Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೋಹಾ - ಯೋಹಾ 6

ಯೋಹಾ 6:31-56

Help us?
Click on verse(s) to share them!
31ನಮ್ಮ ಪೂರ್ವಿಕರು ಅರಣ್ಯದಲ್ಲಿ ಮನ್ನಾ ತಿಂದರು. ‘ಪರಲೋಕದಿಂದ ರೊಟ್ಟಿಯನ್ನು ಅವರಿಗೆ ತಿನ್ನುವುದಕ್ಕೆ ಕೊಟ್ಟನು’ ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲಾ” ಎಂದು ಕೇಳಿದಾಗ,
32ಯೇಸು ಅವರಿಗೆ “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಟ್ಟವನಲ್ಲ, ನನ್ನ ತಂದೆಯು ಪರಲೋಕದಿಂದ ಬರುವ ನಿಜವಾದ ರೊಟ್ಟಿಯನ್ನು ನಿಮಗೆ ಕೊಡುತ್ತಾನೆ.
33ದೇವರು ಕೊಡುವ ಆ ರೊಟ್ಟಿ ಯಾವುದೆಂದರೆ, ಪರಲೋಕದಿಂದ ಇಳಿದು ಬಂದು ಲೋಕಕ್ಕೆ ಜೀವವನ್ನು ಉಂಟುಮಾಡುವಂಥದ್ದೇ” ಎಂದು ಹೇಳಿದನು.
34ಆಗ ಅವರು “ಆಯ್ಯಾ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು” ಎಂದರು.
35ಯೇಸು ಅವರಿಗೆ “ನಾನೇ ಜೀವದ ರೊಟ್ಟಿ ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವನಿಗೆ ಎಂದಿಗೂಬಾಯಾರಿಕೆಯಾಗುವುದಿಲ್ಲ.
36ಆದರೆ ನೀವು ನನ್ನನ್ನು ನೋಡಿದ್ದರೂ ನಂಬಲಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ.
37ತಂದೆಯು ನನಗೆ ಕೊಡುವಂಥವರೆಲ್ಲರೂ ನನ್ನ ಬಳಿಗೆ ಬರುವರು. ನನ್ನ ಬಳಿಗೆ ಬರುವವನನ್ನು ನಾನು ಎಂದಿಗೂ ತಳ್ಳಿಬಿಡುವುದೇ ಇಲ್ಲ.
38ನಾನು ನನ್ನ ಸ್ವಂತ ಚಿತ್ತದಂತೆ ಮಾಡುವುದಕ್ಕಾಗಿ ಬಂದಿಲ್ಲ, ಆದರೆ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವುದಕ್ಕೆ ಪರಲೋಕದಿಂದ ಇಳಿದು ಬಂದಿರುವೆ.
39ನನ್ನನ್ನು ಕಳುಹಿಸಿದಾತನ ಚಿತ್ತವು ಏನೆಂದರೆ, ಆತನು ನನಗೆ ಕೊಟ್ಟವರಲ್ಲಿ ನಾನು ಯಾರನ್ನೂ ಕಳೆದುಕೊಳ್ಳದೆಅವರನ್ನು ಕಡೆ ದಿನದಲ್ಲಿ ಎಬ್ಬಿಸಬೇಕೆಂಬುದೇ.
40ಮಗನನ್ನು ನೋಡಿ ತಂದೆಯಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ನನ್ನ ತಂದೆಯ ಚಿತ್ತವಾಗಿದೆ, ಮತ್ತು ನಾನು ಕಡೆ ದಿನದಲ್ಲಿ ಅವನನ್ನು ಎಬ್ಬಿಸುವೆನು” ಎಂದು ಹೇಳಿದನು.
41ಆತನು, “ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ” ಎಂದು ಹೇಳಿದ್ದಕ್ಕೆ ಯೆಹೂದ್ಯರು ಆತನ ವಿಷಯವಾಗಿ ಗೊಣಗುಟ್ಟಿ,
42“ಈತನು ಯೋಸೇಫನ ಮಗನಾದ ಯೇಸು ಅಲ್ಲವೇ? ಈತನ ತಂದೆ ತಾಯಿಗಳನ್ನು ನಾವು ಬಲ್ಲೆವಲ್ಲವೇ? ಹಾಗಾದರೆ, ‘ನಾನು ಪರಲೋಕದಿಂದ ಇಳಿದು ಬಂದೆನು’ ಎಂದು ಈತನು ಹೇಳುವುದಾದರೂ ಹೇಗೆ?” ಎಂದರು.
43ಅದಕ್ಕೆ ಯೇಸು ಅವರಿಗೆ, “ನಿಮ್ಮ ನಿಮ್ಮೊಳಗೆ ಗೊಣಗುಟ್ಟುವುದನ್ನು ನಿಲ್ಲಿಸಿರಿ” ಎಂದು ಉತ್ತರ ಕೊಟ್ಟನು.
44“ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಸೆಳೆಯದ ಹೊರತು, ಯಾವನೂ ನನ್ನ ಬಳಿಗೆ ಬರಲಾರನು, ಮತ್ತು ನಾನು ಅವನನ್ನು ಕಡೆ ದಿನದಲ್ಲಿ ಎಬ್ಬಿಸುವೆನು.
45‘ಅವರೆಲ್ಲರೂ ದೇವರಿಂದಲೇ ಬೋಧಿಸಲ್ಪಡುವರು’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬನೂ ನನ್ನ ಬಳಿಗೆ ಬರುತ್ತಾರೆ.
46ದೇವರಿಂದ ಬಂದವನೊಬ್ಬನೇ ತಂದೆಯನ್ನು ನೋಡಿದ್ದಾನೆಯೇ ಹೊರತು ಮತ್ಯಾರು ತಂದೆಯನ್ನು ನೋಡಿಲ್ಲ; ಆತನೊಬ್ಬನೇ ತಂದೆಯನ್ನು ನೋಡಿದವನು.
47ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ.
48ನಾನೇ ಜೀವದ ರೊಟ್ಟಿ
49ನಿಮ್ಮ ಪೂರ್ವಿಕರು ಅಡವಿಯಲ್ಲಿ ಮನ್ನಾ ತಿಂದರೂ ಸತ್ತು ಹೋದರು.
50ಪರಲೋಕದಿಂದ ಇಳಿದು ಬರುವಂಥ ಆ ರೊಟ್ಟಿ, ಎಂಥದೆಂದರೆ ಅದನ್ನು ತಿಂದವನು ಎಂದಿಗೂ ಸಾಯುವುದಿಲ್ಲ.
51ನಾನೇ ಪರಲೋಕದಿಂದ ಇಳಿದು ಬಂದ ಜೀವವುಳ್ಳ ರೊಟ್ಟಿ. ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾ ಕಾಲವು ಬದುಕುವನು; ಮತ್ತು ನಾನು ಕೊಡುವ ರೊಟ್ಟಿ ನನ್ನ ದೇಹವೇ, ಅದನ್ನು ಲೋಕದ ಜೀವಕ್ಕಾಗಿ ಕೊಡುವೆನು” ಎಂದು ಹೇಳಿದನು.
52ಆಗ ಯೆಹೂದ್ಯರು, “ಈ ಮನುಷ್ಯನು ತನ್ನ ದೇಹವನ್ನು ತಿನ್ನುವುದಕ್ಕೆ ನಮಗೆ ಹೇಗೆ ಕೊಡುತ್ತಾನೇ?” ಎಂದು ತಮ್ಮತಮ್ಮೊಳಗೆ ವಾಗ್ವಾದಮಾಡಲು ಪ್ರಾರಂಭಿಸಿದರು.
53ಅದಕ್ಕೆ ಯೇಸು ಅವರಿಗೆ, “ನಿಮಗೆ ನಿಜ ನಿಜವಾಗಿ ಹೇಳುತ್ತೇನೆ; ನೀವು ಮನುಷ್ಯಕುಮಾರನ ದೇಹವನ್ನು ತಿಂದು ಮತ್ತು ಆತನ ರಕ್ತವನ್ನು ಕುಡಿಯದೆ ಹೋದರೆ, ನಿಮ್ಮಲ್ಲಿ ನಿತ್ಯಜೀವವಿರುವುದಿಲ್ಲ.
54ಯಾರು ನನ್ನ ದೇಹವನ್ನು ತಿಂದು, ನನ್ನ ರಕ್ತವನ್ನು ಕುಡಿಯುವನೋ ಅವನು ನಿತ್ಯ ಜೀವವನ್ನು ಹೊಂದುವನು. ಮತ್ತು ನಾನು ಅವನನ್ನು ಕಡೆ ದಿನದಲ್ಲಿ ಎಬ್ಬಿಸುವೆನು.
55ಏಕೆಂದರೆ ನನ್ನ ದೇಹವೇ ನಿಜವಾದ ಆಹಾರವೂ ಮತ್ತು ನನ್ನ ರಕ್ತವೇ ನಿಜವಾದ ಪಾನವೂ ಆಗಿದೆ.
56ಯಾರು ನನ್ನ ದೇಹವನ್ನು ತಿಂದು, ನನ್ನ ರಕ್ತವನ್ನು ಕುಡಿದಿದ್ದಾನೋ ಅವನು ನನ್ನಲ್ಲಿ ನೆಲೆಸಿರುತ್ತಾನೆ; ನಾನು ಅವನಲ್ಲಿ ನೆಲೆಸಿರುತ್ತೇನೆ.

Read ಯೋಹಾ 6ಯೋಹಾ 6
Compare ಯೋಹಾ 6:31-56ಯೋಹಾ 6:31-56