Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೋಹಾ - ಯೋಹಾ 7

ಯೋಹಾ 7:4-29

Help us?
Click on verse(s) to share them!
4ಪ್ರಸಿದ್ಧಿಗೆ ಬರಬೇಕೆಂದಿರುವವನು ಯಾರೂ ರಹಸ್ಯವಾಗಿ ಯಾವುದನ್ನೂ ಮಾಡುವುದಿಲ್ಲ. ನೀನು ಇವುಗಳನ್ನು ಮಾಡುವುದರಿಂದ, ಲೋಕಕ್ಕೆ ನಿನ್ನನ್ನು ನೀನೇ ತೋರ್ಪಡಿಸಿಕೋ” ಎಂದು ಹೇಳಿದರು.
5ಏಕೆಂದರೆ ಆತನ ಸಹೋದರರು ಸಹ ಆತನನ್ನು ನಂಬಲಿಲ್ಲ.
6ಅದಕ್ಕೆ ಯೇಸು ಅವರಿಗೆ, “ನನ್ನ ಸಮಯವು ಇನ್ನೂ ಬಂದಿಲ್ಲ. ನಿಮ್ಮ ಸಮಯವು ಯಾವಾಗಲೂ ಸಿದ್ಧವಾಗಿದೆ.
7ಲೋಕವು ನಿಮ್ಮನ್ನು ದ್ವೇಷಿಸಲಾರದು, ಆದರೆ ನಾನು ಅದರ ಕ್ರಿಯೆಗಳು ಕೆಟ್ಟವುಗಳೆಂದು ಸಾಕ್ಷಿ ಹೇಳುವುದರಿಂದ, ಅದು ನನ್ನನ್ನು ದ್ವೇಷಿಸುತ್ತದೆ.
8ನೀವು ಈ ಹಬ್ಬಕ್ಕೆ ಹೋಗಿರಿ, ನನ್ನ ಸಮಯವು ಇನ್ನೂ ಬಾರದಿರುವುದರಿಂದ ನಾನು ಈ ಹಬ್ಬಕ್ಕೆ ಈಗ ಹೋಗುವುದಿಲ್ಲ” ಎಂದು ಹೇಳಿದನು.
9ಇದನ್ನು ಹೇಳಿದ ಮೇಲೆ ಆತನು ಗಲಿಲಾಯದಲ್ಲಿಯೇ ಉಳಿದುಕೊಂಡನು.
10ಆದರೆ ಆತನ ಸಹೋದರರು ಹೋದ ಮೇಲೆ ಆತನು ಸಹ ಹಬ್ಬಕ್ಕೆ ಬಹಿರಂಗವಾಗಿ ಹೋಗದೆ, ರಹಸ್ಯವಾಗಿ ಹೋದನು.
11ಆ ಹಬ್ಬದಲ್ಲಿ ಯೆಹೂದ್ಯರು, “ಆ ಮನುಷ್ಯನು ಎಲ್ಲಿ?” ಎಂದು ಹುಡುಕುತ್ತಿದ್ದರು.
12ಜನರು ಗುಂಪುಗಳಲ್ಲಿ ಆತನ ವಿಷಯವಾಗಿ ಗೊಣಗುಟ್ಟುತಿದ್ದರು. ಕೆಲವರು “ಆತನು ಒಳ್ಳೆಯ ಮನುಷ್ಯನು” ಎಂದರು, ಇನ್ನು ಕೆಲವರು “ಇಲ್ಲ ಆತನು ಜನರಿಗೆ ಮೋಸ ಮಾಡುತ್ತಾನೆ” ಎಂದರು.
13ಆದರೂ ಯೆಹೂದ್ಯರ ಭಯದಿಂದ ಯಾರೂ ಆತನ ವಿಷಯದಲ್ಲಿ ಬಹಿರಂಗವಾಗಿ ಮಾತನಾಡಲಿಲ್ಲ.
14ಹಬ್ಬದ ಮಧ್ಯಕಾಲದಲ್ಲಿ ಯೇಸು ದೇವಾಲಯಕ್ಕೆ ಹೋಗಿ ಬೋಧಿಸತೊಡಗಿದನು.
15ಯೆಹೂದ್ಯರು ಅದಕ್ಕೆ ಆಶ್ಚರ್ಯಪಟ್ಟು, “ಶಾಸ್ತ್ರಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವುದಾದರೂ ಹೇಗೆ?” ಎಂದರು.
16ಅದಕ್ಕೆ ಯೇಸು “ನಾನು ಹೇಳುವ ಬೋಧನೆಯು ನನ್ನದಲ್ಲ. ನನ್ನನ್ನು ಕಳುಹಿಸಿದಾತನದೇ.
17ಯಾರಿಗಾದರೂ ಆತನ ಚಿತ್ತದಂತೆ ನಡೆಯುವುದಕ್ಕೆ ಮನಸ್ಸಿದೆಯೋ ಅವರಿಗೆ ಈ ಬೋಧನೆಯು ದೇವರಿಂದ ಬಂದ್ದದ್ದೋ ಅಥವಾ ನಾನೇ ಮಾತನಾಡುತ್ತೇನೋ ಎಂಬುದು ಗೊತ್ತಾಗುವುದು.
18ತನ್ನಷ್ಟಕ್ಕೆ ತಾನೇ ಮಾತನಾಡುವವನು ತನ್ನ ಸ್ವಂತ ಗೌರವ ಹುಡುಕುತ್ತಾನೆ, ಆದರೆ ತನ್ನನ್ನು ಕಳುಹಿಸಿದಾತನ ಗೌರವನ್ನೇ ಹುಡುಕುವ ಮನುಷ್ಯನೇ ಸತ್ಯವಂತನು; ಆತನಲ್ಲಿ ಕೆಟ್ಟತನವಿಲ್ಲ.
19ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಡಲಿಲ್ಲವೇ? ಆದರೂ ನಿಮ್ಮಲ್ಲಿ ಒಬ್ಬನಾದರೂ ಆ ಧರ್ಮಶಾಸ್ತ್ರದಂತೆ ನಡೆಯಲಿಲ್ಲ. ನೀವು ನನ್ನನ್ನು ಕೊಲ್ಲುವುದಕ್ಕೆ ಹುಡುಕುವುದೇಕೆ?” ಎಂದು ಕೇಳಿದನು.
20ಅದಕ್ಕೆ ಆ ಜನರು, “ನಿನಗೆ ದೆವ್ವ ಹಿಡಿದಿದೆ. ನಿನ್ನನ್ನು ಕೊಲ್ಲುವುದಕ್ಕೆ ಯಾರು ಹುಡುಕುತ್ತಿದ್ದಾರೆ?” ಎಂದರು.
21ಯೇಸು ಅವರಿಗೆ “ನಾನುಒಂದು ಸೂಚಕ ಕಾರ್ಯವನ್ನು ಮಾಡಿದೆನು, ಅದಕ್ಕೆ ನೀವೆಲ್ಲರೂ ಬೆರಗಾಗಿದ್ದೀರಿ.
22ಮೋಶೆಯು ನಿಮಗೆ ಸುನ್ನತಿಯೆಂಬ ನಿಯಮವನ್ನು ನೇಮಿಸಿದನು, (ಅದು ಮೋಶೆಯಿಂದ ಬಂದದ್ದೆಂದು ನಾನು ಹೇಳುವುದಿಲ್ಲ,ಮೂಲಪುರುಷರ ಕಾಲದಿಂದ ಬಂದದ್ದು) ಮತ್ತು ಮನುಷ್ಯನಿಗೆ ಸುನ್ನತಿಯನ್ನು ಸಬ್ಬತ್ ದಿನದಲ್ಲಿಯೂ ಮಾಡುತ್ತೀರಿ.
23ಮೋಶೆಯ ಧರ್ಮಶಾಸ್ತ್ರವನ್ನು ಮೀರಬಾರದೆಂದು ಒಬ್ಬನು ಸಬ್ಬತ್ ದಿನದಲ್ಲಿ ಸುನ್ನತಿಯನ್ನು ಮಾಡಿಸಿಕೊಳ್ಳುವುದಾದರೆ, ನಾನು ಸಬ್ಬತ್ ದಿನದಲ್ಲಿ ಒಬ್ಬ ಮನುಷ್ಯನನ್ನು ಸ್ವಸ್ಥಮಾಡಿದ್ದಕ್ಕೆ ನನ್ನ ಮೇಲೆ ನೀವು ಏಕೆ ಕೋಪಗೊಳ್ಳುತ್ತೀರಿ?
24ತೋರಿಕೆಗೆ ಅನುಸಾರವಾಗಿ ತೀರ್ಪುಮಾಡಬೇಡಿರಿ. ನ್ಯಾಯಬದ್ಧವಾಗಿ ತೀರ್ಪುನ್ನು ಮಾಡಿರಿ” ಎಂದನು.
25ಆಮೇಲೆ ಯೆರೂಸಲೇಮಿನವರಲ್ಲಿ ಕೆಲವರು “ಅವರು ಕೊಲ್ಲಬೇಕೆಂದು ಹುಡುಕುವುದು ಈತನನ್ನೇ ಅಲ್ಲವೇ?
26ನೋಡಿರಿ, ಈತನು ಬಹಿರಂಗವಾಗಿ ಮಾತನಾಡುತ್ತಿದ್ದಾನೆ ಮತ್ತು ಅವರು ಆತನಿಗೆ ಏನೂ ಹೇಳುತ್ತಿಲ್ಲ. ಬಹುಶಃ ಈತನೇ ನಿಜವಾದ ಕ್ರಿಸ್ತನೆಂದು ಅಧಿಕಾರಿಗಳು ತಿಳಿದುಕೊಂಡಿದ್ದಾರೋ?
27ಆದರೆ ಇವನು ಎಲ್ಲಿಂದ ಬಂದವನೆಂದು ನಾವು ಬಲ್ಲೆವು, ಕ್ರಿಸ್ತನು ಬರುವಾಗ ಆತನು ಎಲ್ಲಿಂದ ಬಂದವನೆಂದು ಒಬ್ಬರಿಗೂ ತಿಳಿಯುವುದಿಲ್ಲವೆಂದು ಮಾತನಾಡಿಕೊಳ್ಳುತ್ತಿದ್ದರು.”
28ಯೇಸುವು ಇದನ್ನು ತಿಳಿದು ದೇವಾಲಯದಲ್ಲಿ ಉಪದೇಶ ಮಾಡುವಾಗ, “ನೀವು ನನ್ನನ್ನು ಬಲ್ಲಿರಿ, ನಾನು ಎಲ್ಲಿಂದ ಬಂದವನೆಂದೂ ನೀವು ಬಲ್ಲಿರಿ, ಆದರೂ ನಾನು ನನ್ನಷ್ಟಕ್ಕೆ ನಾನೇ ಬಂದವನಲ್ಲ. ನನ್ನನ್ನು ಕಳುಹಿಸಿದಾತನು ಸತ್ಯವಂತನು. ನೀವು ಆತನನ್ನು ಅರಿತವರಲ್ಲ.
29ಆದರೆ ನಾನು ಆತನನ್ನು ಬಲ್ಲೆನು ಏಕೆಂದರೆ, ನಾನು ಆತನ ಕಡೆಯಿಂದ ಬಂದವನು ಮತ್ತು ಆತನೇ ನನ್ನನ್ನು ಕಳುಹಿಸಿದನು” ಎಂದು ಕೂಗಿ ಹೇಳಿದನು.

Read ಯೋಹಾ 7ಯೋಹಾ 7
Compare ಯೋಹಾ 7:4-29ಯೋಹಾ 7:4-29