Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೋಹಾ - ಯೋಹಾ 10

ಯೋಹಾ 10:3-31

Help us?
Click on verse(s) to share them!
3ಬಾಗಿಲು ಕಾಯುವವನು ಅವನಿಗೆ ಬಾಗಿಲನ್ನು ತೆರೆಯುತ್ತಾನೆ; ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಅವನು ತನ್ನ ಸ್ವಂತ ಕುರಿಗಳ ಹೆಸರು ಹೇಳಿ ಕರೆದು ಅವುಗಳನ್ನು ಹೊರಗೆ ಬಿಡುತ್ತಾನೆ.
4ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳಿದಿರುವುದರಿಂದ ಅವನನ್ನು ಹಿಂಬಾಲಿಸುತ್ತವೆ.
5ಆದರೆ ಅವು ಅಪರಿಚಿತನನ್ನು ಹಿಂಬಾಲಿಸದೇ ಅವನ ಬಳಿಯಿಂದ ಓಡಿಹೋಗುವುದಿಲ್ಲ. ಏಕೆಂದರೆ ಅವು ಅಪರಿಚಿತರ ಸ್ವರವನ್ನು ಗುರುತಿಸುವುದಿಲ್ಲ” ಎಂದು ನಿಮಗೆ ಹೇಳುತ್ತೇನೆ.
6ಈ ಸಾಮ್ಯವನ್ನು ಯೇಸು ಅವರಿಗೆ ಹೇಳಿದನು. ಆದರೂ ಆತನು ಹೇಳಿದ ವಿಷಯಗಳ ಅರ್ಥ ಏನೆಂಬುದು ಅವರು ಗ್ರಹಿಸಲಿಲ್ಲ.
7ಆಗ ಯೇಸು ಪುನಃ ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ; ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ,
8ನನಗಿಂತ ಮೊದಲು ಬಂದವರೆಲ್ಲರು ಕಳ್ಳರೂ, ದರೋಡೆಕೋರರೂ ಆಗಿದ್ದರು. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.
9ನಾನೇ ಆ ಬಾಗಿಲು. ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಪ್ರವೇಶಿಸಿದರೆ ಅವನು ಸುರಕ್ಷಿತನಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು ಮತ್ತು ಮೇವನ್ನು ಕಂಡುಕೊಳ್ಳುವನು.
10ಕಳ್ಳನಾದರೋ ಕದ್ದುಕೊಳ್ಳುವುದಕ್ಕೂ, ಕೊಯ್ಯುವುದಕ್ಕೂ ಮತ್ತು ನಾಶಮಾಡುವುದಕ್ಕೂ ಬರುತ್ತಾನೆಯೇ ಹೊರತು ಮತ್ತಾವುದಕ್ಕೂ ಬರುವುದಿಲ್ಲ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು.
11“ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.
12ಕೂಲಿಯಾಳು ಕುರಿಗಳ ಕುರುಬನೂ ಒಡೆಯನೂ ಆಗಿರದೆ, ಅವನು ತೋಳ ಬರುವುದನ್ನು ನೋಡುತ್ತಲೇ ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ. ಆಗ ತೋಳವು ಕುರಿಗಳನ್ನು ಹಿಡಿದುಕೊಂಡು ಮಂದೆಯನ್ನು ಚದರಿಸುತ್ತದೆ.
13ಅವನು ಕೇವಲ ಕೂಲಿಯಾಳಾಗಿರುವುದರಿಂದ, ಕುರಿಗಳ ಚಿಂತೆ ಅವನಿಗಿಲ್ಲದೆ ಓಡಿ ಹೋಗುತ್ತಾನೆ.
14ನಾನೇ ನಿಜವಾದ ಒಳ್ಳೆಯ ಕುರುಬನು. ನನ್ನ ಕುರಿಗಳನ್ನು ನಾನು ಬಲ್ಲವನಾಗಿದ್ದೇನೆ. ನನ್ನ ಕುರಿಗಳು ನನ್ನನ್ನು ಬಲ್ಲವು.
15ತಂದೆಯು ನನ್ನನ್ನು ತಿಳಿದಿರುವಂತೆಯೇ, ನಾನು ತಂದೆಯನ್ನು ತಿಳಿದಿದ್ದೇನೆ; ಮತ್ತು ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ.
16ಇದಲ್ಲದೆಈ ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗಿವೆ, ಅವುಗಳನ್ನೂ ಸಹ ನಾನು ಕರೆ ತರಬೇಕು. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇಕುರಿಹಿಂಡು ಆಗುವುದು ಮತ್ತು ಒಬ್ಬನೇ ಕುರುಬನು ಇರುವನು.
17ತಂದೆಯು ನನ್ನನ್ನು ಪ್ರೀತಿಸುತ್ತಾನೆ ಏಕೆಂದರೆ, ನಾನು ನನ್ನ ಪ್ರಾಣವನ್ನು ಮರಳಿ ಪಡೆದುಕೊಳ್ಳುವಂತೆ ಅದನ್ನು ಕೊಡುತ್ತಿದ್ದೇನೆ.
18ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆದುಕೊಳ್ಳುವುದಿಲ್ಲ. ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ಅದನ್ನು ಕೊಡುವುದಕ್ಕೆ ನನಗೆ ಅಧಿಕಾರ ಉಂಟು. ಅದನ್ನು ಪುನಃ ಪಡೆದುಕೊಳ್ಳುವುದಕ್ಕೂ ನನಗೆ ಅಧಿಕಾರವಿದೆ. ಈ ಆಜ್ಞೆಯನ್ನು ನಾನು ನನ್ನ ತಂದೆಯಿಂದ ಹೊಂದಿದ್ದೇನೆ” ಎಂದನು.
19ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ಪುನಃ ಬೇಧ ಉಂಟಾಯಿತು.
20ಅವರಲ್ಲಿ ಅನೇಕರು ಆತನಿಗೆ, “ದೆವ್ವ ಹಿಡಿದಿದೆ, ಹುಚ್ಚನಾಗಿದ್ದಾನೆ, ನೀವು ಏಕೆ ಆತನ ಮಾತುಗಳನ್ನು ಕೇಳುತ್ತೀರಿ?” ಎಂದರು.
21ಇನ್ನು ಕೆಲವರು, “ಇವು ದೆವ್ವಹಿಡಿದವನ ಮಾತುಗಳಲ್ಲ, ದೆವ್ವವು ಕುರುಡನ ಕಣ್ಣುಗಳನ್ನು ತೆರೆಯಲು ಸಾಧ್ಯವೇ?” ಎಂದರು.
22ಆನಂತರ ಯೆರೂಸಲೇಮಿನಲ್ಲಿ ದೇವಾಲಯದ ಪ್ರತಿಷ್ಠೆಯ ಹಬ್ಬವು ನಡೆಯಿತು. ಅದು ಚಳಿಗಾಲವಾಗಿತ್ತು.
23ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಾ ಇರುವಾಗ,
24ಯೆಹೂದ್ಯರು ಆತನನ್ನು ಸುತ್ತುವರೆದು ಆತನಿಗೆ, “ಇನ್ನು ಎಷ್ಟು ಕಾಲ ನಮ್ಮನ್ನು ಸಂದಿಗ್ಧದಲ್ಲಿ ಇಡುತ್ತಿ? ನೀನು ಕ್ರಿಸ್ತನಾಗಿದ್ದರೆ ಅದನ್ನು ನಮಗೆ ಸ್ಪಷ್ಟವಾಗಿ ಹೇಳು” ಎಂದರು.
25ಅದಕ್ಕೆ ಯೇಸು, “ನಾನು ನಿಮಗೆ ಹೇಳಿದೆನು, ಆದರೆ ನೀವು ನಂಬುವುದಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿಯಾಗಿವೆ.
26ಆದರೂ, ನೀವು ನಂಬದೆ ಇದ್ದೀರಿ, ಏಕೆಂದರೆ ನೀವು ನನ್ನ ಕುರಿಗಳಲ್ಲ.
27ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ.
28ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದೆಂದಿಗೂ ನಾಶವಾಗುವುದೇ ಇಲ್ಲ. ಅವುಗಳನ್ನು ಯಾರೂ ನನ್ನ ಕೈಯಿಂದ ಕಸಿದುಕೊಳ್ಳಲಾರರು.
29ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತ ಮಹೋನ್ನತನು.ಅವುಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕಸಿದುಕೊಳ್ಳಲಾರರು.
30ನಾನೂ ಮತ್ತು ನನ್ನ ತಂದೆಯೂ ಒಂದಾಗಿದ್ದೇವೆ” ಎಂದನು.
31ಆಗ ಯೆಹೂದ್ಯರು ಆತನನ್ನು ಕೊಲ್ಲಬೇಕೆಂದು ತಿರುಗಿ ಕಲ್ಲುಗಳನ್ನು ತೆಗೆದುಕೊಂಡರು,

Read ಯೋಹಾ 10ಯೋಹಾ 10
Compare ಯೋಹಾ 10:3-31ಯೋಹಾ 10:3-31