Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೋಹಾ - ಯೋಹಾ 5

ಯೋಹಾ 5:12-27

Help us?
Click on verse(s) to share them!
12ಅದಕ್ಕೆ ಯೆಹೂದ್ಯರು ಅವನಿಗೆ, “ಅದನ್ನು ಎತ್ತಿಕೊಂಡು ನಡೆ ಎಂದು ನಿನಗೆ ಹೇಳಿದ ಮನುಷ್ಯನು ಯಾರು?” ಎಂದು ಕೇಳಿದರು.
13ಆದರೆ ಆತನು ಯಾರೆಂದು ಸ್ವಸ್ಥನಾದವನಿಗೆ ತಿಳಿದಿರಲಿಲ್ಲ, ಏಕೆಂದರೆ, ಯೇಸು ಆ ಸ್ಥಳದಲ್ಲಿ ಇದ್ದ ಜನರ ಗುಂಪಿನ ಮಧ್ಯದಲ್ಲಿ ಮರೆಯಾದನು.
14ಇದಾದ ಮೇಲೆ ಯೇಸು ಅವನನ್ನು ದೇವಾಲಯದಲ್ಲಿ ಕಂಡು, “ನಿನಗೆ ಸ್ವಸ್ಥವಾಯಿತಲ್ಲಾ;ಇನ್ನು ಮೇಲೆ ಪಾಪ ಮಾಡಬೇಡ, ನಿನಗೆ ಹೆಚ್ಚಿನ ಕೇಡು ಬಂದೀತು” ಎಂದನು.
15ಆ ಮನುಷ್ಯನು ಅಲ್ಲಿಂದ ಹೋಗಿ, ತನ್ನನ್ನು ಸ್ವಸ್ಥಪಡಿಸಿದಾತನು ಯೇಸುವೇ ಎಂದು ಯೆಹೂದ್ಯರಿಗೆ ತಿಳಿಸಿದನು.
16ಆದಕಾರಣ ಯೆಹೂದ್ಯರು, ಯೇಸು ಸಬ್ಬತ್ ದಿನಗಳಲ್ಲಿ ಇಂಥಾ ಕಾರ್ಯಗಳನ್ನು ಮಾಡುತ್ತಾನಲ್ಲಾ ಎಂದು ಆತನನ್ನು ಹಿಂಸಿಸತೊಡಗಿದರು.
17ಅದಕ್ಕೆ ಯೇಸು ಅವರಿಗೆ, “ನನ್ನ ತಂದೆಯು ಇಂದಿನವರೆಗೂ ಕೆಲಸ ಮಾಡುತ್ತಿದ್ದಾನೆ, ನಾನೂ ಕೆಲಸ ಮಾಡುತ್ತೇನೆ” ಎಂದು ಹೇಳಿದನು.
18ಯೇಸು ಈ ಮಾತನ್ನು ಹೇಳಿದ್ದರಿಂದ, ಆತನು ಸಬ್ಬತ್ ದಿನವನ್ನು ಅಲಕ್ಷ್ಯಮಾಡಿದ್ದಲ್ಲದೇ, ದೇವರನ್ನು ತನ್ನ ಸ್ವಂತ ತಂದೆ ಎಂದು ಹೇಳಿ ತನ್ನನ್ನು ದೇವರಿಗೆ ಸರಿಸಮಾನ ಮಾಡಿಕೊಂಡನೆಂದು ಯೆಹೂದ್ಯರು ಆತನನ್ನು ಕೊಲ್ಲುವುದಕ್ಕೆ ಇನ್ನಷ್ಟು ಪ್ರಯತ್ನಪಟ್ಟರು.
19ಯೇಸು ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವುದನ್ನು ಕಂಡು ಮಗನು ಮಾಡುತ್ತಾನೆಯೇ, ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು. ಏಕೆಂದರೆ ಆತನು ಯಾವುದನ್ನೆಲ್ಲಾ ಮಾಡುವನೋ ಹಾಗೆಯೇ ಮಗನೂ ಮಾಡುತ್ತಾನೆ.
20ಏಕೆಂದರೆ, ತಂದೆಯು ಮಗನನ್ನು ಪ್ರೀತಿಸುತ್ತಾನೆ, ತಾನು ಮಾಡುವುದನ್ನೆಲ್ಲಾ ಅವನಿಗೆ ತೋರಿಸುತ್ತಾನೆ. ಇದಲ್ಲದೆ ಇವುಗಳಿಗಿಂತ ಮಹತ್ತಾದ ಕೆಲಸಗಳನ್ನು ಆತನಿಗೆ ತೋರಿಸುವನು. ಅವುಗಳನ್ನು ನೋಡಿ ನಿಮಗೆ ಆಶ್ಚರ್ಯವಾಗುವುದು.
21ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನು ಸಹ ತನಗೆ ಬೇಕಾದವರನ್ನು ಬದುಕಿಸುತ್ತಾನೆ.
22ಇದಲ್ಲದೆ ತಂದೆಯು ಯಾರಿಗೂ ತೀರ್ಪುಮಾಡುವುದಿಲ್ಲ, ಆದರೆ ಎಲ್ಲಾ ತೀರ್ಪನ್ನು ಮಗನಿಗೆ ಕೊಟ್ಟಿದ್ದಾನೆ.
23ಎಲ್ಲರೂ ತಂದೆಯನ್ನು ಯಾವ ರೀತಿಯಲ್ಲಿ ಗೌರವಿಸುವರೋ ಅದೇ ರೀತಿಯಲ್ಲಿ ಮಗನನ್ನೂ ಗೌರವಿಸಬೇಕೆಂದು ಹಾಗೆ ಮಾಡಿದ್ದಾನೆ. ಮಗನನ್ನು ಗೌರವಿಸದವನು ಆತನನ್ನು ಕಳುಹಿಸಿದ ತಂದೆಯನ್ನು ಗೌರವಿಸಲಾರನು.
24ನಿಮಗೆ ನಿಜನಿಜವಾಗಿ ಹೇಳುತ್ತೇನೆ ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯ ಜೀವವನ್ನು ಹೊಂದಿದ್ದಾನೆ, ಅವನು ಖಂಡನೆಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದಾನೆ.
25ನಿಮಗೆ ನಿಜನಿಜವಾಗಿ ಹೇಳುತ್ತೇನೆ ಸತ್ತವರು ದೇವಕುಮಾರನ ಸ್ವರವನ್ನು ಕೇಳುವ ಕಾಲ ಬರುತ್ತದೆ, ಅದು ಈಗಾಗಲೇ ಬಂದಿದೆ, ಕೇಳಿದವರು ಬದುಕುವರು.
26ತಂದೆಯು ತಾನು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ, ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಮಾಡಿದ್ದಾನೆ.
27ಮಗನು ಮನುಷ್ಯಕುಮಾರನಾಗಿರುವುದರಿಂದ ನ್ಯಾಯತೀರ್ಪು ಮಾಡುವ ಅಧಿಕಾರವನ್ನೂ ತಂದೆ ಆತನಿಗೆ ಕೊಟ್ಟಿದ್ದಾನೆ.

Read ಯೋಹಾ 5ಯೋಹಾ 5
Compare ಯೋಹಾ 5:12-27ಯೋಹಾ 5:12-27