Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 8

ಯಾಜ 8:4-31

Help us?
Click on verse(s) to share them!
4ಯೆಹೋವನು ಹೇಳಿದಂತೆಯೇ ಮೋಶೆಯು ಮಾಡಿದನು. ಜನಸಮೂಹವೆಲ್ಲಾ ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಕೂಡಿಬಂದರು.
5ಆಗ ಮೋಶೆ ಅವರಿಗೆ, “ನಾನು ಈಗ ಮಾಡುವ ಕಾರ್ಯವು ಯೆಹೋವನು ಆಜ್ಞಾಪಿಸಿದ್ದು” ಎಂದು ಹೇಳಿದನು.
6ಆಗ ಮೋಶೆ ಆರೋನನನ್ನು ಮತ್ತು ಅವನ ಮಕ್ಕಳನ್ನು ಹತ್ತಿರಕ್ಕೆ ಬರಮಾಡಿಕೊಂಡು ಸ್ನಾನಮಾಡಿಸಿದನು.
7ಆ ಮೇಲೆ ಯೆಹೋವನು ಆಜ್ಞಾಪಿಸಿದಂತೆ ಆರೋನನಿಗೆ ನಿಲುವಂಗಿಯನ್ನು ತೊಡಿಸಿ, ನಡುಕಟ್ಟನ್ನು ಸುತ್ತಿ, ಮೇಲಂಗಿಯನ್ನು ತೊಡಿಸಿ, ಏಫೋದ್ ಕವಚವನ್ನು ಹಾಕಿಸಿ, ಕವಚದ ಮೇಲೆ ಸೊಗಸಾಗಿ ನೇಯ್ದ ನಡುಕಟ್ಟನ್ನು ಕಟ್ಟಿದನು, ಅದರಿಂದ ಕವಚವನ್ನು ಅವನಿಗೆ ಹೊದಿಸಿದನು.
8ಅವನು ಎದೆಯ ಮೇಲೆ ಪದಕವನ್ನು ಬಿಗಿದು ಆರೋನನಿಗೆ ಹಾಕಿ ಅದರೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಇಟ್ಟನು.
9ಅವನ ತಲೆಗೆ ಪೇಟವನ್ನು ಇಟ್ಟು, ಅದರ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನು ಕಟ್ಟಿದನು; ಅದೇ ಅವನಿಗೆ ಪರಿಶುದ್ಧವಾದ ಕಿರೀಟದಂತೆ ಇತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು.
10ಅನಂತರ ಮೋಶೆ ಅಭಿಷೇಕತೈಲವನ್ನು ತೆಗೆದುಕೊಂಡು, ದೇವದರ್ಶನದ ಗುಡಾರವನ್ನು ಮತ್ತು ಅದರಲ್ಲಿದ್ದ ಎಲ್ಲವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
11ಯಜ್ಞವೇದಿಯ ಮೇಲೆ ಏಳು ಸಾರಿ ಆ ತೈಲವನ್ನು ಚಿಮುಕಿಸಿ, ಯಜ್ಞವೇದಿಯನ್ನು ಅದರ ಎಲ್ಲಾ ಉಪಕರಣಗಳನ್ನು, ಬೋಗುಣಿಯನ್ನು ಅದರ ಪೀಠವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
12ಆರೋನನನ್ನು ಪ್ರತಿಷ್ಠಿಸುವುದಕ್ಕಾಗಿ ಆ ತೈಲದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ತಲೆಯ ಮೇಲೆ ಹೊಯ್ದು ಅವನನ್ನು ಅಭಿಷೇಕಿಸಿದನು.
13ಆ ಮೇಲೆ ಯೆಹೋವನು ಆಜ್ಞಾಪಿಸಿದಂತೆ ಮೋಶೆ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು, ಅವರಿಗೆ ನಿಲುವಂಗಿಗಳನ್ನು ತೊಡಿಸಿ, ನಡುಕಟ್ಟುಗಳನ್ನು ಸುತ್ತಿ, ತಲೆಗೆ ಪೇಟಗಳನ್ನು ಇಟ್ಟನು.
14ಅನಂತರ ಅವನು ದೋಷಪರಿಹಾರಕ್ಕಾಗಿ ಹೋರಿಯನ್ನು ತರಿಸಿದನು. ಆಗ ಆರೋನನೂ ಮತ್ತು ಅವನ ಮಕ್ಕಳೂ ತಮ್ಮ ಕೈಗಳನ್ನು ಅದರ ತಲೆಯ ಮೇಲೆ ಇಟ್ಟರು.
15ಆ ಹೋರಿಯನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ತನ್ನ ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಿ, ಯಜ್ಞವೇದಿಯನ್ನು ಶುದ್ಧಪಡಿಸಿ, ಉಳಿದ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಸುರಿದುಬಿಟ್ಟನು. ಇದರ ನಿಮಿತ್ತ ದೋಷಪರಿಹಾರಕ ಆಚಾರವನ್ನು ನಡೆಸಿ, ಅದನ್ನು ಪ್ರತಿಷ್ಠಿಸಿದನು.
16ಆ ಹೋರಿಯ ಕರುಳುಗಳ ಮೇಲಣ ಕೊಬ್ಬನ್ನು, ಕಳಿಜದ ಹತ್ತಿರವಿರುವ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು ಅವುಗಳ ಮೇಲಿರುವ ಕೊಬ್ಬನ್ನು ಮೋಶೆ ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮ ಮಾಡಿದನು.
17ಯೆಹೋವನು ಆಜ್ಞಾಪಿಸಿದಂತೆ ಅದರಲ್ಲಿ ಉಳಿದದ್ದನ್ನೆಲ್ಲಾ ಅಂದರೆ ಅದರ ಚರ್ಮವನ್ನು, ಮಾಂಸವನ್ನು ಮತ್ತು ಕಲ್ಮಷವನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಬೆಂಕಿಯಿಂದ ಸುಡಿಸಿಬಿಟ್ಟನು.
18ತರುವಾಯ ಅವನು ಸರ್ವಾಂಗಹೋಮಕ್ಕಾಗಿ ಟಗರನ್ನು ತರಿಸಿದನು. ಆರೋನನೂ ಮತ್ತು ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
19ಅದನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಿದನು.
20ಆ ಟಗರನ್ನು ತುಂಡುತುಂಡಾಗಿ ಕಡಿದ ಮೇಲೆ ಮೋಶೆ ಅದರ ತಲೆಯನ್ನು, ಮಾಂಸಭಾಗಗಳನ್ನು ಮತ್ತು ಕೊಬ್ಬನ್ನು ಹೋಮಮಾಡಿದನು.
21ಅದರ ಕರುಳುಗಳನ್ನು ಮತ್ತು ಕಾಲುಗಳನ್ನು ನೀರಿನಿಂದ ತೊಳೆದು, ಮೋಶೆ ಆ ಟಗರನ್ನು ಯಜ್ಞವೇದಿಯ ಮೇಲೆ ಪೂರ್ತಿಯಾಗಿ ಹೋಮ ಮಾಡಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳಯುಕ್ತ ಸರ್ವಾಂಗಹೋಮವಾಗಿತ್ತು.
22ಆ ಮೇಲೆ ಅವನು ಯಾಜಕ ಪಟ್ಟಾಭಿಷೇಕಕ್ಕಾಗಿ ಸಮರ್ಪಿಸಬೇಕಾದ ಎರಡನೆಯ ಟಗರನ್ನು ತರಿಸಿದನು. ಆರೋನನೂ ಮತ್ತು ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟರು.
23ಅದನ್ನು ವಧಿಸಿದ ನಂತರ ಮೋಶೆ ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು.
24ಆಗ ಮೋಶೆ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು, ಆ ರಕ್ತದಲ್ಲಿ ಸ್ವಲ್ಪವನ್ನು ಅವರವರ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿ, ಉಳಿದ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಿದನು.
25ಅವನು ಆ ಟಗರಿನ ಕೊಬ್ಬನ್ನು ಅಂದರೆ ಬಾಲದ ಕೊಬ್ಬು, ಕರುಳುಗಳ ಮೇಲಣ ಎಲ್ಲಾ ಕೊಬ್ಬು, ಕಳಿಜದ ಹತ್ತಿರವಿರುವ ಕೊಬ್ಬು, ಎರಡು ಮೂತ್ರಪಿಂಡಗಳು, ಅವುಗಳ ಮೇಲಿದ್ದ ಕೊಬ್ಬನ್ನು ಮತ್ತು ಬಲತೊಡೆಯನ್ನು,
26ಯೆಹೋವನ ಸನ್ನಿಧಿಯಲ್ಲಿ ಪುಟ್ಟಿಯಲ್ಲಿ ಇಟ್ಟಿದ್ದ ಹುಳಿಯಿಲ್ಲದ ಭಕ್ಷ್ಯಗಳಲ್ಲಿ ಒಂದು ರೊಟ್ಟಿಯನ್ನು, ಎಣ್ಣೆಮಿಶ್ರವಾದ ಒಂದು ಹೋಳಿಗೆಯನ್ನು ಹಾಗು ಒಂದು ಕಡುಬನ್ನು ತೆಗೆದುಕೊಂಡು ಈ ಭಕ್ಷ್ಯಗಳನ್ನು ಆ ಕೊಬ್ಬಿನ ಮತ್ತು ಬಲದೊಡೆಯ ಮೇಲೆ ಇಟ್ಟನು.
27ಅವನು ಅವೆಲ್ಲವುಗಳನ್ನು ಆರೋನನ ಮತ್ತು ಅವನ ಮಕ್ಕಳ ಕೈಗಳಿಗೆ ಕೊಟ್ಟು ನೈವೇದ್ಯವೆಂದು ಸೂಚಿಸುವುದಕ್ಕೆ ಯೆಹೋವನ ಸನ್ನಿಧಿಯಲ್ಲಿ ಅದನ್ನು ನಿವಾಳಿಸಿದನು.
28ಆ ಮೇಲೆ ಮೋಶೆ ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಸರ್ವಾಂಗಹೋಮದ್ರವ್ಯದ ಮೇಲಿಟ್ಟು ಯಜ್ಞವೇದಿಯಲ್ಲಿ ಅದನ್ನು ಹೋಮಮಾಡಿದನು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳಯುಕ್ತ ಪಟ್ಟಾಭಿಷೇಕ ಯಜ್ಞವಾಗಿತ್ತು.
29ಮೋಶೆ ಅದರ ಎದೆಯ ಭಾಗವನ್ನು ತೆಗೆದುಕೊಂಡು ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಿದನು. ಯೆಹೋವನು ಆಜ್ಞಾಪಿಸಿದಂತೆ ಆ ಪಟ್ಟಾಭಿಷೇಕಯಜ್ಞದ ಟಗರಿನಲ್ಲಿ ಆ ಎದೆಯ ಭಾಗವೇ ಮೋಶೆಗೆ ಸಲ್ಲಬೇಕಾದದ್ದು.
30ಆಗ ಮೋಶೆ ಅಭಿಷೇಕತೈಲದಲ್ಲಿ ಮತ್ತು ಯಜ್ಞವೇದಿಯ ಮೇಲಿದ್ದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಹಾಗೂ ಅವನ ವಸ್ತ್ರಗಳ ಮೇಲೆಯೂ, ಅವನ ಮಕ್ಕಳ ಮತ್ತು ಅವರ ವಸ್ತ್ರಗಳ ಮೇಲೆಯೂ ಚಿಮುಕಿಸಿದನು. ಹೀಗೆ ಆರೋನನನ್ನು ಅವನ ವಸ್ತ್ರಗಳನ್ನು, ಅವನ ಮಕ್ಕಳನ್ನು ಮತ್ತು ಅವರ ವಸ್ತ್ರಗಳನ್ನು ಪ್ರತಿಷ್ಠಿಸಿದನು.
31ಮೋಶೆ ಆರೋನನಿಗೂ ಮತ್ತು ಅವನ ಮಕ್ಕಳಿಗೂ, “ಮಾಂಸವನ್ನು ನೀವು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಬೇಯಿಸಿ ಅದನ್ನು ಮತ್ತು ಪಟ್ಟಾಭಿಷೇಕಕ್ಕಾಗಿ ಪುಟ್ಟಿಯಲ್ಲಿ ಇಟ್ಟಿರುವ ಭಕ್ಷ್ಯಗಳನ್ನು ಅಲ್ಲೇ ಊಟಮಾಡಬೇಕು. ‘ಆರೋನನೂ ಅವನ ಮಕ್ಕಳೂ ಅದನ್ನು ತಿನ್ನಬೇಕು’ ಎಂಬುದೇ ನನಗಾದ ಅಪ್ಪಣೆ.

Read ಯಾಜ 8ಯಾಜ 8
Compare ಯಾಜ 8:4-31ಯಾಜ 8:4-31