಯ ನಡೆಸುವುದಕ್ಕೆ ಸಮಯ ಬಂದಿದೆ, ನಿನ್ನ ಧರ್ಮಶಾಸ್ತ್ರವನ್ನು ಉಲ್ಲಂಘಿಸಿದ್ದಾರೆ.
127 ನಿಜವಾಗಿ ನಿನ್ನ ಆಜ್ಞೆಗಳು ಬಂಗಾರಕ್ಕಿಂತಲೂ, ಅಪರಂಜಿಗಿಂತಲೂ ನನಗೆ ಬಹುಪ್ರಿಯವಾಗಿವೆ.
128 ನಿಜವಾಗಿ ನಿನ್ನ ಎಲ್ಲಾ ನಿಯಮಗಳು ನ್ಯಾಯವಾಗಿವೆ ಎಂದು ಒಪ್ಪಿಕೊಂಡಿದ್ದೇನೆ, ಎಲ್ಲಾ ಸುಳ್ಳು ಮಾರ್ಗಗಳನ್ನು ದ್ವೇಷಿಸುತ್ತೇನೆ.
129 ಪೆ. ನಿನ್ನ ಕಟ್ಟಳೆಗಳು ಮಹತ್ವವುಳ್ಳವುಗಳೇ, ಪೂರ್ಣಹೃದಯದಿಂದ ಅವುಗಳನ್ನು ಕೈಗೊಳ್ಳುತ್ತೇನೆ.
130 ನಿನ್ನ ವಾಕ್ಯವಿವರಣೆ ಬೆಳಕನ್ನು ಕೊಡುತ್ತದೆ, ಸರಳ ಹೃದಯರಿಗೆ ವಿವೇಚನೆಯನ್ನು ನೀಡುತ್ತದೆ.
131 ನಾನು ಬಾಯಾರಿ ನಿನ್ನನ್ನೇ ಎದುರುನೋಡುತ್ತಿದ್ದೇನೆ, ನಿನ್ನ ಆಜ್ಞೆಗಳನ್ನು ಲವಲವಿಕೆಯಿಂದ ಬಯಸಿದ್ದೇನೆ.
132 ನನಗೆ ಅಭಿಮುಖನಾಗಿ ಕರುಣಿಸು, ನಿನ್ನ ಹೆಸರನ್ನು ಪ್ರೀತಿಸುವವರಿಗೆ ಹೀಗೆ ಮಾಡುವುದು ನಿನ್ನ ನಿಯಮವಲ್ಲವೇ?
133 ನಿನ್ನ ನುಡಿಗನುಸಾರವಾಗಿ ನನ್ನ ಹೆಜ್ಜೆಯನ್ನು ದೃಢಪಡಿಸು, ಯಾವ ಅನ್ಯಾಯವಾದರೂ ನನ್ನನ್ನು ಆಳದಂತೆ ಮಾಡು.
134 ನರ ಮನುಷ್ಯರ ಬಲಾತ್ಕಾರದಿಂದ ನನ್ನನ್ನು ಬಿಡಿಸು, ಆಗ ನಿನ್ನ ನಿಯಮಗಳನ್ನು ಕೈಗೊಳ್ಳುವೆನು.
135 ನಿನ್ನ ದಾಸನ ಮೇಲೆ ನಿನ್ನ ಮುಖಪ್ರಸನ್ನತೆಯಿರಲಿ, ನಿನ್ನ ನಿಬಂಧನೆಗಳನ್ನು ನನಗೆ ಕಲಿಸು.
136 ನಿನ್ನ ಧರ್ಮಶಾಸ್ತ್ರವನ್ನು ಅನುಸರಿಸದವರ ನಿಮಿತ್ತ, ನನ್ನ ಕಣ್ಣೀರು ಪ್ರವಾಹವಾಗಿ ಹರಿಯುತ್ತದೆ.
137 ಸಾದ್ದಿ. ಯೆಹೋವನೇ, ನೀನು ನೀತಿಸ್ವರೂಪನು, ನಿನ್ನ ವಿಧಿಗಳು ನ್ಯಾಯವಾಗಿವೆ.
138 ನೀತಿ, ಸತ್ಯತೆಗಳಿಂದಲೇ ನಿನ್ನ ಕಟ್ಟಳೆಗಳನ್ನು ಸ್ಥಾಪಿಸಿದ್ದಿ,
139 ವೈರಿಗಳು ನಿನ್ನ ವಾಕ್ಯಗಳನ್ನು ಮರೆತುಬಿಟ್ಟಿದ್ದರಿಂದ ನಿನ್ನ ಮೇಲಿನ ಅಭಿಮಾನ ನನ್ನನ್ನು ದಹಿಸಿಬಿಟ್ಟಿತು,
140 ನಿನ್ನ ನುಡಿಯು ಪರಿಶುದ್ಧವಾದದ್ದು, ನಿನ್ನ ಸೇವಕನು ಅದನ್ನೇ ಪ್ರೀತಿಸುತ್ತಾನೆ.
141 ನಾನು ಅಲ್ಪನೂ, ತಿರಸ್ಕಾರ ಹೊಂದಿದವನೂ ಆಗಿದ್ದೇನೆ, ಆದರೂ ನಿನ್ನ ನಿಯಮಗಳನ್ನು ಮರೆಯುವುದಿಲ್ಲ.
142 ನಿನ್ನ ನೀತಿಯು ನಿತ್ಯವಾಗಿದೆ, ನಿನ್ನ ಧರ್ಮಶಾಸ್ತ್ರವು ಸತ್ಯವಾಗಿದೆ.
143 ಕಷ್ಟ, ಸಂಕಟಗಳು ನನ್ನನ್ನು ಮುತ್ತಿಕೊಂಡಿವೆ, ಆದರೂ ನಿನ್ನ ಆಜ್ಞೆಗಳು ನನಗೆ ಸಂತೋಷಕರವಾಗಿವೆ.
144 ನಿನ್ನ ಕಟ್ಟಳೆಗಳು ಸದಾಕಾಲವೂ ನೀತಿಯುಳ್ಳವುಗಳು, ನನಗೆ ವಿವೇಕವನ್ನು ದಯಪಾಲಿಸು, ಆಗ ಬದುಕುವೆನು.
145 ಖೋಫ್. ಯೆಹೋವನೇ, ಸಂಪೂರ್ಣಮನಸ್ಸಿನಿಂದ ಮೊರೆಯಿಟ್ಟಿದ್ದೇನೆ, ಸದುತ್ತರವನ್ನು ದಯಪಾಲಿಸು, ನಿನ್ನ ನಿಬಂಧನೆಗಳನ್ನು ಅನುಸರಿಸುವೆನು.
146 ನಿನಗೇ ಮೊರೆಯಿಟ್ಟಿದ್ದೇನೆ ರಕ್ಷಿಸು. ನಿನ್ನ ಕಟ್ಟಳೆಗಳನ್ನು ಕೈಗೊಳ್ಳುವೆನು.
147 ಅರುಣೋದಯದಲ್ಲಿ ಎದ್ದು ಮೊರೆಯಿಟ್ಟೆನು, ನಿನ್ನ ವಾಕ್ಯವನ್ನು ನಿರೀಕ್ಷಿಸಿಕೊಂಡಿದ್ದೇನೆ.
148 ನಿನ್ನ ನುಡಿಯನ್ನು ಧ್ಯಾನಿಸಲು, ನನ್ನ ಕಣ್ಣುಗಳು ಇರುಳಿನ ಒಂದೊಂದು ಜಾವದಲ್ಲೂ ತೆರೆದಿರುತ್ತವೆ.
149 ಯೆಹೋವನೇ, ನಿನ್ನ ಕೃಪೆಗೆ ತಕ್ಕಂತೆ ನನ್ನ ಮೊರೆಯನ್ನು ಕೇಳು, ನಿನ್ನ ವಿಧಿಗನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
150 ನಿನ್ನ ಧರ್ಮಶಾಸ್ತ್ರವನ್ನು ಬಿಟ್ಟು ಕೆಟ್ಟದ್ದನ್ನು ಅನುಸರಿಸುವವರು, ನನ್ನ ಸಮೀಪಕ್ಕೆ ಬಂದಿದ್ದಾರೆ.
151 ಯೆಹೋವನೇ, ನೀನು ನನ್ನ ಹತ್ತಿರವೇ ಇರುವೆ, ನಿನ್ನ ಆಜ್ಞೆಗಳೆಲ್ಲಾ ಯಥಾರ್ಥವಾಗಿವೆ.
152 ನೀನು ನಿನ್ನ ಕಟ್ಟಳೆಗಳನ್ನು ಯುಗಯುಗಾಂತರಕ್ಕೂ ಸ್ಥಾಪಿಸಿದ್ದಿ ಎಂದು, ನಾನು ಮೊದಲಿನಿಂದಲೇ ಅವುಗಳ ಮೂಲಕ ತಿಳಿದುಕೊಂಡಿದ್ದೇನೆ.
153 ರೇಷ್. ನನ್ನ ಕಷ್ಟವನ್ನು ನೋಡಿ ನನ್ನನ್ನು ರಕ್ಷಿಸು, ನಾನು ನಿನ್ನ ಧರ್ಮಶಾಸ್ತ್ರವನ್ನು ಮರೆತವನಲ್ಲ.
154 ನನ್ನ ವ್ಯಾಜ್ಯವನ್ನು ನಡೆಸಿ ನನ್ನನ್ನು ಬಿಡಿಸು, ನಿನ್ನ ನುಡಿಗನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
155 ನಿನ್ನ ನಿಬಂಧನೆಗಳನ್ನು ಅಲಕ್ಷ್ಯಮಾಡುವ ದುಷ್ಟರಿಗೆ ರಕ್ಷಣೆಯೇ ಇಲ್ಲ.
156 ಯೆಹೋವನೇ, ನಿನ್ನ ಕೃಪಾಕಾರ್ಯಗಳು ಬಹಳವಾಗಿವೆ, ನಿನ್ನ ವಿಧಿಗಳಿಗೆ ತಕ್ಕಂತೆ ನನ್ನನ್ನು ಚೈತನ್ಯಗೊಳಿಸು.
157 ನನ್ನನ್ನು ಹಿಂಸಿಸುವ ವೈರಿಗಳು ಅನೇಕರಿದ್ದರೂ, ನಾನು ನಿನ್ನ ಕಟ್ಟಳೆಗಳನ್ನು ಬಿಟ್ಟು ನಡೆಯಲಿಲ್ಲ.
158 ನಿನ್ನ ನುಡಿಯನ್ನು ಕೈಗೊಳ್ಳದ ಧರ್ಮಭ್ರಷ್ಟರನ್ನು ನೋಡಿ ಅಸಹ್ಯಪಟ್ಟಿದ್ದೇನೆ.
159 ಯೆಹೋವನೇ, ನೋಡು, ನಿನ್ನ ನಿಯಮಗಳು ನನಗೆ ಎಷ್ಟೋ ಪ್ರಿಯವಾಗಿವೆ, ನಿನ್ನ ಕೃಪಾನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
160 ನಿನ್ನ ವಾಕ್ಯದ ಸಾರಾಂಶವು ಸತ್ಯವೇ, ನಿನ್ನ ನೀತಿವಿಧಿಗಳೆಲ್ಲಾ ಯುಗಯುಗಾಂತರಕ್ಕೂ ಇರುವವು.
161 ಷಿನ್. ಪ್ರಭುಗಳು ಕಾರಣವಿಲ್ಲದೆ ನನ್ನನ್ನು ಹಿಂಸಿಸುತ್ತಾರೆ, ನನ್ನ ಹೃದಯವು ನಿನ್ನ ವಾಕ್ಯಕ್ಕೆ ಮಾತ್ರ ಭಯಪಡುತ್ತದೆ.
162 ಒಬ್ಬನು ತಾನು ಸಂಪಾದಿಸಿದ ದೊಡ್ಡ ಕೊಳ್ಳೆಯಲ್ಲಿ ಹೇಗೋ, ಹಾಗೆಯೇ ನಾನು ನಿನ್ನ ನುಡಿಯಲ್ಲಿ ಆನಂದಿಸುತ್ತೇನೆ.
163 ಮಿಥ್ಯವಾದದ್ದನ್ನು ದ್ವೇಷಿಸುತ್ತೇನೆ, ಅದು ನನಗೆ ಅಸಹ್ಯವಾಗಿದೆ, ನಿನ್ನ ಧರ್ಮಶಾಸ್ತ್ರವು ನನಗೆ ಪ್ರಿಯವಾಗಿದೆ.
164 ನಿನ್ನ ನೀತಿವಿಧಿಗಳಿಗೋಸ್ಕರ, ನಿನ್ನನ್ನು ದಿನಕ್ಕೆ ಏಳು ಸಾರಿ ಕೊಂಡಾಡುತ್ತೇನೆ.
165 ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ, ಸಂಪೂರ್ಣ ಸಮಾಧಾನವಿರುತ್ತದೆ, ಅಂಥವರಿಗೆ ವಿಘ್ನಕರವಾದದ್ದೇನೂ ಇರುವುದಿಲ್ಲ.
166 ಯೆಹೋವನೇ, ಯಾವಾಗ ರಕ್ಷಿಸುವಿಯೋ ಎಂದು, ನಿರೀಕ್ಷಿಸುತ್ತಾ ಇದ್ದೇನೆ, ನಿನ್ನ ಆಜ್ಞೆಗಳನ್ನು ಕೈಗೊಂಡಿದ್ದೇನೆ.
167 ನಿನ್ನ ಕಟ್ಟಳೆಗಳನ್ನು ಮನಃಪೂರ್ವಕವಾಗಿ ಅನುಸರಿಸಿದ್ದೇನೆ, ಅವು ನನಗೆ ಬಹುಪ್ರಿಯವಾಗಿವೆ.
168 ನಿನ್ನ ನಿಯಮಗಳನ್ನೂ, ಕಟ್ಟಳೆಗಳನ್ನೂ ಅನುಸರಿಸಿದ್ದೇನೆ, ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ.
169 ತಾವ್. ಯೆಹೋವನೇ, ನನ್ನ ಕೂಗು ನಿನ್ನ ಸನ್ನಿಧಿಯನ್ನು ಮುಟ್ಟಲಿ, ನಿನ್ನ ವಾಕ್ಯಾನುಸಾರವಾಗಿ ನನಗೆ ಜ್ಞಾನವನ್ನು ದಯಪಾಲಿಸು.
170 ನನ್ನ ವಿಜ್ಞಾಪನೆಯು ನಿನ್ನ ಸನ್ನಿಧಿಗೆ ಸೇರಲಿ, ನಿನ್ನ ನುಡಿಗೆ ತಕ್ಕಂತೆ ನನ್ನನ್ನು ರಕ್ಷಿಸು.
171 ನಿನ್ನ ನಿಬಂಧನೆಗಳನ್ನು ನನಗೆ ಕಲಿಸಿದ್ದಿಯಲ್ಲಾ. ನನ್ನ ತುಟಿಗಳಿಂದ ಸದಾ ನಿನ್ನ ಸ್ತುತಿ ಹೊರಡಲಿ,
172 ನನ್ನ ನಾಲಿಗೆಯು ನಿನ್ನ ನುಡಿಗಳನ್ನು ವರ್ಣಿಸಲಿ, ನಿನ್ನ ಆಜ್ಞೆಗಳೆಲ್ಲಾ ನೀತಿಯುಳ್ಳದ್ದು.
173 ನಿನ್ನ ನಿಯಮಗಳನ್ನು ಆರಿಸಿಕೊಂಡಿದ್ದೇನೆ, ನಿನ್ನ ಕೈ ನನಗೆ ನೆರವಾಗಲಿ.
174 ಯೆಹೋವನೇ, ನಿನ್ನಿಂದುಂಟಾಗುವ ರಕ್ಷಣೆಯನ್ನು ಕೋರುತ್ತೇನೆ, ನಿನ್ನ ಧರ್ಮಶಾಸ್ತ್ರವೇ ನನ್ನ ಆನಂದವು.
175 ನನ್ನ ಪ್ರಾಣವನ್ನು ಉಳಿಸು, ಅದು ನಿನ್ನನ್ನು ಕೊಂಡಾಡಲಿ. ನಿನ್ನ ನಿಯಮಗಳಿಂದ ನನಗೆ ಸಹಾಯವಾಗಲಿ.
ಕೀರ್ತ 119 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019