Text copied!
Bibles in Kannada

ಅ. ಕೃ. 9:15-39 in Kannada

Help us?

ಅ. ಕೃ. 9:15-39 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಕರ್ತನು ಅವನಿಗೆ, “ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ, ಅರಸುಗಳಿಗೂ, ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.
16 ಅವನು ನನ್ನ ಹೆಸರಿನ ನಿಮಿತ್ತ ಎಷ್ಟು ಹಿಂಸೆ ಅನುಭವಿಸಬೇಕೆಂಬುದನ್ನು ನಾನೇ ಅವನಿಗೆ ತೋರಿಸುವೆನು” ಎಂದು ಹೇಳಿದನು.
17 ಆಗ ಅನನೀಯನು ಹೊರಟು ಆ ಮನೆಯೊಳಗೆ ಹೋಗಿ ಅವನ ಮೇಲೆ ತನ್ನ ಕೈಗಳನ್ನಿಟ್ಟು, “ಸಹೋದರನಾದ ಸೌಲನೇ, ನೀನು ಬಂದ ದಾರಿಯಲ್ಲಿ ನಿನಗೆ ಕಾಣಿಸಿಕೊಂಡ ಕರ್ತನಾದ ಯೇಸು ನಿನಗೆ ಕಣ್ಣು ಕಾಣುವಂತೆಯೂ, ನೀನು ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ” ಎಂದು ಹೇಳಿದನು.
18 ಕೂಡಲೇ ಅವನ ಕಣ್ಣುಗಳಿಂದ ಪರೆಗಳಂತೆ ಏನೋ ಬಿದ್ದು ಅವನ ಕಣ್ಣು ಕಾಣಿಸಿದವು. ಅವನು ಎದ್ದು ದೀಕ್ಷಾಸ್ನಾನ ಮಾಡಿಸಿಕೊಂಡನು.
19 ತರುವಾಯ ಊಟಮಾಡಿ ಬಲಹೊಂದಿದನು. ಅವನು ದಮಸ್ಕದಲ್ಲಿದ್ದ ಶಿಷ್ಯರ ಸಂಗಡ ಕೆಲವು ದಿನಗಳು ಇದ್ದನು.
20 ಅವನು ಕೂಡಲೇ, ಸಭಾಮಂದಿರಗಳಲ್ಲಿ ಯೇಸುವಿನ ವಿಷಯವಾಗಿ ಆತನೇ ದೇವಕುಮಾರನೆಂದು ಸಾರುವುದಕ್ಕೆ ಪ್ರಾರಂಭಮಾಡಿದನು.
21 ಕೇಳಿದವರೆಲ್ಲರು ಬೆರಗಾಗಿ; “ಯೇಸುಕ್ರಿಸ್ತನ ಹೆಸರು ಹೇಳುವವರನ್ನು ಯೆರೂಸಲೇಮಿನಲ್ಲಿ ನಾಶಮಾಡುತ್ತಿದ್ದವನು ಇವನಲ್ಲವೇ. ಅಂಥವರನ್ನು ಬೇಡಿಹಾಕಿಸಿ ಮುಖ್ಯಯಾಜಕರ ಬಳಿಗೆ ತೆಗೆದುಕೊಂಡು ಹೋಗಬೇಕೆಂದು ಇಲ್ಲಿಗೆ ಬಂದಿರುವನಲ್ಲವೇ” ಎಂದು ಮಾತನಾಡಿಕೊಂಡರು.
22 ಆದರೆ ಸೌಲನು ಇನ್ನೂ ಅಧಿಕ ಬಲವುಳ್ಳವನಾಗಿ, ಯೇಸುವೇ ಕ್ರಿಸ್ತನೆಂದು ರುಜುವಾತುಪಡಿಸುತ್ತಾ ದಮಸ್ಕದಲ್ಲಿದ್ದ ಯೆಹೂದ್ಯರನ್ನು ಉತ್ತರವಿಲ್ಲದವರ ಹಾಗೆ ಮಾಡಿದನು.
23 ಅನೇಕ ದಿನಗಳು ಕಳೆದ ಮೇಲೆ, ಯೆಹೂದ್ಯರು ಅವನನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
24 ಆದರೆ ಅವರ ಗೂಢಾಲೋಚನೆಯು ಸೌಲನಿಗೆ ತಿಳಿದುಬಂದಿತು. ಅವನನ್ನು ಕೊಲ್ಲುವುದಕ್ಕಾಗಿ ಅವರು ಹಗಲಿರುಳೂ ಪಟ್ಟಣದ ಬಾಗಿಲುಗಳನ್ನು ಕಾಯುತ್ತಿದ್ದರು.
25 ಆದರೆ ಸೌಲನ ಶಿಷ್ಯರು ರಾತ್ರಿಕಾಲದಲ್ಲಿ ಅವನನ್ನು ಕರೆದುಕೊಂಡುಹೋಗಿ, ಒಂದು ಪುಟ್ಟಿಯಲ್ಲಿ ಕುಳ್ಳಿರಿಸಿ, ಗೋಡೆಯ ಮಗ್ಗುಲಲ್ಲಿ ಇಳಿಸಿದರು.
26 ಅವನು ಯೆರೂಸಲೇಮಿಗೆ ಬಂದು ಶಿಷ್ಯರೊಳಗೆ ಸೇರಿಕೊಳ್ಳಬೇಕೆಂದು ಪ್ರಯತ್ನಪಟ್ಟಾಗ, ಅಲ್ಲಿ ಇದ್ದವರು ಅವನನ್ನು ಯೇಸುವಿನ ಶಿಷ್ಯನೆಂದು ನಂಬದೆ ಅವನಿಗೆ ಭಯಪಟ್ಟರು.
27 ಆದರೆ ಬಾರ್ನಬನು ಅವನನ್ನು ಕೈಹಿಡಿದು, ಅಪೊಸ್ತಲರ ಬಳಿಗೆ ಕರೆದುಕೊಂಡುಹೋಗಿ, ಅವನು ದಮಸ್ಕದ ದಾರಿಯಲ್ಲಿ ಕರ್ತನನ್ನು ಕಂಡದ್ದನ್ನೂ, ಕರ್ತನು ಅವನ ಸಂಗಡ ಮಾತನಾಡಿದ್ದನ್ನೂ, ದಮಸ್ಕದೊಳಗೆ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಪ್ರಚಾರ ಮಾಡಿದ್ದನ್ನೂ ಅವರಿಗೆ ವಿವರವಾಗಿ ಹೇಳಿದನು.
28 ಆ ಮೇಲೆ ಸೌಲನು ಯೆರೂಸಲೇಮಿನಲ್ಲಿದ್ದುಕೊಂಡು ಅವರಲ್ಲಿ ಬರುತ್ತಾ ಹೋಗುತ್ತಾ ಕರ್ತನ ಹೆಸರಿನಲ್ಲಿ ಧೈರ್ಯದಿಂದ ಬೋಧಿಸತೊಡಗಿದನು.
29 ಮತ್ತು ಗ್ರೀಕ್ ಭಾಷೆಯನ್ನಾಡುವ ಯೆಹೂದ್ಯರ ಸಂಗಡ ಮಾತನಾಡಿ ತರ್ಕಮಾಡುತ್ತಿದ್ದನು. ಆದರೆ ಅವರು ಅವನನ್ನು ಕೊಲ್ಲುವುದಕ್ಕೆ ಪ್ರಯತ್ನ ಮಾಡುತ್ತಿದ್ದರು.
30 ಇದು ಸಹೋದರರಿಗೆ ತಿಳಿದು ಬರಲು, ಅವರು ಅವನನ್ನು ಕೈಸರೈಯಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ತಾರ್ಸಕ್ಕೆ ಕಳುಹಿಸಿದರು.
31 ಹೀಗಿರಲಾಗಿ ಯೂದಾಯ, ಗಲಿಲಾಯ, ಸಮಾರ್ಯ ಸೀಮೆಗಳಲ್ಲಿದ್ದ ಸಭೆಯು ಸಮಾಧಾನ ಹೊಂದಿತು; ಮತ್ತು ಭಕ್ತಿಯಲ್ಲಿ ಬೆಳೆದು ಕರ್ತನ ಭಯದಲ್ಲಿ ನಡೆದು, ಪವಿತ್ರಾತ್ಮನಿಂದ ಪ್ರೋತ್ಸಾಹವನ್ನು ಹೊಂದಿ ಬೆಳೆಯುತ್ತಾ ಬಂದಿತು.
32 ಪೇತ್ರನು ಎಲ್ಲಾ ಕಡೆಗಳಲ್ಲಿಯೂ ಸಂಚಾರಮಾಡುತ್ತಿರುವಾಗ, ಲುದ್ದದಲ್ಲಿ ವಾಸವಾಗಿದ್ದ ದೇವಜನರ ಬಳಿಗೂ ಬಂದನು.
33 ಅಲ್ಲಿ ಪಾರ್ಶ್ವವಾಯುರೋಗಿಯಾಗಿ ಎಂಟು ವರ್ಷಗಳಿಂದ ಹಾಸಿಗೆಯ ಮೇಲೆ ಬಿದ್ದಿದ್ದ ಐನೇಯನೆಂಬ ಒಬ್ಬ ಮನುಷ್ಯನನ್ನು ಕಂಡನು.
34 ಪೇತ್ರನು ಅವನಿಗೆ, “ಐನೇಯನೇ, ಯೇಸು ಕ್ರಿಸ್ತನು ನಿನ್ನನ್ನು ವಾಸಿಮಾಡುತ್ತಾನೆ; ಎದ್ದು ನಿನ್ನ ಹಾಸಿಗೆಯನ್ನು ನೀನೇ ಹಾಸಿಕೋ” ಎಂದು ಹೇಳಿದನು. ಕೂಡಲೆ ಅವನು ಎದ್ದನು.
35 ಮತ್ತು ಲುದ್ದದಲ್ಲಿಯೂ, ಶಾರೋನಿನಲ್ಲಿಯೂ ವಾಸವಾಗಿದ್ದವರೆಲ್ಲರು ಅವನನ್ನು ನೋಡಿ, ಅವರು ಕರ್ತನ ಕಡೆಗೆ ತಿರುಗಿಕೊಂಡರು.
36 ಯೊಪ್ಪ ಪಟ್ಟಣದಲ್ಲಿ ತಬಿಥಾ ಎಂಬ ಒಬ್ಬ ಶಿಷ್ಯಳಿದ್ದಳು. ಆ ಹೆಸರಿಗೆ ಗ್ರೀಕ್ ಭಾಷೆಯಲ್ಲಿ “ದೊರ್ಕ” ಅಂದರೆ ಜಿಂಕೆ ಎಂದರ್ಥ. ಆಕೆಯು ಸತ್ಕ್ರಿಯೆಗಳನ್ನೂ, ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದಳು.
37 ಆ ಕಾಲದಲ್ಲಿ ಆಕೆ ರೋಗಕ್ಕೆ ತುತ್ತಾಗಿ ಸತ್ತಳು. ಆಕೆಯ ಶವವನ್ನು ಸ್ನಾನಮಾಡಿಸಿ ಮೇಲಂತಸ್ತಿನಲ್ಲಿಟ್ಟರು.
38 ಯೊಪ್ಪಕ್ಕೆ ಲುದ್ದವು ಹತ್ತಿರವಾಗಿರಲಾಗಿ ಪೇತ್ರನು ಅಲ್ಲಿ ಇದ್ದಾನೆಂದು ಶಿಷ್ಯರು ಕೇಳಿ ಇಬ್ಬರು ಮನುಷ್ಯರನ್ನು ಅವನ ಬಳಿಗೆ ಕಳುಹಿಸಿ, “ತಡಮಾಡದೆ ನಮ್ಮ ಹತ್ತಿರಕ್ಕೆ ಬರಬೇಕೆಂದು” ಬೇಡಿಕೊಂಡರು.
39 ಪೇತ್ರನು ಎದ್ದು ಅವರ ಜೊತೆಯಲ್ಲಿ ಹೋದನು. ಅವನು ಬಂದ ಕೂಡಲೆ ಅವರು ಅವನನ್ನು ಮೇಲಂತಸ್ತಿಗೆ ಕರೆದುಕೊಂಡು ಹೋದರು. ಅಲ್ಲಿ ವಿಧವೆಯರೆಲ್ಲ ಅಳುತ್ತಾ, ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಒಳಂಗಿಗಳನ್ನೂ, ಮೇಲಂಗಿಗಳನ್ನೂ ತೋರಿಸಿದರು.
ಅ. ಕೃ. 9 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019