Text copied!
Bibles in Kannada

ಅರಣ್ಯ 22:5-37 in Kannada

Help us?

ಅರಣ್ಯ 22:5-37 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಅವನು ಬೆಯೋರನ ಮಗನಾದ ಬಿಳಾಮನನ್ನು ಕರೆಯಿಸುವುದಕ್ಕೆ ಸ್ವಜನರ ದೇಶವಾದ ಯೂಫ್ರೆಟಿಸ್ ನದಿಯ ತೀರದಲ್ಲಿರುವ ಪೆತೋರ್ ಎಂಬ ಊರಿಗೆ ದೂತರನ್ನು ಕಳುಹಿಸಿ ಅವನಿಗೆ, “ಒಂದು ಜನಾಂಗವು ಐಗುಪ್ತ ದೇಶದಿಂದ ಬಂದಿದೆ. ಅವರು ಭೂಮಿಯನ್ನೆಲ್ಲಾ ಆವರಿಸಿಕೊಂಡು ನನ್ನ ಸಮೀಪಕ್ಕೆ ಬಂದಿದ್ದಾರೆ.
6 ಆದುದರಿಂದ ನೀನು ದಯಮಾಡಿ ಬಂದು ನನಗೋಸ್ಕರ ಈ ಜನರಿಗೆ ಶಾಪಕೊಡಬೇಕು. ಆಗ ಅವರನ್ನು ಸೋಲಿಸಿ ಈ ದೇಶದಿಂದ ಹೊರಡಿಸಿಬಿಡುವುದಕ್ಕೆ ನನ್ನಿಂದ ಆಗುವುದು. ನಿನ್ನ ಆಶೀರ್ವಾದದಿಂದ ಶುಭವೂ, ನಿನ್ನ ಶಾಪದಿಂದ ಅಶುಭವೂ ಉಂಟಾಗುತ್ತದೆ ಎಂಬುದನ್ನು ನಾನು ಬಲ್ಲೆನು” ಎಂದು ಕಳುಹಿಸಿದನು.
7 ಮೋವಾಬ್ಯರ ಹಿರಿಯರೂ, ಮಿದ್ಯಾನ್ಯರ ಹಿರಿಯರೂ ಶಕುನದ ಕಾಣಿಕೆಯನ್ನು ಕೈಯಲ್ಲಿ ತೆಗೆದುಕೊಂಡು ಬಿಳಾಮನ ಹತ್ತಿರಕ್ಕೆ ಬಂದು ಬಾಲಾಕನ ಮಾತುಗಳನ್ನು ತಿಳಿಸಿದರು.
8 ಬಿಳಾಮನು ಅವರಿಗೆ, “ಈ ರಾತ್ರಿ ನೀವು ಇಲ್ಲಿಯೇ ಇಳಿದುಕೊಂಡಿರಿ. ಯೆಹೋವನು ನನಗೆ ಹೇಳುವ ಮಾತುಗಳನ್ನು ನಿಮಗೆ ತಿಳಿಸುವೆನು” ಎಂದು ಹೇಳಿದನು. ಆಗ ಆ ರಾತ್ರಿ ಮೋವಾಬ್ಯರ ಪ್ರಧಾನರು ಬಿಳಾಮನ ಬಳಿಯಲ್ಲಿ ಇಳಿದುಕೊಂಡರು.
9 ದೇವರು ಬಿಳಾಮನಿಗೆ, “ನಿನ್ನ ಬಳಿಯಲ್ಲಿರುವ ಆ ಮನುಷ್ಯರು ಯಾರು?” ಎಂದು ಕೇಳಲು,
10 ಬಿಳಾಮನು ದೇವರಿಗೆ, “ಮೋವಾಬ್ಯರ ಅರಸನೂ, ಚಿಪ್ಪೋರನ ಮಗನಾದ ಬಾಲಾಕನು ನನ್ನ ಬಳಿಗೆ ದೂತರನ್ನು ಕಳುಹಿಸಿ,
11 ‘ಒಂದು ಜನಾಂಗವು ಐಗುಪ್ತ ದೇಶದಿಂದ ಹೊರಟು ಬಂದಿದೆ. ಅವರು ಭೂಮಿಯನ್ನೆಲ್ಲಾ ಆವರಿಸಿಕೊಂಡಿದ್ದಾರೆ; ನೀನು ಬಂದು ಅವರಿಗೆ ಶಾಪಕೊಡಬೇಕು; ಕೊಟ್ಟರೆ ಅವರನ್ನು ಸೋಲಿಸಿ ಹೊರಡಿಸಿಬಿಡುವುದಕ್ಕೆ ನನ್ನಿಂದ ಆಗುವುದು’” ಎಂದು ಹೇಳಿಕಳುಹಿಸಿದ್ದಾನೆ ಎಂದು ಉತ್ತರಕೊಟ್ಟನು.
12 ಅದಕ್ಕೆ ದೇವರು ಬಿಳಾಮನಿಗೆ, “ನೀನು ಅವರ ಜೊತೆಯಲ್ಲಿ ಹೋಗಬಾರದು. ಆ ಜನಾಂಗದವರು ನನ್ನ ಆಶೀರ್ವಾದವನ್ನು ಹೊಂದಿದವರು; ಅವರನ್ನು ಶಪಿಸಬಾರದು” ಎಂದು ಹೇಳಿದನು.
13 ಬೆಳಿಗ್ಗೆ ಬಿಳಾಮನು ಎದ್ದು ಬಾಲಾಕನ ಪ್ರಧಾನರಿಗೆ, “ನೀವು ನಿಮ್ಮ ದೇಶಕ್ಕೆ ಹೋಗಿರಿ. ನಾನು ನಿಮ್ಮ ಜೊತೆಯಲ್ಲಿ ಬರುವುದಕ್ಕೆ ಯೆಹೋವನು ನನಗೆ ಅಪ್ಪಣೆಕೊಡಲಿಲ್ಲ” ಎಂದು ಹೇಳಿದನು.
14 ಮೋವಾಬ್ಯರ ಪ್ರಧಾನರು ಹೊರಟು ಬಾಲಾಕನ ಬಳಿಗೆ ಬಂದು, “ಬಿಳಾಮನು ನಮ್ಮ ಜೊತೆಯಲ್ಲಿ ಬರಲ್ಲಿಲ” ಎಂದು ತಿಳಿಸಿದರು.
15 ಆದರೆ ಬಾಲಾಕನು ಅವರಿಗಿಂತಲೂ ಘನವಂತರಾದ ಹೆಚ್ಚು ಮಂದಿ ಪ್ರಧಾನರನ್ನು ಕಳುಹಿಸಿದನು.
16 ಇವರು ಬಿಳಾಮನ ಬಳಿಗೆ ಬಂದು ಅವನಿಗೆ, “ಚಿಪ್ಪೋರನ ಮಗನಾದ ಬಾಲಾಕನು ಹೀಗೆ ಹೇಳುತ್ತಾನೆ, ‘ನೀನು ದಯಮಾಡಿ ನನ್ನ ಬಳಿಗೆ ಬರುವುದಕ್ಕೆ ಯಾವ ಅಡ್ಡಿಯನ್ನೂ ಹೇಳಬೇಡ.
17 ಏಕೆಂದರೆ ನಾನು ನಿನ್ನನ್ನು ಬಹಳವಾಗಿ ಘನಪಡಿಸುವೆನು. ನೀನು ಏನು ಹೇಳಿದರೂ ಅದನ್ನು ಮಾಡುತ್ತೇನೆ. ನೀನು ದಯಮಾಡಿ ಬಂದು ಈ ಜನರನ್ನು ನನಗಾಗಿ ಶಪಿಸಬೇಕು’” ಎಂದನು.
18 ಅದಕ್ಕೆ ಬಿಳಾಮನು ಬಾಲಾಕನ ಸೇವಕರಿಗೆ, “ತನ್ನ ಮನೇ ತುಂಬುವಷ್ಟು ಬೆಳ್ಳಿಬಂಗಾರ ಕೊಟ್ಟರೂ ನಾನು ನನ್ನ ದೇವರಾದ ಯೆಹೋವನ ಆಜ್ಞೆಯನ್ನು ಮೀರಿ ಸಣ್ಣ ಕೆಲಸವನ್ನಾಗಲಿ, ದೊಡ್ಡ ಕೆಲಸವನ್ನಾಗಲಿ ಮಾಡಲಾರೆನು.
19 ಆದುದರಿಂದ ನೀವೂ ಕೂಡ ಈ ರಾತ್ರಿ ಇಲ್ಲಿಯೇ ಇಳಿದುಕೊಳ್ಳಿರಿ. ಯೆಹೋವನು ಈಗ ಏನು ಹೇಳುವನೋ ಅದನ್ನು ನಿಮಗೆ ತಿಳಿಸುತ್ತೇನೆ” ಎಂದು ಉತ್ತರಕೊಟ್ಟನು.
20 ಆ ರಾತ್ರಿ ದೇವರು ಬಿಳಾಮನ ಬಳಿಗೆ ಬಂದು, “ಆ ಮನುಷ್ಯರು ನಿನ್ನನ್ನು ಕರೆಯುವುದಕ್ಕೆ ಬಂದಿರುವುದರಿಂದ ಎದ್ದು ಅವರ ಜೊತೆಯಲ್ಲಿ ಹೋಗು. ಆದರೆ ನಾನು ನಿನಗೆ ಆಜ್ಞಾಪಿಸುವ ಪ್ರಕಾರವೇ ನೀನು ಮಾಡಬೇಕು” ಎಂದನು.
21 ಬೆಳಿಗ್ಗೆ ಬಿಳಾಮನು ತನ್ನ ಕತ್ತೆಗೆ ಕಡಿವಾಣ ಹಾಕಿಸಿ ಮೋವಾಬ್ಯರ ಪ್ರಧಾನರ ಜೊತೆಯಲ್ಲಿ ಹೊರಟನು.
22 ಅವನು ಹೋದುದರಿಂದ ದೇವರಿಗೆ ಕೋಪವುಂಟಾಯಿತು. ಯೆಹೋವನ ದೂತನು ಅವನಿಗೆ ಎದುರಾಳಿಯಾಗಿ ದಾರಿಯಲ್ಲಿ ನಿಂತುಕೊಂಡನು. ಬಿಳಾಮನು ತನ್ನ ಕತ್ತೆಯ ಮೇಲೆ ಕುಳಿತುಕೊಂಡಿದ್ದನು. ಅವನ ಇಬ್ಬರು ಆಳುಗಳು ಅವನ ಸಂಗಡ ಇದ್ದರು.
23 ಯೆಹೋವನ ದೂತನು ಬಿಚ್ಚುಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ದಾರಿಯಲ್ಲೇ ನಿಂತಿರುವುದನ್ನು ಆ ಕತ್ತೆ ನೋಡಿ ದಾರಿಯನ್ನು ಬಿಟ್ಟು ಅಡವಿಯ ಕಡೆಗೆ ಹೋಯಿತು. ಕತ್ತೆಯನ್ನು ದಾರಿಗೆ ತಿರುಗಿಸುವುದಕ್ಕೆ ಬಿಳಾಮನು ಅದನ್ನು ಹೊಡೆದನು.
24 ಆ ಮೇಲೆ ಯೆಹೋವನ ದೂತನು ದ್ರಾಕ್ಷಿತೋಟಗಳ ಸಂದಿನಲ್ಲಿ ನಿಂತುಕೊಂಡನು. ಎರಡು ಕಡೆಯಲ್ಲಿಯೂ ಗೋಡೆಯಿತ್ತು.
25 ಕತ್ತೆ ಯೆಹೋವನ ದೂತನನ್ನು ಪುನಃ ನೋಡಿ ಗೋಡೆಗೆ ಒತ್ತಿಕೊಂಡು ಬಿಳಾಮನ ಕಾಲನ್ನು ಆ ಗೋಡೆಗೆ ಇರುಕಿಸಲು ಅವನು ಅದನ್ನು ತಿರುಗಿ ಹೊಡೆದನು.
26 ಆಗ ಯೆಹೋವನ ದೂತನು ಮುಂದೆ ಹೋಗಿ ಎಡಬಲಕ್ಕೆ ತಿರುಗಲಿಕ್ಕೆ ದಾರಿಯಿಲ್ಲದ ಇಕ್ಕಟ್ಟಾದ ಸ್ಥಳದಲ್ಲಿ ನಿಂತುಕೊಂಡನು.
27 ಕತ್ತೆಯು ಯೆಹೋವನ ದೂತನನ್ನು ನೋಡಿ ಬಿಳಾಮನ ಕೆಳಗೆ ಬಿತ್ತು. ಬಿಳಾಮನು ಸಿಟ್ಟುಗೊಂಡು ತನ್ನ ಕೈಕೋಲಿನಿಂದ ಕತ್ತೆಯನ್ನು ಹೊಡೆದನು.
28 ಆಗ ಯೆಹೋವನು ಆ ಕತ್ತೆಗೆ ಮಾತನಾಡುವ ಶಕ್ತಿಯನ್ನು ಕೊಡಲಾಗಿ ಅದು ಬಿಳಾಮನನ್ನು, “ನೀನು ಮೂರು ಸಾರಿ ನನ್ನನ್ನು ಹೊಡೆದದ್ದೇಕೆ? ನಾನು ನಿನಗೇನು ಮಾಡಿದ್ದೇನೆ” ಎಂದು ಕೇಳಿತು.
29 ಅದಕ್ಕೆ ಬಿಳಾಮನು ಕತ್ತೆಗೆ, “ನೀನು ಇಷ್ಟ ಬಂದಂತೆ ನನ್ನನ್ನು ಆಡಿಸಿದೆಯಲ್ಲಾ. ನನ್ನ ಕೈಯಲ್ಲಿ ಕತ್ತಿಯಿದ್ದರೆ ನಿನ್ನನ್ನು ಕೊಂದು ಹಾಕಿಬಿಡುತ್ತಿದ್ದೆ” ಎಂದನು.
30 ಅದಕ್ಕೆ ಆ ಕತ್ತೆಯು ಬಿಳಾಮನಿಗೆ, “ನಿನ್ನ ಜೀವಮಾನವೆಲ್ಲಾ ಇಂದಿನವರೆಗೂ ನೀನು ಹತ್ತುತ್ತಾ ಇರುವ ನಿನ್ನ ಕತ್ತೆಯು ನಾನಲ್ಲವೇ? ನಾನು ಯಾವಾಗಲಾದರೂ ಈ ರೀತಿಯಾಗಿ ಮಾಡಿದ್ದುಂಟೋ?” ಎಂದಾಗ ಬಿಳಾಮನು “ಇಲ್ಲ” ಎಂದನು.
31 ಅಷ್ಟರಲ್ಲೇ ಯೆಹೋವನು ಬಿಳಾಮನ ಕಣ್ಣುಗಳನ್ನು ತೆರೆದನು. ಯೆಹೋವನ ದೂತನು ಬಿಚ್ಚು ಕತ್ತಿಯನ್ನು ಹಿಡಿದು ದಾರಿಯಲ್ಲೇ ನಿಂತಿರುವುದನ್ನು ಕಂಡು ಬೋರಲುಬಿದ್ದು ನಮಸ್ಕರಿಸಿದನು.
32 ಯೆಹೋವನ ದೂತನು ಅವನಿಗೆ, “ನೀನು ಮೂರು ಸಾರಿ ಕತ್ತೆಯನ್ನು ಹೊಡೆದದ್ದೇಕೆ? ನೀನು ನನಗೆ ವಿರುದ್ಧವಾದ ಮಾರ್ಗವನ್ನು ಹಿಡಿದುದರಿಂದ ನಿನ್ನನ್ನು ತಡೆಯುವುದಕ್ಕೆ ನಾನೇ ಬಂದಿದ್ದೇನೆ.
33 ಆ ಕತ್ತೆ ನನ್ನನ್ನು ನೋಡಿ ಮೂರು ಸಾರಿ ನನ್ನ ಎದುರಿನಿಂದ ವಾರೆಯಾಗಿ ತಿರುಗಿಕೊಂಡಿತು. ಹಾಗೆ ತಿರುಗಿಕೊಳ್ಳದಿದ್ದರೆ ನಾನು ಕತ್ತೆಯ ಪ್ರಾಣವನ್ನು ಉಳಿಸಿ ನಿನ್ನನ್ನು ಕೊಂದು ಹಾಕಿಬಿಡುತ್ತಿದ್ದೆನು” ಎಂದು ಹೇಳಿದನು.
34 ಅದಕ್ಕೆ ಬಿಳಾಮನು ಯೆಹೋವನ ದೂತನಿಗೆ, “ನಾನು ಪಾಪಮಾಡಿದ್ದೇನೆ. ನೀನೇ ನನಗೆ ಎದುರಾಗಿ ದಾರಿಯಲ್ಲಿ ನಿಂತಿರುವುದು ನನಗೆ ತಿಳಿಯಲಿಲ್ಲ. ನಾನು ಮಾಡುವುದು ನಿನಗೆ ಕೆಟ್ಟದ್ದಾಗಿ ತೋರಿದರೆ ಹಿಂದಕ್ಕೆ ಹೋಗುತ್ತೇನೆ” ಎಂದನು.
35 ಯೆಹೋವನ ದೂತನು ಬಿಳಾಮನಿಗೆ, “ಈ ಮನುಷ್ಯರ ಜೊತೆಯಲ್ಲಿ ಹೋಗು. ಆದರೆ ನಾನು ನಿನಗೆ ಹೇಳುವ ಮಾತನ್ನೇ ಹೊರತು ಬೇರೆ ಯಾವುದನ್ನೂ ಹೇಳಬಾರದು” ಎಂದು ಹೇಳಿದನು. ಬಿಳಾಮನು ಬಾಲಾಕನ ಪ್ರಧಾನರ ಜೊತೆಯಲ್ಲಿ ಹೊರಟುಹೋದನು.
36 ಬಿಳಾಮನು ಬಂದ ವರ್ತಮಾನವನ್ನು ಬಾಲಾಕನು ಕೇಳಿ ಅವನನ್ನು ಎದುರುಗೊಳ್ಳುವುದಕ್ಕಾಗಿ ತನ್ನ ದೇಶದ ಗಡಿಯಾದ ಅರ್ನೋನ್ ನದಿಯ ತೀರದಲ್ಲಿರುವ ಮೋವಾಬ್ಯರ ಪಟ್ಟಣಕ್ಕೆ ಹೋದನು.
37 ಬಾಲಾಕನು ಬಿಳಾಮನನ್ನು ಕಂಡಾಗ, “ನಿನ್ನನ್ನು ಅವಸರದಿಂದ ಕರೆಯುವುದಕ್ಕೆ ದೂತರನ್ನು ಕಳುಹಿಸಿದೆನಲ್ಲಾ? ನೀನು ಏಕೆ ಆಗಲೇ ಬರಲಿಲ್ಲ? ನಿನ್ನನ್ನು ಘನಪಡಿಸುವುದಕ್ಕೆ ನಾನು ಸಮರ್ಥನಲ್ಲವೆಂದು ಭಾವಿಸುತ್ತೀಯೋ?” ಎಂದನು.
ಅರಣ್ಯ 22 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019