Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೆಹೋ - ಯೆಹೋ 10

ಯೆಹೋ 10:14-37

Help us?
Click on verse(s) to share them!
14ಯೆಹೋವನು ಈ ಪ್ರಕಾರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟ ದಿನವು ಅದಕ್ಕಿಂತ ಹಿಂದೆಯೂ ಮುಂದೆಯೂ ಇಲ್ಲವೇ ಇಲ್ಲ. ಯೆಹೋವನು ತಾನೇ ಇಸ್ರಾಯೇಲ್ಯರಿಗೋಸ್ಕರ ಯುದ್ಧಮಾಡುತ್ತಾ ಇದ್ದನು.
15ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಗಿಲ್ಗಾಲಿನ ಪಾಳೆಯಕ್ಕೆ ಹಿಂದಿರುಗಿದನು.
16ಆ ಐದು ಮಂದಿ ಅರಸರು ಓಡಿಹೋಗಿ ಮಕ್ಕೇದದ ಗುಹೆಯಲ್ಲಿ ಅಡಗಿಕೊಂಡರು.
17ಜನರು ಯೆಹೋಶುವನಿಗೆ “ಆ ಐದು ಮಂದಿ ನಮಗೆ ಸಿಕ್ಕಿದ್ದಾರೆ. ಅವರು ಮಕ್ಕೇದದ ಗವಿಯಲ್ಲಿ ಅಡಗಿಕೊಂಡಿದ್ದಾರೆ” ಎಂದು ತಿಳಿಸಿದರು.
18ಆಗ ಯೆಹೋಶುವನು ಅವರಿಗೆ “ಆ ಗವಿಯ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿ ಕಾಯುವುದಕ್ಕೆ ಕಾವಲುಗಾರರನ್ನು ಇಡಿರಿ. ನೀವಾದರೂ ಅಲ್ಲೇ ನಿಂತುಕೊಳ್ಳಬೇಡಿ. ಬೇಗನೆ ಹಿಂದಟ್ಟಿ ಹಿಂದೆ ಬರುವ ಶತ್ರುಗಳನ್ನು ಹತಮಾಡುತ್ತಾ ಹೋಗಿರಿ.
19ಅವರನ್ನು ಅವರ ಪಟ್ಟಣಗಳಲ್ಲಿ ಸೇರುವುದಕ್ಕೆ ಬಿಡಬೇಡಿರಿ. ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನಲ್ಲಾ?” ಎಂದನು.
20ಈ ರೀತಿಯಾಗಿ ಯೆಹೋಶುವನೂ ಹಾಗೂ ಇಸ್ರಾಯೇಲ್ಯರೂ ಅವರನ್ನು ಸಂಪೂರ್ಣವಾಗಿ ಸೋಲಿಸಿ ಸಂಹರಿಸಿಬಿಟ್ಟರು. ಸ್ವಲ್ಪ ಜನರು ಮಾತ್ರ ತಪ್ಪಿಸಿಕೊಂಡು ಕೋಟೆ ಕೊತ್ತಲುಗಳಿದ್ದ ಪಟ್ಟಣಗಳನ್ನು ಸೇರಿಕೊಂಡರು.
21ಇಸ್ರಾಯೇಲ್ಯರಾದರೋ ಮಕ್ಕೇದದಲ್ಲಿ ಇಳುಕೊಂಡಿದ್ದ ಯೆಹೋಶುವನ ಬಳಿಗೆ ಸುರಕ್ಷಿತರಾಗಿ ಬಂದರು. ಇಸ್ರಾಯೇಲ್ಯರಿಗೆ ವಿರೋಧವಾಗಿ ಒಬ್ಬನೂ ಮಾತನಾಡಲಿಲ್ಲ.
22ಅನಂತರ ಯೆಹೋಶುವನು ಜನರಿಗೆ “ಗವಿಯ ಬಾಯನ್ನು ತೆರೆದು ಆ ಐದು ಮಂದಿ ಅರಸರನ್ನು ನನ್ನ ಬಳಿಗೆ ತನ್ನಿರಿ” ಎಂದನು.
23ಅವರು ಹೋಗಿ ಯೆರೂಸಲೇಮ್, ಹೆಬ್ರೋನ್, ಯರ್ಮೂತ್, ಲಾಕೀಷ್, ಎಗ್ಲೋನ್ ಎಂಬ ಪಟ್ಟಣಗಳ ಐದು ಮಂದಿ ಅರಸರನ್ನು ಗವಿಯಿಂದ ಎಳೆದು ಕೊಂಡು ಅವನ ಬಳಿಗೆ ತಂದರು.
24ಅವರನ್ನು ತನ್ನ ಬಳಿಗೆ ತಂದನಂತರ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರನ್ನು ಕರೆಸಿ ತನ್ನ ಜೊತೆಯಲ್ಲಿ ಬಂದಿದ್ದ ಸೈನ್ಯಾಧಿಪತಿಗಳಿಗೆ “ಹತ್ತಿರ ಬಂದು ಈ ಅರಸರ ಕೊರಳಿನ ಮೇಲೆ ಪಾದಗಳನ್ನಿಡಿರಿ” ಎಂದು ಹೇಳಿದನು. ಅವರು ಹತ್ತಿರ ಬಂದು ಅವರ ಕುತ್ತಿಗೆಯ ಮೇಲೆ ಕಾಲಿಟ್ಟರು.
25ಆಗ ಅವನು ಅವರಿಗೆ “ಅಂಜಬೇಡಿರಿ, ಕಳವಳಗೊಳ್ಳಬೇಡಿರಿ; ಸ್ಥಿರಚಿತ್ತರಾಗಿ, ಧೈರ್ಯದಿಂದಿರಿ. ನಿಮ್ಮೊಡನೆ ಯುದ್ಧಕ್ಕೆ ಬರುವ ಎಲ್ಲಾ ವೈರಿಗಳಿಗೂ ಯೆಹೋವನು ಹೀಗೆಯೇ ಮಾಡುವನು” ಎಂದು ಹೇಳಿದನು.
26ಅನಂತರ ಆ ಅರಸರನ್ನು ಕೊಲ್ಲಿಸಿ ಐದು ಮರಗಳಿಗೆ ನೇತುಹಾಕಿಸಿದನು. ಅವರ ಶವಗಳು ಸಾಯಂಕಾಲದವರೆಗೂ ಅಲ್ಲೇ ತೂಗಾಡುತ್ತಿದ್ದವು.
27ಸೂರ್ಯಾಸ್ತಮಾನದ ಹೊತ್ತಿಗೆ ಜನರು ಯೆಹೋಶುವನ ಅಪ್ಪಣೆಯಂತೆ ಅವುಗಳನ್ನು ಮರಗಳಿಂದ ಕೆಳಗಿಳಿಸಿ ಅವರು ಅಡಗಿಕೊಂಡಿದ್ದ ಗವಿಯಲ್ಲಿಯೇ ಹಾಕಿ ಅದರ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿದರು. ಆ ಕಲ್ಲುಗಳು ಇಂದಿನವರೆಗೂ ಅಲ್ಲೇ ಇರುತ್ತವೆ.
28ಅದೇ ದಿನ ಯೆಹೋಶುವನು ಮಕ್ಕೇದವನ್ನು ಸ್ವಾಧೀನಪಡಿಸಿ ಕೊಂಡನು. ಅ ಊರಿನ ರಾಜ ಪ್ರಜೆಗಳೆಲ್ಲರನ್ನೂ ಕತ್ತಿಯಿಂದ ಸಂಹರಿಸಿದನು. ಒಬ್ಬನನ್ನೂ ಉಳಿಸಲಿಲ್ಲ. ಯೆರಿಕೋವಿನ ಅರಸನಿಗೆ ಮಾಡಿದಂತೆ ಈ ಅರಸನಿಗೂ ಮಾಡಿದನು.
29ಯೆಹೋಶುವನು ಜನರೆಲ್ಲರ ಸಹಿತವಾಗಿ ಮಕ್ಕೇದದಿಂದ ಲಿಬ್ನಕ್ಕೆ ಹೋಗಿ ಅಲ್ಲಿಯವರೊಡನೆ ಯುದ್ಧಮಾಡಿದನು.
30ಯೆಹೋವನು ಅದನ್ನೂ ಅದರ ಅರಸನನ್ನೂ ಇಸ್ರಾಯೇಲ್ಯರ ಕೈವಶಮಾಡಿದನು. ಅವರು ಅದರಲ್ಲಿದ್ದ ಜನರಲ್ಲಿ ಒಬ್ಬನನ್ನೂ ಉಳಿಸದೆ ಎಲ್ಲರನ್ನೂ ಕತ್ತಿಯಿಂದ ಸಂಹರಿಸಿದರು. ಯೆರಿಕೋವಿನ ಅರಸನಿಗಾದ ಗತಿಯೇ ಇವರ ಅರಸನಿಗೂ ಆಯಿತು.
31ಅಲ್ಲಿಂದ ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಲಾಕೀಷಿಗೆ ಹೋಗಿ ಮುತ್ತಿಗೆಹಾಕಿ ಯುದ್ಧಮಾಡಿದನು.
32ಯೆಹೋವನು ಅದನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿದ್ದರಿಂದ, ಅವರು ಅದನ್ನು ಎರಡನೆಯ ದಿನದಲ್ಲಿ ಸ್ವಾಧೀನಮಾಡಿಕೊಂಡು ಅದನ್ನೂ ಅದರ ಜನರನ್ನೂ ಸಂಹರಿಸಿಬಿಟ್ಟರು. ಲಿಬ್ನದವರಿಗಾದ ಗತಿಯೇ ಇವರಿಗೂ ಆಯಿತು.
33ಇದಲ್ಲದೆ ಯೆಹೋಶುವನು ಲಾಕೀಷಿನವರ ಸಹಾಯಕ್ಕೆ ಬಂದ ಗೆಜೆರಿನ ಅರಸನಾದ ಹೋರಾಮನನ್ನೂ ಅವನ ಪ್ರಜೆಗಳೆಲ್ಲರನ್ನೂ ಸದೆಬಡಿದನು. ಒಬ್ಬನೂ ಉಳಿಯಲಿಲ್ಲ.
34ತರುವಾಯ ಯೆಹೋಶುವನು ಲಾಕೀಷನ್ನು ಬಿಟ್ಟು ಇಸ್ರಾಯೇಲ್ಯರೆಲ್ಲರ ಸಹಿತವಾಗಿ ಎಗ್ಲೋನಿಗೆ ಬಂದು ಮುತ್ತಿಗೆಹಾಕಿ ಯುದ್ಧಮಾಡಿದನು.
35ಅವರು ಅದೇ ದಿನದಲ್ಲಿ ಅದನ್ನು ಹಿಡಿದು ಲಾಕೀಷಿನವರಿಗೆ ಮಾಡಿದಂತೆಯೇ ಅದನ್ನೂ ಅದರ ಜನರೆಲ್ಲರನ್ನೂ ಕತ್ತಿಯಿಂದ ಸಂಹರಿಸಿಬಿಟ್ಟರು.
36ಅನಂತರ ಯೆಹೋಶುವನೂ, ಇಸ್ರಾಯೇಲರೂ ಎಗ್ಲೋನನ್ನು ಬಿಟ್ಟು ಹೆಬ್ರೋನಿಗೆ ಹೋಗಿ ಅದಕ್ಕೆ ವಿರೋಧವಾಗಿ ಯುದ್ಧಮಾಡಿ
37ಅದಕ್ಕೆ ಸೇರಿದ ಊರುಗಳನ್ನೂ ಅದರ ರಾಜಪ್ರಜೆಗಳೆಲ್ಲರನ್ನೂ ಕತ್ತಿಯಿಂದ ಸಂಹರಿಸಿದರು. ಎಗ್ಲೋನಿನಲ್ಲಿ ಹೇಗೋ ಹಾಗೆಯೇ ಇಲ್ಲಿಯೂ ಒಬ್ಬನನ್ನೂ ಉಳಿಸಲಿಲ್ಲ; ಪಟ್ಟಣವನ್ನೂ ಜನರನ್ನೂ ನಾಶಮಾಡಿದರು.

Read ಯೆಹೋ 10ಯೆಹೋ 10
Compare ಯೆಹೋ 10:14-37ಯೆಹೋ 10:14-37